ಶತ್ರುಗಳನ್ನು ಕ್ಷಮಿಸುವುದಕ್ಕೇ ಹುಟ್ಟಿದ ಯೇಸು!

Published : Dec 25, 2025, 11:54 AM IST
Jesus

ಸಾರಾಂಶ

ಮತ್ತೊಬ್ಬ ಕುರಿಕೊಟ್ಟಿಗೆಯಲ್ಲಿ ಸಾಮಾನ್ಯನಾಗಿ ಹುಟ್ಟಿ ಅಸಾಮಾನ್ಯನಾಗಿ ಬೆಳೆದು ಮಾನವಕೋಟಿಗೆ ಬೆಳಕು ತೋರುವ ಮಾರ್ಗದಲ್ಲಿ ತನ್ನನ್ನೇ ಉರಿಸಿಕೊಂಡು ಬಲಿಯಾಗಿ ದೇವಮಾನವನಾದವನು. ತನ್ನ ಸಾವಿನ ಶಿಲುಬೆಯ ತಾನೇ ಹೊತ್ತ ಗುರು

-ಬನ್ನೂರು ಕೆ.ರಾಜು, ಸಾಹಿತಿ-ಪತ್ರಕರ್ತ

-ಇಂದು ಕ್ರಿಸ್‌ಮಸ್‌ 

ನಿಮ್ಮಲ್ಲಿ ಸಾಸಿವೆ ಕಾಳಿನಷ್ಟು

ಶ್ರದ್ಧೆಯಿದ್ದರೆ, ನೀವೊಂದು ಬೆಟ್ಟಕ್ಕೆ

‘ಈ ಜಾಗದಿಂದ ಆ ಜಾಗಕ್ಕೆ ಚಲಿಸು’

ಎಂದು ಹೇಳಿದರೆ ಅದು ಚಲಿಸುತ್ತದೆ

-ಯೇಸುಕ್ರಿಸ್ತ

ಮಾನವ ಕುಲಕ್ಕೆ ಮನುಷ್ಯತ್ವದ ಪಾಠ ಹೇಳಿ ಕತ್ತಲಿಂದ ಬೆಳಕಿನತ್ತ ಅವರನ್ನು ಕರೆದೊಯ್ದು ಜಗತ್ತನ್ನೇ ಜ್ಯೋತಿಸ್ವರೂಪ ಮಾಡಿ ಆ ಬೆಳಕಿನಲ್ಲಿ ಇಡೀ ಮಾನವಕುಲವನ್ನು ಉದ್ಧರಿಸಲು ಅವತರಿಸಿದ ಮಹಾಪುರುಷರು ಜಗತ್ತಿನಲ್ಲಿ ಅನೇಕರುಂಟು. ಅವರಲ್ಲಿ ಬುದ್ಧ ಮತ್ತು ಯೇಸು ಅತ್ಯಂತ ಪ್ರಮುಖರು. ಒಬ್ಬ ಸಕಲೈಶ್ವರ್ಯದ ಒಡೆಯನಾಗಿ ರಾಜಕುಮಾರನಾಗಿ ಹುಟ್ಟಿದರೂ ಜಗದ ಸುಖಕ್ಕಾಗಿ ತನ್ನ ಸುಖವನ್ನೆಲ್ಲಾ ತ್ಯಾಗಗೈದು ಮಾನವ ಕಲ್ಯಾಣಕ್ಕಾಗಿ ನಿಂತು ದೇವಪುರುಷನಾದವನು. ಮತ್ತೊಬ್ಬ ಕುರಿಕೊಟ್ಟಿಗೆಯಲ್ಲಿ ಸಾಮಾನ್ಯನಾಗಿ ಹುಟ್ಟಿ ಅಸಾಮಾನ್ಯನಾಗಿ ಬೆಳೆದು ಮಾನವಕೋಟಿಗೆ ಬೆಳಕು ತೋರುವ ಮಾರ್ಗದಲ್ಲಿ ತನ್ನನ್ನೇ ಉರಿಸಿಕೊಂಡು ಬಲಿಯಾಗಿ ದೇವಮಾನವನಾದವನು. ಜಗದೇಳಿಗೆಗಾಗಿ ಇವರಿಬ್ಬರೂ ಪಟ್ಟ ಪಾಡುಗಳು ಅಷ್ಟಿಷ್ಟಲ್ಲ. ಅದರಲ್ಲೂ ಯೇಸು ಅನುಭವಿಸಿದ ಯಾತನೆ ಸಾಮಾನ್ಯವಲ್ಲ. ಇಂಥ ಯಾತನೆಯಲ್ಲೂ ಸತ್ಯಶೋಧಕನಾಗಿ ತನ್ನ ತತ್ವಾದರ್ಶಗಳಿಂದ ವಿಶ್ವಕ್ಕೆ ಮಹಾಬೆಳಕು ನೀಡಿದ ಮಹಾಪುರುಷ ಯೇಸುಕ್ರಿಸ್ತ ವಿಶ್ವವಂದಿತನೇ ಸರಿ!

ತನ್ನ ಶಿಲುಬೆಯ ತಾನೆ ಹೊತ್ತನಲ್ಲ ಗುರು ಯೇಸು, ಇದಿಷ್ಟೇ ಸಾಕು ದೇವಪುತ್ರ ಯೇಸುವಿನ ಬ್ರಹ್ಮಾಂಡ ವ್ಯಕ್ತಿತ್ವದ ಮಹಾದರ್ಶನಕೆ. ‘ಪಾಪಿಗಳನ್ನು ರಕ್ಷಿಸುವುದೇ ತನ್ನ ಜೀವನದ ಉದ್ದೇಶ’ ಇದು ಯೇಸುವಿನ ಸ್ಪಷ್ಟ ಸಂದೇಶ. ‘ನರಕದ ದಾರಿ ಸುಗಮ. ಆದರೆ ಸ್ವರ್ಗದ ದಾರಿ ದುರ್ಗಮ. ದುರ್ಗಮವಾದರೂ ಸರಿಯೇ ಸ್ವರ್ಗದ ದಾರಿಯಲ್ಲಿ ಸಾಗುವುದೇ ಬದುಕಿನ ಗುರಿಯಾಗಬೇಕು. ಅದರಿಂದಲೇ ಬದುಕು ಸಾರ್ಥಕ’ವೆಂಬ ಯೇಸುವಿನ ಒಡಲು ಶಾಂತಿಯ ಮಹಾಕಡಲು. ಅಷ್ಟೇ ಕ್ಷಮೆಯ ಮಹಾಮಡಿಲು. ‘ಓರ್ವ ಶ್ರೀಮಂತ ಸ್ವರ್ಗಕ್ಕೆ ಹೋಗುವುದಕ್ಕಿಂತ ಒಂದು ಒಂಟೆ ಸೂಜಿಯ ಕಣ್ಣಲ್ಲಿ ಹಾದು ಹೋಗುವುದು ಸುಲಭದಾಯಕ’. ಅದೆಷ್ಟೋ ಇಂಥ ಮಾರ್ಮಿಕ ನುಡಿಮುತ್ತುಗಳು ಯೇಸುವಿನ ಬೋಧನೆಯ ಬೃಹತ್ ಭಂಡಾರದಲ್ಲಿ ತುಂಬಿ ತುಳುಕಿವೆ.

ಕ್ರಿಸ್ತಶಕದ ಶಕಪುರುಷ:

ಇಂಥ ಶಾಂತಿದೂತ ದೇವಪುರುಷ ಯೇಸುಕ್ರಿಸ್ತನು ಜೋಸೆಫ್ ಮತ್ತು ಮೇರಿಯ ಸುಪುತ್ರನಾಗಿ ಜನಿಸಿದ್ದು ‘ಡಿಸೆಂಬರ್ ೨೫’. ಹಾಗಾಗಿ ಅಂದು ಯೇಸುವಿನ ಜನ್ಮದಿನೋತ್ಸವದ ‘ಕ್ರಿಸ್‌ಮಸ್’ ಆಚರಣೆ ಜಗತ್ತಿನಾದ್ಯಂತ ಜರುಗುತ್ತದೆ. ಕ್ರಿಸ್‌ಮಸ್ ಡೇಗೆ ಜಾಗತಿಕ ವೈಭವವಿದೆ. ಒಟ್ಟಿನಲ್ಲಿ ಕ್ರಿಸ್‌ಮಸ್ ಎಂಬುದು ಕ್ರಿಶ್ಚಿಯನ್ನರಿಗೆ ಒಂದು ಪವಿತ್ರ ದಿನ. ಅವರಿಗೆ ಅದೊಂದು ಸಂತಸ ಸಂಭ್ರಮಗಳ ಮಹಾಹಬ್ಬ. ಇದರ ಕೇಂದ್ರ ಬಿಂದು ‘ಕ್ರಿಸ್ತಶಕ’ದ ಹುಟ್ಟಿಗೆ ಕಾರಣವಾಗಿ ಶಕಾರಂಭ ಮಾಡಿದ ಶಕಪುರುಷ ಯೇಸುಕ್ರಿಸ್ತ.

ಸೋಜಿಗದ ವಿಷಯವೆಂದರೆ ಯೇಸುಕ್ರಿಸ್ತ ಹುಟ್ಟಿದ್ದು ಕನ್ಯೆ ಮೇರಿಯಲ್ಲಿ. ಒಂದು ರೀತಿ ‘ಮಹಾಭಾರತ’ದಲ್ಲಿ ಕನ್ಯೆ ಕುಂತೀದೇವಿಯಲ್ಲಿ ಕರ್ಣ ಜನಿಸಿದಂತೆ. ಆಗಷ್ಟೇ ಜೋಸೆಫ್‌ನೊಡನೆ ವಿವಾಹ ನಿಶ್ಚಯವಾಗಿದ್ದ ಮೇರಿ ವಿವಾಹವಾಗಿ ಅವನನ್ನು ಕೂಡುವ ಮುನ್ನವೇ ತನ್ನ ಗರ್ಭದಲ್ಲಿ ಯೇಸುವನ್ನು ಪವಿತ್ರಾತ್ಮನಿಂದ ಹೊತ್ತಿದ್ದಳು. ದೇವವಾಣಿಯಿಂದ ಆ ಮಗುವಿನ ಮಹತ್ವ ಅರಿತ ಜೋಸೆಫನು ಮೇರಿಯ ಕೈಬಿಡದೆ ಮದುವೆಯಾಗಿ ಅವಳಿಗೆ ಹೆರಿಗೆಯಾಗುವ ತನಕವೂ ಬಹಳ ಜೋಪಾನ ಮಾಡಿದ್ದ.

ಅದೊಂದು ಶುಭ ದಿನ, ಜನಗಣತಿಗಾಗಿ ಜೋಸೆಫ್-ಮೇರಿ ಜೊತೆಯಾಗಿ ಬೆತ್ಲೆ ಹೇಮ್‌ಗೆ ಹೋಗಿದ್ದಾಗ ಅಲ್ಲಿ ಮೇರಿ ಮಾತೆಯಾಗಿ, ಕುರಿಕೊಟ್ಟಿಗೆಯಲ್ಲಿ ಜಗದ ಬೆಳಕಾದ ಯೇಸುಕ್ರಿಸ್ತನಿಗೆ ಜನ್ಮ ನೀಡಿದ್ದಳು. ಆಗ ಒಂದು ಕ್ಷಣ ಇಡೀ ಬೆತ್ಲೆಹೇಮ್ ನಗರದಲ್ಲಿ ಮಿಂಚು ಹೊಳೆದಂತಹ ಅನುಭವವಾಗಿತ್ತಂತೆ.

ಒಳ್ಳೆಯದಕ್ಕೆ ಸಿಕ್ಕಿದ್ದು ಶಿಕ್ಷೆ ಮಾತ್ರ:

ಯೇಸು ಮೂಲತಃ ಒಬ್ಬ ಯಹೂದಿ. ಪ್ಯಾಲೆಸ್ಟೈನ್ ದೇಶ ಅಂದರೆ ಈಗಿನ ಇಸ್ರೇಲ್ ಅವನ ಮೂಲನೆಲೆ. ಯೇಸು ಜನಿಸಿದ ಆ ಕಾಲದಲ್ಲಿ ಪ್ಯಾಲೆಸ್ಟೈನ್ ದೇಶದ ಬದುಕು ಸಂಪೂರ್ಣ ಯಹೂದಿ ಸಂಸ್ಕೃತಿಯದ್ದಾಗಿತ್ತು. ಮಾನವ ಕುಲಕ್ಕೆ ಮಾರಕವಾದ ಕಂದಾಚಾರ, ಮೂಢನಂಬಿಕೆಯಂತಹ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ಸರ್ವರ ಉದ್ಧಾರದ ಸಮಾಜ ನಿರ್ಮಿಸುವತ್ತ ಯೇಸು ನಡೆದ. ಆನೆ ನಡೆದದ್ದೇ ಹಾದಿ ಎಂಬಂತಹ ದಿಟ್ಟ ಹೆಜ್ಜೆಗಳು ಅವನದು. ಸಕಲರಿಗೂ ಲೇಸನ್ನು ಬಯಸುವ ಮಾನವೀಯತೆಯ ತಳಹದಿಯಲ್ಲಿ ಅವನು ಕ್ರೈಸ್ತ ಧರ್ಮವನ್ನು ಸ್ಥಾಪಿಸಿದ. ಇದೇ ಯೇಸುವಿಗೆ ಮುಳುವಾದದ್ದು. ಒಳ್ಳೆಯದನ್ನು ಮಾಡಲು ಹೋಗಿ ಕೆಟ್ಟವರ ಕೆಂಗಣ್ಣಿಗೆ ಯೇಸು ಗುರಿಯಾದದ್ದಷ್ಟೇ ಅಲ್ಲ ಬಹು ಮುಖ್ಯವಾಗಿ ಯಹೂದಿ ಪುರೋಹಿತಷಾಹಿಗಳನ್ನು ವಿರೋಧ ಕಟ್ಟಿಕೊಂಡ. ಯಹೂದಿ ಧರ್ಮಗುರುಗಳಿಗಂತೂ ಯೇಸು ಬೇಡವೇ ಬೇಡವಾಗಿದ್ದ. ಪರಿಣಾಮ ರಾಜದ್ರೋಹದ ಆಪಾದನೆ ಇವನ ಹೆಗಲೇರಿತ್ತು. ಇದರಿಂದಾಗಿ ನ್ಯಾಯ, ನೀತಿ, ಧರ್ಮ, ಸತ್ಯ, ನಿಷ್ಠೆ, ಪ್ರಾಮಾಣಿಕತೆ, ತ್ಯಾಗಗಳ ಸಂಗಮವೇ ಆಗಿ ಮನುಷ್ಯತ್ವದ ಮೇರು ಪರ್ವವೇ ಆಗಿದ್ದ ಇಂಥ ದೈವೀಕ ಪುರುಷ ಯೇಸುವನ್ನು ಕಠಿಣ ಚಿತ್ರಹಿಂಸೆಗೊಳಪಡಿಸಿ ದೇಶಾಧಿಕಾರಿ ಪಿಲಾತನು ಮರಣದಂಡನೆಯ ಶಿಲುಬೆಗೇರಿಸಿದ. ಆದರೆ, ಯೇಸು ಶಿಲುಬೆಗೇರಿದ ಮೂರನೆಯ ದಿನ ಪುನರುತ್ಥಾನಗೊಂಡು ತನ್ನ ಆಪ್ತೇಷ್ಟರನೇಕರಿಗೆ ದರ್ಶನ ಕೊಟ್ಟರು. ಆಮೇಲೆ ನಲವತ್ತು ದಿನ ತಮ್ಮ ಶಿಷ್ಯಕೋಟಿಯ ಜೊತೆಯಲ್ಲಿದ್ದು ಅವರ ಸಮ್ಮುಖದಲ್ಲೇ ಒಂದು ದಿನ ಸ್ವರ್ಗದತ್ತ ಪಯಣ ಬೆಳೆಸಿದರು.

PREV
Read more Articles on

Recommended Stories

ಆದರ್ಶ ರಾಜಕಾರಣದ ಭಾರತ ರತ್ನ-ಭಾರತದ ಅಭಿವೃದ್ಧಿ ರಥಕ್ಕೆ ರಾಜಮಾರ್ಗ ನಿರ್ಮಿಸಿದ ಅಜಾತಶತ್ರು
ವೇಗಕ್ಕೆ ದಕ್ಕುವ ಸ್ಟೈಲಿಶ್ ಸ್ಕೂಟರ್‌ ಟಿವಿಎಸ್‌ ಎನ್‌ಟಾರ್ಕ್‌ 150