ಸರ್ಕಾರ ಬಡ ವಿದ್ಯಾರ್ಥಿಗಳನ್ನು ವಂಚಸುತ್ತಿದೆ ಎಂದು ಆರೋಪ । ಜಿಲ್ಲಾಡಳಿತ ಭವನದ ಎದುರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕನ್ನಡಪಪ್ರಭ ವಾರ್ತೆ ಚಾಮರಾಜನಗರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡದೆ, ಶಿಕ್ಷಣದಿಂದ ವಂಚಿತರಾಗುವಂತೆ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಚಾಮರಾಜನಗರ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಉನ್ನತ ಶಿಕ್ಷಣದ ಆಸೆಯನ್ನು ಇಟ್ಟುಕೊಂಡ ರಾಜ್ಯದ ಅದೆಷ್ಟೋ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಕಾರ ನಮ್ಮ ನೆರವಿಗೆ ಧಾವಿಸುತ್ತದೆ. ನಮಗೆ ಆರ್ಥಿಕ ಬೆಂಬಲವನ್ನು ವಿದ್ಯಾರ್ಥಿ ವೇತನದ ರೂಪದಲ್ಲಿ ನೀಡುತ್ತದೆ ಎಂದು ಕಾಲೇಜುಗಳಿಗೆ ಸೇರುತ್ತಾರೆ. ಆದರೆ ರಾಜ್ಯ ಸರ್ಕಾರ ಶಿಕ್ಷಣಕ್ಕೆ ನೀಡ ಬೇಕಾದ ಪ್ರಾಮುಖ್ಯತೆಯನ್ನು ನೀಡದೆ ಇರುವುದು, ವಿದ್ಯಾರ್ಥಿವೇತನದಲ್ಲೂ ರಾಜಕೀಯವನ್ನು ಮುಂದುವರಿಸುತ್ತಿರುವುದು ಈ ರಾಜ್ಯದ ವಿದ್ಯಾರ್ಥಿಗಳ ಶೋಚನೀಯ ಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿದರು. ಎಸ್.ಎಸ್.ಪಿ ತಂತ್ರಾಂಶದ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಇತರ ಇಲಾಖೆಗಳ ಅಡಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಪದವಿ ಮತ್ತು ಸ್ನಾತ್ತಕೋತ್ತರ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸುತ್ತಾರೆ. ಆದರೆ ರಾಜ್ಯ ಸರ್ಕಾರ ಸರಿಯಾದ ಸಮಯಕ್ಕೆ ವಿದ್ಯಾರ್ಥಿವೇತನವನ್ನು ನೀಡದೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನುಅತಂತ್ರ ಸ್ಥಿತಿಗೆ ತಂದಿದೆ ಎಂದರು. ನಮ್ಮ ದೇಶದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮುಂದುವರಿಸದೆ ಇರಲು ಪ್ರಮುಖ ಕಾರಣ ಆರ್ಥಿಕ ಸಮಸ್ಯೆ. ವಿದ್ಯಾರ್ಥಿಗಳಿಗಾಗುವ ಆರ್ಥಿಕ ಸಮಸ್ಯೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ವಿದ್ಯಾರ್ಥಿ ವೇತನವನ್ನು ನೀಡಿ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ರಾಜ್ಯ ಸರ್ಕಾರ ೨೦೨೨-೨೩ನೇ ಸಾಲಿನಲ್ಲಿ ರಾಜ್ಯದಲ್ಲಿ ಮಂಜೂರಾದ ವಿದ್ಯಾರ್ಥಿ ವೇತನ ತಡೆ ಹಿಡಿದು ಆ ಹಣವನ್ನು ಇನ್ನಿತರ ಕಾರ್ಯಗಳಿಗಾಗಿ ಬಳಸುತ್ತಿದೆ. ಇದು ಖಂಡನೀಯ ಎಂದರು. ಎಸ್‌ಎಸ್‌ಪಿ ತಂತ್ರಾಂಶದಲ್ಲಿ ವಿದ್ಯಾರ್ಥಿವೇತನ ಮಂಜೂರಾಗಿರುವುದಾಗಿ ತೋರಿಸಿದ್ದರು. ಆದರೆ, ವಿದ್ಯಾರ್ಥಿಗಳ ಖಾತೆಗೆ ಹಣ ಜಮಾವಾಗಿರುವುದಿಲ್ಲ. ಹಣ ಜಮಾವಾಗುವ ಮೊದಲೇ ಮುಂದಿನ ವರ್ಷದ ಶೈಕ್ಷಣಿಕ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿರುವುದು ವಿದ್ಯಾರ್ಥಿಗಳಿಗೆ ಗೊಂದಲವನ್ನು ಉಂಟುಮಾಡಿದ್ದು, ಈ ಕೂಡಲೇ ರಾಜ್ಯ ಸರ್ಕಾರ ವಿದ್ಯಾರ್ಥಿವೇತನವನ್ನು ನೀಡಿ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಗಗನ್, ಶ್ರೇಯಸ್, ಚಂದನ್, ಶಿವು, ಪ್ರೇಮ್, ಪೂವಿತಾ, ಅಶ್ವಿನಿ ಇತರರು ಭಾಗವಹಿಸಿದ್ದರು. -------------- ೨೭ಸಿಎಚ್‌ಎನ್೧ ರಾಜ್ಯ ಸರ್ಕಾರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡದೆ, ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಚಾಮರಾಜನಗರ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.