ಒತ್ತಡ ಮುಕ್ತವಾದಾಗ ಕಲೆಯ ಆಸ್ವಾದನೆ ಸಾಧ್ಯ: ರವಿಶಂಕರ ಗುರೂಜಿ ಅಭಿಪ್ರಾಯ

KannadaprabhaNewsNetwork |  
Published : Jan 27, 2025, 01:45 AM IST
Art of Living | Kannada Prabha

ಸಾರಾಂಶ

ಒತ್ತಡ, ಚಿಂತೆಗಳಿಂದ ಮುಕ್ತವಾದಾಗ ಮಾತ್ರ ಕಲೆಯನ್ನು ಆಸ್ವಾದಿಸಲು ಸಾಧ್ಯ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಒತ್ತಡ, ಚಿಂತೆಗಳಿಂದ ಮುಕ್ತವಾದಾಗ ಮಾತ್ರ ಕಲೆಯನ್ನು ಆಸ್ವಾದಿಸಲು ಸಾಧ್ಯ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟರು.

ಆರ್ಟ್‌ ಆಫ್‌ ಲಿವಿಂಗ್‌ನ ಕಲಾ ಮತ್ತು ಸಾಂಸ್ಕೃತಿಕ ವಿಶ್ವ ವೇದಿಕೆಯು ಭಾನುವಾರ ಕನಕಪುರ ರಸ್ತೆಯ ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ‘ಭಾವ್‌’ ಸಾಂಸ್ಕೃತಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಳ್ಳೆಯ ರಸಿಕರಾಗುವುದೂ ಸಹ ಒಂದು ಕಲೆಯೇ. ಒತ್ತಡಗಳು, ಚಿಂತೆಗಳಿಂದ ಮುಕ್ತವಾದಾಗ ಮಾತ್ರ ಕಲೆಯನ್ನು ಮೆಚ್ಚಲು ಸಾಧ್ಯ. ಯಾವುದೇ ಕಲೆಯಲ್ಲಿ ತಲ್ಲೀನವಾದಾಗ ಮನಸ್ಸು ಹಾಗೆಯೇ ಪ್ರಶಾಂತವಾಗುತ್ತದೆ. ಈ ನಾಲ್ಕು ದಿನಗಳ ಸಾಂಸ್ಕೃತಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ ಕಲಾವಿದರು, ಅತಿಥಿಗಳು ಸೇರಿದಂತೆ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

ವೇದಿಕೆಯ ನಿರ್ದೇಶಕಿ ವಿದ್ಯಾ ವರ್ಚಸ್ವಿ ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು, ಗುರುದೇವರ ದೃಷ್ಟಿಕೋನದಂತೆ ಎಲ್ಲಾ ಜಾತಿ, ಧರ್ಮ, ಪಂಥ, ವಯಸ್ಸು, ವಿವಿಧ ಅಭಾಪ್ರಾಯ, ಆಸಕ್ತಿಯುಳ್ಳ ಎಲ್ಲ ಜನರನ್ನೂ ಒಂದೆಡೆ ಸೇರಿಸಿ ನಾವೆಲ್ಲರೂ ಒಂದೇ ಎಂದು ಸಂಭ್ರಮಿಸುವುದನ್ನು ತೋರಿಸಿದೆ ಎಂದು ವಿವರಿಸಿದರು.

ಹಲವು ರಾಜ್ಯಗಳ ಕಲಾವಿದರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ಷೇಕ್ಷಕರ ಮನಸೂರೆಗೊಂಡವು. ಇದೇ ಸಂದರ್ಭದಲ್ಲಿ ಹಲವು ಸಾಧಕರನ್ನು ಗೌರವಿಸಲಾಯಿತು.

ಹಲವು ರಾಜ್ಯಗಳ ಕಲೆ ಅನಾವರಣ: ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಆಯೋಜಿಸಿದ್ದ 4 ದಿನಗಳ ‘ಭಾವ್‌’ ಸಾಂಸ್ಕೃತಿಕ ಸಮ್ಮೇಳನಕ್ಕೆ ಭಾನುವಾರ ತೆರೆಬಿತ್ತು. ದೇಶೀಯ ಕಲೆ-ಸಂಸ್ಕೃತಿಯ ಸಮ್ಮಿಳನವಾಗಿದ್ದ ಈ ಕಾರ್ಯಕ್ರಮದಲ್ಲಿ ಹಲವು ರಾಜ್ಯಗಳ ಪ್ರಖ್ಯಾತ ಕಲಾವಿದರು ಪಾಲ್ಗೊಂಡು ಕಾರ್ಯಕ್ರಮ ನಡೆಸಿಕೊಟ್ಟರು. ಗುರುವಾರ ಸಮ್ಮೇಳನಕ್ಕೆ ಚಾಲನೆ ನೀಡಲಾಗಿತ್ತು. 4 ದಿನದ ಕಾರ್ಯಕ್ರಮಗಳಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರಸಿಂಗ್ ಶೇಖಾವತ್, ಸಂಸದ ತೇಜಸ್ವಿ ಸೂರ್ಯ, ಪದ್ಮಶ್ರೀ ಪುರಸ್ಕೃತ ಕಲಾವಿದೆ ಮಂಜಮ್ಮ ಜೋಗತಿ, ಕುಚುಪುಡಿ ಕಲಾವಿದೆ ಸುನಂದಾ ದೇವಿ, ಯಕ್ಷಗಾನ ಕಲಾವಿದ ಬನ್ನಂಜೆ ಸುವರ್ಣ, ಮೃದಂಗ ವಿದ್ವಾನ್ ಎ.ವಿ.ಆನಂದ್ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಲಾವಿದರೂ ಸ್ವಲ್ಪ ಸಮಯವನ್ನು ಮೀಸಲಿಟ್ಟು, ‘ಸುದರ್ಶನ ಕ್ರಿಯೆ’ಯನ್ನು ಕಲಿತಿದ್ದು ವಿಶೇಷವಾಗಿತ್ತು. ಅತಿ ದೊಡ್ಡ ನೇರ ಕಲಾ ಪ್ರದರ್ಶನವಾದ ‘ಸೀತಾ ಚರಿತಂ’ನಲ್ಲಿ 500 ಕಲಾವಿದರು ಭಾಗವಹಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಹಳದಿ ಮಾರ್ಗ ಮೆಟ್ರೋಗೆ ಆ.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ