ಸಪ್ಪರ್ ಕ್ಲಬ್ ಎಂಬ ಸೆನ್ಸೇಷನ್ : ಮಹಾಭೋಜನ ಎಂಬ ಮಧ್ಯಾಹ್ನದ ಗಮ್ಮತ್ತು

Published : Aug 10, 2025, 12:48 PM IST
supper club

ಸಾರಾಂಶ

ಒಂದು ಊಟದ ಬೆಲೆ ₹4200. ಕೇವಲ ಹದಿನಾಲ್ಕು ಮಂದಿಗೆ ಮಾತ್ರ ಪ್ರವೇಶ. ನೀವಾಗಿಯೇ ಅಲ್ಲಿಗೆ ಹೋಗುವಂತಿಲ್ಲ. ಅವರು ಒಪ್ಪಿದರೆ ಮಾತ್ರ ಹೋಗಬಹುದು. ವಾರಾಂತ್ಯದ ಮೂರು ದಿನ ಮಾತ್ರ ಇಲ್ಲಿ ಊಟ ದೊರೆಯುತ್ತದೆ.

ನಚಿಕೇತ

ಒಂದು ಊಟದ ಬೆಲೆ ₹4200. ಕೇವಲ ಹದಿನಾಲ್ಕು ಮಂದಿಗೆ ಮಾತ್ರ ಪ್ರವೇಶ. ನೀವಾಗಿಯೇ ಅಲ್ಲಿಗೆ ಹೋಗುವಂತಿಲ್ಲ. ಅವರು ಒಪ್ಪಿದರೆ ಮಾತ್ರ ಹೋಗಬಹುದು. ವಾರಾಂತ್ಯದ ಮೂರು ದಿನ ಮಾತ್ರ ಇಲ್ಲಿ ಊಟ ದೊರೆಯುತ್ತದೆ. ನೀವು ಹೋಗಲೇಬೇಕು ಅಂತಿದ್ದರೆ ಅವರ ಇನ್‌ಸ್ಟಾಗ್ರಾಮ್ ಪುಟದಲ್ಲಿ ಡೈರೆಕ್ಟ್ ಮೆಸೇಜ್ ಹಾಕಬೇಕು.ಯಾವುದಾದರೂ ಸ್ಲಾಟ್ ಖಾಲಿಯಿದ್ದರೆ ಅವರು ನಿಮಗೆ ತಿಳಿಸುತ್ತಾರೆ. ಅಲ್ಲಿ ಊಟಕ್ಕೆ ಹೋಗಲಿಕ್ಕೆಂದು ವರ್ಷಗಳಿಂದ ಕಾಯುತ್ತಿರುವವರೂ ಇದ್ದಾರೆ. ಅವರಿಗಿನ್ನೂ ಅವಕಾಶ ಸಿಕ್ಕಿಲ್ಲ. ಇಲ್ಲಿ ಸಿಗುವುದು ಸೆಚುವಾನ್ ಶೈಲಿಯ ಊಟ.

ಒಂದು ಊಟಕ್ಕೆ ₹4200 ಕೊಟ್ಟು ಯಾರಾದರೂ ಹೋಗುತ್ತಾರಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವವರು ಅವರ ಇನ್‌ಸ್ಟಾಗ್ರಾಮ್ ಪುಟಕ್ಕೊಮ್ಮೆ ಭೇಟಿ ನೀಡಬೇಕು. ಮಾಲಾ ಕಿಚನ್ ಎಂಬ ಹೆಸರಲ್ಲಿ ಹುಡುಕಿದರೆ ನಿಮಗೆ ವಿವರಗಳು ಸಿಗುತ್ತವೆ. ಈ ಹೋಟೆಲ್ ನಡೆಸುವ ದಂಪತಿಗಳು ತಿಂಗಳಿಗೆ ಏಳು ಲಕ್ಷ ಸಂಪಾದನೆ ಮಾಡುತ್ತಾರೆ. ಇಲ್ಲಿ ಯಾರೂ ಕೆಲಸಕ್ಕಿಲ್ಲ, ಅಡುಗೆಯವರಿಲ್ಲ, ಪಾತ್ರೆ ತೊಳೆಯುವುದಕ್ಕೆ ಯಾರ ಇಲ್ಲ. ಎಲ್ಲವನ್ನೂ ಅವರೇ ಮಾಡುತ್ತಾರೆ. ಇದು ಈಗ ಜನಪ್ರಿಯವಾಗುತ್ತಿರುವ ಸಪ್ಪರ್ ಕ್ಲಬ್. ಬೆಂಗಳೂರಲ್ಲಿ ಮಾಲಾ ಕಿಚನ್, ಸಟೋರಿ, ಮುಂಬೈಯಲ್ಲಿ ಲಾಸ್ಟ್ ಟೇಬಲ್, ದೆಹಲಿಯಲ್ಲಿ ಮೂಡ್ ಡೆಲ್ಹಿ, ಹೈದರಾಬಾದ್‌ನ ಲಾಂಗ್ ಟೇಬಲ್- ಹೀಗೆ ಪ್ರತಿಯೊಂದು ಮಹಾನಗರದಲ್ಲೂ ಸಪ್ಪರ್ ಕ್ಲಬ್‌ಗಳು ಆರಂಭವಾಗಿವೆ.

 ನಿಮ್ಮ ಭಾನುವಾರ ಸಂಜೆಯನ್ನು ಸುಖವಾಗಿ ಕಳೆಯಿರಿ ಅನ್ನುವುದು ಈ ಸಪ್ಪರ್ ಕ್ಲಬ್‌ಗಳ ಘೋಷ‍ವಾಕ್ಯ. ವಾರಾಂತ್ಯದಲ್ಲಿ ಯಾವುದೋ ಕ್ಲಬ್ಬಿಗೋ ಗಿಜಿಗಿಜಿ ಬಾರ್‌ಗೋ ಹೋಗಿ, ಅಲ್ಲಿ ಕುಡಿದು ಕುಣಿದು ಕುಪ್ಪಳಿಸಿ ಮಾರನೆ ದಿನ ಹ್ಯಾಂಗೋವರಿನಲ್ಲಿ ಆಫೀಸಿಗೆ ಹೋಗುವುದು ಹಳೆಯ ಕಾಲದ ಜಾಯಮಾನ. ಈ ಕಾಲದ ಜೆನ್‌ಝೀಗಳು ಅವನ್ನೆಲ್ಲ ಒಂದೊಂದಾಗಿ ತೊರೆಯುತ್ತಲಿದ್ದಾರೆ. ಅಂಥವರ ಆಯ್ಕೆ ಸಪ್ಪರ್ ಕ್ಲಬ್. ಸಪ್ಪರ್ ಕ್ಲಬ್‌ನಲ್ಲಿ ಊಟಕ್ಕೇ ಪ್ರಾಧಾನ್ಯ. ಆದರೆ ಅಲ್ಲಿ ಊಟ ಮಾತ್ರ ಇರುವುದಲ್ಲ. ಜತೆಗೆ ಊಟ ಮಾಡುವ ಸಮಾನ ಮನಸ್ಕರು ಸಿಗುತ್ತಾರೆ. ನಮಗೆ ಬೇಕಾದ ವಿಷಯದ ಕುರಿತು ಚರ್ಚಿಸುವವರು ಇರುತ್ತಾರೆ. ಯಾರೋ ಕತೆ ಹೇಳುತ್ತಾರೆ, ಇನ್ಯಾರೂ ಸಂತೋಷದ ಸಂಗತಿ ಹಂಚಿಕೊಳ್ಳುತ್ತಾರೆ. ಮತ್ಯಾರೋ ನೋವಿನ ಪ್ರಸಂಗವನ್ನು ಹೇಳಿಕೊಳ್ಳುತ್ತಾರೆ.

ಇಂಥ ಖಾಸಗಿ ಕತೆಗಳು ಬೇಕಿಲ್ಲದೇ ಹೋದರೆ ಅ‍ವರವರ ಅನುಭವ, ಕತೆ, ಬಾಲ್ಯದ ಪ್ರಸಂಗ, ಆಫೀಸಿನ ಘಟನೆ- ಹೀಗೆ ಏನು ಮಾತಾಡಬೇಕು ಅನ್ನಿಸುತ್ತದೋ ಅದನ್ನು ಮುಕ್ತವಾಗಿ ಮಾತಾಡುತ್ತಾರೆ. ಒಂದೇ ಕುಟುಂಬದ ಮಂದಿ ಒಂದೆಡೆ ಸೇರಿ ಟೀ ಕುಡಿಯುತ್ತಾ ಹರಟುವಂಥ ವ್ಯವಸ್ಥೆ ಅದು. ಮಾಲಾ ಕಿಚನ್‌ನಲ್ಲಿ ಊಟದ ನಂತರ ಟೀ ಸೆರೆಮನಿ ಕೂಡ ಇರುತ್ತದೆ. ಅಪರಿಚಿತರನ್ನು ಗೆಳೆಯರನ್ನಾಗಿ ಮಾಡಿಕೊಳ್ಳುವುದಕ್ಕೆ ಇದು ಒಳ್ಳೆಯ ತಾಣ. ಚೈತ್ರಾ ಸಾಗರ್ ನಡೆಸುತ್ತಿದ್ದ ಎಕ್ಸಾಟಿಕ್ ಸೂಪರ್ ಕ್ಲಬ್ ಈಮೇಲ್ ಮೂಲಕ ಅಪರಿಚಿತರನ್ನು ಆಹ್ವಾನಿಸುತ್ತಿತ್ತು. ಅಲ್ಲಿಗೆ ಬಂದವರು ಊಟ ಮಾಡಿ, ಹರಟೆ ಹೊಡೆದು ಗೆಳೆಯರಾಗಿ ಮರಳುತ್ತಿದ್ದರು. ಇಲ್ಲಿ ಎಲ್ಲರಿಗೂ ಇಷ್ಟವಾಗುತ್ತಿದ್ದದ್ದು ಮನೆ ಅಡುಗೆ.

ಕಲಾತ್ಮಕವಾಗಿ ಜೋಡಿಸಿಟ್ಟ ಟೇಬಲ್, ರುಚಿಯಾದ ತಿನಿಸುಗಳು, ಬೇರೆ ಬೇರೆ ಪ್ರದೇಶದ ತಿಂಡಿಗಳು, ಸ್ವಚ್ಛ ಪರಿಸರ, ಹೆಚ್ಚು ಮಂದಿಗೆ ಅವಕಾಶ ಇಲ್ಲದ ಕಾರಣ ಸಾವಧಾನವಾಗಿ ಸವಿಯುವ ಅವಕಾಶ. ತಮ್ಮದೇ ಮನೆಯಲ್ಲಿ ಕೂತು ಊಟ ಮಾಡಿದ ಅನುಭವ. ಇವು ಆರಂಭವಾದದ್ದು ಕೊರೋನಾ ಯುಗಾಂತ್ಯಕ್ಕೆ. ಮನೆಯಲ್ಲಿಯೇ ಕುಳಿತು, ಬೇಜಾರಾಗಿದ್ದ ಮಂದಿ ಹೀಗೊಂದು ತಾಣವಿದೆ ಅಂದಾಕ್ಷಣ ಆಸಕ್ತಿ ತೋರಿದರು. ದೊಡ್ಡ ದೊಡ್ಡ ಸ್ಥಾನಗಳಲ್ಲಿ ಇರುವವರಿಗೆ ತನ್ನಂಥ ಮತ್ತೊಬ್ಬನ ಜತೆ ಮಾತು ಬೇಕಿತ್ತು. ಖಾಸಗಿತನ ಇದ್ದೂ ಗುಂಪಿನಲ್ಲಿರುವ ಸುಖ ಬೇಕಿತ್ತು. ಸಪ್ಪರ್ ಕ್ಲಬ್‌ಗಳು ಅಂಥದ್ದೊಂದು ಅವಕಾಶ ಇಲ್ಲಿದೆ ಎಂದು ತೋರಿಸಿಕೊಟ್ಟವು.

ಇದು ಅತ್ಯುತ್ತಮ ಸ್ಟಾರ್ಟಪ್ ಆಗಿಬಿಟ್ಟಿತು. ಯಾವುದೇ ಬಂಡವಾಳ ಹೂಡಿಕೆ ಇಲ್ಲದೇ, ಕೆಲಸಗಾರರು ಸಿಗುತ್ತಿಲ್ಲ ಎಂಬ ಕೊರಗಿಲ್ಲದೇ, ಮನೆಯಲ್ಲೇ ತಿಂಗಳಿಗೆ ನಾಲ್ಕಾರು ಲಕ್ಷ ದುಡಿಯುವ ಉಪಾಯವೂ ಆಯಿತು. ಒಂದೂಟಕ್ಕೆ 2500 ರುಪಾಯಿ ಕೊಡಲು ಜೆನ್‌ಝೀಗಳು ಸಿದ್ಧವಿದ್ದರು. ಬೆಂಗಳೂರಿನಲ್ಲಿ ಪ್ರಸಿದ್ಧವಾಗಿದ್ದ ಸಪ್ಪರ್ ಕ್ಲಬ್‌ಗಳು ನಾಲ್ಕು. ಸೆಚುವಾನ್ ಊಟ ನೀಡುತ್ತಿದ್ದ ಮಾಲಾ ಕಿಚನ್. ಇಲ್ಲಿ ಒಂದು ಊಟದ ಬೆಲೆ ₹4200. ಯುರೋಪಿಯನ್ ಮತ್ತು ಏಷಿಯನ್ ಆಹಾರ ನೀಡುವ ಟೆರೇಸು ಅಪಾರ್ಟ್‌ಮೆಂಟ್ ಬೈ ಅನುರಾಗ್ ಆರೋರದಲ್ಲಿ ₹2800. ಯುರೋಪಿಯನ್ ಊಟ ಕೊಡುವ ಆಕ್ಸಾಲಿಸ್ ₹3500. ಆಂಧ್ರ ಮತ್ತು ಹೈದರಾಬಾದ್ ಶೈಲಿಯ ಸಾಂಪ್ರದಾಯಿಕ ಊಟ ಕೊಡುವ ಸತೋರಿ ಸಪ್ಪರ್ ಕ್ಲಬ್‌ನಲ್ಲಿ ₹1700.

ಮಹಾಭೋಜನ ಎಂಬ ಮಧ್ಯಾಹ್ನದ ಗಮ್ಮತ್ತು: ಬೆಂಗಳೂರಿನ ಗಾಂಧೀಬಜಾರಿನಲ್ಲಿ ಒಂದು ಹೋಟೆಲ್. ಮಧ್ಯಾಹ್ನದ ಊಟಕ್ಕೆ ಹೋದವರಿಗೆ ಅಲ್ಲಿ ಆಶ್ಚರ್ಯ ಕಾದಿದೆ. ಒಳಗೆ ಹೋಗುತ್ತಿದ್ದಂತೆ ಕೈತೊಳೆಯಲು ರೋಸ್ ವಾಟರ್, ನಂತರ ಪ್ರಸಾದ ರೂಪದಲ್ಲಿ ತೀರ್ಥ, ಅದಾದ ನಂತರ ವೆಲ್‌ಕಮ್ ಡ್ರಿಂಕ್, ನಾಲ್ಕು ಬಗೆಯ ಸ್ಟಾರ್ಟರ್ಸ್, ಅದಾದ ನಂತರ ಫಸ್ಟ್ ಕೋರ್ಸ್‌ನಲ್ಲಿ ಸೆಟ್ ದೋಸೆ, ಮಾವಿನಕಾಯಿ ಗೊಜ್ಜು, ಚಟ್ನಿ, ಮಾವಿನ ಇಂಜಿ ಪಚ್ಚಡಿ. ಕೋಸಂಬರಿ, ಮೊಸರುಬಜ್ಜಿ, ಎರಡು ಪಲ್ಯ, ವಡಾಕರಿ, ಪೆರುಮಾಳ್ ದೇವಸ್ಥಾನದ ಪ್ರಸಾದವಾದ ಕೋವಿಲ್ ಕದಂಬ ಸಾದಮ್, ನಂತರ ಅಪ್ಪೆಮಿಡಿ ಸಾರು. ಇದಾಗಿ ಸ್ವಲ್ಪ ಹೊತ್ತಿಗೆ ಎರಡನೆಯ ಕೋರ್ಸ್ ಆರಂಭ. ಅಲ್ಲಿ ಅನ್ನ, ಹುಳಿ, ಸಾರು, ಪಪ್ಪು, ಕಾರ ಕೊಳಂಬು, ಮೊಸರನ್ನ. ಕೊನೆಯಲ್ಲಿ ರೋಸ್ ರಸಮಲೈ, ಕ್ಯಾರಟ್ ಮತ್ತು ಖರ್ಜೂರ ಹಲ್ವ, ಹಲಸಿನಹಣ್ಣಿನ ಪಾಯಸ. ಎಲ್ಲವೂ ಎಷ್ಟು ಬೇಕೋ ಅಷ್ಟು. ಈ ಮಹಾಭೋಜನಕ್ಕೆ ₹820.

ಊಟದ ಜಮಾನ ಬದಲಾಗಿದೆ. ದರ್ಶಿನಿಗಳ ನಡುವೆಯೇ ಇಂಥ ಭೂರಿಭೋಜನದ ಕಲ್ಪನೆ ಪ್ರಸಿದ್ಧವಾಗುತ್ತಿದೆ. ಊಟಕ್ಕೆ ಸಮಯವಿಲ್ಲ, ಅವಸರದಿಂದ ಊಟ ಮುಗಿಸಬೇಕು ಅನ್ನುವುದರ ಬದಲಾಗಿ ನಿಧಾನವಾಗಿ ಊಟ ಮಾಡಬೇಕು. ಎಲ್ಲರೂ ಕೂಡಿ ಊಟಮಾಡಬೇಕು ಅನ್ನುವ ಅಭಿರುಚಿ ಹೆಚ್ಚುತ್ತಿದೆ. ಹಿಂದೆಯೂ ಹೀಗೆ ಎಲ್ಲರೂ ಸೇರಿ ಊಟ ಮಾಡುವ ಸಂಪ್ರದಾಯ ಇತ್ತು. ಅದಕ್ಕೂ ಇದಕ್ಕೂ ಒಂದೇ ಒಂದು ವ್ಯತ್ಯಾಸ ಎಂದರೆ, ಈಗ ಯಾರೂ ಮನೆಯಲ್ಲೇ ಅಡುಗೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ. ಮೊದಲೇ ಫೋನ್ ಮಾಡಿ ಹೇಳಿದರೆ ಅವರವರ ರುಚಿ, ಅಭಿರುಚಿ, ಪದ್ಥತಿಗೆ ಅನುಗುಣವಾದ ಮಹಾಭೋಜನ ಸಿದ್ಧವಿರುತ್ತದೆ

PREV
Read more Articles on

Recommended Stories

ಕಪೆಕ್ ಮೂಲಕ ಪಿಎಂಎಫ್​ಎಂಇ ಉದ್ಯಮಿಗಳ ಪ್ರೊಫೆಸರ್ ಆದ ಸಿದ್ದಪ್ಪ..!
ಅಮೆರಿಕ ಅಧ್ಯಕ್ಷ ಟ್ರಂಪ್‌ ಹುಚ್ಚಾಟಗಳಿಗೆ ಅಸಲಿ ಕಾರಣ ಏನು?