ಅನಂತ್‌ ಭಾಯಿ ಅಂಬಾನಿ ಮದುವೆಯಲ್ಲಿ ಕಲೆ, ಸಿನಿಮಾ ಕ್ಷೇತ್ರದ ದಿಗ್ಗಜರು

KannadaprabhaNewsNetwork | Updated : Jul 14 2024, 05:22 AM IST

ಅನಂತ್ ಭಾಯಿ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ರಜನಿಕಾಂತ್, ಅಮಿತಾಬ್ ಬಚ್ಚನ್ ಸೇರಿದಂತೆ ರಾಷ್ಟ್ರ ಮಟ್ಟದ ಮತ್ತು ಅಂತಾರಾಷ್ಟ್ರೀಯ ಮಟ್ಟದ ದಿಗ್ಗಜರು ಪಾಲ್ಗೊಂಡಿದ್ದಾರೆ.

 ಸಿನಿವಾರ್ತೆ

ಮುಕೇಶ್ ಅಂಬಾನಿ ಪುತ್ನ ಅನಂತ್‌ ಭಾಯಿ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಮದುವೆ ಭಾರತೀಯ ಇತಿಹಾಸದಲ್ಲಿ ಕಂಡು ಕೇಳರಿಯದಂತೆ ನಡೆಯುತ್ತಿದೆ. ಸಾಂಪ್ರದಾಯಿಕತೆ ಮತ್ತು ಅದ್ದೂರಿತನ ಎರಡೂ ಸೇರಿಕೊಂಡು ನಡೆಯುತ್ತಿರುವ ಈ ಮದುವೆ ಕಾರ್ಯಕ್ರಮದಲ್ಲಿ ಕಲೆ, ಸಿನಿಮಾ ಕ್ಷೇತ್ರದ ದಿಗ್ಗಜರೆಲ್ಲಾ ಭಾಗವಹಿಸಿದ್ದಾರೆ. ಆ ಮೂಲಕ ಸಿನಿಮಾ ರಂಗದ ಜೊತೆಗೆ ಅಂಬಾನಿ ಕುಟುಂಬ ಹೊಂದಿರುವ ನಂಟನ್ನು ಸಾರಿದ್ದಾರೆ.

ರಜನಿಕಾಂತ್‌, ಅಮಿತಾಬ್‌ ಬಚ್ಚನ್, ಯಶ್‌, ರಣಬೀರ್‌ ಕಪೂರ್‌, ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌ ಎಲ್ಲರೂ ಕುಟುಂಬ ಸಮೇತ ಬಂದು ಮದುವೆಯಲ್ಲಿ ಪಾಲ್ಗೊಂಡಿದ್ದರು. ವಿಶೇಷ ಎಂದರೆ ಎಲ್ಲರೂ ಮನಸ್ಸು ಬಿಚ್ಚಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅದರಲ್ಲೂ ರಜನಿಕಾಂತ್‌ ಮತ್ತು ಅನಿಲ್‌ ಕಪೂರ್‌ ಡಾನ್ಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅಂಥಾ ಮೇರು ನಟರು ಅಂಬಾನಿ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಗೆ ಆ ಸನ್ನಿವೇಶ ಸಾಕ್ಷಿಯಂತಿತ್ತು.

ಮುಕೇಶ್ ಅಂಬಾನಿ ಸಿನಿಮಾ ಕ್ಷೇತ್ರದ ದಿಗ್ಗಜರಲ್ಲದೆ ಜಾಗತಿಕ ನಾಯಕರನ್ನು ಕೂಡ ಮದುವೆಗೆ ಆಹ್ವಾನಿಸಿದ್ದಾರೆ. ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಜಾನ್‌ ಸೀನಾ ಕೂಡ ಮದುವೆಯಲ್ಲಿ ಕಾಣಿಸಿಕೊಂಡರು. ವಿಶೇಷ ಎಂದರೆ ಅವರು ಯಶ್‌ ಜೊತೆಗೆ ಕಾಣಿಸಿಕೊಂಡಿದ್ದು, ಸಿನಿಮಾ ಪ್ರಿಯರ ಕುತೂಹಲಕ್ಕೆ ಕಾರಣವಾಯಿತು.

ಅಂಬಾನಿ ಕುಟುಂಬ ಭಾರತೀಯ ನಾಯಕರು ಮಾತ್ರವಲ್ಲ ವಿಶ್ವಾದ್ಯಂತ ಇರುವ ಜಾಗತಿಕ ನಾಯಕರ ಜೊತೆಗೂ ನಂಟು ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಯುಕೆಯ ಮಾಜಿ ಪ್ರಧಾನಮಂತ್ರಿಗಳಾದ ಟೋನಿ ಬ್ಲೇರ್, ಬೊರಿಸ್ ಜಾನ್ಸನ್, ತಾಂಜಾನಿಯಾದ ಅಧ್ಯಕ್ಷ ಸಾಮಿಯಾ ಸುಲುಹು ಹಸನ್, ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೋ, ಸ್ಯಾಮ್ಸಂಗ್‌ನ ಎಲೆಕ್ಟ್ರಾನಿಕ್ಸ್‌ನ ಕಾರ್ಯಕಾರಿ ಅಧ್ಯಕ್ಷ ಜೇ ವೈ ಲೀ, ಐಓಸಿ ಉಪಾಧ್ಯಕ್ಷ ಜುವಾನ್ ಆಂಟೋನಿಯೊ ಸಮರಾಂಚ್ ಮುಂತಾದವರು ಮದುವೆಯಲ್ಲಿ ಭಾಗವಹಿಸಿದರು.

ಸದ್ಯಕ್ಕೆ ಕರ್ನಾಟಕದಿಂದ  ಯಶ್‌ ಮತ್ತು ರಾಧಿಕಾ ಪಂಡಿತ್ ದಂಪತಿ ಮಾತ್ರ ಮದುವೆಯಲ್ಲಿ ಭಾಗವಹಿಸಿರುವ ಮಾಹಿತಿ ಬಂದಿದೆ. ಆಸಕ್ತಿಕರ ವಿಚಾರವೆಂದರೆ ಅನಂತ್‌ ಭಾಯಿ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಈ ಮದುವೆ ನಡೆಸುವ ಮೂಲಕ ಮುಕೇಶ್ ಅಂಬಾನಿ ತಮ್ಮ ಪ್ರತಿಷ್ಠೆ ಮತ್ತು ಜಾಗತಿಕ ಸಂಬಂಧವನ್ನು ಸಾರಿದ್ದಾರೆ.