ಪ್ರವಾದಿ ಮುಹಮ್ಮದ್(ಸ)ರು ಮಾನವನ ಸುಂದರ ಬದುಕಿಗಾಗಿ ಮೌಲ್ಯಗಳಿಂದ ಕೂಡಿದ ಪವಿತ್ರ ಖುರಾನ್ ಅನ್ನು ಸೃಷ್ಟಿಕರ್ತನ ಅನುಗ್ರಹದಿಂದ ನಮಗೆ ದಯಪಾಲಿಸಿದ್ದಾರೆ. ಆ ಮೌಲ್ಯಗಳನ್ನು ಹಬ್ಬ-ಆಚರಣೆಗಳ ಮೂಲಕ ಇಸ್ಲಾಂ ಅನುಯಾಯಿಗಳಿಗೆ ತಿಳಿಸಲಾಗುತ್ತದೆ. ಅಂತಹ ಆಚರಣೆಯಲ್ಲಿ ರಂಜಾನ್ ಹಬ್ಬ ಅತ್ಯಂತ ಪವಿತ್ರವಾದುದ್ದಾಗಿದೆ.
-ಡಿ.ಶಬ್ರಿನಾ ಮಹಮದ್ ಅಲಿ, ಚಳ್ಳಕೆರೆ
ಬುದ್ಧಿಜೀವಿ ಮಾನವನ ಬದುಕಿಗೆ ಸತ್ಯ, ಶಾಂತಿ, ತ್ಯಾಗ, ಪ್ರೀತಿ, ವಿಶ್ವಾಸ, ಸ್ನೇಹ, ಕರುಣೆ, ಮಮತೆ, ಸಹಬಾಳ್ವೆ,
ನಿಸ್ವಾರ್ಥ, ಸಮಾನತೆ ಈ ಮೌಲ್ಯಗಳೇ ಜೀವಾಳ! ಪ್ರಿಯ ಓದುಗರೇ, ಇತಿಹಾಸದಲ್ಲಿನ ಎಲ್ಲಾ ಪ್ರವಾದಿಗಳು, ದಾರ್ಶನಿಕರು, ಸಂತರು, ಶರಣರು ಸಾರಿದ್ದು ಬದುಕಿನ ಇದೇ ಮೌಲ್ಯಗಳನ್ನು ಎಂಬುದು ನಾವೆಲ್ಲರೂ ಒಪ್ಪಲೇಬೇಕಾದ ಸಂಗತಿ. ಈ ನಿಟ್ಟಿನಲ್ಲಿ ಪ್ರವಾದಿ ಮುಹಮ್ಮದ್(ಸ)ರು ಮಾನವನ ಸುಂದರ ಬದುಕಿಗಾಗಿ ಮೌಲ್ಯಗಳಿಂದ ಕೂಡಿದ ಪವಿತ್ರ ಖುರಾನ್ ಅನ್ನು ಸೃಷ್ಟಿಕರ್ತನ ಅನುಗ್ರಹದಿಂದ ನಮಗೆ ದಯಪಾಲಿಸಿದ್ದಾರೆ. ಆ ಮೌಲ್ಯಗಳನ್ನು ಹಬ್ಬ-ಆಚರಣೆಗಳ ಮೂಲಕ ಇಸ್ಲಾಂ ಅನುಯಾಯಿಗಳಿಗೆ ತಿಳಿಸಲಾಗುತ್ತದೆ. ಅಂತಹ ಆಚರಣೆಯಲ್ಲಿ ರಂಜಾನ್ ಹಬ್ಬ ಅತ್ಯಂತ ಪವಿತ್ರವಾದುದ್ದಾಗಿದೆ.
ಈದ್-ಎ-ರಂಜಾನ್, ಕುತಬ್-ಎ-ರಂಜಾನ್, ಈದುಲ್ ಫಿತರ್ ಮೊದಲಾದ ಹೆಸರುಗಳಿಂದ ಪ್ರಸಿದ್ಧವಾದ ರಂಜಾನ್ ಹಬ್ಬವು ಮುಸ್ಲಿಮರ ದೊಡ್ಡ ಹಬ್ಬವಾಗಿದ್ದು, ಹಿಜರಿ ಶಕೆಯ ಒಂಬತ್ತನೇ ತಿಂಗಳು ರಂಜಾನ್ ಆಗಿದೆ. ಈ ತಿಂಗಳಲ್ಲಿ ಮುಸ್ಲಿಮರು ಮುಂಜಾನೆಯಿಂದ ಸಂಜೆಯವರೆಗೆ ಉಪವಾಸ ಮಾಡುತ್ತಾರೆ. ಈ ತಿಂಗಳಲ್ಲಿ ದೈನಂದಿನ ಉಪವಾಸವನ್ನು ಆಚರಿಸುವುದು ಇಸ್ಲಾಂನ ಐದು ಸ್ತಂಭಗಳಲ್ಲಿ ಒಂದಾಗಿದೆ.
ರಂಜಾನ್ ಹಬ್ಬದ ಪ್ರಮುಖ ಆಚರಣೆಗಳು:
೧)ಉಪವಾಸ:
ರಂಜಾನ್ ತಿಂಗಳಲ್ಲಿ ಮುಸ್ಲಿಮರು ಸೂರ್ಯೋದಯ (ಫಜ್ರ್) ದಿಂದ ಸೂರ್ಯಾಸ್ತದವರೆಗೆ (ಮಗ್ರಿಬ್) ಆಹಾರ ಮತ್ತು ಪಾನೀಯಗಳನ್ನು ತ್ಯಜಿಸಿ ಉಪವಾಸ ಆಚರಿಸುತ್ತಾರೆ, ಆದರೆ ರಾತ್ರಿಯ ಸಮಯದಲ್ಲಿ ತಿನ್ನಲು ಮತ್ತು ಕುಡಿಯಲು ಅನುಮತಿಸಲಾಗಿದೆ. ‘ಬೆಳಗಿನ ರಾತ್ರಿಯ ಕತ್ತಲೆಯ ದಾರದಿಂದ ಬೆಳಕಿನ ಬಿಳಿ ದಾರವು ಪ್ರತ್ಯೇಕಿಸಲ್ಪಡುವವರೆಗೆ’ (2:187) ಮಾತ್ರ ತಿನ್ನುವುದು ಮತ್ತು ಕುಡಿಯುವುದನ್ನು ಅನುಮತಿಸಲಾಗಿದೆ ಎಂದು ಪವಿತ್ರ ಖುರಾನ್ ಸೂಚಿಸುತ್ತದೆ.
ಈ ಉಪವಾಸದಲ್ಲಿ ಸಹ್ರಿ ಮತ್ತು ಇಫ್ತಾರ್ ಎಂಬ ಎರಡು ಹಂತಗಳಿವೆ.
ಸೆಹ್ರಿ (ಅಥವಾ ಸುಹೂರ್) ಎಂಬುದು ದಿನದ ಉಪವಾಸ ಪ್ರಾರಂಭವಾಗುವ ಮೊದಲು ಬೆಳಗಿನ ಜಾವದ ಭೋಜನವಾಗಿದೆ.
ಇಫ್ತಾರ್ ಎಂದರೆ ಸೂರ್ಯಾಸ್ತದ ನಂತರ ಉಪವಾಸ ಮುರಿಯಲು ಸೇವಿಸುವ ಊಟ, ಸಾಂಪ್ರದಾಯಿಕವಾಗಿ ಇದು ಖರ್ಜೂರದಿಂದ ಪ್ರಾರಂಭವಾಗುತ್ತದೆ.
ಉಪವಾಸ ಮುರಿಯಲು ಖರ್ಜೂರವೇ ಏಕೆ?:
ದಿನವಿಡೀ ಖಾಲಿ ಹೊಟ್ಟೆಯಿಂದ ಇರುವವರು ಒಮ್ಮೆಲೆ ಸಿಕ್ಕಿದ್ದೆಲ್ಲ ತಿಂದರೆ ಅಜೀರ್ಣ ಹಾಗೂ ಆಸಿಡಿಟಿ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಖರ್ಜೂರ ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಯಾವುದೇ ರೀತಿಯ ಆರೋಗ್ಯ ಸಮಸ್ಯೆಯನ್ನು ನೀಡದೆಯೇ ದೇಹಕ್ಕೆ ಹೆಚ್ಚಿನ ಶಕ್ತಿ ಕೊಡುತ್ತದೆ. ಆದ್ದರಿಂದ ಮುಸ್ಲಿಮರು ಖರ್ಜೂರ ಸೇವಿಸುವ ಮೂಲಕ ರಂಜಾನ್ ಉಪವಾಸ ಮುರಿಯುತ್ತಾರೆ.
ರಂಜಾನ್ ಉಪವಾಸದಿಂದ ಇವರಿಗೆ ವಿನಾಯಿತಿ:
ರಂಜಾನ್‌ನ ಉಪವಾಸ ಎಲ್ಲಾ ವಯಸ್ಕರಿಗೆ ಮತ್ತು ಆರೋಗ್ಯವಂತರಿಗೆ ಕಡ್ಡಾಯವಾಗಿದೆ. ಗರ್ಭಿಣಿಯರು, ಮಾನಸಿಕ ಸ್ಥಿಮಿತವಿಲ್ಲದಿರುವವರು, ದೈಹಿಕವಾಗಿ ಉಪವಾಸವಿರಲು ಅಸಮರ್ಥರಾಗಿರುವವರು, ಬಾಣಂತಿಯರಿಗೆ ವಿನಾಯಿತಿ ಇದೆ. ಇನ್ನೂ ಪ್ರೌಢಾವಸ್ಥೆಯನ್ನು ತಲುಪಿಲ್ಲದ ಮಕ್ಕಳಿಗೂ ಉಪವಾಸ ಕಡ್ಡಾಯವಲ್ಲ. ಕಾಯಿಲೆಯಿಂದ ಬಳಲುತ್ತಿರುವವರು, ಪ್ರಯಾಣದಲ್ಲಿರುವವರು ಹಾಗೂ ತಿಂಗಳ ರಜಾದಿನಗಳಲ್ಲಿರುವ ಮಹಿಳೆಯರಿಗೆ ಆ ದಿನಗಳಲ್ಲಿ ಉಪವಾಸ ನಿರ್ವಹಿಸಲು ಅಸಾಧ್ಯವಾದುದರಿಂದ ಈದ್ ದಿನದ ನಂತರದ ಯಾವುದೇ ಸೂಕ್ತವಾದ ದಿನಗಳಲ್ಲಿ ಇದನ್ನು ನಿರ್ವಹಿಸುವುದು ಕಡ್ಡಾಯವಾಗಿದೆ.
೨)ಖುರಾನ್ ಪಠಣ:
ಇಸ್ಲಾಂ ಕ್ಯಾಲೆಂಡರ್‌ನಲ್ಲಿ ರಂಜಾನ್ ಮಾಸಕ್ಕೇಕೆ ಎಷ್ಟು ಮಹತ್ವ ನೀಡಲಾಗಿದೆ ಎಂದರೆ ಪವಿತ್ರವಾದ ಕುರಾನ್ ಅಲ್ಲಾಹನಿಂದ ಪ್ರವಾದಿ ಮೊಹಮ್ಮದರ ಮೂಲಕ ಭೂಮಿಗೆ ಅವತೀರ್ಣಗೊಳ್ಳಲು ಪೂರ್ಣವಾಗಿ ಇಪ್ಪತ್ತಮೂರು ವರ್ಷಗಳು ಬೇಕಾಯಿತು. ಅದರ ಪ್ರಪ್ರಥಮ ವಾಕ್ಯಗಳು ಈ ತಿಂಗಳಲ್ಲಿಯೇ ಅವತೀರ್ಣಗೊಂಡಿದುದರಿಂದ ರಂಜಾನ್ ಮಾಸಕ್ಕೆ ಅತಿಹೆಚ್ಚಿನ ಮಹತ್ವವಿದೆ. ರಂಜಾನ್ ತಿಂಗಳಲ್ಲಿ ಯಾವ ರಾತ್ರಿಯಂದು ಪ್ರಥಮ ವಾಕ್ಯಗಳು ಅವತೀರ್ಣಗೊಂಡವೋ ಅದಕ್ಕೆ ‘ಲೈಲತುಲ್ ಕದ್ರ್’ (ಶಕ್ತಿರಾತ್ರಿ) ಎಂದು ಕರೆಯುತ್ತಾರೆ. ಈ ರಾತ್ರಿ ಯಾವುದೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ರಂಜಾನ್ ತಿಂಗಳ 21, 23, 25, 27, 29ನೇ ದಿನಾಂಕದಂದು ಅಂದರೆ ಕೊನೆಯ ಹತ್ತುದಿನಗಳ ಬೆಸಸಂಖ್ಯೆಗಳ ದಿನಗಳ ಮುನ್ನಾ ರಾತ್ರಿ ಲೈಲತುಲ್ ಕದ್ರ್ ಆಗಿರಬಹುದು. ಇದರಲ್ಲಿ 27ನೇ ದಿನದ ಮುನ್ನಾರಾತ್ರಿ (ಅಂದರೆ 26ನೇ ದಿನದ ರಾತ್ರಿ) ಹೆಚ್ಚು ಸಂಭವನೀಯ ಎಂದು ಹೆಚ್ಚಿನವರು ನಂಬುತ್ತಾರೆ. ಈ ರಾತ್ರಿಯಲ್ಲಿ ನಡೆಸಿದ ಪ್ರಾರ್ಥನೆಗಳು ಉಳಿದ ಸಮಯದ ಪ್ರಾರ್ಥನೆಗಿಂತ ಸಾವಿರಾರು ಪಟ್ಟು ಹೆಚ್ಚು ಫಲಪ್ರದ ಎಂದು ಹೇಳಲಾಗಿದೆ.
೩)ಜಕಾತ್(ದಾನ/ಫಿತ್ರಾ)
ಮಾನವ ಬದುಕಿನ ತಲ್ಲಣಗಳಲ್ಲಿ ಹಸಿವು, ಬಡತನ, ಅಸಮಾನತೆಗಳು ಪ್ರಮುಖವಾಗಿವೆ. ಅದನ್ನರಿತ ಪ್ರವಾದಿಯವರು ಅವುಗಳನ್ನು ನಿರ್ಮೂಲನೆ ಮಾಡುವ ಸಲುವಾಗಿ ಜಕಾತ್ ಪರಿಕಲ್ಪನೆ ನೀಡಿ ಮಹಾಮಾನವತವಾದಿಯಾಗಿದ್ದಾರೆ.
ರಂಜಾನ್ ಹಬ್ಬ ‘ದಾನದ ಹಬ್ಬ’ವೆಂದೇ ಪ್ರಸಿದ್ಧವಾಗಿದೆ. ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದು ಅರಿತ ಧಾರ್ಮಿಕ ವ್ಯಕ್ತಿಯು ಬಡವನಿಗೆ, ಹಸಿದವನಿಗೆ ದಾನದ ಮೂಲಕ ಸಹಾಯ ಮಾಡುತ್ತಾನೆ. ಇಸ್ಲಾಂ ಶ್ರೀಮಂತನನ್ನು ದಾನ ನೀಡುವುದಕ್ಕೆ ಪ್ರೇರೇಪಿಸುತ್ತದೆ. ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಕಡ್ಡಾಯ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ದಾನದ ಉದ್ದೇಶ.
೪)ಆತ್ಮಾವಲೋಕನ:
ರಂಜಾನ್ ತಿಂಗಳ ರೋಜಾ ಅವಧಿಯಲ್ಲಿ ಕೇವಲ ಅನ್ನಾಹಾರಗಳನ್ನು ತ್ಯಜಿಸುವುದು ಮಾತ್ರ ಉಪವಾಸವಲ್ಲ. ಮೂಲತಃ ಮನಸ್ಸಿನಲ್ಲಿ ಅನ್ನಾಹಾರದ ಸಹಿತ ಯಾವುದೇ ಬಯಕೆಗಳನ್ನು ಹೊಂದದಿರುವುದು, ಸುಳ್ಳು ಆಡದಿರುವುದು, ಕೆಟ್ಟದ್ದನ್ನು ಯೋಚಿಸದಿರುವುದು, ಲೈಂಗಿಕ ಕಾಮನೆಗಳನ್ನು ಕೆರಳಿಸದಿರುವುದು, ಚಾಡಿ ಹೇಳದಿರುವುದು ಮೊದಲಾದವುಗಳಿಂದ ಮನಸ್ಸನ್ನು ನಿಗ್ರಹಿಸುವುದು ಕಡ್ಡಾಯವಾಗಿದೆ. ಅಷ್ಟೇ ಏಕೆ, ಸುವಾಸನೆಯನ್ನು ಅಘ್ರಾಣಿಸುವುದು, ರುಚಿ ನೋಡುವುದು ಮತ್ತು ಉಗುಳು ನುಂಗುವುದನ್ನೂ ರೋಜಾ ಅವಧಿಯಲ್ಲಿ ನಿಷೇಧಿಸಲಾಗಿದೆ.
೫)ಈದ್ ಉಲ್ ಫಿತರ್:
ಇದು ರಂಜಾನಿನ ನಂತರದ ತಿಂಗಳಾದ ಶವ್ವಾಲ್ ಒಂದಕ್ಕೆ ಆಚರಿಸಲಾಗುತ್ತದೆ. ಅಂದು ಉಪವಾಸವಿಡುವಂತಿಲ್ಲ. ಪ್ರಾಥಃ ಬೇಗನೇ ಎದ್ದು ಸ್ನಾನ ಮಾಡಿ ಹೊಸ/ ಉತ್ತಮ ಬಟ್ಟೆಯನ್ನು ಧರಿಸಿ ನಮಾಜ್ಹಿನ ನಂತರ ಅಲ್ಲಾಹನ ಹಿರಿಮೆ ಮಹಿಮೆ ಉಚ್ಚ ಸ್ವರದಲ್ಲಿ ಹೇಳುತ್ತಾ ಮನೆಗೆ ಬಂದು ಏನಾದರು ತುಸು ತಿಂದು ಮತ್ತೆ ಈದ್ಗಾಹ್ ಮೈದಾನಿನಲ್ಲಿ ಎಲ್ಲರೂ ಸೇರಿ ಹಬ್ಬದ ನಮಾಝ್ ನೆರವೇರಿಸಲಾಗುತ್ತದೆ. ಮಸೀದಿಗೆ ಹೋಗುವಾಗ ಅಲ್ಲಿ ನಮಾಜ್ಹ್ ಪ್ರಾರಂಭವಾಗುವವರೆಗೂ ದೇವನ ಮಹಾನತೆಯನ್ನು ಹೊಗಳುತ್ತಾ ಕೃತಜ್ಞತೆ ಸಲ್ಲಿಸಲಾಗುತ್ತದೆ. ನಮಾಜ್ಹಿನ ನಂತರ ಜನರಿಗೆ ಉಪವಾಸದ ಈ ತಿಂಗಳಲ್ಲಿ ಗಳಿಸಿದ ಪುಣ್ಯ ಫಲವನ್ನು ಮತ್ತು ಆ ಪಡೆದ ತರಬೇತಿಯನ್ನು ಹಾಳು ಗೆಡಹದಂತೆ ಮುಂಬರುವ ಹನ್ನೊಂದು ತಿಂಗಳಿಗಾಗಿ ಜಾಗೃತರಾಗಿ ದೇವಾದೇಶಗಳನ್ನು ಪಾಲಿಸುತ್ತಾ ಜೀವಿಸಲು ಪ್ರವಚನವನ್ನು ನೀಡಲಾಗುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ನಮಾಜ್ ಮಾಡುವ ಮೂಲಕ ದೇವನಿಗೆ ಕೃತಜ್ಞತೆ ಸಲ್ಲಿಸುವುದು, ಉಪವಾಸದ ಮೂಲಕ ಬಡವರ ನಿರ್ಗತಿಕರ ಸಂಕಷ್ಟಗಳನ್ನು ಅರಿತು ಅವರ ಹಸಿವು ನೀಗುವಿಕೆಗೆ ಸಹಾಯ ಮಾಡುವುದು, ಖುರಾನ್ ಪಠಿಸುವ ಮೂಲಕ ಬದುಕಿನ ಮೌಲ್ಯಗಳನ್ನು ಮನದಲ್ಲಿ ದೃಢೀಕರಿಸಿಕೊಂಡು ಅದರಂತೆ ನಡೆಯುವುದು, ಆತ್ಮಾವಲೋಕನದ ಮೂಲಕ ನಮ್ಮಿಂದಾದ ತಪ್ಪುಗಳನ್ನು ಅರಿತು ಅವುಗಳನ್ನ ಸರಿ ಮಾಡಿಕೊಳ್ಳುವುದು, ಈದ್‌ನ ದಿನ ಪರಸ್ಪರ ಭೇಟಿಯ ಮೂಲಕ ಜನರೊಂದಿಗೆ ಅತ್ಮೀಯ ಭಾಂದವ್ಯ ಬೆಳೆಸುವುದು ರಂಜಾನ್ ತಿಂಗಳ ಪ್ರಮುಖ ಉದ್ದೇಶವಾಗಿದೆ.
ಒಂದು ಹೊಸ ಜೀವನವನ್ನು ಗತಿಸಿ ಹೋದ ಜೀವನಕ್ಕಿಂತ ಉತ್ತಮ ರೀತಿಯಲ್ಲಿ ನಡೆಸುವ ಹಾದಿಯಲ್ಲಿ ಸಾಗುವುದು ಪ್ರತಿಯೊಬ್ಬ ಇಸ್ಲಾಂ ಅನುಯಾಯಿಯ ಕರ್ತವ್ಯವಾಗಿದೆ. ಆದ್ದರಿಂದ, ಪ್ರವಾದಿಯವರು ಸೂಚಿಸಿದ ಸತ್ಯ, ಶಾಂತಿ, ಸನ್ನಡತೆ, ದಾನ, ಕರುಣೆ, ಸಹಬಾಳ್ವೆ ಸಮಾನತೆ ಇನ್ನಿತರ ಈ ಮೌಲ್ಯಗಳೇ ನಮ್ಮ ಬದುಕಿನ ಜಪವಾಗಲಿ; ಮಾನವೀಯತೆ ನಮ್ಮ ಉಸಿರಾಗಲಿ. ಧನ್ಯವಾದಗಳು.
