ಕನ್ನಡಿಗ ಅಮರೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ

Published : Mar 17, 2026, 11:04 AM IST
Kannada Poet Amaresh Nugadoni Honored with Kendra Sahitya Akademi Award

ಸಾರಾಂಶ

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡದ ಕಥೆಗಾದ ಅಮರೇಶ್‌ ನುಗಡೋಣಿ ಸೇರಿದಂತೆ 24 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.  24 ಭಾಷೆಯ ಸಾಹಿತಿಗಳಿಗೆ ಪ್ರಶಸ್ತಿ ಪ್ರಕಟವಾಗಿದದ್ದು. 8 ಕವಿತೆ, 4 ಕಾದಂಬರಿ, 6 ಸಣ್ಣ ಕಥೆಗಳು ಸೇರಿದಂತೆ ವಿವಿಧ ವಿಭಾಗಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.

ನವದೆಹಲಿ: 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡದ ಕಥೆಗಾದ ಅಮರೇಶ್‌ ನುಗಡೋಣಿ ಸೇರಿದಂತೆ 24 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

24 ಭಾಷೆಯ ಸಾಹಿತಿಗಳಿಗೆ ಪ್ರಶಸ್ತಿ ಪ್ರಕಟವಾಗಿದದ್ದು. 8 ಕವಿತೆ, 4 ಕಾದಂಬರಿ, 6 ಸಣ್ಣ ಕಥೆಗಳು ಸೇರಿದಂತೆ ವಿವಿಧ ವಿಭಾಗಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಇದರಲ್ಲಿ ಕನ್ನಡಿಗ ಅಮರೇಶ್‌ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನವು ಪ್ರಶಸ್ತಿಗೆ ಆಯ್ಕೆಯಾಗಿದೆ. ಮಾ.31ರಂದು ಪ್ರಶಸ್ತಿ ಕಾರ್ಯಕ್ರಮ ನಡೆಯಲಿದ್ದು, ಪ್ರಶಸ್ತಿ ಪುರಸ್ಕಾರವು ₹1 ಲಕ್ಷ ನಗದು ಒಳಗೊಂಡಿರುತ್ತದೆ.

ಕಥೆಗಾರ ಅಮರೇಶ್‌ ನುಗಡೋಣಿ ಮೂಲತಃ ರಾಯಚೂರು ಜಿಲ್ಲೆಯವರು. ಅವರ ಈ ದಡ ಸೇರಿಸು ತಂದೆ ಕೃತಿಯು ಗ್ರಾಮೀಣಭಾಗದ ಮರ್ಯಾದಾ ಹತ್ಯೆ ಮತ್ತು ಗುಂಪು ಹಿಂಸಾಚಾರದಂತಹ ಜ್ವಲಂತ ಸಮಸ್ಯೆಗಳನ್ನು ನೈಜವಾಗಿ ಚಿತ್ರಿಸುತ್ತದೆ.

2018ರ ಕನ್ನಡಪ್ರಭ ದೀಪಾವಳಿ ವಿಶೇಷಾಂಕ ಸಂಚಿಕೆಯಲ್ಲಿ ಅಮರೇಶ್‌ ನುಗಡೋಣಿ ಅವರ ಕಥೆಯು ‘ದಡ ಸೇರಿಸು ತಂದೆ’ ಹೆಸರಿನಲ್ಲಿಯೇ ಪ್ರಕಟವಾಗಿತ್ತು.

ಸಂಶೋಧನೆ ನನ್ನ ಕತೆಗಳ ಬಹು ದೊಡ್ಡ ಶಕ್ತಿ: ಅಮರೇಶ್‌

ಬೆಂಗಳೂರು: ‘ಕಲ್ಯಾಣ ಕರ್ನಾಟಕದ ಜನರ ಜೀವನವನ್ನು ಕೂಲಂಕಷವಾಗಿ ನೋಡುತ್ತಾ ಸಂಶೋಧನೆ ಮಾಡಿದೆ. ಅದರ ಫಲವೇ ಕಥೆಗಳನ್ನು ಬರೆಯಲು ಸಾಧ್ಯವಾಯಿತು’ ಎಂದು 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಅಮರೇಶ್ ನುಗಡೋಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಕನ್ನಡದಲ್ಲಿ ಕಥೆಗಾರ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ ಒಲಿದು ಬಂದಿದೆ. ಈ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದು, ಕಥೆ ಹುಟ್ಟಿದ ಬಗ್ಗೆ ಹಂಚಿಕೊಂಡಿದ್ದಾರೆ. ‘ಕಲ್ಯಾಣ ಕರ್ನಾಟಕದ ಇಡೀ ಜೀವನವನ್ನು ಕೂಲಂಕಷವಾಗಿ ನೋಡುತ್ತಾ ಇಲ್ಲಿ ಕಲ್ಯಾಣದ ಸಾಧನೆಗಳು ಯಾವ ರೀತಿ ಅಸ್ತಿತ್ವ ಪಡೆದುಕೊಂಡಿವೆ ಎಂಬುದನ್ನು ಸಂಶೋಧನೆ ಮಾಡುತ್ತಾ ಹೋದೆ. ಈ ಸಂಶೋಧನೆಯ ಫಲವೇ ನಾನು ಒಂದೊಂದೇ ಕತೆಗಳನ್ನು ಬರೆಯುವುದಕ್ಕೆ ಸಾಧ್ಯವಾಯಿತು. ಮಧ್ಯಕಾಲಿನ ಸಾಹಿತ್ಯದಲ್ಲಿ ತತ್ವಕಾರರು, ವಚನಕಾರರು, ಅನುಭವಿಗಳು, ಉತ್ತರದಿಂದ ಬಂದ ಸೂಫಿಗಳು ಜನಮಾಸವನ್ನು ಹೇಗೆ ಆಕರ್ಷಿಸಿದರು ಎಂಬುದನ್ನು ಹೈದರಾಬಾದ್‌ ಕರ್ನಾಟಕದ ಚರಿತ್ರೆಯ ಹಿನ್ನೆಲೆಯಲ್ಲಿ ಓದುತ್ತಾ ಕಟ್ಟಿದ ಕತೆಗಳು ಇವೆ’ ಎಂದಿದ್ದಾರೆ.

ಮುಂದುವರೆದಂತೆ ತಮ್ಮ ಸಂತಸ ವ್ಯಕ್ತಪಡಿಸಿರುವ ಅವರು, ‘ ಈಗ ನನ್ನ ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿರುವುದು ಸಂಶೋಧನೆಗೆ ಸಿಕ್ಕ ಗೌರವ ಅಂತಲೇ ಭಾವಿಸುತ್ತೇನೆ. ಸಂಶೋಧನೆ, ಸ್ಥಳೀಯತೆ, ಅಧ್ಯಯನ ಇವು ನನ್ನ ಕತೆಯ ಬಹು ದೊಡ್ಡ ಶಕ್ತಿಗಳು. ಸಾಹಿತ್ಯ ರಚನೆ ಮಾಡಿ ಹೆಸರು ಮಾಡಬೇಕು ಎನ್ನುವುದನ್ನು ಬಿಟ್ಟು ನಾವು ಯಾರಿಗೆ ಬರೆಯಬೇಕು, ಯಾವುದನ್ನು ಬರೆಯಬೇಕು, ಯಾಕಾಗಿ ಬರೆಯಬೇಕು ಎನ್ನುವ ಸ್ಪಷ್ಟತೆ ಇರಬೇಕು. ಯಾಕೆಂದರೆ ಬರಹದ ಹುಟ್ಟು ಭಾಷೆಯಲ್ಲಿರುತ್ತದೆ. ಹೀಗಾಗಿ ಲೇಖಕರು ಮೈ ಮರೆತು ಬರೆಯಬಾರದು ಎಂಬುದು ನನ್ನ ನಿಲುವು. ಇಂಥ ನಿಲುವಿನಲ್ಲಿ ನನ್ನ ಬರಹವನ್ನು ಮುಂದುವರಿಸಿಕೊಂಡು ಬಂದಿದ್ದೇನೆ’ ಎಂದು ಹರ್ಷಿಸಿದ್ದಾರೆ.

ಸಂಶೋಧನೆಗಳಿಂದ ಕಥೆ ಹುಟ್ಟು

ಕಲ್ಯಾಣ ಕರ್ನಾಟಕವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಸಂಶೋಧನೆ ಮಾಡುತ್ತಾ ಹೋದೆ. ಇದರ ಫಲವೇ ನಾನು ಒಂದೊಂದೇ ಕತೆಗಳನ್ನು ಬರೆಯುವುದಕ್ಕೆ ಸಾಧ್ಯವಾಯಿತು. ಪ್ರಶಸ್ತಿ ಸಂಶೋಧನೆಗೆ ಸಿಕ್ಕ ಗೌರವ ಅಂತಲೇ ಭಾವಿಸುತ್ತೇನೆ. ನಾವು ಯಾರಿಗೆ ಬರೆಯಬೇಕು, ಯಾವುದನ್ನು ಬರೆಯಬೇಕು, ಯಾಕಾಗಿ ಬರೆಯಬೇಕು ಎನ್ನುವ ಸ್ಪಷ್ಟತೆ ಇರಬೇಕು. ಬರಹದ ಹುಟ್ಟು ಭಾಷೆಯಲ್ಲಿರುತ್ತದೆ. ಲೇಖಕರು ಮೈ ಮರೆತು ಬರೆಯಬಾರದು ಎಂಬುದು ನನ್ನ ನಿಲುವು. ಅದೇ ನಿಲುವಿನಲ್ಲಿ ಬರಹ ಮುಂದುವರೆಸಿದ್ದೇನೆ.

- ಅಮರೇಶ್ ನುಗಡೋಣಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರು

PREV
Read more Articles on

Recommended Stories

ಕೃಷಿ ವಲಯದಲ್ಲಿ ಮಹೀಂದ್ರ ಕ್ರಾಂತಿ : ಓಜಾ 2130 ಸರಣಿ ಟ್ರ್ಯಾಕ್ಟರ್‌ಗಳ ಉತ್ಪಾದನೆ ಹೆಚ್ಚಳ
ಸರ್ವೀಸ್‌ ನೌ ವರದಿ: ಸೇವಾ ಲೋಪದಿಂದ ಶೇ. 44 ರಷ್ಟು ಗ್ರಾಹಕರು ಬ್ರ್ಯಾಂಡ್ ಬದಲಿಸಲು ಸಿದ್ಧ