ವನ್ಯಜೀವಿ ಸಂಘರ್ಷ ತಡೆಗೆ ಕೃಷಿ ಪ್ರವಾಸೋದ್ಯಮ ಆಸರೆ!

Published : Jan 31, 2026, 01:26 PM IST
Agriculture

ಸಾರಾಂಶ

ಪ್ರವಾಸೋದ್ಯಮ ಕ್ಷೇತ್ರ ಬೆಳೆದಂತೆಲ್ಲ ಹೆಚ್ಚಿನ ಜನರು ಕಾಡಿನ ಮೇಲೆ ವ್ಯಾಮೋಹ ಬೆಳೆಸಿಕೊಳ್ಳುತ್ತಿದ್ದು, ಇದರಿಂದಾಗಿ ಕಾಡು ಪ್ರಾಣಿಗಳು ನಿತ್ಯವೂ ಒಂದಲ್ಲ ಒಂದು ಕಡೆ ಊರಿನತ್ತ ಮುಖ ಮಾಡುತ್ತಿವೆ.

 ಪ್ರವಾಸೋದ್ಯಮ ಕ್ಷೇತ್ರ ಬೆಳೆದಂತೆಲ್ಲ ಹೆಚ್ಚಿನ ಜನರು ಕಾಡಿನ ಮೇಲೆ ವ್ಯಾಮೋಹ ಬೆಳೆಸಿಕೊಳ್ಳುತ್ತಿದ್ದು, ಇದರಿಂದಾಗಿ ಕಾಡು ಪ್ರಾಣಿಗಳು ನಿತ್ಯವೂ ಒಂದಲ್ಲ ಒಂದು ಕಡೆ ಊರಿನತ್ತ ಮುಖ ಮಾಡುತ್ತಿವೆ. ಮಾನವ - ವನ್ಯಜೀವಿ ಸಂಘರ್ಷ ಹೆಚ್ಚಾಗಿ ಜಾನುವಾರುಗಳು ಮತ್ತು ಮಾನವನ ಬಲಿ ಪ್ರಕರಣಗಳು ಮೈಸೂರು, ಚಾಮರಾಜನಗರ ಜಿಲ್ಲೆಯ ಕಾಡಂಚಿನಲ್ಲಿ ಹೆಚ್ಚಾದ ಪರಿಣಾಮ ಸಫಾರಿಯೇ ಬಂದ್‌ ಆಗಿದೆ. ಅರಣ್ಯದ ಮೇಲಿನ ಒತ್ತಡ ತಗ್ಗಿಸಲು, ರೈತರು ಬೇಸಾಯದ ಜೊತೆಗೆ ಆದಾಯ ಗಳಿಸಲು ಈ ಬಜೆಟ್‌ನಲ್ಲಿ ಕೃಷಿ ಪ್ರವಾಸೋದ್ಯಮದ ಮೂಲಕ ರೈತರ ತೋಟ ಪ್ರವಾಸಿಗರಿಗೆ ಕೃಷಿ ಪಾಠ ಯೋಜನೆ ಜಾರಿಯಾಗಲಿ.

-ದೇವರಾಜು ಕಪ್ಪಸೋಗೆ, ಚಾಮರಾಜನಗರ

*‘ರೈತರ ತೋಟ ಪ್ರವಾಸಿಗರಿಗೆ ಕೃಷಿ ಪಾಠ’

ವಿಜ್ಞಾನದಿಂದ ಹಲವು ಬಗೆಯನ್ನು ಸೃಷ್ಟಿ ಮಾಡಬಹುದು. ಆದರೆ ಆಹಾರ ಉತ್ಪಾದನೆಗೆ ಕೃಷಿಯೇ ಮೂಲ‌. ಇಂತಹ ಕೃಷಿಯನ್ನು ಬಿಟ್ಟು ಯಾರು ಬದುಕಲಾರರು. ಪ್ರತಿಯೊಬ್ಬರಿಗೂ ಕೃಷಿ ಒಂದಲ್ಲ ಒಂದು ರೀತಿ ಅವಶ್ಯಕವಾಗಿರುವುದರಿಂದ ನಮ್ಮ ರಾಷ್ಟ್ರದಲ್ಲಿ ಹೆಚ್ಚಿನ ಮಂದಿ ಕೃಷಿಯುನ್ನು ಅವಲಂಬಿಸಿದ್ದಾರೆ. ಇಂದಿನ ನಗರೀಕರಣ ಪರಿಣಾಮ ಮಕ್ಕಳು, ಯುವಕರು ಮತ್ತು ನಗರವಾಸಿಗಳಿಗೆ ಕೃಷಿಯ ಪರಿಚಯವೇ ಇಲ್ಲದಾಗಿದೆ. ಪ್ರತಿಯೊಬ್ಬರಲ್ಲೂ ಕೃಷಿ ಕ್ಷೇತ್ರದ ಬಗ್ಗೆ ಪ್ರಾಥಮಿಕ ಜ್ಞಾನ ನೀಡುವ ಜೊತೆಗೆ ಸದಾ ನಗರದ ಒತ್ತಡದ ಜೀವನದಿಂದ ವಿಮುಕ್ತಿ ನೀಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೃಷಿ ಪ್ರವಾಸೋದ್ಯಮ ಅತ್ಯಗತ್ಯವಾಗಿದೆ.

ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರು ಪ್ರವಾಸದ ಕಡೆ ಒಲವು ತೋರುತ್ತಿದ್ದು ಅರಣ್ಯದ ಮೇಲಿನ ಒತ್ತಡ ಹೆಚ್ಚಾಗುತ್ತಿರುವುದನ್ನು ತಗ್ಗಿಸಲು ಕೃಷಿ ಪ್ರವಾಸೋದ್ಯಮ ಪರ್ಯಾಯ ಮಾರ್ಗವಾಗಿದೆ. ಕೃಷಿ ಉಳಿಯಬೇಕಾದರೆ ಅರಣ್ಯ ಸಂರಕ್ಷಣೆಯಾಗಬೇಕು. ಇಂದು ಪ್ರವಾಸಿಗರಿಗೆ ಕಾಡಿನ ಮೇಲಿನ ಮೋಹ ಜಾಸ್ತಿ ಆಗುತ್ತಿರುವುದರಿಂದ ಅರಣ್ಯದ ಅಂಚಿನಲ್ಲಿ ನಿಯಮ ಉಲ್ಲಂಘಿಸಿ ರೆಸಾರ್ಟ್‌, ಹೊಂಸ್ಟೇಗಳು ನಿರ್ಮಾಣವಾಗುತ್ತಿವೆ. ಅರಣ್ಯದ ಮೇಲಿನ ಒತ್ತಡ ಹೆಚ್ಚಾಗಿ ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಮುಖಮಾಡಿವೆ. ಅದಕ್ಕಾಗಿ ಕಾಡು ಮತ್ತು ವನ್ಯಜೀವಿಗಳ ಮೇಲೆ ಪ್ರವಾಸಿಗರ ಒತ್ತಡ ಹೆಚ್ಚಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರವಾಸಿಗರಿಗೆ ಕೃಷಿ ಮೇಲಿನ ಮೋಹ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಪ್ರವಾಸೋದ್ಯಮದ ಮೂಲಕ ಹಳ್ಳಿ, ಹೊಲ-ಗದ್ದೆ, ಕೆರೆ-ಕಟ್ಟೆ, ಜಾನುವಾರುಗಳ ಸಾಕಾಣೆ, ಕೃಷಿ ಚಟುವಟಿಕೆಗಳನ್ನು ಪರಿಚಯಿಸುವ ಮೂಲಕ ರೈತನ ಜಮೀನಿನಲ್ಲಿ ಪ್ರವಾಸಿಗರು ತಂಗುವಂತೆ ಮಾಡುವ ಮೂಲಕ ಕೃಷಿ ಬಗೆಗಿನ ಒಡನಾಟ, ಸಾಕು ಪ್ರಾಣಿಗಳು, ಪರಿಸರ, ವನ್ಯಜೀವಿಗಳ ಬಗ್ಗೆ ಪರಿಚಯಿಸುವ ಕೆಲಸ ಕೃಷಿ ಪ್ರವಾಸೋದ್ಯಮ ಮೂಲಕ ಆಗಬೇಕಿದೆ. ಈ ನಿಟ್ಟಿನಲ್ಲಿ ಮುಂಬರುವ ರಾಜ್ಯ ಬಜೆಟ್‌ನಲ್ಲಿ ‘ರೈತರ ತೋಟ ಪ್ರವಾಸಿಗರಿಗೆ ಕೃಷಿ ಪಾಠ’ ಎಂಬ ಪರಿಕಲ್ಪನೆಯಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಿದೆ.

ಶಾಲಾ ಮಕ್ಕಳಿಗೆ ಕೃಷಿ ಪಾಠ- ಪ್ರವಾಸ ಕಡ್ಡಾಯವಾಗಲಿ:

ಮಕ್ಕಳಿಗೆ ಶಾಲಾ ಹಂತದಿಂದಲೇ ಕೃಷಿ ಬಗ್ಗೆ ಪರಿಚಯಿಸುವ ಸಲುವಾಗಿ ಅವರನ್ನು ರೈತರ ಕೃಷಿ ಭೂಮಿಗೆ ಕರೆದುಕೊಂಡು ಹೋಗುವಂತಹ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಯಾಗಬೇಕು. ರೈತರ ಕೃಷಿ ಜಮೀನುಗಳ ಒಂದು ಸಮೂಹ (circuit) ರಚಿಸಿ ಆ ಮೂಲಕ ಕೃಷಿಯ ಹೆಚ್ಚಿನ ಅರಿವು ಮೂಡಿಸುವಂತಹ ಕೆಲಸವಾಗಬೇಕಾಗಿದೆ. ಅದಕ್ಕಾಗಿ ಶಿಕ್ಷಣ ಇಲಾಖೆಗೆ ಬಜೆಟ್‌ನಲ್ಲಿ ಕೃಷಿ ಪ್ರವಾಸಕ್ಕಾಗಿ ಹಣ ಮೀಸಲಿಡಬೇಕಿದೆ.

ಕೃಷಿ, ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳು ವಿಶೇಷ ಆದ್ಯತೆ ನೀಡಿದರೆ ಅರಣ್ಯದ ಮೇಲಿನ ಒತ್ತಡವೂ ಕಡಿಮೆ ಆಗುತ್ತದೆ. ಪ್ರವಾಸೋದ್ಯಮವೂ ಬೆಳೆಯುತ್ತದೆ. ಕೃಷಿ ಕ್ಷೇತ್ರದಲ್ಲಿ ರೈತರು ಹೊಸದೊಂದು ಆಯಾಮ ಕಂಡುಕೊಂಡತೆಯೂ ಆಗುತ್ತದೆ. ಈ ನಿಟ್ಟಿನಲ್ಲಿ ಆರಂಭಿಕ ಹಂತದಲ್ಲಿಯಾದರೂ ಪ್ರಾಯೋಗಿಕವಾಗಿ ಬಂಡೀಪುರ, ಬಿಆರ್‌ಟಿ, ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಧಾಮದ ವ್ಯಾಪ್ತಿಯ ಮುಖ್ಯಮಂತ್ರಿ ತವರು ಮೈಸೂರು-ಚಾಮರಾಜನಗರ ಜಿಲ್ಲೆಯನ್ನು ಮಾದರಿಯಾಗಿ ಆಯ್ಕೆ ಮಾಡಿಕೊಳ್ಳಬೇಕಾಗಿದೆ.

ಬದಲಾಗಿದೆ ಪ್ರವಾಸದ ಆಯ್ಕೆ:

ಹಿಂದೆ ಪ್ರವಾಸ ಅಂದರೆ ಅದು ತೀರ್ಥ ಕ್ಷೇತ್ರದ ದರ್ಶನ ಆಗಿತ್ತು. ನಿಧಾನವಾಗಿ ಜನ ಪರಿಸರ ಪ್ರವಾಸೋದ್ಯಮದತ್ತ ಆಸಕ್ತಿ ತೋರಿಸಿದರು. ನಂತರ ಸರ್ಕಾರ, ಪ್ರವಾಸಿ ತಾಣಗಳ ಅಭಿವೃದ್ಧಿ ಆರಂಭಿಸಿತು. ಅರಣ್ಯ ಇಲಾಖೆಯಿಂದ, ವನ್ಯಜೀವಿ ಪ್ರವಾಸೋದ್ಯಮ ಆರಂಭವಾಯಿತು. ಪ್ರವಾಸೋದ್ಯಮ ಇಲಾಖೆಯ ಹಲವು ಬಗೆಯ ಪ್ರವಾಸೋದ್ಯಮ ಪರಿಚಯಿಸುವ ಕೆಲಸ ಮಾಡುತ್ತಿದ್ದು, ಇತ್ತೀಚಿನ ಆಲೋಚನೆ ಕೃಷಿ ಪ್ರವಾಸೋದ್ಯಮವಾಗಿದೆ.

ಈಗಾಗಲೇ ತಲೆ ಎತ್ತಿರುವ ಹೋಂ ಸ್ಟೇಗಳು ಕೃಷಿ ಪ್ರವಾಸೋದ್ಯಮದ ಇಂದು ಭಾಗ ಅಷ್ಟೇ. ಕೃಷಿ ಪ್ರವಾಸೋದ್ಯಮದಲ್ಲಿ ರೈತ, ಆತನ ಕುಟುಂಬ ಹಾಗೂ ಆತನ ಕೃಷಿ ಜಮೀನು ಪ್ರದಾನ. ಕೃಷಿ ಪ್ರವಾಸೋದ್ಯಮದಲ್ಲಿ ರೈತನ ಕುಟುಂಬ ಜಮೀನಿನಲ್ಲಿ ವಾಸವಿರಬೇಕು. ಬಂದಂತಹ ಅತಿಥಿಗಳಿಗೆ ರೈತನ ಮನೆಯಲ್ಲಿಯೇ ಆಹಾರ ತಯಾರಾಗಬೇಕು. ಅದೂ ಸ್ಥಳೀಯ ಸೊಗಡಿನ ಆಹಾರ. ಬಂದಂತಹ ಅತಿಥಿಗಳು ಉಳಿಯಲು, ಉತ್ತಮ ಸೌಲಭ್ಯ ಇರುವ ಕೊಠಡಿ ನಿರ್ಮಿಸಬೇಕು. ಆತನ ಸಾಮರ್ಥ್ಯ ಹಾಗೂ ಜಮೀನಿನ ಧಾರಣಾ ಸಾಮರ್ಥ್ಯ ಗಮನಿಸಿ ಒಂದರಿಂದ, ಹತ್ತರವರಗೆ ಕೊಠಡಿಗಳನ್ನು ನಿರ್ಮಿಸಬಹುದು.

ಜಮೀನಿನಲ್ಲಿ ಸಮಗ್ರ ಕೃಷಿ ಇರಬೇಕು. ಬಂದಂತಹ ಅತಿಥಿಗಳು ಏನಾದರೂ ಕೃಷಿ ಕೆಲಸದಲ್ಲಿ ತೊಡಗುವಂತಿರಬೇಕು. ಹಾಲು ಕರೆಯುವುದು, ಕೊಟ್ಟಿಗೆ ನಿರ್ವಹಣೆ, ಜಮೀನಿನ ಕಟ್ಟೆಯಲ್ಲಿ ರಾಸುಗಳ ಮೈ ತೊಳೆಯುವುದು, ಮರ ಹತ್ತುವುದು, ತೆಂಗಿನಕಾಯಿ ಕೆಡವುದು, ಗೊಬ್ಬರ ಹಾಕೋದು, ಸಸಿ ನಾಟಿ, ಔಷಧ ಸಿಂಪಡಣೆ, ಜೇನು ಕೃಷಿ ಪರಿಚಯ, ನಾಟಿ- ಸುಗ್ಗಿ ಸಂಭ್ರಮ, ಆಯಾಯ ಋತುಮಾನದಲ್ಲಿ ಹಣ್ಣುಗಳ ಕೊಯ್ಲು, ಕೊಳವೆ ಬಾವಿ ಬಗ್ಗೆ ಅರಿವು, ನೀರಿನ ಸಂರಕ್ಷಣೆ ಬಗ್ಗೆ ರೈತನಿಗಿಂತ ಮತ್ತೋರ್ವ ಪಂಡಿತ ಸಿಗಲಾರ. ಇದರ ಜೊತೆಗೆ ಸಮೀಪದ ಪ್ರವಾಸಿ ತಾಣಗಳಿಗೆ ಅತಿಥಿಗಳನ್ನು ಕರೆದುಕೊಂಡು ಹೋಗಬಹುದು.

ಹತ್ತಿರದ ಜಾಗಗಳಿಗೆ ಎತ್ತಿನ ಗಾಡಿಯಲ್ಲಿ ಸಂಚಾರ ಮಾಡಿಸಬಹುದು. ಗ್ರಾಮೀಣ ಆಟಗಳಾದ ಚಿನ್ನಿ ದಾಂಡು, ಲಗೋರಿ, ಕೊಕ್ಕೆ ಕೋಲು, ಉಯ್ಯಾಲೆ, ಮರಕೋತಿ ಆಟ ಆಡಿಸಬಹುದು. ಹೆಣ್ಣುಮಕ್ಕಳಿಗೆ ಚೌಕಾಬಾರ, ಚೆನ್ನೆಮಣೆ, ಹುಲಿಕಲ್ಲು, ಕುಂಟೇಬಿಲ್ಲೆ ಆಡಿಸಬಹುದು. ಸ್ಥಳೀಯ ಆಹಾರದ ಜತೆ ಸ್ಥಳೀಯ ಕಲೆ ಪೋಷಣೆ ಮಾಡುವುದು ಕೃಷಿ ಪ್ರವಾಸೋದ್ಯಮದ ಬಹುಮುಖ್ಯ ಅಂಗ. ಪ್ರತೀ ದಿನ ಸಂಜೆ, ಸ್ಥಳೀಯ ಜನಪದ ಕಲೆಗಳಾದ ಸೋಬಾನೆ, ಜನಪದ ನೃತ್ಯ, ಕೋಲಾಟ ಹೀಗೆ ಸ್ಥಳೀಯ ಕಲೆಗೆ, ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ದಿನವಿಡೀ ಅತಿಥಿಗಳಿಗೆ ರೈತಾಪಿ ಜೀವನವನ್ನು ಅರ್ಥ ಮಾಡಿಸಬೇಕು.

ರೈತರಿಗೆ ಆದಾಯ ಮೂಲ:

ಕೃಷಿ ಪ್ರವಾಸೋದ್ಯಮ ಚಟುವಟಿಕೆ ಕೈಗೊಂಡರೆ ಮೊದಲಿಗೆ ರೈತನ ಪೂರ್ಣ ಕುಟುಂಬ ಜಮೀನಿನಲ್ಲಿ ನೆಲೆಸುತ್ತೆ. ಜಮೀನಿನಲ್ಲಿ ಅತಿಥಿಗಳಿಗೆ ಪರಿಚಯಿಸಲಾದರೂ ಸಮಗ್ರ ಕೃಷಿ ಅಳವಡಿಕೆಯಾಗುತ್ತದೆ. ಹಸು, ಕುರಿ, ಕೋಳಿ, ಗಿಡ- ಮರಗಳಿಂದ ಜೀವ ಹಾಗೂ ಸಸ್ಯ ವೈವಿಧ್ಯ ಸೃಷ್ಟಿಯಾಗುತ್ತೆ. ಆದಾಯದ ಮೂಲ ಜಾಸ್ತಿಯಾಗಿ, ಕೀಟ ರೋಗಗಳ ಬಾಧೆ ಕಡಿಮೆಯಾಗುತ್ತೆ. ಮುದುಕರಿಂದ ಮಕ್ಕಳವರೆಗೂ ರೈತಾಪಿ ಕುಟುಂಬದ ಎಲ್ಲರಿಗೂ ಕೆಲಸ ಸಿಗುತ್ತೆ. ಅತಿಥಿಗಳ ನೆಪದಲ್ಲಿ ರೈತರ ಕುಟುಂಬ ಸಹಾ ವೈವಿದ್ಯಮಯ ಆಹಾರ ಸವಿಯಲು ಸಾಧ್ಯ. ರೈತಾಪಿ ಕುಟುಂಬದ ಯುವಜನರಿಗೆ ಅತಿಥಿಗಳಿಗೆ ಸುತ್ತಮುತ್ತಲಿನ ತಾಣಗಳನ್ನು ಪರಿಚಯಿಸುವ, ಹಳ್ಳಿಯ ಸಂಸ್ಕೃತಿಗಳ ಪರಿಚಯಿಸುವ ಕೆಲಸ ಆಗುತ್ತದೆ. ಹಿರಿಯ ರೈತರಿಗೆ ವ್ಯವಸಾಯದ ಬದುಕು ಕಲಿಸುವ ಕೆಲಸ. ಮಹಿಳೆಯರಿಗೆ ಹಳ್ಳಿಯ ತಿಂಡಿತಿನಿಸು ಮಾಡುವ, ಹೇಳಿಕೊಡುವ ಕಾಯಕ. ವೃದ್ಧರಿಗೆ ಜನಪದ ಸಂಸ್ಕೃತಿಗಳ ಪರಿಚಯಿಸುವ ಕೆಲಸ. ಸ್ಥಳೀಯ ಕಲಾವಿದರಿಗೆ, ಪ್ರಯಾಣ ವಾಹನಗಳ ಚಾಲಕರಿಗೆ, ಮಾಲೀಕರಿಗೆ, ಪ್ರವಾಸೀ ಗೈಡ್‌ಗಳಿಗೂ ಕೆಲಸ. ಹಳ್ಳಿಯ ಕೆರೆ ಕಟ್ಟೆಗಳಲ್ಲಿ ನಾಡ ಹಕ್ಕಿಗಳ ಕಲರವದಿಂದ ಪರಸ್ಪರ ಸಂಸ್ಕೃತಿಗಳ ವಿನಿಮಯವಾಗಲಿದೆ.

ರೈತ, ಅತಿಥಿಗಳ ಊಟ, ವಾಸ್ತವ್ಯಕ್ಕೆ ಹಣ ತೆಗೆದುಕೊಳ್ಳಬಹುದು. ಇದು ಆತನ ಪ್ರದಾನ ಆದಾಯ. ಬಂದಂತಹ ಅತಿಥಿಗಳಿಗೆ ತನ್ನ ಉತ್ಪನ್ನಗಳನ್ನು ನೇರವಾಗಿ ಮಾರಬಹುದು. ಬಂದ ಗ್ರಾಹಕರ ಒಂದು ನೆಟ್ವವರ್ಕ್ ಸ್ಥಾಪಿಸಿದರೆ, ಯುವ ಕೃಷಿಕರು ತಮ್ಮ ಜಮೀನಿನ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸಬಹುದು.

ಕೃಷಿ ಪ್ರವಾಸೋದ್ಯಮ ಕೈಗೊಳ್ಳುವ ತಾಕೀನಲ್ಲಿ ಮಾದರಿಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ಪ್ರವಾಸೋದ್ಯಮ ಇಲಾಖೆಯವರು ಕೃಷಿ ಪ್ರವಾಸೋದ್ಯಮ ಕೈಗೊಳ್ಳುವ ರೈತರಿಗೆ ವಿಶೇಷ ಆದ್ಯತೆ ನೀಡಬೇಕು. ಕನಿಷ್ಠ ಗ್ರಾಮ ಪಂಚಾಯ್ತಿಗೊಂದು ಕೃಷಿ ಪ್ರವಾಸೋದ್ಯಮ ಆಶ್ರಮಗಳ ಮಾದರಿ ನಿರ್ಮಾಣವಾಗಬೇಕು. ಅದಕ್ಕಾಗಿ ಪಂಚಾಯ್ತಿಗಳ ಮೂಲಕ ಮೂಲಭೂತ ಸೌಕರ್ಯಗಳ ವ್ಯವಸ್ದೆಯಾಗಬೇಕಿದೆ.

ರಾಜ್ಯ ಮಟ್ಟದ ತಜ್ಞರ ಸಮಿತಿ ರಚನೆಯಾಗಲಿ:

ಕೃಷಿ ಪ್ರವಾಸೋದ್ಯಮಕ್ಕಾಗಿ ತಜ್ಞರನ್ನು ಒಳಗೊಂಡ ರಾಜ್ಯಮಟ್ಟದ ತಜ್ಞರ ಸಮಿತಿ ರಚಿಸಬೇಕು. ಅನುಷ್ಠಾನಕ್ಕೆ ಮುಂದಾಗುವ ರೈತರಿಗೆ ಶೇ.90ರಷ್ಟು ಸಹಾಯಧನ, ಉಚಿತ ವಿದ್ಯುತ್‌ ಮತ್ತು ನೀರಿನ ವ್ಯವಸ್ಧೆ ಕಲ್ಪಿಸಬೇಕು, ಕೃಷಿ ಪ್ರವಾಸೋದ್ಯಮ ತಾಕೀನಲ್ಲಿ ಸೋಲಾರ್‌ ಪಂಪ್‌ಸೆಟ್‌, ಸೋಲಾರ್‌ ಕರೆಂಟ್‌ ಉತ್ಪಾದನಾ ಘಟಕಗಳನ್ನು ಅಳವಡಿಸಲು ಶೇ.100ರಷ್ಟು ಸಹಾಯದನ ನೀಡಬೇಕು. ಶುಲ್ಕ ರಹಿತವಾಗಿ ರೈತರ ಭೂಮಿ ಕೃಷಿ ಪ್ರವಾಸೋದ್ಯಮಕ್ಕೆ ನೋಂದಣಿ ಆಗಬೇಕು. ಗ್ರಾಮೀಣ ಭೂ ಅಭಿವೃದ್ಧಿ ಬ್ಯಾಂಕ್‌ನಿಂದ ಹಿಡಿದು ಎಲ್ಲೆಡೆ ಸುಲಭವಾಗಿ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು.

ಬದಲಾಗಬೇಕಿದೆ ಪ್ರವಾಸೋದ್ಯಮ ನೀತಿ:

ಮಹಾರಾಷ್ಟ್ರ ಸರ್ಕಾರವು ತನ್ನ ಪ್ರವಾಸೋದ್ಯಮ ನೀತಿಯಲ್ಲಿ ಮಾರ್ಪಾಡು ಮಾಡಿಕೊಂಡು ಕೃಷಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದೆ. ಅದರಂತೆ, ನಮ್ಮ ರಾಜ್ಯವು ಕೂಡ ಪ್ರವಾಸೋದ್ಯಮ ನೀತಿಯನ್ನು ಕೃಷಿ ಪ್ರವಾಸೋದ್ಯಮಕ್ಕೆ ಪೂರಕವಾಗುವಂತೆ ರೂಪಿಸಬೇಕಿದೆ.

ಈಗಾಗಲೇ ಸರ್ಕಾರ ರೂಪಿಸಿರುವ ಕರ್ನಾಟಕ ಪ್ರವಾಸೋದ್ಯಮ ನೀತಿ 2024-25 ಕೃಷಿ ಪ್ರವಾಸೋದ್ಯಮಕ್ಕೆ ಪೂರಕವಾಗಿಲ್ಲ. ಸರ್ಕಾರ ಶೇ.25ರಷ್ಟು ಸಬ್ಬಿಡಿ (ಸಹಾಯಧನ) ನೀಡುವುದಾಗಿ ಪ್ರಕಟಿಸಿದೆ. ಆದರೆ, ಇದುವರೆಗೆ ಎಲ್ಲೂ ಇದರ ಸೌಲಭ್ಯ ಪಡೆದು ಕೃಷಿ ಪ್ರವಾಸೋದ್ಯಮ ಆರಂಭವಾದಂತೆ ಕಾಣುತ್ತಿಲ್ಲ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಶೇ.90ರಷ್ಟು ಅನುದಾನ ನೀಡುವ ಕೃಷಿ ಪ್ರವಾಸೋದ್ಯಮ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕಿದೆ.

PREV
Read more Articles on

Recommended Stories

ಜಾಗತಿಕ ಸವಾಲುಗಳ ನಡುವೆ ಅಭಿವೃದ್ಧಿ ಬಜೆಟ್‌ ನಿರೀಕ್ಷೆ
ಯುಜಿಸಿ ಗದ್ದಲ : ಸಂಯಮದ ನಡೆ ಅಗತ್ಯ