ಎಂ.ಜಿ.ಹೆಗಡೆ ಆತ್ಮಕಥೆ ‘ಚಿಮಣಿ ಬೆಳಕಿನಿಂದ’ ಲೋಕಾರ್ಪಣೆ

| Published : Sep 23 2024, 01:19 AM IST

ಸಾರಾಂಶ

ಪುರಭವನ ವೇದಿಕೆಯ ವಿದ್ಯುದ್ದೀಪಗಳನ್ನು ಆರಿಸಿ, ಚಿಮಣಿ ಬೆಳಕಿನಲ್ಲಿ ವಿಶಿಷ್ಟ ರೀತಿಯಲ್ಲಿ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಲೇಖಕ, ಅಂಕಣಕಾರ ಎಂ.ಜಿ. ಹೆಗಡೆ ಅವರ ಆತ್ಮಕಥೆ ‘ಚಿಮಣಿ ಬೆಳಕಿನಿಂದ’ ಕೃತಿಯನ್ನು ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರು ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಭಾನುವಾರ ಲೋಕಾರ್ಪಣೆಗೊಳಿಸಿದರು.

ಗಾಂಧಿ ವಿಚಾರ ವೇದಿಕೆ ನೇತೃತ್ವದಲ್ಲಿ ಆರ್‌.ಜಿ. ಫೌಂಡೇಶನ್‌ ಮತ್ತು ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಸಹಯೋಗದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪುರಭವನ ವೇದಿಕೆಯ ವಿದ್ಯುದ್ದೀಪಗಳನ್ನು ಆರಿಸಿ, ಚಿಮಣಿ ಬೆಳಕಿನಲ್ಲಿ ವಿಶಿಷ್ಟ ರೀತಿಯಲ್ಲಿ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಬಳಿಕ ಮಾತನಾಡಿದ ಸುಬ್ರಾಯ ಚೊಕ್ಕಾಡಿ, ಆತ್ಮಕತೆ ಬರೆಯುವುದು ಸುಲಭದ ಕೆಲಸ ಅಲ್ಲ. ಹೊಗಳಿಕೆ- ತೆಗಳಿಕೆ ಎರಡನ್ನೂ ನಿರ್ಭಿಡೆಯಿಂದ ಬರೆಯುವ ಶಕ್ತಿ ಲೇಖಕನಿಗೆ ಇರಬೇಕು. ಇಲ್ಲದಿದ್ದರೆ ಆತ್ಮಕಥೆಗಳು ಹುಸಿಕೃತಿಗಳಾಗಿ ಬಿಡಬಹುದು. ಆದರೆ ವಿವಿಧ ಮಜಲುಗಳನ್ನು ದಾಟಿ ಬೆಳೆದಿರುವ ಎಂ.ಜಿ. ಹೆಗಡೆ ಆತ್ಮಸಾಕ್ಷಿಯಾಗಿ ಸಿಹಿ-ಕಹಿ ಎರಡೂ ನೆನಪುಗಳನ್ನು ದಾಖಲಿಸಿದ್ದಾರೆ ಎಂದು ಹೇಳಿದರು.

ಕೃತಿ ಪರಿಚಯ ಮಾಡಿದ ಚಿಂತಕ ಅರವಿಂದ ಚೊಕ್ಕಾಡಿ ಮಾತನಾಡಿ, ವಿದ್ಯಾರ್ಥಿ ಸಂಘಟನೆ, ಹಿಂದುತ್ವ ಹೀಗೆ ಹಲವು ಸಂಘಟನೆಗಳಲ್ಲಿ ಎಂ.ಜಿ. ಹೆಗಡೆ ತೊಡಗಿಕೊಂಡಿದ್ದವರು. ‘ಚಿಮಣಿ ಬೆಳಕಿನಿಂದ’ ಕೃತಿಯ ಮೂಲಕ ತಮ್ಮ ಜೀವನ ಹಾದಿಯನ್ನು ಆತ್ಮಸಾಕ್ಷಿಯಿಂದ ಅನಾವರಣಗೊಳಿಸಿದ್ದಾರೆ. ಆತ್ಮಕತೆ ಎನ್ನುವುದು ಅವಲೋಕನ ಮಾಡುವ ಕೃತಿಯಾಗಿರಬೇಕು. ಈ ನಿಟ್ಟಿನಲ್ಲಿ ಚಿಮಣಿ ಬೆಳಕಿನಿಂದ ಕೃತಿ ಉತ್ತಮವಾಗಿ ಮೂಡಿಬಂದಿದೆ ಎಂದರು.

ಲೇಖಕ ಎಂ.ಜಿ.ಹೆಗಡೆ ಮಾತನಾಡಿ, ನಾನು ಹಿಂದುತ್ವದ ಹೋರಾಟದಲ್ಲಿದ್ದಾಗ ಧರ್ಮವೆಂದರೆ ಏನೆಂಬುದು ಗೊತ್ತಿರಲಿಲ್ಲ. ಗೊತ್ತಿದ್ದರೆ ಇಷ್ಟೆಲ್ಲ ಘಟನೆಗಳು ಆಗುತ್ತಲೂ ಇರಲಿಲ್ಲ. ನಮ್ಮೆದೆಯ ಧರ್ಮವೇ ನಿಜವಾದ ಧರ್ಮ. ಈಗ ಸಮಾಜದಲ್ಲಿ ಬರೀ ಆಚರಣೆಗಳಿಗಾಗಿಯೇ ಜಗಳವಾಗುತ್ತಿದೆ. ನಮ್ಮ ನಮ್ಮ ಧರ್ಮದ ಸತ್ವ ತಿಳಿದುಕೊಂಡು ಅದರಂತೆ ಮುಂದುವರಿದರೆ ಯಾವ ಸಮಸ್ಯೆಯೂ ಇರಲ್ಲ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಡಾ. ಉದಯ ಕುಮಾರ್‌ ಇರ್ವತ್ತೂರು ಮಾತನಾಡಿ, ಒಳ್ಳೆಯ ವಿಚಾರ, ಸದಾಶಯಗಳನ್ನು ಎಂದೂ ಕೊಲ್ಲಲಾಗದು. ಒಳ್ಳೆಯ ವಿಚಾರಗಳನ್ನು ಇಂತಹ ಕೃತಿಗಳ ಮೂಲಕ ಸಮಾಜಕ್ಕೆ ನೆನಪಿಸುವ ಕಾರ್ಯ ನಿರಂತರ ಸಾಗಲಿ ಎಂದು ಆಶಿಸಿದರು.

ಗಾಂಧಿ ವಿಚಾರ ವೇದಿಕೆ ಅಧ್ಯಕ್ಷ ಶ್ರಿಧರ್‌ ಜಿ. ಭಿಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಲೇಖಕಿ ಭುವನೇಶ್ವರಿ ಹೆಗಡೆ ಮಾತನಾಡಿದರು. ನಾಗವೇಣಿ, ಸೀತಾರಾಮ ಹೆಗಡೆ ಶಾನವಳ್ಳಿ, ಡಾ. ಪ್ರಭಾಕರ ನೀರುಮಾರ್ಗ, ಪ್ರಭಾಕರ ಹೆಗಡೆ ಹೆಸಲ್ಮನೆ, ನಂದಗೋಪಾಲ, ಲಾತವ್ಯ ಆಚಾರ್ಯ ಉಡುಪಿ, ಲಕ್ಷ್ಮಿ ಹೆಗಡೆ ಇದ್ದರು. ಗಾಂಧಿ ವಿಚಾರ ವೇದಿಕೆಯ ಆಡಳಿತಾಧಿಕಾರಿ ಭಾಗ್ಯೇಶ್‌ ರೈ ಸ್ವಾಗತಿಸಿದರು. ಕಲ್ಲೂರು ನಾಗೇಶ್‌ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಎಂ.ಜಿ. ಹೆಗಡೆ ರಚಿಸಿದ ಭಾವಗೀತೆಗಳ ಗಾಯನ ಏರ್ಪಡಿಸಲಾಗಿತ್ತು.................

ನೀತಿ ಸಂಹಿತೆ: ಸಭಿಕರ ಸ್ಥಾನದಲ್ಲೇ ಕುಳಿತ ರಾಜಕಾರಣಿಗಳು!

ಎಂ.ಜಿ. ಹೆಗಡೆ ಆತ್ಮಕಥೆಯನ್ನು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಬಿಡುಗಡೆ ಮಾಡಬೇಕಿತ್ತು. ಅವರೊಂದಿಗೆ ತುಳು, ಬ್ಯಾರಿ, ಕೊಂಕಣಿ ಅಕಾಡೆಮಿ ಅಧ್ಯಕ್ಷರು ಕೂಡ ವೇದಿಕೆ ಹಂಚಬೇಕಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಕಾರಣದಿಂದ ರಾಜಕಾರಣಿಗಳು ವೇದಿಕೆ ಹತ್ತದೆ ಸಭಿಕರ ಸ್ಥಾನದಲ್ಲೇ ಕೂರುವಂತಾಯಿತು.

ಪೂರ್ವನಿಗದಿಯಂತೆ ಬಿ.ಕೆ. ಹರಿಪ್ರಸಾದ್‌ ಪುರಭವನಕ್ಕೆ ಆಗಮಿಸಿದ್ದರು. ಜತೆಗೆ ಮಾಜಿ ಸಚಿವ ರಮಾನಾಥ ರೈ, ಎಂಎಲ್ಸಿ ಐವನ್‌ ಡಿಸೋಜ, ಮಾಜಿ ಶಾಸಕರಾದ ಜೆ.ಆರ್‌. ಲೋಬೊ, ಶಕುಂತಳಾ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಬಂದಿದ್ದರು. ಇವರ್ಯಾರಿಗೂ ವೇದಿಕೆ ಹತ್ತಲು ನೀತಿ ಸಂಹಿತೆ ನಿಯಮಗಳು ಬಿಡಲಿಲ್ಲ.