ರೋಬೋಟಿಕ್ ತಂತ್ರಜ್ಞಾನ ಬಳಸಿ ಯಶಸ್ವಿ ಡಬಲ್ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಅಪೋಲೋ

KannadaprabhaNewsNetwork |  
Published : Dec 12, 2025, 03:30 AM IST
ಅಪೋಲೋ | Kannada Prabha

ಸಾರಾಂಶ

ಅಪೋಲೋ ಆಸ್ಪತ್ರೆಯ ವೈದ್ಯರ ತಂಡವು 53 ವರ್ಷದ ಮಹಿಳಾ ರೋಗಿಯೊಬ್ಬರಿಗೆ ರೋಬೋಟಿಕ್ ತಂತ್ರಜ್ಞಾನ ಬಳಸಿ ಯಶಸ್ವಿಯಾಗಿ ಡಬಲ್ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಈ ಸಾಧನೆಯ ವಿವರವಾದ ವರದಿ ಇಲ್ಲಿದೆ.

ಕನ್ನಡಪ್ರಭವಾರ್ತೆ ಬೆಂಗಳೂರುಪ್ರತಿಷ್ಠಿತ ಬೆಂಗಳೂರು ಅಪೋಲೋ ಹಾಸ್ಪಿಟಲ್‌ನ ವೈದ್ಯರ ತಂಡವು ಇನ್ಫೆಕ್ಟಿವ್ ಎಂಡೋಕಾರ್ಡೈಟಿಸ್ ಮತ್ತು ಇನ್ನಿತರ ಸಂಕೀರ್ಣ ಸಮಸ್ಯೆಗಳಿದ್ದ ಮತ್ತು ತೀವ್ರಥರದ ಅಪಾಯ ಎದುರಿಸುತ್ತಿದ್ದ 53 ವರ್ಷದ ರೋಗಿಗೆ ಅತ್ಯಾಧುನಿಕ ದಿ ವಿನ್ಸಿ Xi ಸರ್ಜಿಕಲ್ ಸಿಸ್ಟಂ ಬಳಸಿ ಅತ್ಯಂತ ಅಪರೂಪದ ಮತ್ತು ಅತಿ ಸಂಕೀರ್ಣವಾದ ರೋಬೋಟಿಕ್ ಡಬಲ್ ವಾಲ್ವ್ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ, ಮಹತ್ವದ ವೈದ್ಯಕೀಯ ದಾಖಲೆ ಮಾಡಿದೆ.

ಬೆಂಗಳೂರಿನ ಅಪೋಲೋ ಆಸ್ಪತ್ರೆಯ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರು ಮತ್ತು ಖ್ಯಾತ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ಸಾತ್ಯಕಿ ನಂಬಾಲ ಅವರ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ.

ಭಾರತದಲ್ಲಿ ರೋಬೋಟಿಕ್ ಡಬಲ್ ವಾಲ್ವ್ ಬದಲಾವಣೆ ಶಸ್ತ್ರಚಿಕಿತ್ಸೆ ದಶಕದ ಹಿಂದೆಯೇ ನಡೆದಿದ್ದರೂ ಆ ಆರಂಭಿಕ ಪ್ರಯತ್ನಗಳು ಮೊದಲ ತಲೆಮಾರಿನ ರೋಬೋಟಿಕ್ ವ್ಯವಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದವು. ಇದೀಗ ಅಪೋಲೋ ಬೆಂಗಳೂರು ರೋಬೋಟಿಕ್ ತಂತ್ರಜ್ಞಾನದಲ್ಲಿ ಆಗಿರುವ ಪ್ರಗತಿ, ಹೈ-ಡೆಫಿನಿಷನ್ ದೃಶ್ಯ ವ್ಯವಸ್ಥೆ, ಸುಧಾರಿತ ಉಪಕರಣಗಳು ಮತ್ತು ಹೆಚ್ಚು ಸೂಕ್ಷ್ಮವಾದ ಶಸ್ತ್ರಚಿಕಿತ್ಸಾ ಕಾರ್ಯವಿಧಾನದ ಮೂಲಕ ಈ ಕಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಇಂದಿನ ಅತ್ಯಾಧುನಿಕ ರೋಬೋಟಿಕ್ ವ್ಯವಸ್ಥೆಯಲ್ಲಿ ನಡೆಸಿ ಮತ್ತೆ ಹೊಸ ಮಾನದಂಡ ಹಾಕಿಕೊಟ್ಟಿದೆ.

ಆಸ್ಪತ್ರೆಗೆ ದಾಖಲಾಗಿದ್ದ 53 ವರ್ಷದ ಮಹಿಳಾ ರೋಗಿಯೊಬ್ಬರಿಗೆ ಇನ್ಫೆಕ್ಟಿವ್ ಎಂಡೋಕಾರ್ಡೈಟಿಸ್ ನಿಂದಾಗಿ ಅವರ ಆರ್ಟಿಕ್ ಮತ್ತು ಮೈಟ್ರಲ್ ಕವಾಟಗಳು ತೀವ್ರವಾಗಿ ಹಾನಿಗೊಳಗಾಗಿದ್ದವು. ಇದರ ಜೊತೆಗೆ ರುಮಟಾಯ್ಡ್ ಆರ್ಥ್ರೈಟಿಸ್, ಸ್ಥೂಲಕಾಯ, ಥೈರಾಯ್ಡ್ ಕಾರ್ಯದೋಷ ಮತ್ತು ಈ ಹಿಂದೆ ಸ್ಟ್ರೋಕ್ ಆಗಿದ್ದ ಇತಿಹಾಸ ಇದ್ದ ಕಾರಣ ಅವರಿಗೆ ಸಾಂಪ್ರದಾಯಿಕ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಹೆಚ್ಚು ಅಪಾಯಕಾರಿಯಾಗಿತ್ತು.

ಈ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು ಶಸ್ತ್ರಚಿಕಿತ್ಸಾ ತಂಡವು ರೋಗಿಯ ಶಸ್ತ್ರಚಿಕಿತ್ಸೆ ನಡೆಸಲು ದಿ ವಿನ್ಸಿ Xi ಸರ್ಜಿಕಲ್ ಸಿಸ್ಟಂ ಬಳಸಿ ಕನಿಷ್ಠ ಆಕ್ರಮಣಕಾರಿ ರೋಬೋಟಿಕ್ ವಿಧಾನವನ್ನು ಆಯ್ಕೆ ಮಾಡಿಕೊಂಡಿತು. ಟ್ರಾನ್ಸ್ ಈಸೋಫೇಜಿಯಲ್ ಎಕೋಕಾರ್ಡಿಯೋಗ್ರಾಫಿ (ಟಿಇಇ) ಮಾರ್ಗದರ್ಶನದಲ್ಲಿ ಏಕಕಾಲದಲ್ಲಿ ಆರ್ಟಿಕ್ ಮತ್ತು ಮೈಟ್ರಲ್ ಕವಾಟಗಳನ್ನು ಜೈವಿಕ ಕವಾಟಗಳಿಗೆ (ಬಯೋ ಪ್ರಾಸ್ಥೆಟಿಕ್ ವಾಲ್ವ್ ಗಳು) ಯಶಸ್ವಿಯಾಗಿ ಬದಲಾವಣೆಯನ್ನು ಮಾಡಲಾಯಿತು. ಎದೆಯ ಮಧ್ಯಭಾಗದಲ್ಲಿ ದೊಡ್ಡ ಗಾಯ (ಮಿಡ್ ಲೈನ್ ಸ್ಚೆರ್ನೋಟಮಿ) ಮಾಡದೆಯೇ ಕೇವಲ ಚಿಕ್ಕ ಕೀಹೋಲ್‌ನಂತಹ ಸೂಕ್ಷ್ಮ ತೂತುಗಳ ಮೂಲಕ ಇಡೀ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ವಿಶೇಷವಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಕೇವಲ 12 ಗಂಟೆಗಳಲ್ಲೇ ರೋಗಿಯನ್ನು ವೆಂಟಿಲೇಟರ್ ನಿಂದ ಬಿಡುಗಡೆ ಮಾಡಿ ಅವರಿಗೆ ನಡೆಯಲು ಅನುವು ಮಾಡಿಕೊಡಲಾಯಿತು. ಆ ನಂತರ ಬಹಳ ಬೇಗ ವಾರ್ಡ್ ಗೆ ಸ್ಥಳಾಂತರಿಸಿ, ಶಸ್ತ್ರಚಿಕಿತ್ಸೆಯ ಮೂರನೇ ದಿನವೇ ಮನೆಗೆ ಡಿಸ್ ಚಾರ್ಜ್ ಮಾಡಲಾಯಿತು. ಈ ಕುರಿತು ಮಾತನಾಡಿರುವ ಅಪೋಲೋ ಹಾಸ್ಪಿಟಲ್ಸ್‌ನ ರೊಬೊಟಿಕ್ ಹೃದಯ ಶಸ್ತ್ರಚಿಕಿತ್ಸೆಯ ರಾಷ್ಟ್ರೀಯ ನಿರ್ದೇಶಕರಾದ ಡಾ. ಸಾತ್ಯಕಿ ನಂಬಾಲ ಅವರು, ‘ಈ ಸಾಧನೆ ಕೇವಲ ಅಪೋಲೋ ಆಸ್ಪತ್ರೆ ಸಮೂಹಕ್ಕೆ ಮಾತ್ರವಲ್ಲ, ಏಷ್ಯಾದ ಹೃದಯ ಶಸ್ತ್ರಚಿಕಿತ್ಸಾ ವಿಭಾಗದಲ್ಲಿಯೇ ಬಹು ದೊಡ್ಡ ಮೈಲುಗಲ್ಲಾಗಿದೆ. ಈ ಹಿಂದೆ ರೋಬೋಟಿಕ್ ಡಬಲ್ ವಾಲ್ವ್ ಬದಲಾವಣೆ ಪ್ರಯತ್ನಗಳು ನಡೆದಿದ್ದವು, ಆದರೆ ಇಂದು ಅತ್ಯಾಧುನಿಕ ರೊಬೋಟಿಕ್ ವ್ಯವಸ್ಥೆಯಲ್ಲಿ ರೋಬೋಟಿಕ್ ಡಬಲ್ ವಾಲ್ವ್ ಬದಲಾವಣೆ ಮಾಡುವ ಮೂಲಕ ಅತ್ಯುನ್ನತ ನಿಖರತೆ, ನಿಯಂತ್ರಣ ಮತ್ತು ಸುರಕ್ಷತೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ’ ಎಂದು ಹೇಳಿದರು.

ಈ ಕುರಿತು ಮಾತನಾಡಿದ ಬೆಂಗಳೂರಿನ ಅಪೋಲೋ ಹಾಸ್ಪಿಟಲ್ಸ್‌ನ ಕ್ಯಾತ್ ಲ್ಯಾಬ್ ನಿರ್ದೇಶಕರು ಮತ್ತು ಹೃದ್ರೋಗ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಗಿರೀಶ್ ಬಿ. ನವಸುಂದಿ ಅವರು, ‘ಈ ಶಸ್ತ್ರಚಿಕಿತ್ಸೆಯ ಯಶಸ್ಸು ಆಧುನಿಕ ರೋಬೋಟಿಕ್ ತಂತ್ರಜ್ಞಾನವು ಹೇಗೆ ಹೃದಯ ಶಸ್ತ್ರಚಿಕಿತ್ಸೆಯ ಸ್ವರೂಪವನ್ನೇ ಬದಲಾಯಿಸುತ್ತಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ’ ಎಂದು ಹೇಳಿದರು.ಕರ್ನಾಟಕದ ಅಪೋಲೋ ಹಾಸ್ಪಿಟಲ್ಸ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಅಕ್ಷಯ್ ಓಲೇಟಿ ಅವರು ಮಾತನಾಡಿ, ‘ಅಪೋಲೋ ಆಸ್ಪತ್ರೆಗಳು ಯಾವಾಗಲೂ ವೈದ್ಯಕೀಯ ವಿಭಾಗದಲ್ಲಿನ ಹೊಸತನ ಮತ್ತು ಶ್ರೇಷ್ಠತೆಯಲ್ಲಿ ಮುಂಚೂಣಿಯಲ್ಲಿ ನಿಂತಿವೆ. ಅತ್ಯಾಧುನಿಕ ರೋಬೋಟಿಕ್ ವ್ಯವಸ್ಥೆಗಳನ್ನು ಅತ್ಯಂತ ಕುಶಲ ಶಸ್ತ್ರಚಿಕಿತ್ಸಾ ತಂಡದೊಂದಿಗೆ ಸಂಯೋಜಿಸಿ ಅತೀ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಗಳನ್ನು ಸುರಕ್ಷಿತವಾಗಿ ನಡೆಸುವ ಮೂಲಕ ಆಸ್ಪತ್ರೆಯು ಇದೀಗ ಮಹತ್ತರ ಸಾಧನೆ ಮಾಡಿದೆ’ ಎಂದು ಹೇಳಿದರು.

PREV

Recommended Stories

ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ
ಎಕ್ಸ್‌ಕಾನ್‌ 20025ರಲ್ಲಿ ಜೆಸಿಬಿ ಇಂಡಿಯಾದ 52 ಟನ್ ಕಾರ್ಯಾಚರಣೆ ತೂಕದ ಯಂತ್ರ ಬಿಡುಗಡೆ