ಟಿವಿಎಸ್ ಸಂಸ್ಥೆಯ ಮತ್ತೊಂದು ವಿನೂತನ ಕೊಡುಗೆ ಟಿವಿಎಸ್ ಎಕ್ಸ್ ಕುರಿತಾದ ವಿವರ ಇಲ್ಲಿವೆ.
ಕನ್ನಡಪ್ರಭವಾರ್ತೆ ಬೆಂಗಳೂರು:
ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಕ್ರಾಂತಿ ಮೂಡಿಸಲು ಸಜ್ಜಾಗಿರುವ ಟಿವಿಎಸ್ ಸಂಸ್ಥೆಯ ಮತ್ತೊಂದು ವಿನೂತನ ಕೊಡುಗೆ ಟಿವಿಎಸ್ ಎಕ್ಸ್. ಇದು ಕೇವಲ ಒಂದು ಎಲೆಕ್ಟ್ರಿಕ್ ಸ್ಕೂಟರ್ ಅಲ್ಲ, ಬದಲಾಗಿ ತಂತ್ರಜ್ಞಾನ ಮತ್ತು ವೇಗದ ಹಂಬಲ ಇರುವವರಿಗಾಗಿ ರೂಪಿಸಲಾದ ಒಂದು ಪ್ರೀಮಿಯಂ ಕಲಾಕೃತಿ ಎಂದರೆ ತಪ್ಪಾಗಲಾರದು. ಸುಮಾರು ₹2,63,880 (ಎಕ್ಸ್‌ಶೋರೂಮ್) ಬೆಲೆಯ ಈ ಸ್ಕೂಟರ್ ತನ್ನ ವಿಶಿಷ್ಟ ವಿನ್ಯಾಸದಿಂದಲೇ ರಸ್ತೆಯಲ್ಲಿ ಎಲ್ಲರ ಗಮನ ಸೆಳೆಯುತ್ತದೆ.ಆಕರ್ಷಕ ಮತ್ತು ವಿಶಿಷ್ಟ ವಿನ್ಯಾಸ
ಟಿವಿಎಸ್ ಎಕ್ಸ್ ಅನ್ನು ಮೊದಲ ಬಾರಿ ನೋಡಿದಾಗ ಇದು ಸ್ಕೂಟರ್ ಅಥವಾ ಬೈಕ್ ಎಂಬ ಗೊಂದಲ ಮೂಡುವುದು ಸಹಜ. ಸಪೂರವಾಗಿ ಮತ್ತು ಉದ್ದವಾಗಿರುವ ಇದರ ವಿನ್ಯಾಸವು ಅತ್ಯಂತ ಫ್ಯೂಚರಿಸ್ಟಿಕ್ ಆಗಿದೆ. ಸಾಂಪ್ರದಾಯಿಕ ಸ್ಕೂಟರ್‌ಗಳಂತೆ ಇದರಲ್ಲಿ ಮುಂಭಾಗದಲ್ಲಿ ಸಾಮಾನು ಇಡಲು ಸ್ಥಳಾವಕಾಶವಿಲ್ಲ, ಬದಲಾಗಿ ಸ್ಪೋರ್ಟ್ಸ್ ಬೈಕ್‌ಗಳಂತೆ ಇದು ಮ್ಯಾಕ್ಸಿ-ಸ್ಕೂಟರ್ ಶೈಲಿಯನ್ನು ಹೊಂದಿದೆ. ಇದರ ಲುಕ್ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಕುತೂಹಲ ಇಲ್ಲದವರೂ ಸಹ ಒಂದು ಕ್ಷಣ ನಿಂತು ನೋಡುವಂತೆ ಮಾಡುತ್ತದೆ.ವೇಗ ಮತ್ತು ಪರ್ಫಾರ್ಮೆನ್ಸ್
ವೇಗಕ್ಕೆ ಒತ್ತು ನೀಡಿರುವ ಈ ಸ್ಕೂಟರ್‌ನಲ್ಲಿ ಮೂರು ಪ್ರಮುಖ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ:ಎಕ್ಸ್‌ಟೆಲ್ತ್ (Xtealth): ಆರಾಮದಾಯಕ ಮತ್ತು ನಿಧಾನಗತಿಯ ಪ್ರಯಾಣಕ್ಕೆ ಸೂಕ್ತ.
ಎಕ್ಸ್‌ಟಿರೈಡ್ (Xtride): ನಗರದ ಸಂಚಾರದಲ್ಲಿ ಅಗತ್ಯವಿರುವ ವೇಗ ಒದಗಿಸುವ ಮೋಡ್.
ಕ್ಸಾನಿಕ್ (Xonic): ಇದು ಸ್ಕೂಟರ್‌ನ ಸಂಪೂರ್ಣ ಶಕ್ತಿಯನ್ನು ಹೊರಹಾಕುವ ಮೋಡ್ ಆಗಿದ್ದು, ಸೊಂಯ್ ಎಂದು ವೇಗವಾಗಿ ಸಾಗಲು ಬಯಸುವವರಿಗೆ ಹೇಳಿ ಮಾಡಿಸಿದಂತಿದೆ.ಕಂಪನಿಯು ಒಂದು ಬಾರಿ ಚಾರ್ಜ್ ಮಾಡಿದರೆ 159 ಕಿಮೀ (ಐಡಿಸಿ ರೇಂಜ್) ದೂರ ಸಾಗುತ್ತದೆ ಎಂದು ಹೇಳಿಕೊಂಡಿದ್ದರೂ, ವಾಸ್ತವಿಕವಾಗಿ ನಮ್ಮ ರಸ್ತೆ ಮತ್ತು ಸಂಚಾರ ದಟ್ಟಣೆಯಲ್ಲಿ 100 ರಿಂದ 110 ಕಿಮೀ ರೇಂಜ್ ನಿರೀಕ್ಷಿಸಬಹುದು.
ತಾಂತ್ರಿಕ ವಿಶೇಷತೆಗಳು
ಇದರಲ್ಲಿರುವ 10.2 ಇಂಚಿನ ಟಿಎಫ್‌ಟಿ ಸ್ಕ್ರೀನ್ ಅತಿ ದೊಡ್ಡ ಆಕರ್ಷಣೆ. ಇದನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಟಿಲ್ಟ್ ಮಾಡಬಹುದು. ಹೈವೇಗಳಲ್ಲಿ ಲಾಂಗ್ ರೈಡ್ ಹೋಗುವವರಿಗೆ ಕ್ರೂಸ್ ಕಂಟ್ರೋಲ್ ಸೌಲಭ್ಯವು ಹೆಚ್ಚು ಸಹಕಾರಿ. ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳ ಜೊತೆಗೆ ಎಬಿಎಸ್ ಸೌಲಭ್ಯವನ್ನು ನೀಡಲಾಗಿದೆ. ಸ್ಕೂಟರ್ ಆರಂಭಿಸಲು ಕೀ ಬದಲಾಗಿ ಪಾಸ್‌ವರ್ಡ್ ಬಳಸುವ ತಂತ್ರಜ್ಞಾನವಿದ್ದು, ಪಾಸ್‌ವರ್ಡ್ ಬಳಸುವಾಗ ಸ್ವಲ್ಪ ಎಚ್ಚರಿಕೆ ಅಗತ್ಯ. ಅತ್ತಿತ್ತ ನೋಡಿ ಹುಷಾರಾಗಿ ಬಳಸಬೇಕು.ಯಾರಿಗೆ ಇದು ಸೂಕ್ತ?
ಈ ಸ್ಕೂಟರ್ ಪ್ರಾಯೋಗಿಕತೆಗಿಂತ ಹೆಚ್ಚಾಗಿ ಸ್ಟೈಲ್ ಮತ್ತು ವೇಗಕ್ಕೆ ಒತ್ತು ನೀಡುವವರಿಗೆ ಸೂಕ್ತ. ಸೀಟಿನ ಅಡಿಯಲ್ಲಿ ಚಾರ್ಜರ್ ಇಟ್ಟರೆ ಸಣ್ಣ ಬ್ಯಾಗ್ ಇಡಲಷ್ಟೇ ಜಾಗವಿರುತ್ತದೆ. ಆದ್ದರಿಂದ ದಿನಸಿ ತರಲು ಅಥವಾ ಹೆಚ್ಚು ಸಾಮಾನು ಹೊತ್ತೊಯ್ಯುವವರಿಗೆ ಇದು ಅಷ್ಟೊಂದು ಸೂಕ್ತವಲ್ಲ. ಆದರೆ, ಹೊಸ ತಂತ್ರಜ್ಞಾನ ಬಯಸುವ ಯುವ ಪೀಳಿಗೆಗೆ ಮತ್ತು ವೇಗದ ರೋಮಾಂಚನ ಬಯಸುವವರಿಗೆ ಟಿವಿಎಸ್ ಎಕ್ಸ್ ಒಂದು ಅತ್ಯುತ್ತಮ ಪ್ರೀಮಿಯಂ ಆಯ್ಕೆಯಾಗಿದೆ.ಒಟ್ಟಾರೆಯಾಗಿ, ನೀವು ಎಲೆಕ್ಟ್ರಿಕ್ ವಿಭಾಗದಲ್ಲಿ ಒಂದು ಬೋಲ್ಡ್ ಮತ್ತು ಪವರ್‌ಫುಲ್ ಸ್ಕೂಟರ್ ಹುಡುಕುತ್ತಿದ್ದರೆ ಟಿವಿಎಸ್ ಎಕ್ಸ್ ನಿಮ್ಮ ಮೊದಲ ಆಯ್ಕೆಯಾಗಬಲ್ಲದು.