ಪಟನಾ: ಶಾಲೆಗಳಿಂದ 21 ಲಕ್ಷ ಮಕ್ಕಳನ್ನು ತೆಗೆದು ಹಾಕುವ ಬಿಹಾರ ಸರ್ಕಾರದ ಕ್ರಮಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾದ ಬೆನ್ನಲ್ಲೇ 4 ತಿಂಗಳಲ್ಲಿ ಬಿಹಾರದ 2,081 ಶಿಕ್ಷಕರ ಸಂಬಳವನ್ನು ಕಡಿತಗೊಳಿಸಲಾಗಿದೆ ಹಾಗೂ 22 ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ. 4 ತಿಂಗಳ ಅವಧಿಯಲ್ಲಿ ಸರಿಯಾಗಿ ಶಾಲೆಗೆ ಬಾರದೆ ಹಾಗೂ ಹಲವು ಬಗೆಯ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಈ ಕ್ರಮ ಜರುಗಿಸಲಾಗಿದೆ. ಇದೇ ವೇಳೆ, ಇನ್ನೂ 49 ಶಿಕ್ಷಕರನ್ನು ಅಮಾನತು ಮಾಡಲು ಶಿಫಾರಸು ಮಾಡಲಾಗಿದೆ. 590 ಶಿಕ್ಷಕರ ವೇತನ ಕಡಿತಕ್ಕೆ ಸಲಹೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಮತ್ತೊಂದೆಡೆ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಅಕ್ರಮ ಎಸಗಿರುವ ಮೇರೆಗೆ 17 ಶಿಕ್ಷಕರನ್ನು ಕೆಲಸದಿಂದ ವಜಾಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಪ್ರೈಮರಿ ಟೀಚರ್ಸ್ ಅಸೋಸಿಯೇಷನ್,‘ಸರ್ಕಾರ ಈ ಕ್ರಮವನ್ನು ಕೂಡಲೇ ಕೈಬಿಡಬೇಕು. ಜೊತೆಗೆ ಹಲವು ವರ್ಷದಿಂದ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಸರ್ಕಾರಿ ಶಿಕ್ಷಕರನ್ನಾಗಿ ನೇಮಿಸಿಕೊಳ್ಳಬೇಕು. ಇವೆಲ್ಲವೂ ದೀಪಾವಳಿ ಒಳಗೆ ಆಗದಿದ್ದರೆ, ‘ಮಾಡು ಇಲ್ಲವೇ ಮಡಿ’ ಎನ್ನುವ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದೆ.