‘ತನ್ನನ್ನುತಾನೇ ‘ಅದೃಷ್ಟವಂತ’ ಅಂತ ಕರೆದುಕೊಳ್ಳುವಷ್ಟು ಧೈರ್ಯವೇ ಈ ಹುಂಬ ಕವಿಗೆ, ಇನ್ನೂ ಬದುಕಿರುವಾಗಲೇ?’ ಎಂದು ದಯವಿಟ್ಟು ಹುಬ್ಬೇರಿಸಬೇಡಿ. ನನ್ನದೇ ಒಂದು ಭಾವಗೀತೆಯ ಪಲ್ಲವಿ ಹೀಗಿದೆ:

ಕರೆಯಬೇಡ ಸುಖಿಯೆಂದು ಯಾರನ್ನೂ ನೀನು

ಅವ ತೀರುವತನಕ;

ಯಾವ ಕ್ಷಣ ಹೇಗೋ ಯಾರು ಬಲ್ಲರು

ಎದುರಾಗುವತನಕ.

ಆದ್ದರಿಂದ ‘ಅದೃಷ್ಟವಂತ’ ಎಂಬ ಪದಕ್ಕೆ ಒಂದು tagline ಹಾಕುತ್ತೇನೆ, ‘ಇಲ್ಲಿಯತನಕ’ ಅಂತ. ಅಂದರೆ ‘ಇದನ್ನು ಬರೆಯುತ್ತಿರುವ ಈ ಗಳಿಗೆಯ ತನಕ’ ಅಂತ.

ಇಷ್ಟಕ್ಕೂ ಈ ‘ಅದೃಷ್ಟವಂತ’ ಎಂಬ ಪ್ರಶಂಸೆ ಖಂಡಿತವಾಗಿಯೂ ನನಗೆ ನಾನೇ ಕೊಟ್ಟುಕೊಂಡದ್ದಲ್ಲ. ಅದನ್ನು ಕೊಟ್ಟವರು ನನ್ನ ಕೆಲವು ಸಾಹಿತಿ ಮಿತ್ರರು. ಅವರು ನನ್ನನ್ನು ‘ಲಕ್ಕೀ ಲಕ್ಷ್ಮಣ’ ಎಂದೇ ಕರೆಯುತ್ತಿದ್ದರು. ಅದೇನು ಅಂತರ್‌ಪ್ರಾಸವೆಂದೋ, ಅನುರಣನ ಅಲಂಕಾರವೆಂದೋ ಗೊತ್ತಿಲ್ಲ. ಆದರೆ ನಾನಂತೂ ಈವರೆಗೆ ಅದನ್ನು ನಿರಾಕರಿಸಲು ಹೋಗಿಲ್ಲ. ಏಕೆಂದರೆ ನನ್ನ ಬಾಳಿನ ಹಲವು ನಿರ್ಣಾಯಕ ಘಟ್ಟಗಳಲ್ಲಿ ಅನಿರೀಕ್ಷಿತ ಅದೃಷ್ಟ ನನಗೆ ಒದಗಿ ಬಂದಿರುವುದಂತೂ ನಿಜ.

ಅದೃಷ್ಟವಂತ ಅಂದರೆ ಯಾರು?

ಇಂಗ್ಲಿಷಿನ ಈ ನಾಣ್ಣುಡಿ ನಿಜ ಅನ್ನಿಸುತ್ತದೆ:

‘Lucky is the one

who is with the right people,

in the right place

at the right time.’

ಇದು ನನ್ನ ಬದುಕಿನಲ್ಲಿ ಬಹುಮಟ್ಟಿಗೆ ನಿಜವಾಗಿದೆ.

ಅಕ್ಷರ ಹೊಸಕಾವ್ಯ

1967ರಿಂದ ನಾನು ಚಿಂತಾಮಣಿಯಲ್ಲಿ ನೆಲೆಸಿದರೂ ತಿಂಗಳಿಗೊಮ್ಮೆ ಬೆಂಗಳೂರಿಗೆ ಹೋಗಿ ಬರುತ್ತಿದ್ದೆ. ಹಾಗೆ ಹೋದಾಗ ಲಂಕೇಶ್ ಮತ್ತು ವೈಎನ್‌ಕೆ ಅವರೊಂದಿಗೆ ಭೇಟಿ, ಮಾತುಕತೆ ಕಡ್ಡಾಯವಾಗಿತ್ತು. ಜೊತೆಗೆ ಇಂಗ್ಲಿಷ್ ಸಿನಿಮಾಗಳ ವೀಕ್ಷಣೆ ಸಹ. ಆ ವೇಳೆಗೆ ‘ಪ್ರಜಾವಾಣಿ’ಯಲ್ಲಿ ನನ್ನ ಕವನಗಳು ಪ್ರಕಟವಾಗುತ್ತಿದ್ದವು. ಆದರೆ ಅವುಗಳ ಬಗ್ಗೆ ಲಂಕೇಶ್ ಏನೂ ಹೇಳುತ್ತಿರಲಿಲ್ಲ. ಕೇಳಲು ನನಗೆ ಭಯ. ಹೀಗಿರುವಾಗ ಒಮ್ಮೆ ಲಂಕೇಶರನ್ನು ಭೇಟಿಯಾದಾಗ, ‘ನಿನ್ನ ಇತ್ತೀಚಿನ ಕವನಗಳನ್ನೆಲ್ಲ ನೀಟಾಗಿ ಹಸ್ತಪ್ರತಿ ಮಾಡಿ ನನಗೆ ಕಳಿಸಿಕೊಡು. ಹಾಗೆಯೇ ನಿನ್ನದೊಂದು ಫೋಟೋ ಸಹ’ ಎಂದರು. ಯಾಕೆಂದು ತಿಳಿಯಲಿಲ್ಲ, ಕಳಿಸಿಕೊಟ್ಟೆ.

1970ರಲ್ಲಿ ಸಾಗರದ ‘ಅಕ್ಷರ ಪ್ರಕಾಶನ’ ಪ್ರಕಟಿಸಿದ ಲಂಕೇಶ್ ಸಂಪಾದಕತ್ವದ ‘ಅಕ್ಷರ ಹೊಸಕಾವ್ಯ’ ಹೊರಬಂದಿತು. ಅದು ಕನ್ನಡ ನವ್ಯಕಾವ್ಯದ ಪ್ರಾತಿನಿಧಿಕ ಸಂಕಲನವಾಗಿತ್ತು. ಅದರ ಬಿಡುಗಡೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ತೀರಾ ಅನೌಪಚಾರಿಕವಾಗಿ ನಡೆಯಿತು. ನಾನೂ ಆಹ್ವಾನಿತನಾಗಿ ಹೋಗಿದ್ದೆ. ಅಡಿಗರು, ನರಸಿಂಹಸ್ವಾಮಿ, ಅನಂತಮೂರ್ತಿ, ಕಂಬಾರ - ಹೀಗೆ ಅನೇಕ ಕವಿಗಳು ಬಂದಿದ್ದರು. ಸಭಾಂಗಣ ಕಿಕ್ಕಿರಿದು ತುಂಬಿತ್ತು.

ಅಡಿಗರ ಕೈಯಿಂದ ಪುಸ್ತಕದ ಲೋಕಾರ್ಪಣೆ ನಡೆಯಿತು. ನಂತರ ಲಂಕೇಶ್ ಅಲ್ಲಿ ಹಾಜರಿದ್ದ ಕವಿಗಳನ್ನು ಒಬ್ಬೊಬ್ಬರನ್ನಾಗಿ ವೇದಿಕೆಗೆ ಕರೆದು ಅಡಿಗರಿಂದ ‘ಗೌರವ ಪ್ರತಿ’ ಕೊಡಿಸತೊಡಗಿದರು. ಅವರು ನನ್ನನ್ನೂ ವೇದಿಕೆಗೆ ಕರೆದಾಗ ನಾನು ನಿಜಕ್ಕೂ ತಬ್ಬಿಬ್ಬಾದೆ. ಆ ಸಂಕಲನದಲ್ಲಿ ನನ್ನ ಕವಿತೆಗಳೂ ಸೇರಿರಬಹುದೆಂಬ ಅಂದಾಜು ನನಗೆ ಕಿಂಚಿತ್ತೂ ಇರಲಿಲ್ಲ. ಏಕೆಂದರೆ ಲಂಕೇಶ್ ಆ ಬಗ್ಗೆ ನನಗೆ ಯಾವುದೇ ಸೂಚನೆ, ಸುಳಿವು ನೀಡಿರಲಿಲ್ಲ. ಹೀಗಾಗಿ ಅದೊಂದು ಅನಿರೀಕ್ಷಿತ ಆನಂದದ ಮತ್ತು ಧನ್ಯತೆಯ ಗಳಿಗೆಯಾಗಿತ್ತು ನನಗೆ.

‘ಅಕ್ಷರ ಹೊಸಕಾವ್ಯ’ದಲ್ಲಿ ಅಡಿಗರಿಂದ ಮೊದಲಾಗಿ ನನ್ನವರೆಗೆ ಸುಮಾರು 34 ಕವಿಗಳ ಆಯ್ದ ಕವಿತೆಗಳಿದ್ದವು. ಆ ಕವಿಗಳಲ್ಲಿ ನಾನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ. ಜೊತೆಗೆ ಆ ವೇಳೆಗೆ ನನ್ನ ಒಂದೂ ಕವನ ಸಂಕಲನ ಪ್ರಕಟವಾಗಿರಲಿಲ್ಲ. ಇಷ್ಟಾಗಿ ಲಂಕೇಶ್ ನನ್ನ 5 ಕವನಗಳಿಗೆ ಸಂಕಲನದಲ್ಲಿ ಎಡೆಮಾಡಿಕೊಟ್ಟಿದ್ದರು. ನನ್ನ ಅಪ್ರಕಟಿತ ‘ಫೋಟೋಗ್ರಾಫರ್’ ಪದ್ಯವನ್ನು ಹಾಗೂ ಜನಪ್ರಿಯ ‘ಗೋಪೀ ಮತ್ತು ಗಾಂಡಲೀನ’ ಪದ್ಯವನ್ನು ತಮ್ಮ ‘ಮುನ್ನುಡಿ’ಯಲ್ಲಿ ತಲಸ್ಪರ್ಶಿಯಾಗಿ ವಿಶ್ಲೇಷಿಸಿ, ನನ್ನ ಬಗ್ಗೆ ಉತ್ಸಾಹದ, ಭರವಸೆಯ ಮಾತುಗಳನ್ನಾಡಿದ್ದರು. ಒಟ್ಟಾರೆ ಆ ಸಂಕಲನ ಕನ್ನಡ ಕಾವ್ಯಲೋಕದಲ್ಲಿ ನನ್ನನ್ನು ಒಬ್ಬ ಗಮನಾರ್ಹ ಯುವಕವಿಯಾಗಿ ಪ್ರತಿಷ್ಠಾಪಿಸಿತು.

ಸಂಕಲನ ಬಿಡುಗಡೆಯಾದ ದಿನ, ಸಂಜೆ ಲಂಕೇಶರ ಮನೆಯಲ್ಲಿ ಒಂದು ಖಾಸಗಿ ‘ಗುಂಡು ಪಾರ್ಟಿ’ ಇತ್ತು. ಅದರಲ್ಲಿ ಇದ್ದವರು ಕೇವಲ ಐದೇ ಮಂದಿ. ಲಂಕೇಶ್, ಶಾಂತಿನಾಥ ದೇಸಾಯಿ, ಚಂದ್ರಶೇಖರ ಕಂಬಾರ, ನಾನು ಮತ್ತು ನನ್ನ ಚಿಂತಾಮಣಿಯ ಸಹೋದ್ಯೋಗಿ ಮಿತ್ರ ದೇವಪ್ರಕಾಶ್ (ಬಾಬು). ಅಂದು ಲಂಕೇಶರ ಮನೆಯಲ್ಲಿ ಅವರ ಕುಟುಂಬದ ಯಾರೂ ಇರಲಿಲ್ಲ. ಜೊತೆಗೆ ಪಾರ್ಟಿ ದಿಢೀರೆಂದು ಏರ್ಪಾಡಾದದ್ದು. ಹೀಗಾಗಿ ಗುಂಡಿಗೆ ಗಾಜಿನ ಲೋಟಗಳಿರಲಿಲ್ಲ. ಮನೆಯಲ್ಲಿದ್ದ ಸಣ್ಣ ಪುಟ್ಟ ತಾಮ್ರದ ಚೊಂಬುಗಳಿಂದಲೇ ಗುಂಡಾಮೃತ ಸೇವನೆ ನಡೆಯಿತು. ಯಥೇಚ್ಛವಾಗಿದ್ದದ್ದು ಸಿಗರೇಟೊಂದೇ. ಅದರ ದಟ್ಟ ಹೊಗೆಯ ಮಾಯಕ ವಾತಾವರಣದಲ್ಲಿ ತಡರಾತ್ರಿಯತನಕ ಬಿಸಿ ಬಿಸಿ ಸಾಹಿತ್ಯ ಚರ್ಚೆ ನಡೆಯಿತು. ಕಂಬಾರರು ತಮ್ಮ ‘ಹೇಳತೇನ ಕೇಳ’ ಕವನವನ್ನು ಸುಶ್ರಾವ್ಯವಾಗಿ ವಾಚಿಸಿದರು. ದೇಸಾಯಿಯವರಿಗೆ ನನ್ನ ‘ಫೋಟೋಗ್ರಾಫರ್’ ಕವನ ತುಂಬಾ ಇಷ್ಟವಾಗಿತ್ತು. ಅದನ್ನು ನನ್ನಿಂದ ಓದಿಸಿದರು. (ಮುಂದೆ ಅವರೇ ಅದನ್ನು ಇಂಗ್ಲಿಷಿಗೆ ಅನುವಾದ ಮಾಡಿದರು). ಒಟ್ಟಾರೆ ಅದೊಂದು ಮರೆಯಲಾಗದ ದಿನವಾಗಿ ನನ್ನ ನೆನಪಿನಲ್ಲಿ ಉಳಿದಿದೆ.

‘ಅಕ್ಷರ ಹೊಸಕಾವ್ಯ’ಕ್ಕೆ ಕನ್ನಡ ಸಾರಸ್ವತ ಲೋಕದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಅನಂತಮೂರ್ತಿ ‘ಕನ್ನಡಪ್ರಭ’ದಲ್ಲಿ ಸಂಕಲನವನ್ನು ಕಟುವಾಗಿ ಟೀಕಿಸಿದರು. ಲಂಕೇಶರ ಕಾವ್ಯಾಭಿರುಚಿ ತೀರಾ ಲಘು ಮತ್ತು ತೆಳು ಎಂದು ಜರಿದರು. ನನ್ನ ಕವಿತೆಗಳನ್ನು ಹಿಪ್ಪೀ, ಡ್ಯಾಂಡೀ ಮನೋಧರ್ಮದ್ದು ಎಂದು ಹಳಿದರು. (ನನ್ನ ‘ಗೋಪಿ ಮತ್ತು ಗಾಂಡಲೀನ’ ಕವನವನ್ನು ಲಂಕೇಶ್ ಅನಂತಮೂರ್ತಿಯವರ ‘ಕ್ಲಿಪ್‌ಜಾಯಿಂಟ್’ ಕಥೆಯೊಂದಿಗೆ ಹೋಲಿಸಿದ್ದು ಅವರನ್ನು ರೊಚ್ಚಿಗೆಬ್ಬಿಸಿತ್ತು). ಇದಕ್ಕೆ ಲಂಕೇಶ್ ಪ್ರತಿಕ್ರಿಯಿಸಿ, ತಮ್ಮ ಆಯ್ಕೆ ನಿಲುವುಗಳನ್ನು ಸಮರ್ಥಿಸಿಕೊಂಡರು. ಇವರಿಬ್ಬರ ನಡುವಿನ ವಾಗ್ವಾದದಲ್ಲಿ ಇನ್ನಷ್ಟು ಕವಿ, ವಿಮರ್ಶಕರು ಸೇರಿಕೊಂಡರು. ದೊಡ್ಡ ವಾಗ್ಯುದ್ಧವೇ ನಡೆಯಿತು. ಅದರ ಪರೋಕ್ಷ ಪರಿಣಾಮವಾಗಿ ನನಗೆ ಒಳ್ಳೆಯ ಪ್ರಚಾರ ಲಭಿಸಿತು.

ಇನ್ನೊಂದು ಕಡೆ, ಹೈದರಾಬಾದ್ ಕರ್ನಾಟಕದ ಕವಿಗಳನ್ನು ಲಂಕೇಶ್ ಕಡೆಗಣಿಸಿದ್ದಾರೆಂದು ಆ ಪ್ರಾಂತ್ಯದ ಕವಿಗಳು ಹುಯಿಲೆಬ್ಬಿಸಿದರು. ಪರಿಣಾಮವಾಗಿ, ‘ಅಕ್ಷರ ಹೊಸಕಾವ್ಯ’ಕ್ಕೆ ಪರ್ಯಾಯವೆಂಬಂತೆ ಕವಿ ಶಾಂತರಸರ ಸಂಪಾದಕತ್ವದಲ್ಲಿ ‘ಬೆನ್ನ ಹಿಂದಿನ ಬೆಳಕು’ ಹಾಗೂ ಕವಿ ಬುದ್ದಣ್ಣ ಹಿಂಗಮಿರೆ ಸಂಪಾದಕತ್ವದಲ್ಲಿ ‘ಹೊಸ ಜನಾಂಗದ ಕವಿತೆಗಳು’ ಎಂಬ ಸಂಕಲನಗಳು ಪ್ರಕಟಗೊಂಡವು. ಹೀಗೆ ‘ಅಕ್ಷರ ಹೊಸಕಾವ್ಯ’ದಿಂದ ಕನ್ನಡ ಕಾವ್ಯಲೋಕದಲ್ಲಿ ಒಂದು ಹೊಸ ಸಂಚಲನ ಉಂಟಾದದ್ದಂತೂ ನಿಜ.

ಮೊದಲ ಕವನ ಸಂಕಲನ

ಆ ಕಾಲದಲ್ಲಿ ಬೆಂಗಳೂರಿನ ಗಾಂಧಿಬಜಾರ್ ಮುಖ್ಯರಸ್ತೆಯ ಹಿಂದಿನ ಸಾಲಿನ ಬ್ಯೂಗಲ್ ರಾಕ್ ರಸ್ತೆಯ ಪೂರ್ವತುದಿಯಲ್ಲಿ ‘ಲಿಪಿ ಮುದ್ರಣ’ ಎಂಬ ಮೊಳೆ ಜೋಡಿಸುವ ಒಂದು Job Printing Press ಇತ್ತು. ಅದರ ಮಾಲೀಕ ನನ್ನ ಕವಿ ಗುರು ಸುಮತೀಂದ್ರ ನಾಡಿಗರ ಭಾವಮೈದುನನಾದ ಬಾಕಿನ (ಬಾಲಕೃಷ್ಣ ಕಿ.ನ.) ಸಾಹಿತ್ಯ ಪ್ರಿಯ. ವೈಎನ್‌ಕೆಗೆ ಆಪ್ತ (ಮುಂದೆ ವೈಎನ್‌ಕೆ ಪತ್ರಿಕೋದ್ಯಮದಿಂದ ನಿವೃತ್ತರಾದ ಮೇಲೆ ಹೊರತರುತ್ತಿದ್ದ ‘ಗಾಂಧಿ ಬಜಾರ್’ ಎಂಬ ಕಿರುಹೊತ್ತಿಗೆಗೆ ಅವನೇ ಮುದ್ರಕ. ಅಷ್ಟೇ ಅಲ್ಲದೆ ಅಡಿಗ, ನರಸಿಂಹಸ್ವಾಮಿ, ಪುತಿನ - ಇವರೆಲ್ಲರ ಸಮಗ್ರ ಕವನ ಸಂಕಲನಗಳನ್ನು ಪ್ರಕಟಿಸಿದವನೂ ಅವನೇ. ಅದೆಲ್ಲ ಮುಂದಿನ ಕಥೆ, ಇರಲಿ). ವೈಎನ್‌ಕೆ ಮೂಲಕ ಬಾಕಿನ ನನಗೂ ಪರಿಚಿತನಾಗಿ, ನನಗಿಂತ ಹಿರಿಯನಾದರೂ ಬಹುಬೇಗ ನನಗೆ ಏಕವಚನದ ಆಪ್ತ ಗೆಳೆಯನಾಗಿದ್ದ. ಬೆಂಗಳೂರಿಗೆ ಹೋದಾಗ ಒಮ್ಮೊಮ್ಮೆ ಅವನ ಮುದ್ರಣಾಲಯಕ್ಕೂ ಹೋಗುತ್ತಿದ್ದೆ. ಅಲ್ಲಿ ಲಂಕೇಶ್ ಮತ್ತು ವೈಎನ್‌ಕೆ ಸಿಗುತ್ತಿದ್ದರು. ಬಾಕಿನ ಬೆಂಗಳೂರಲ್ಲಿ ತನ್ನ ಸ್ವಂತ ಮುದ್ರಣಾಲಯ ತೆರೆಯುವ ಮುನ್ನ ಸಾಗರದ ‘ಅಕ್ಷರ ಪ್ರಕಾಶನ’ದಲ್ಲಿ ನೌಕರಿಯಲ್ಲಿದ್ದನಂತೆ. ಹೀಗಾಗಿ ಅದರ ಮಾಲೀಕರಾದ ಕೆ.ವಿ. ಸುಬ್ಬಣ್ಣನವರ ನಿಕಟ ಪರಿಚಯ ಅವನಿಗಿತ್ತು.

1971ರ ಪ್ರಾರಂಭದಲ್ಲಿ ಈ ‘ಬಾಕಿನ’ನಿಂದ ನನ್ನ ಚಿಂತಾಮಣಿಯ ವಿಳಾಸಕ್ಕೆ ಒಂದು ಪತ್ರ ಬಂತು. ‘ಆದಷ್ಟು ಬೇಗ ಬಂದು ನನ್ನನ್ನು ಭೇಟಿಯಾಗು. ಮಾತಾಡುವುದಿದೆ’. ಸರಿ, ಒಂದು ಶನಿವಾರ ಬೆಂಗಳೂರಿಗೆ ಹೋಗಿ ಅವನನ್ನು ಕಂಡೆ.

‘ಹೆಗ್ಗೋಡಿನಿಂದ ಸುಬ್ಬಣ್ಣ ಪತ್ರ ಬರೆದಿದ್ದಾರೆ. ಅಕ್ಷರ ಪ್ರಕಾಶನದಿಂದ ನಿನ್ನ ಮೊದಲ ಕವನ ಸಂಕಲನ ಅವರು ಪ್ರಕಟಿಸುತ್ತಾರಂತೆ. ಅದರ ಮುದ್ರಣದ ಜವಾಬ್ದಾರಿ ನನಗೆ ಹೊರಿಸಿದ್ದಾರೆ. ಗೌರವಧನದ ಬದಲು ಪುಸ್ತಕದ ನೂರು ಪ್ರತಿ ಕೊಡ್ತಾರಂತೆ. ನಿನ್ನ ಒಪ್ಪಿಗೆ ಕೇಳಿ ತಿಳಿಸಿ ಅಂದಿದ್ದಾರೆ. ಏನಂತೀ?’ ಎಂದು ಬಾಕಿನ ಸುಬ್ಬಣ್ಣನವರ ಪತ್ರ ನನಗೆ ನೀಡಿದ.

ಆ ಅನಿರೀಕ್ಷಿತ ಆನಂದದ ಸುದ್ದಿಯಿಂದ ನಾನು ಅವಾಕ್ಕಾದೆ. ಕವಿಗೆ ಪ್ರಕಾಶಕರು ಸಿಗುವುದು ದುಸ್ತರವಾಗಿದ್ದ ಕಾಲ. ಅಂಥಾದ್ದರಲ್ಲಿ ‘ನವ್ಯ ಸಾಹಿತ್ಯ’ದ ಮುಖವಾಣಿಯೆಂದೇ ಪ್ರಸಿದ್ಧವಾಗಿದ್ದ ‘ಅಕ್ಷರ ಪ್ರಕಾಶನ’ ತಾನಾಗಿ ನನ್ನನ್ನು ಅರಸಿಬಂದಿತ್ತು. ಅದೃಷ್ಟವೆಂದರೆ ಇದಲ್ಲವೇ? ನನ್ನ ಮುಖ ಊರಗಲವಾಯಿತು. ‘ಥ್ಯಾಂಕ್ಯೂ ಕಣೋ’ ಎಂದು ಗೆಳೆಯನ ಕೈ ಕುಲುಕಿದೆ.

‘ಕಂಗ್ರಾಟ್ಸ್’ ಎಂದು ನನ್ನ ಬೆನ್ನು ಚಪ್ಪರಿಸಿ, ಬಾಕಿನ ಮಾತು ಮುಂದುವರಿಸಿದ. ‘ಊರಿಗೆ ಹೋದಕೂಡಲೇ, ನಿನ್ನ ಕವನಗಳ ಕಟ್ಟು ಸಿದ್ಧಪಡಿಸಿ, ಅಂಚೆಯಲ್ಲಿ ನನಗೆ ಕಳಿಸು. ಅಂದ ಹಾಗೆ ‘ಮುನ್ನುಡಿ’ಗೆ ಯಾರನ್ನು ಕೇಳ್ತೀ?’

‘ಇನ್ಯಾರನ್ನು? ಲಂಕೇಶರನ್ನೇ’ ಎಂದೆ.

‘ಅವರು ಒಪ್ತಾರೇನಯ್ಯ? ಈವರೆಗೆ ಯಾರಿಗೂ ಅವರು ‘ಮುನ್ನುಡಿ’ ಬರೆದಿಲ್ಲವಲ್ಲ?’ ಎಂದ.

‘ಪ್ರಯತ್ನಿಸ್ತೀನಿ’ ಎಂದೆ.

ಮರುದಿನ, ಭಾನುವಾರ ಬೆಳಗ್ಗೆ ಲಂಕೇಶರ ಮನೆಯಲ್ಲಿ ಅವರನ್ನು ಕಂಡು ವಿಷಯ ತಿಳಿಸಿದೆ. ನಿರೀಕ್ಷೆಯಂತೆಯೇ ಅವರು, ‘ಇಲ್ಲಕಣಯ್ಯ, ನಾನು ಯಾರಿಗೂ ಮುನ್ನುಡಿಗಿನ್ನುಡಿ ಬರೆಯೋನಲ್ಲ’ ಎಂದುಬಿಟ್ಟರು.

ನಾನು ನಿಸ್ತೇಜನಾಗಿ, ಮುಖ ತಗ್ಗಿಸಿ, ಮೌನ ವಹಿಸಿದೆ.

ಅವರು ಒಂದು ಸಿಗರೇಟು ಹಚ್ಚಿ, ಒಂದೆರಡು ದಂ ಎಳೆದು, ‘ಆಯಿತು, ಪದ್ಯಗಳನ್ನು ಕಳಿಸಿಕೊಡು’ ಎಂದರು.

‘ಥ್ಯಾಂಕ್ಯೂ ಸರ್’ ಎಂದು ಸಂತೋಷ ಮತ್ತು ಧನ್ಯತೆಯಿಂದ ನಾನು ಅವರ ಕೈಕುಲುಕಿ, ಬೀಳ್ಕೊಂಡು ಊರಿಗೆ ಬಸ್ಸು ಹಿಡಿದೆ.

ಕೆಲವೇ ತಿಂಗಳುಗಳಲ್ಲಿ, ಲಂಕೇಶರ ಸೊಗಸಾದ ‘ಮುನ್ನುಡಿ’ಯೊಂದಿಗೆ ನನ್ನ ಮೊದಲ ಕವನ ಸಂಕಲನ ‘ಗೋಪಿ ಮತ್ತು ಗಾಂಡಲೀನ’ ಪ್ರಕಟಗೊಂಡಿತು. ಮುಖಪುಟ ವಿನ್ಯಾಸವನ್ನು ವಿಭಿನ್ನ ರೀತಿಯಲ್ಲಿ ಬಾಕಿನ ತಾನೇ ಮಾಡಿದ್ದ. ಪುಸ್ತಕದ ಆಗಿನ ಬೆಲೆ ಆಗಿನ ಮೂರೂವರೆ ರೂಪಾಯಿಗಳು. ಈಗಿನ ಹಾಗೆ ಆಗ ಅದ್ದೂರಿಯ ಪುಸ್ತಕ ಬಿಡುಗಡೆ ಸಮಾರಂಭಗಳು ಇರುತ್ತಿರಲಿಲ್ಲ. ಪತ್ರಿಕೆಗಳಲ್ಲಿ ‘ಸಾದರ ಸ್ವೀಕಾರ’ ಬಂದರೆ ಅದೇ ಪುಸ್ತಕದ ಬಿಡುಗಡೆ. ನನ್ನ ಮೊದಲ ಕವನ ಸಂಕಲನವನ್ನು ಕನ್ನಡ ಕಾವ್ಯಲೋಕ ಆದರದಿಂದ ಬರಮಾಡಿಕೊಂಡಿತು.

ನಂತರ ಬಾಕಿನ ಮೂಲಕ ನನಗೊಂದು ಖಾಸಗಿ ಸಂಗತಿ ತಿಳಿಯಿತು. ನನ್ನ ಕವನ ಸಂಕಲನವನ್ನು ಪ್ರಕಟಿಸಲು ಸುಬ್ಬಣ್ಣನವರಿಗೆ ಹೇಳಿದ್ದು ಸ್ವತಃ ಗೋಪಾಲಕೃಷ್ಣ ಅಡಿಗರಂತೆ. ನನ್ನ ಎದೆ ತುಂಬಿ ಬಂತು. ಇಂತಹ ಶ್ರೇಷ್ಠ ಹಿರಿಯ ಚೇತನಗಳ ನಿರ್ವ್ಯಾಜ ಪ್ರೀತಿ ಮತ್ತು ಸಕಾಲಿಕ ಬೆಂಬಲ ನನ್ನನ್ನು ಕವಿಯಾಗಿ ರೂಪಿಸಿ, ಆ ಹಂತಕ್ಕೆ ತಂದು ನಿಲ್ಲಿಸಿದ್ದವು. ನನ್ನನ್ನು, ಡಾ. ಜಿಎಸ್‌ಎಸ್ ಹೇಳಿದಂತೆ, ‘ಋಣದ ಗಣಿ’ಯನ್ನಾಗಿಸಿದ್ದವು.