ಆಧುನಿಕ ಭಾರತದ ಶಿಲ್ಪಿ, ಯುಗಪುರುಷ - ಅಟಲ್ ಬಿಹಾರಿ ವಾಜಪೇಯಿ

Published : Dec 25, 2025, 11:59 AM IST
Atal Bihari Vajpayee

ಸಾರಾಂಶ

ಎಲ್.ಕೆ.ಅಡ್ವಾಣಿ ಮತ್ತು ನಾನಾಜಿ ದೇಶಮುಖ್ ಅವರೊಂದಿಗೆ ಸೇರಿ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ, ಜನಸಂಘವನ್ನು ವಿಸರ್ಜಿಸುವ ಮೂಲಕ, ವ್ಯಕ್ತಿಗಿಂತ ದೇಶ ಮೊದಲು ಎನ್ನುತ್ತಾ ಭಾರತೀಯ ಜನತಾ ಪಕ್ಷದ ಉನ್ನತಿಗೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಭದ್ರ ಬುನಾದಿ ಹಾಕಿದರು.

-ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರು ಉತ್ತರ ಕನ್ನಡ.

ಭಾರತದ ಸನಾತನ ಹಿಂದೂ ಸಂಸ್ಕೃತಿಯ ಪ್ರತಿನಿಧಿಯಾಗಿ ಹಾಗೂ ರಾಷ್ಟ್ರೀಯತೆಯ ಪ್ರೇರಕ ಶಕ್ತಿಯಾಗಿ ಬೆಳಗಿದ ಅಟಲ್ ಬಿಹಾರಿ ವಾಜಪೇಯಿ ಎಂಬ ಹೆಸರು ಕೋಟ್ಯಂತರ ಭಾರತೀಯರ ಪಾಲಿಗೆ ಸ್ಪೂರ್ತಿ.

ಡಿಸೆಂಬರ್ 25, 1924ರಂದು ಜನಿಸಿದ ಅಟಲ್ ಜೀ, ‘ವಸುದೈವ ಕುಟುಂಬಕಂ’ ಎಂಬ ಉದಾತ್ತ ತತ್ವದ ಮೂಲಕ ಜಗತ್ತಿನಾದ್ಯಂತ ಸ್ನೇಹ ಮತ್ತು ವಿಶ್ವಾಸದ ಸೇತುವೆಯನ್ನು ನಿರ್ಮಿಸುವ ಕಾರ್ಯವನ್ನು ಅಂದಿನಿಂದಲೇ ಪ್ರಾರಂಭಿಸಿದ್ದರು. ದೀರ್ಘಕಾಲದ ಗುಲಾಮಗಿರಿಯ ಮಾನಸಿಕ ದಾಸ್ಯದಿಂದ ಭಾರತೀಯರನ್ನು ಮುಕ್ತಗೊಳಿಸಿ, ಅವರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನದ ಕೆಚ್ಚನ್ನು ಬಡಿದೆಬ್ಬಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ‘ಭಾರತವು ಕೇವಲ ಭೂಮಿಯ ತುಣುಕಲ್ಲ, ಅದೊಂದು ಜೀವಂತ ರಾಷ್ಟ್ರಪುರುಷ; ಇಲ್ಲಿನ ಕಣಕಣವೂ ಶಂಕರ, ಹರಿಯುವ ಪ್ರತಿ ತೊರೆಯೂ ಗಂಗೆ’ ಎನ್ನುತ್ತಿದ್ದ ಅವರ ಶಬ್ದಗಳಲ್ಲಿ ರಾಷ್ಟ್ರದ ಬಗ್ಗೆ ಅಚಲವಾದ ಭಕ್ತಿಯಿತ್ತು. ದೇಶದಲ್ಲಿ ಮೊದಲ ಬಾರಿಗೆ ಜನಸಾಮಾನ್ಯರಲ್ಲಿ ರಾಷ್ಟ್ರಾಭಿಮಾನದ ಜಾಗೃತಿಯನ್ನು ಮೂಡಿಸಿದ ಅವರು, ಭಾರತವು ಜಾಗತಿಕ ಮಟ್ಟದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿದರು. ರಾಜಕೀಯದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಎಲ್ಲರನ್ನೂ ಪ್ರೀತಿಯಿಂದ ಗೆಲ್ಲುವ ಅದ್ಭುತ ಗುಣ ಹೊಂದಿದ್ದ ಅವರಿಗೆ ‘ಅಜಾತಶತ್ರು’ ಎಂಬ ಬಿರುದು ಅತ್ಯಂತ ಅರ್ಥಪೂರ್ಣವಾಗಿ ಒಪ್ಪುತ್ತದೆ.

ಅಟಲ್ ಜಿ ಕೇವಲ ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿರಲಿಲ್ಲ, ಬದಲಿಗೆ ಒಬ್ಬ ಸಂವೇದನಾಶೀಲ ಕವಿ ಮತ್ತು ಅಪ್ರತಿಮ ವಾಗ್ಮಿಯಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ತಮ್ಮ ಸಾರ್ವಜನಿಕ ಜೀವನ ಆರಂಭಿಸಿದ ಅವರು, ‘ರಾಷ್ಟ್ರಧರ್ಮ’ ಮತ್ತು ‘ಪಾಂಚಜನ್ಯ’ದಂತಹ ಪತ್ರಿಕೆಗಳ ಮೂಲಕ ರಾಷ್ಟ್ರೀಯತೆಯ ಕಿಚ್ಚನ್ನು ಹಚ್ಚಿದರು. ಅವರ ಕವಿತೆಯ ಸಾಲುಗಳು ಸದಾ ಸಂಕಷ್ಟದ ಕಾಲದಲ್ಲೂ ಸೋಲೊಪ್ಪದ ಮನಸ್ಥಿತಿಯನ್ನು ವ್ಯಕ್ತಪಡಿಸುತ್ತಿದ್ದವು. ‘ಬಾಧೆಗಳು ಬರಲಿ, ಪ್ರಳಯದ ಜ್ವಾಲೆಗಳು ಆವರಿಸಲಿ, ಸಂಕಷ್ಟದ ಮಳೆಯಲ್ಲಿ ಬೆಂದು ಹೋಗಲಿ, ಆದರೂ ಹಿರಿದಾದ ಗುರಿಯೆಡೆಗೆ ನಾವು ಹೆಜ್ಜೆ ಹಾಕೋಣ, ನಗುನಗುತ ಅಗ್ನಿಪಥದಲ್ಲಿ ಸಾಗೋಣ’ ಎಂಬ ಅವರ ಸಾಲುಗಳು ಕೇವಲ ಕವಿತೆಯಲ್ಲ, ಬದಲಿಗೆ ದೇಶಕ್ಕಾಗಿ ಹೋರಾಡುವ ಪ್ರತಿಯೊಬ್ಬ ಕಾರ್ಯಕರ್ತನಿಗೆ ದಾರಿದೀಪವಾಗಿದ್ದವು. ಸೋಲು ಎದುರಾದಾಗ ಎದೆಗುಂದದೆ ವಿಜಯದ ಹಾದಿಯಲ್ಲಿ ಮುನ್ನಡೆಯುವ ಪಾಠವನ್ನು ಅವರು ಈ ಕಾವ್ಯದ ಮೂಲಕ ಬೋಧಿಸಿದ್ದರು.

ಡಾ। ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಜೀವನ ಆರಂಭಿಸಿದ ಅಟಲ್ ಬಿಹಾರಿ ವಾಜಪೇಯಿ ಅವರು, ಮುಂದೆ ಲಾಲ್ ಕೃಷ್ಣ ಅಡ್ವಾಣಿಯವರೊಂದಿಗೆ ಸೇರಿ ಭಾರತೀಯ ಜನತಾ ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಪ್ರಬಲ ಶಕ್ತಿಯಾಗಿ ರೂಪಿಸಿದರು; ಈ ಇಬ್ಬರೂ ನಾಯಕರನ್ನು ರಾಜಕೀಯದ ‘ಲವ-ಕುಶ’ರೆಂದೇ ಸಾದರಪಡಿಸಲಾಗುತ್ತಿತ್ತು. ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿಯನ್ನು ಬಲಪಡಿಸಲು ವಿಶೇಷ ಆಸಕ್ತಿ ಹೊಂದಿದ್ದ ಅವರು, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಮೊದಲ ದಿನವೇ ಬಂಧಿತರಾಗಿ ಬೆಂಗಳೂರು ಜೈಲಿನಲ್ಲಿ ಸುದೀರ್ಘ ಕಾಲ ಸೆರೆವಾಸ ಅನುಭವಿಸುವ ಮೂಲಕ ಹೋರಾಟದ ತೀವ್ರತೆಯನ್ನು ಮೆರೆದರು. ಬಿಡುಗಡೆಯ ನಂತರ ಸರ್ವಾಧಿಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದ ವಾಜಪೇಯಿ ಅವರು, ಎಲ್.ಕೆ.ಅಡ್ವಾಣಿ ಮತ್ತು ನಾನಾಜಿ ದೇಶಮುಖ್ ಅವರೊಂದಿಗೆ ಸೇರಿ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ, ಜನಸಂಘವನ್ನು ವಿಸರ್ಜಿಸುವ ಮೂಲಕ, ವ್ಯಕ್ತಿಗಿಂತ ದೇಶ ಮೊದಲು ಎನ್ನುತ್ತಾ ಭಾರತೀಯ ಜನತಾ ಪಕ್ಷದ ಉನ್ನತಿಗೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಭದ್ರ ಬುನಾದಿ ಹಾಕಿದರು.

10 ಬಾರಿ ಲೋಕಸಭೆಗೆ ಹಾಗೂ 02 ಬಾರಿ ರಾಜ್ಯಸಭೆಗೆ ಆಯ್ಕೆ

10 ಬಾರಿ ಲೋಕಸಭೆಗೆ ಹಾಗೂ 02 ಬಾರಿ ರಾಜ್ಯಸಭೆಗೆ ಆಯ್ಕೆಯಾಗಿ ಸಂಸತ್ ಸದಸ್ಯರಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸದಾ ಎತ್ತಿ ಹಿಡಿದರು. ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿ ಭಾರತದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಮಹಾನ್ ನಾಯಕ ಅಟಲ್ ಜಿ, ನಂತರ ದೇಶದ ಪ್ರಧಾನಿಯಾಗಿ ಭಾರತದ ಸರ್ವತೋಮುಖ ಅಭಿವೃದ್ಧಿಗೆ ಅಡಿಪಾಯ ಹಾಕಿದರು.

ಇಂದು ನಾವು ಕಾಣುತ್ತಿರುವ ‘ಆತ್ಮನಿರ್ಭರ ಭಾರತ’ದ ಕನಸು ಹಾಗೂ ‘ಸ್ವದೇಶಿ ಅಭಿಯಾನ’ದ ಮೂಲ ಆಶಯಗಳು ಅವರ ಆಡಳಿತದಲ್ಲೇ ಬೀಜಾಂಕುರಗೊಂಡಿತ್ತು. ಪೋಕ್ರಾನ್ ಪರಮಾಣು ಪರೀಕ್ಷೆಯ ಮೂಲಕ ಭಾರತವನ್ನು ಪರಮಾಣು ಶಕ್ತಿಯನ್ನಾಗಿಸಿ ಜಗತ್ತಿಗೆ ತನ್ನ ಸಾರ್ವಭೌಮತ್ವದ ಪರಿಚಯ ಮಾಡಿಕೊಟ್ಟ ಅವರು, ‘ನಮಗೆ ಶಾಂತಿ ಬೇಕು ಆದರೆ ಅದು ಶಕ್ತಿಯ ಮೂಲಕ ಬರಬೇಕೇ ಹೊರತು ದೌರ್ಬಲ್ಯದ ಮೂಲಕವಲ್ಲ’ ಎಂದು ಸಾರಿದರು. ಕಾರ್ಗಿಲ್ ಯುದ್ಧದ ಕೆಚ್ಚೆದೆಯ ನಾಯಕತ್ವ ಹಾಗೂ ‘ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್’ ಘೋಷಣೆಯ ಮೂಲಕ ಹಾಗೂ ‘ಸುವರ್ಣ ಚತುಷ್ಪಥ’ ರಸ್ತೆ, ಸರ್ವ ಶಿಕ್ಷಣ ಅಭಿಯಾನ ಯೋಜನೆಗಳ ಮೂಲಕ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ರೂಪಿಸಲು ಅಂದೇ ಭದ್ರ ಬುನಾದಿ ಹಾಕಿದ್ದರು. ಅವರ ನಿಷ್ಕಳಂಕ ಸೇವೆಯನ್ನು ಪರಿಗಣಿಸಿ 1992ರಲ್ಲಿ ಪದ್ಮವಿಭೂಷಣ ಹಾಗೂ 2015ರಲ್ಲಿ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ಜನ್ಮದಿನವಾದ ಡಿಸೆಂಬರ್ 25ಅನ್ನು ‘ಸುಶಾಸನ ದಿನ’ ಎಂದು ಆಚರಿಸುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನಿರ್ಧಾರವು ಅಟಲ್ ಜೀ ಅವರ ಆಡಳಿತ ವೈಖರಿಗೆ ಸಂದ ಗೌರವವಾಗಿದೆ.

ಅಟಲ್ ಬಿಹಾರಿ ವಾಜಪೇಯಿ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ

ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಪಕ್ಷದ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ದೊರೆತದ್ದು ನನ್ನ ಜೀವನದ ಅತ್ಯಂತ ಅಮೂಲ್ಯ ಅನುಭವಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸ್ವರ್ಣವಲ್ಲಿ ಸಂಸ್ಥಾನದ ಗಾಯತ್ರಿ ಜಪಯಜ್ಞದ ಸಂದರ್ಭದಲ್ಲಿ ಅವರು ಆಗಮಿಸಿ ನೀಡಿದ ಆಧ್ಯಾತ್ಮಿಕ ಭಾಷಣ ಇಂದಿಗೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಕೈಗಾ ಅಣುಸ್ಥಾವರದ ಉದ್ಘಾಟನೆಗೆ ಅವರು ಬಂದಾಗ ಅವರೊಂದಿಗೆ ಕಳೆದ ಸಮಯ ನನ್ನ ಜೀವನದ ಸುಯೋಗ. ಅಂತಹ ಉನ್ನತ ಸ್ಥಾನದಲ್ಲಿದ್ದರೂ ಅತ್ಯಂತ ಸರಳ ವ್ಯಕ್ತಿತ್ವದ ನಾಯಕರಾಗಿದ್ದರು ಅಟಲ್ ಜಿ. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶಗಳು ಮತ್ತು ಅವರು ತೋರಿದ ರಾಷ್ಟ್ರಭಕ್ತಿಯ ಹಾದಿ ಎಂದೆಂದಿಗೂ ಅಮರ. ‘ನಾನು ಇರಲಿ ಅಥವಾ ಇಲ್ಲದಿರಲಿ, ಈ ದೇಶ ಶಾಶ್ವತವಾಗಿರಬೇಕು’ ಎನ್ನುತ್ತಿದ್ದ ಅವರ ನುಡಿಯಂತೆ ನಾವು ರಾಷ್ಟ್ರಭಕ್ತಿಯ ಹಾದಿಯಲ್ಲಿ ನಡೆಯೋಣ. ಅವರ ಜನ್ಮದಿನದಂದು ಆ ಮಹಾನ್ ಚೇತನಕ್ಕೆ ಶಿರಬಾಗಿ ನಮಿಸುತ್ತಾ, ಸದೃಢ ವಿಕಸಿತ ಭಾರತ ಕಟ್ಟುವಲ್ಲಿ ಕೈಜೋಡಿಸೋಣ.

PREV
Read more Articles on

Recommended Stories

ಸನ್ನಡತೆ, ಸಂಯಮಕ್ಕೂ ಅಟಲ್‌ ಮಾದರಿ
ಶತ್ರುಗಳನ್ನು ಕ್ಷಮಿಸುವುದಕ್ಕೇ ಹುಟ್ಟಿದ ಯೇಸು!