;Resize=(412,232))
ವ್ಯಕ್ತಿ ನಿರ್ಮಾಣದ ಮೂಲಕ ಮಾತ್ರ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂಬ ಸಂಕಲ್ಪ ಇಟ್ಟುಕೊಂಡು ಈ ದೇಶದ ಕಾಲೇಜು ಕ್ಯಾಂಪಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿಗೆ 78ನೇ ವರ್ಷದ ಸಂಸ್ಥಾಪನಾ ದಿನದ ಸುಸಂದರ್ಭ, ದೇಶಾದ್ಯಂತ ವಿದ್ಯಾರ್ಥಿಗಳು ಎಬಿವಿಪಿಯ ಸ್ಥಾಪನಾ ದಿನವನ್ನು ‘ರಾಷ್ಟ್ರೀಯ ವಿದ್ಯಾರ್ಥಿ ದಿನ’ವನ್ನಾಗಿ ಆಚರಿಸುತ್ತ ಬರುತ್ತಿದ್ದಾರೆ, 1949 ಜುಲೈ 09 ಸ್ಥಾಪನೆಯಾದ ಎಬಿವಿಪಿ ಇಂದು ವಿಶ್ವದ ಅತೀ ಹೆಚ್ಚು ಸದಸ್ಯರನ್ನು ಒಳಗೊಂಡ ವಿದ್ಯಾರ್ಥಿ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ರಾಷ್ಟ್ರ ನಿರ್ಮಾಣ ಎಂದರೆ ಕೇವಲ ಒಂದು ಭೌತಿಕ ಪ್ರಗತಿಯಲ್ಲ, ಬದಲಿಗೆ ಪ್ರತಿಯೊಬ್ಬ ನಾಗರಿಕನಲ್ಲಿಯೂ ನಮ್ಮ ದೇಶದ ಮೂಲ ಪರಂಪರೆ, ಸಂಸ್ಕೃತಿ, ಸಂಸ್ಕಾರ, ಸಂವಿಧಾನದ ಆಶಯಗಳ ಬಗೆಗೆ ಅರಿವು ಮೂಡಿಸಿ ರಾಷ್ಟ್ರೀಯ ಪ್ರಜ್ಞೆಯನ್ನು ಬಲಪಡಿಸುವುದರ ಮೂಲಕ ದೇಶದ ಏಕತೆ ಸಮಗ್ರತೆಗೆ ಧಕ್ಕೆಯಾಗದಂತೆ ಜಾತಿ, ಮತ, ಭಾಷೆಯ ಭೇದವಿಲ್ಲದೆ ಎಲ್ಲರೂ ಒಂದಾಗಿ ಬದುಕುವ ವಾತಾವರಣವನ್ನು ಕಾಲೇಜಿನ ಕ್ಯಾಂಪಸ್‌ಗಳಲ್ಲಿ ಮೂಡಿಸುತ್ತಾ ಬರುತ್ತಿರುವ ವಿದ್ಯಾರ್ಥಿ ಸಂಘಟನೆ ಎಬಿವಿಪಿಯಾಗಿದೆ.
ಭಾರತ ದೇಶದಲ್ಲಿ ಹಲವಾರು ವಿದ್ಯಾರ್ಥಿ ಸಂಘಟನೆಗಳು ಕಾರ್ಯನಿರ್ವಹಿಸುತ್ತಿದ್ದರೂ ಸಹಿತ ವಿದ್ಯಾರ್ಥಿ ಪರಿಷತ್ತು ಒಂದು ವಿಶಿಷ್ಟ, ವಿಶೇಷ ವಿದ್ಯಾರ್ಥಿ ಸಂಘಟನೆಯಾಗಿದೆ, ವಿವಿಧ ವಿದ್ಯಾರ್ಥಿ ಸಂಘಟನೆಗಳಲ್ಲಿ ಕೇವಲ ವಿದ್ಯಾರ್ಥಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ ವಿದ್ಯಾರ್ಥಿ ಪರಿಷತ್‌ನಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಣ ತಜ್ಞರು ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ಒಳಗೊಂಡು ಶೈಕ್ಷಣಿಕ ಪರಿವಾರದೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ಸಂಘಟನೆಯಾಗಿದೆ, ವಿದ್ಯಾರ್ಥಿ ಪರಿಷತ ನಗರ ಶಾಖೆಯ ಅಧ್ಯಕ್ಷರಿಂದ, ರಾಷ್ಟ್ರೀಯ ಅಧ್ಯಕ್ಷರವರೆಗೂ ಅಧ್ಯಾಪಕರನ್ನು ಅಧ್ಯಕ್ಷರನ್ನಾಗಿ ಜವಾಬ್ದಾರಿ ನೀಡುತ್ತಾ ವಿದ್ಯಾರ್ಥಿ ಪರಿಷತ್ತು ಅಧ್ಯಾಪಕರ ಸಹಭಾಗಿತ್ವದೊಂದಿಗೆ ಎಬಿವಿಪಿ ತನ್ನ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ಮುನ್ನಡೆಸುತ್ತಿದೆ.
ನಾಯಕತ್ವ ಗುಣ:
ವಿದ್ಯಾರ್ಥಿ ಯುವ ಜನರು ಕೇವಲ ಶೈಕ್ಷಣಿಕ ಚಟುವಟಿಕೆಗಳಲ್ಲಷ್ಟೇ ಇರದೇ ಶೈಕ್ಷಣಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ನಾಯಕರನ್ನಾಗಿ ನಿರ್ಮಾಣ ಮಾಡುವ ಕಾರ್ಯವನ್ನು ಎಬಿವಿಪಿ ಮಾಡುತ್ತಿದೆ, ಎಬಿವಿಪಿಯ ಸಂಘಟನೆಯಲ್ಲಿ ನಿರ್ಮಾಣವಾದ ಕಾರ್ಯಕರ್ತರು ಇಂದು ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶೇಷ ಕಾರ್ಯವನ್ನು ನಿರ್ವಹಿಸುತ್ತಾ ಬರುತ್ತಿದ್ದಾರೆ, ರಾಜನೀತಿ ಕ್ಷೇತ್ರದಲ್ಲಿ ಇಂದಿನ ಕೇಂದ್ರ ಗೃಹ ಸಚಿವರಾದ ಅಮಿತ ಶಾ, ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ, ಧರ್ಮೇಂದ್ರ ಪ್ರಧಾನ, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಹಿಂದಿನ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ, ರಾಜಸ್ಥಾನದ ಮುಖ್ಯಮಂತ್ರಿ ಭಾಜನ ಲಾಲ್ ಶರ್ಮಾ, ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ, ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿ ಹೀಗೆ ಹಲವಾರು ವ್ಯಕ್ತಿಗಳು ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ ಗರಡಿಯಲ್ಲಿ ಬೆಳೆದು ವಿವಿಧ ಕ್ಷೇತ್ರದಲ್ಲಿ ಇದ್ದಾರೆ. ಕಾಲೇಜಿನ ಕ್ಯಾಂಪಸ್‌ಗಳಲ್ಲಿರುವ ಸಮಸ್ಯೆಯಿಂದ ಹಿಡಿದು ಈ ರಾಜ್ಯದ ದೇಶದ ಸಮಸ್ಯೆಗಳನ್ನು ಸರಿಪಡಿಸುವಂತೆ ವಿದ್ಯಾರ್ಥಿ ಪರಿಷತ್ತು ಕಾಲ-ಕಾಲಕ್ಕೆ ಹಲವಾರು ಹೋರಾಟಗಳನ್ನ ರೂಪಿಸುತ್ತಾ ಬಂದಿದೆ, ವಿದ್ಯಾರ್ಥಿಗಳ ಬಸ್ ಪಾಸ್ ಹಾಗೂ ಬಸ್‌ಗಳ ಸಮಸ್ಯೆ, ಸರ್ಕಾರಿ ಕಾಲೇಜುಗಳ ಮೂಲಭೂತ ಸೌಕರ್ಯ, ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವ ಕುರಿತು, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸರ್ಕಾರಿ ನೇಮಕಾತಿ ಮಾಡಿಕೊಳ್ಳುವ ಕುರಿತು, ಗುಣಮಟ್ಟದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವಾರು ಯಶಸ್ವಿ ಹೋರಾಟಗಳನ್ನು ಎಬಿವಿಪಿ ಕಟ್ಟಿದೆ.
ಎಬಿವಿಪಿಯ ಇತ್ತೀಚಿನ ಅಭಿಯಾನಗಳು:
‘ಸ್ಕ್ರೀನ್ ಟೈಮ್ ಟು ಆಕ್ಟಿವಿಟಿ ಟೈಮ್’ ಪ್ರಸ್ತುತ ವಿದ್ಯಮಾನದಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ಮಾಧ್ಯಮಗಳ ಅತಿಯಾದ ಬಳಕೆ ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಅಂಗವಾಗಿದೆ. ಅತಿಯಾದ ಸ್ಕ್ರೀನ್ ಟೈಮ್ ಬಳಕೆಯಿಂದ ವಿದ್ಯಾರ್ಥಿಗಳ ದೈಹಿಕ, ಮಾನಸಿಕ, ಸಾಮಾಜಿಕ ಬೌದ್ಧಿಕ ಬೆಳವಣಿಗೆಗೆ ಗಂಭೀರ ಸವಾಲಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಎಬಿವಿಪಿ ದೇಶಾದ್ಯಂತ ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ಸ್ಕ್ರೀನ್ ಟೈಮ್‌ನಿಂದ ಆಟೋಟ, ಕಲೆ, ಅಧ್ಯಯನ, ಸಂವಾದ, ಸೇವೆ, ನಾವಿನ್ಯತೆ, ಸಂಸ್ಕೃತಿಗಳ ಕಡೆ ಗಮನ ಹರಿಸುವಂತೆ ಜಾಗೃತಿ ಮೂಡಿಸುತ್ತಿದೆ. ವಂದೇ ಮಾತರಂಗೆ 150 ವರ್ಷ ಹಿನ್ನಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಂದೇ ಮಾತರಂನ ಮಹತ್ವದ ಕುರಿತು ತಿಳಿಸುವ ಅಭಿಯಾನವನ್ನು ಈ ವರ್ಷ ತೆಗೆದುಕೊಳ್ಳಲಾಗಿದೆ, ಡ್ರಗ್ಸ್ ಮುಕ್ತ ಕರ್ನಾಟಕ, ವಿದ್ಯಾರ್ಥಿನಿಯರ ಸುರಕ್ಷತೆಗೆ ‘ಮಿಷನ್ ಸಾಹಸಿ’ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.
ಸರ್ವ ವ್ಯಾಪ್ತಿ ಸರ್ವ ಸ್ಪರ್ಶಿ:
ಇಂದು ವಿದ್ಯಾರ್ಥಿ ಪರಿಷತ್ತು ಸರ್ವ ವ್ಯಾಪ್ತಿಯಾಗಿ ಎಲ್ಲ ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಗೆ ಅನುಗುಣವಾಗಿ ವೇದಿಕೆ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಹಲವಾರು ಆಯಾಮ - ಗತಿವಿಧಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಪರಿಸರ, ಜಲ ಸಂರಕ್ಷಣಾ ದೃಷ್ಟಿಯಿಂದ ಸ್ಟುಡೆಂಟ್ ಫಾರ್ ಡೆವಲಪ್ಮೆಂಟ್, ಸೇವಾ ಮನೋಭಾವ ಹೊಂದಿರುವ ವಿದ್ಯಾರ್ಥಿಗಳಿಗಾಗಿ ಸ್ಟೂಡೆಂಟ್ ಫಾರ್ ಸೇವಾ, ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ಖೇಲೋ ಭಾರತ, ಕಲೆ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಕಲಾಮಂಚ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಸವಿಸ್ಕಾರ, ಪಾರ್ಮಾ ವಿದ್ಯಾರ್ಥಿಗಳಾಗಿ ಫಾರ್ಮವಿಜನ್, ಅಗ್ರಿ ವಿದ್ಯಾರ್ಥಿಗಳಿಗಾಗಿ ಅಗ್ರಿವಿಷನ್, ಐಐಟಿ, ಐಐಎಂ ವಿದ್ಯಾರ್ಥಿಗಳಿಗಾಗಿ ಥಿಂಕ್ ಇಂಡಿಯಾ, ಸಂಶೋಧನಾ ವಿದ್ಯಾರ್ಥಿಗಳಾಗಿ ಶೋಧ, ಆಯುರ್ವೇದಿಕ ವಿದ್ಯಾರ್ಥಿಗಳಿಗಾಗಿ ವಿಜ್ಞಾಸ, ಮೆಡಿಕಲ್ ವಿದ್ಯಾರ್ಥಿಗಳಿಗಾಗಿ ಮೆಡಿವಿಜನ್ ಹೀಗೆ ಎಲ್ಲ ರೀತಿಯ ವಿದ್ಯಾರ್ಥಿಗಳ ಮಧ್ಯೆ ಇಂದು ಎಬಿವಿಪಿ ಕಾರ್ಯವಿರ್ವಹಿಸುತ್ತಿದೆ.