;Resize=(412,232))
ಬೆಂಗಳೂರು : ಮಲೆಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ ವೇಳೆ 10 ವರ್ಷದ ಬಾಲಕ ಚಿರತೆ ದಾಳಿಯಿಂದ ಸಾವಿಗೀಡಾದ ಹಿನ್ನೆಲೆಯಲ್ಲಿ ವನ್ಯಜೀವಿ ಸಂಚಾರವಿರುವ ಚಾರಣ ಪಥ ಮತ್ತು ಸಂಚಾರ ಪಥಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸುವಂತೆ ಅರಣ್ಯಾಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ಮೇ 10ರಂದು ಚಾಮರಾಜನಗರ ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿಯಿಂದ 10 ವರ್ಷದ ಬಾಲಕ ಮೃತಪಟ್ಟಿದ್ದು, ಅದರಿಂದ ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕರು ಮತ್ತು ಚಾರಣಿಗರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ ಹುಲಿ, ಚಿರತೆ, ಆನೆ, ಕರಡಿ ಸೇರಿ ಇನ್ನಿತರ ವನ್ಯಜೀವಿಗಳು ಸಂಚರಿಸುವ ಮತ್ತು ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಕಡೆ ಚಾರಣ ಮತ್ತು ಸಂಚಾರ ಪಥಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಬೇಕು. ಈ ಸಂಬಂಧ ಅಧಿಕೃತ ಸುತ್ತೋಲೆ ಹೊರಡಿಸಬೇಕು ಎಂದು ಈಶ್ವರ್ ಖಂಡ್ರೆ ನಿರ್ದೇಶಿಸಿದ್ದಾರೆ.
ಅದಕ್ಕೆ ಸಂಬಂಧಿಸಿ ಮಂಗಳವಾರ ವಿಕಾಸಸೌಧದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಚಾಮರಾಜನಗರ ಅರಣ್ಯಾಧಿಕಾರಿಗಳೊಂದಿಗೆ ಈಶ್ವರ್ ಖಂಡ್ರೆ ವರ್ಚ್ಯುವಲ್ ಸಭೆ ನಡೆಸಿದರು. ಈ ವೇಳೆ ಮಲೆಮಹದೇಶ್ವರ ಬೆಟ್ಟಕ್ಕೆ ಶಿವರಾತ್ರಿ, ಯುಗಾದಿ ಜಾತ್ರೆ ವೇಳೆಯಲ್ಲಿ ಮಾತ್ರ ಕಾಲ್ನಡಿಗೆ ಮೂಲಕ ಸಾಗಲು ಅವಕಾಶ ನೀಡುವಂತೆ ಸೂಚಿಸಿದರು.
ಸದ್ಯ ನಾಗಮಲೆಗೆ 14 ಕಿ.ಮೀ. ನಡೆದು ಹೋಗಲು ಅವಕಾಶವಿದೆ. ಅದನ್ನು ಕಡಿತಗೊಳಿಸಿ, ಕೇವಲ 3 ಕಿ.ಮೀ. ಮಾತ್ರ ಕಾಲ್ನಡಿಗೆ ಮೂಲಕ ಹೋಗಲು ಅವಕಾಶ ನೀಡಬೇಕು. ಹೀಗೆ ನಡಿಗೆದಾರರಿಗೆ ವಾಕಿಟಾಕಿ, ಅಗತ್ಯ ಸುರಕ್ಷತಾ ಸಲಕರಣೆ ಹೊಂದಿದ ಮಾರ್ಗದರ್ಶಕ ಸೇವೆ ಒದಗಿಸಬೇಕು. ಟಿಕೆಟ್ ಕೌಂಟರ್ ಬಳಿಯಿಂದ ನಾಗಮಲೆ ಭಕ್ತರು ಜೀಪ್‌ನಲ್ಲಿ ಹೋಗುವುದನ್ನು ಕಡ್ಡಾಯಗೊಳಿಸಬೇಕು. ಉಳಿದ 3 ಕಿ.ಮೀ. ದುರ್ಗಮ ಅರಣ್ಯ ಸಂಚಾರ ಪಥದ ಎರಡೂ ಬದಿಯಲ್ಲಿ ವನ್ಯಜೀವಿಗಳು ಕಾಣುವಂತೆ ಕಳೆ ತೆಗೆಯಬೇಕು ಎಂದು ಹೇಳಿದರು.
ಹಾಗೆಯೇ, ಮಾದಪ್ಪನ ದರ್ಶನಕ್ಕೆ 7 ಕಿ.ಮೀ. ಬೆಟ್ಟ ಹತ್ತಿ ಹೋಗಲು ವರ್ಷವಿಡೀ ಅವಕಾಶ ನೀಡದೆ ಶಿವರಾತ್ರಿ ಮತ್ತು ಯುಗಾದಿಯಲ್ಲಿ ಮಾತ್ರ ಅವಕಾಶ ನೀಡಬೇಕು. ಈ ಸಂದರ್ಭದಲ್ಲಿ ಹೆಚ್ಚಿನ ಅರಣ್ಯ ಸಿಬ್ಬಂದಿಯನ್ನು ಭಕ್ತರ ಸುರಕ್ಷತೆಗಾಗಿ ನಿಯೋಜಿಸಬೇಕು ಎಂದರು.
ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಎಪಿಸಿಸಿಎಫ್ (ವನ್ಯಜೀವಿ) ಬಿಸ್ವಜಿತ್ ಮಿಶ್ರಾ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಇದ್ದರು.