ಉಪ ನಗರ ರೈಲು ಯೋಜನೆ ಪಾರಿಜಾತ ಕಾರಿಡಾರ್‌ ಕೈಬಿಡುವ ಚಿಂತನೆಗೆ ಎಎಪಿ ತೀವ್ರ ವಿರೋಧ

KannadaprabhaNewsNetwork |  
Published : Nov 29, 2024, 01:33 AM ISTUpdated : Nov 29, 2024, 06:49 AM IST
Train

ಸಾರಾಂಶ

 ಉಪನಗರ ರೈಲು ಯೋಜನೆಯ ಪಾರಿಜಾತ ಕಾರಿಡಾರ್ ನಿರ್ಮಾಣ ಕೈಬಿಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿರುವುದಕ್ಕೆ ಆಮ್ ಆದ್ಮಿ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ. 

  ಬೆಂಗಳೂರು :  ನಗರ ಜನತೆಯ ದಶಕಗಳ ಬೇಡಿಕೆಯಾದ ಉಪನಗರ ರೈಲು ಯೋಜನೆಯ ಪಾರಿಜಾತ ಕಾರಿಡಾರ್ ನಿರ್ಮಾಣ ಕೈಬಿಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿರುವುದಕ್ಕೆ ಆಮ್ ಆದ್ಮಿ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ. ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ದರ್ಶನ್‌ ಜೈನ್‌, ಪಾರಿಜಾತ ಕಾರಿಡಾರ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಆಗ್ರಹಿಸಿದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪನಗರ ರೈಲು ಯೋಜನೆಯ ಪಾರಿಜಾತ ಕಾರಿಡಾರ್ ಕೈಬಿಡುವ ಬಗ್ಗೆ ಚರ್ಚೆಯಾಗಿದೆ. ನಮ್ಮ ಮೆಟ್ರೋಗೆ ನಷ್ಟವಾಗುತ್ತದೆ ಎನ್ನುವ ಕಾರಣ ನೀಡಿ ಈ ಯೋಜನೆ ಕೈಬಿಡಲು ಮುಂದಾಗಿರುವುದು ಅವೈಜ್ಞಾನಿಕ. ಬೆಂಗಳೂರಿಗೆ ಉಪನಗರ ರೈಲ್ವೆಯ ಬೇಡಿಕೆಯ ಕೂಗು 65 ವರ್ಷ ಹಳೆಯದಾಗಿದ್ದು, ಇಂದಿನವರೆವಿಗೂ ಕೈಗೂಡದಿರುವುದು ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ ಎಂದು ಟೀಕಾಪ್ರಹಾರ ನಡೆಸಿದರು.

ಮೆಟ್ರೊ ಮಾರ್ಗ ಮತ್ತು ಸಬರ್ಬನ್ ಮಾರ್ಗಗಳು ಬೇರೆ ಬೇರೆಯಾಗಿದ್ದು, ಒಂದಕ್ಕೊಂದು ಪೂರಕವಾಗಿವೆ ಮತ್ತು ಉಪನಗರ ರೈಲು ಮೆಟ್ರೊಗಿಂತ ಹೆಚ್ಚಿನ ಜನಪಯೋಗಿಯಾಗಿದೆ. ಇಂತಹ ಯೋಜನೆಯನ್ನು ಕೈಬಿಡುವ ಚರ್ಚೆ ಸಮಂಜಸವಲ್ಲ. ನಮ್ಮ ಮೆಟ್ರೋ ಯೋಜನೆಗೆ ಪೂರಕವಾಗಿ ಇರಬೇಕಿದ್ದ ಉಪನಗರ ರೈಲು ಯೋಜನೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿರುವುದು ಇಡೀ ಬೆಂಗಳೂರು ನಗರ ಜನತೆಗೆ ಮಾಡುವ ಅನ್ಯಾಯ ಎಂದು ಟೀಕಾಪ್ರಹಾರ ನಡೆಸಿದರು.

ಸೋಮಣ್ಣ ಅವರು ಕೇಂದ್ರ ಸಚಿವರಾಗಲು ಬೆಂಗಳೂರು ಜನತೆ ಕೊಡುಗೆ ಮುಖ್ಯವಾಗಿದೆ. ಜನರ ಋಣ ತೀರಿಸುವ ಮನಸ್ಸಿದ್ದರೆ ಪಾರಿಜಾತ ಕಾರಿಡಾರ್ ಕಾಮಗಾರಿ ಮುಂದುವರೆಸಲು ಕ್ರಮ ತೆಗೆದುಕೊಳ್ಳಬೇಕು. ಪಾರಿಜಾತ ಕಾರಿಡಾರ್ ಕೈಬಿಟ್ಟರೆ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಬೆಂಗಳೂರು ಮಾಧ್ಯಮ ಉಸ್ತುವಾರಿ ಅನಿಲ್‌ ನಾಚಪ್ಪ ಉಪಸ್ಥಿತರಿದ್ದರು.

PREV

Recommended Stories

ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್‌ ಮೇಲೂ ಕೇಸ್‌ : ಸಲೀಂ
ಬೆಂಗಳೂರು ಬೀದಿನಾಯಿಗಳಿಗೆ ಈಗ ಪೊಲೀಸ್‌ ಶ್ವಾನಗಳ ರೀತಿ ಟ್ರೈನಿಂಗ್ ಭಾಗ್ಯ !