ಸನ್ನಡತೆ, ಸಂಯಮಕ್ಕೂ ಅಟಲ್‌ ಮಾದರಿ

Published : Dec 25, 2025, 12:17 PM IST
Atal Bihari Vajpayee

ಸಾರಾಂಶ

 ರಾಷ್ಟ್ರೀಯವಾದ ಚಿಂತನೆ ಬೆಳೆಸಿಕೊಂಡು ಸಾಗಿದವರು ವಾಜಪೇಯಿ. ಹುಸಿ ಜಾತ್ಯಾತೀತತೆ ಟೀಕಿಸುತ್ತಿದ್ದರು. ಎಲ್ಲಾ ಜಾತಿ ವರ್ಗವನ್ನು ಒಟ್ಟಿಗೆ ಕರೆದೊಯ್ಯಲು ಪ್ರಯತ್ನಿಸಿದ್ದರು. ಮೊದಲ ಸಲ ಸಂಸತ್‌ ಪ್ರವೇಶದಲ್ಲೇ ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು.ಪ್ರಧಾನಿಯಾಗುವ ಬಗ್ಗೆ ಆಂದೇ ಭವಿಷ್ಯ ನುಡಿದಿದ್ದ ನೆಹರು

-ಆರ್.ಅಶೋಕ, ವಿರೋಧ ಪಕ್ಷದ ನಾಯಕರು

ಸರ್ಕಾರದ ಆಡಳಿತ ಹೇಗಿರಬೇಕು ಎಂಬ ಪ್ರಶ್ನೆ ಬಂದಾಗಲೆಲ್ಲ ನನಗೆ ನೆನಪಾಗುವುದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಅವರು ಅತ್ಯುತ್ತಮ ಆಡಳಿತಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ದಿಟ್ಟ ಆಡಳಿತಗಾರ, ಅಜಾತಶತ್ರು ಹಾಗೂ ಅತ್ಯುತ್ತಮ ಸಂಘಟಕ. ಅದಕ್ಕಿಂತ ಮಿಗಿಲಾಗಿ ಅವರೊಬ್ಬ ಪ್ರತಿಭಾವಂತ ಕವಿ.

‘ರವಿ ಕಾಣದ್ದನ್ನು ಕವಿ ಕಂಡʼ ಎಂಬಂತೆ, ಕವಿ ಹೃದಯದ ವ್ಯಕ್ತಿ ವಾಜಪೇಯಿಯವರಿಗೆ ಬಡಜನರ ಸಂಕಟ, ದೇಶದ ಅಗತ್ಯಗಳೆಲ್ಲವೂ ಸುಲಭವಾಗಿ ಕಾಣಿಸುತ್ತಿತ್ತು. ಅವರು ಇಡೀ ಬದುಕನ್ನು ದೇಶಕ್ಕೆ ಅರ್ಪಿಸಿ, ಯಾವುದೇ ಸದ್ದಿಲ್ಲದೆ ಮೌನವಾಗಿ ಮರೆಯಾಗಿಬಿಟ್ಟರು.

ಪ್ರಧಾನಿ ನರೇಂದ್ರ ಮೋದಿ, ವಾಜಪೇಯಿ ಅವರೊಂದಿಗೆ ರಾಜಕೀಯದ ಪ್ರಯಾಣ ಮಾಡಿದ್ದರು. ಹೋರಾಟಗಳು, ಅಭಿಯಾನ ಹಾಗೂ ಪಕ್ಷದ ಸಂಘಟನಾ ಕಾರ್ಯಗಳಲ್ಲಿ ಮೋದಿ, ವಾಜಪೇಯಿ ಅವರೊಂದಿಗೆ ಸದಾ ಇದ್ದರು. ವಾಜಪೇಯಿಯವರ ಜನ್ಮದಿನದಂದು 2014 ರಿಂದ ʼಉತ್ತಮ ಆಡಳಿತ ದಿನದʼ ಆಚರಣೆಯನ್ನು ಪ್ರಧಾನಿ ಮೋದಿ ಜಾರಿ ಮಾಡಿದರು.

ಆಡಳಿತ ಸ್ಮರಣೆ ದಿನ:

ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಉತ್ತಮ ಆಡಳಿತ ದಿನ ಆಚರಿರಿಕೊಂಡು ಬರಲಾಗುತ್ತಿದೆ. ಈ ದಿನ ಅವರ ಆಡಳಿತವನ್ನು ಮತ್ತೆ ಸ್ಮರಿಸುವ ದಿನ. ವಾಜಪೇಯಿ ವಿದ್ಯಾರ್ಥಿಯಾಗಿದ್ದಾಗಲೇ ರಾಷ್ಟ್ರೀಯವಾದದ ಚಿಂತನೆಯನ್ನು ಬೆಳೆಸಿಕೊಂಡರು. ಅವರ ರಾಜಕೀಯವು ರಾಷ್ಟ್ರೀಯವಾದದ ತಳಹದಿ ಹೊಂದಿತ್ತು. ಆಗಿನ ಕಾಲದಲ್ಲೇ ಕಾಂಗ್ರೆಸ್ ಹುಸಿ ಜಾತ್ಯತೀತವಾದವನ್ನು ಹರಡುತಿತ್ತು. ಅದನ್ನು ವಾಜಪೇಯಿ ನೇರವಾಗಿ ಟೀಕಿಸುತ್ತಿದ್ದರು. ಎಲ್ಲ ಜಾತಿ, ಧರ್ಮಗಳ ಜನರನ್ನು ಒಂದಾಗಿ ಕರೆದೊಯ್ಯುವ ಅವರ ವಿಶಾಲ ಮನೋಭಾವದಿಂದಾಗಿ, ಹೊಸ ರಾಜಕಾರಣ ಬರಲಿದೆ ಎಂಬ ನಿರೀಕ್ಷೆ ಯುವಜನರಲ್ಲಿ ಬೆಳೆದಿತ್ತು.

ಆರಂಭದಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದ ಅವರು, ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಜನಸಂಘದಲ್ಲಿ ಕಾರ್ಯನಿರ್ವಹಿಸಿದರು. ನಂತರ ಜನಸಂಘ ಸೇರಿ ರಾಜಕೀಯ ಪ್ರವೇಶಿಸಿದರು. ಜನಸಂಘವು ಬಿಜೆಪಿಯಾಗಿ ಬದಲಾಗಿ ಬಲಿಷ್ಠ ರಾಷ್ಟ್ರೀಯ ಪಕ್ಷ ಹೆಮ್ಮರವಾಗಿ ಬೆಳೆಯಲು ಅವರು ಶ್ರಮಿಸಿದ್ದರು. ಬ್ರಿಟಿಷರ ವಿರುದ್ಧದ ಭಾರತ ಬಿಟ್ಟು ತೊಲಗಿ ಚಳವಳಿಯಿಂದ ಆರಂಭವಾದ ಅವರ ಹೋರಾಟ ನಿರಂತರವಾಗಿ ಮುಂದುವರಿಯಿತು. ಮಾಜಿ ಪ್ರಧಾನಿ ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ, ಮನೆ, ವೈಯಕ್ತಿಕ ಬದುಕನ್ನು ಬಿಟ್ಟು ಪ್ರತಿಭಟನೆಗಿಳಿದು ಜೈಲು ಸೇರಿದ್ದರು.

1957 ರಲ್ಲಿ ವಾಜಪೇಯಿ ಮೊದಲ ಬಾರಿ ಲೋಕಸಭೆಗೆ ಹೋದಾಗ ತಮ್ಮವಾಕ್ ಚಾತುರ್ಯದಿಂದ ಎಲ್ಲರನ್ನೂ ಬೆರಗಾಗಿಸಿದರು. ಪಂಡಿತ್‌ ಜವಹರಲಾಲ್ ನೆಹರು ಕೂಡ ಅವರನ್ನು ಮೆಚ್ಚಿಕೊಂಡು, ‘ಮುಂದೊಂದು ದಿನ ನೀನು ಪ್ರಧಾನಿಯಾಗುತ್ತೀಯಾ’ ಎಂದು ಹೇಳಿದ್ದರು!ಎರಡು ಬಾರಿ ಅನಿರ್ದಿಷ್ಟವಾಧಿಯ ನಂತರ 1999 ರಲ್ಲಿ ವಾಜಪೇಯಿ ಪ್ರಧಾನಿಯಾಗಿ ಐದು ವರ್ಷ ಆಡಳಿತ ನಡೆಸಿ, ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಮೈಲುಗಲ್ಲು ಸ್ಥಾಪಿಸಿದರು. ಅವರ ಅವಧಿಯಲ್ಲಿ ಭಾರತ ಹಿಂದೆಂದಿಗಿಂತಲೂ ಅದ್ಭುತವಾಗಿ ಪ್ರಕಾಶಿಸಿತ್ತು.

ವಿಪಕ್ಷ ಸಮರ್ಥ ನಾಯಕ :

ವಾಜಪೇಯಿಯವರನ್ನು ಎಲ್ಲರೂ ಅಪ್ರತಿಮ ಪ್ರಧಾನಿ ಎಂದೇ ಕೊಂಡಾಡುತ್ತಾರೆ. ಅವರು ಪ್ರಧಾನಿಯಾಗಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವನ್ನಾಗಿ ಪರಿವರ್ತಿಸಿದ್ದರು. ಹಾಗೆಯೇ ಅವರೊಬ್ಬ ಅತ್ಯುತ್ತಮ ಪ್ರತಿಪಕ್ಷ ನಾಯಕರಾಗಿದ್ದರು. ಉತ್ತಮ ಆಡಳಿತದ ಮಾದರಿಯನ್ನು ಹಾಕಿಕೊಡುವುದರ ಜೊತೆಗೆ, ವಿಪಕ್ಷದ ನಾಯಕನಾಗಿ ಹೇಗೆ ಕೆಲಸ ಮಾಡಬೇಕೆಂಬ ಬಗ್ಗೆಯೂ ಇತರರಿಗೆ ಮಾದರಿಯಾಗಿದ್ದರು. ಗೆದ್ದಾಗ ಎಲ್ಲರೂ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಾರೆ. ಆದರೆ ಸೋತಾಗ ಜವಾಬ್ದಾರಿಯುತ ವಿಪಕ್ಷವಾಗಿ ಹೇಗಿರಬೇಕು ಎಂಬುದನ್ನು ವಾಜಪೇಯಿ ಹೇಳಿಕೊಟ್ಟಿದ್ದರು.

ತಮ್ಮ 50 ವರ್ಷಗಳ ಸುದೀರ್ಘ ರಾಜಕೀಯದಲ್ಲಿ ವಾಜಪೇಯಿ ಹತ್ತು ಬಾರಿ ಲೋಕಸಭೆಗೆ, ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 50 ವರ್ಷಗಳಲ್ಲಿ ಅವರು ಅಧಿಕಾರದಲ್ಲಿದ್ದಿದ್ದು ಏಳೆಂಟು ವರ್ಷಗಳು ಮಾತ್ರ. 1977-79 ರವರೆಗೆ ಮೊರಾರ್ಜಿ ದೇಸಾಯಿ ಅವರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ, ನಂತರ 1998 ರಿಂದ 2004ರ ನಡುವೆ ಸುಮಾರು 6 ವರ್ಷಗಳ ಕಾಲ ಪ್ರಧಾನಿಯಾಗಿ ಕೆಲಸ ಮಾಡಿದ್ದರು. ಉಳಿದ ಎಲ್ಲ ಅವಧಿಯಲ್ಲಿ ಅವರು ವಿರೋಧ ಪಕ್ಷದಲ್ಲೇ ಇದ್ದರು.

ವಿಪಕ್ಷದಲ್ಲಿದ್ದಾಗ ಅವರು ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿದ್ದರು. ಇದು ಕೇವಲ ರಾಜಕಾರಣಕ್ಕಾಗಿ ಹುಟ್ಟಿಕೊಂಡಿರದೆ ನೈಜ ಅರ್ಥ, ಉದ್ದೇಶವನ್ನು ಹೊಂದಿರುತ್ತಿತ್ತು. ಜನರ , ದೇಶದ , ಗಡಿ ಸಮಸ್ಯೆಗಳು, ಅಂತಾರಾಷ್ಟ್ರೀಯ ಸಂಬಂಧ, ಹೀಗೆ ಮೊದಲಾದ ವಿಷಯಗಳಲ್ಲಿ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ, ದೋಷಗಳನ್ನು ಅವರು ಎತ್ತಿ ತೋರಿಸುತ್ತಿದ್ದರು. ಅವರು ಸಂಸತ್ತಿನಲ್ಲಿ ಮಾತನಾಡುತ್ತಾರೆ ಎಂದರೆ, ಆಡಳಿತ ಪಕ್ಷದ ಸದಸ್ಯರು ಗಪ್‌ಚುಪ್‌ ಆಗಿ ಕುಳಿತು ಕೇಳುತ್ತಿದ್ದರು. ನಾನು ವಿರೋಧ ಪಕ್ಷದ ನಾಯಕನಾಗಿ ನೇಮಕಗೊಳ್ಳುವಾಗ ಮಾತ್ರವಲ್ಲ, ಅದಕ್ಕೂ ಹಿಂದಿನಿಂದಲೂ ಅವರನ್ನು ವಿರೋಧ ಪಕ್ಷದ ನಾಯಕನಾಗಿ ಬಹಳ ಸೂಕ್ಷ್ಮವಾಗಿ ಗಮನಿಸಿದ್ದೇನೆ.

1975 ರ ತುರ್ತು ಪರಿಸ್ಥಿತಿಯಲ್ಲಿ ನಾನು 17ರ ಹುಡುಗ. ಈಗಿನಂತೆ ಆಗಲೂ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕ. ಹಾಗೆಯೇ ತುರ್ತು ಪರಿಸ್ಥಿತಿಯನ್ನೂ ಕೂಡ ವಿರೋಧಿಸಿದ್ದೆ. ಅಷ್ಟಕ್ಕೇ ಪೊಲೀಸರು ಯಶವಂತಪುರ ಸರ್ಕಲ್‌ನಿಂದ ನನ್ನನ್ನು ಎಳೆದೊಯ್ದು ಸೆಂಟ್ರಲ್‌ ಜೈಲಿನಲ್ಲಿ ಹಾಕಿದ್ದರು. ಆಗ ಮಹಾ ನಾಯಕರಾಗಿ ಮಿಂಚುತ್ತಿದ್ದ ವಾಜಪೇಯಿ, ಎಲ್‌.ಕೆ.ಆಡ್ವಾಣಿ, ಶಾಮಭಾವು, ಮಧು ದಂಡವತೆ ಮೊದಲಾದ ನಾಯಕರನ್ನು ತೀರ ಹತ್ತಿರದಿಂದ ನೋಡಿದ್ದೆ. ಅದರಲ್ಲೂ ವಾಜಪೇಯಿಯವರನ್ನು ನೋಡಿ ಅಚ್ಚರಿಗೊಳಗಾಗಿದ್ದೆ.

‘ಕೈ’ ಕಲಿಯಬೇಕಿದೆ ಪಾಠ:

ರಾಹುಲ್‌ ಗಾಂಧಿಯವರ ನೇತೃತ್ವದ ವಿಪಕ್ಷ ಲೋಕಸಭೆಯಲ್ಲಿ ಏನು ಮಾಡುತ್ತಿದೆ ಎಂಬುದನ್ನು ಗಮನಿಸಿದರೆ, ಇವರಿಗೆಲ್ಲ ವಾಜಪೇಯಿಯವರಿಂದಲೇ ಪಾಠ ಹೇಳಿಸಿಕೊಳ್ಳುವ ಅಗತ್ಯವಿದೆ ಎಂದು ಅನ್ನಿಸದೇ ಇರುವುದಿಲ್ಲ. ಜವಾಬ್ದಾರಿಯುತ ಪ್ರತಿಪಕ್ಷವಾಗಬೇಕಿರುವ ಕಾಂಗ್ರೆಸ್‌, ಆ ಜವಾಬ್ದಾರಿಯನ್ನೇ ಮರೆತಿದೆ. ಕೆಲಸಕ್ಕೆ ಬಾರದ ವಿಚಾರಗಳನ್ನು ಮುಂದೆ ತಂದು ಅದರ ಬಗ್ಗೆ ಸುಖಾಸುಮ್ಮನೆ ಟೀಕೆ ಮಾಡುತ್ತಿದೆ. ಇಂತಹ ವಿಷಯಗಳಲ್ಲಿ ಯಾವುದೇ ಹುರುಳಿಲ್ಲ ಎಂಬುದು ಬಹಳಷ್ಟು ಸಲ ಸಾಬೀತಾಗಿದೆ.

ವಾಜಪೇಯಿಯವರು ಪ್ರತಿಪಕ್ಷದಲ್ಲಿದ್ದರೂ ಎಂದಿಗೂ ಚುನಾವಣಾ ಪ್ರಕ್ರಿಯೆ ಅನುಮಾನಿಸಲಿಲ್ಲ. ಆದರೆ ಇಂದು ಕಾಂಗ್ರೆಸ್‌ ಚುನಾವಣಾ ವ್ಯವಸ್ಥೆ ಯನ್ನೇ ಟೀಕೆ ಮಾಡುತ್ತಿದೆ. ತಾನು ಗೆದ್ದರೆ ಸರಿ, ಬೇರೆ ಪಕ್ಷ ಗೆದ್ದರೆ ಮೋಸ ಎಂಬಂತಹ ಮಾತುಗಳನ್ನು ಜನರು ನಂಬಲ್ಲ ಎಂಬ ಕನಿಷ್ಠ ಜ್ಞಾನವೂ ಇವರಿಗಿಲ್ಲ.

ಇಂದಿನ ಕಾಂಗ್ರೆಸ್‌ನಂತೆ ವಾಜಪೇಯಿಯವರು ಎಂದಿಗೂ ಸೋಲಿನ ಹತಾಶೆ ಹೊಂದಿರಲಿಲ್ಲ. ಆದರೆ ಅವರು ಸೋಲು ಏಕಾಯಿತು ಎಂದು ವಿಶ್ಲೇಷಿಸುತ್ತಿದ್ದರು. ಎಷ್ಟೇ ಬಾರಿ ಸೋತರೂ ಅವರು ದೇಶದ್ರೋಹಿ, ದೇಶವಿರೋಧಿ ಶಕ್ತಿಗಳ ಜೊತೆ ಕೈಜೋಡಿಸಲಿಲ್ಲ, ಸಮಾಜವನ್ನು ಒಡೆಯುವ ಕೆಲಸ ಮಾಡಲಿಲ್ಲ. ರಚನಾತ್ಮವಾಗಿ ಕೆಲಸ ಮಾಡಬೇಕಾದ ವಿರೋಧ ಪಕ್ಷ ಇಂದು ತನ್ನ ಘನತೆಯನ್ನೇ ಹಾಳು ಮಾಡಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಅಟಲ್‌ ಬಿಹಾರಿ ವಾಜಪೇಯಿಯವರ ಅತ್ಯುತ್ತಮ ಆಡಳಿತದ ದಿನಗಳನ್ನು ನಾವು ನೆನೆಯುತ್ತೇವೆ. ಅದೇ ರೀತಿ ಕಾಂಗ್ರೆಸ್‌ ನಾಯಕರು, ವಾಜಪೇಯಿಯವರು ಪ್ರತಿಪಕ್ಷದ ನಾಯಕನಾಗಿ ನೀಡಿದ ಅತ್ಯುತ್ತಮ ದಿನಗಳನ್ನು ಸ್ಮರಿಸಿ ಪಾಠ ಕಲಿಯಲಿ.

‘ಸತ್ತಾ ಕಾ ಖೇಲ್ ತೋ ಚಲೇಗಾ, ಸರ್ಕಾರೇ ಆಯೇಂಗೀ, ಜಾಯೇಂಗೀ, ಪಾರ್ಟಿಯಾಂ ಬನೇಗೀ ಬಿಗಡೇಗೀ - ಮಗರ್ ಯೇ ದೇಶ್ ರೆಹನಾ ಚಾಹಿಯೇ. ದೇಶ್ ಕಾ ಲೋಕತಂತ್ರ ಅಮರ್‌ ರೆಹನಾ ಚಾಹಿಯೇ’’ (ಅಧಿಕಾರದ ಆಟ ನಡೆಯುತ್ತದೆ, ಸರ್ಕಾರಗಳು ಬರುತ್ತವೆ, ಹೋಗುತ್ತವೆ, ಪಕ್ಷಗಳು ರೂಪುಗೊಳ್ಳುತ್ತವೆ, ಒಡೆಯುತ್ತವೆ – ಆದರೆ ಈ ದೇಶ ಉಳಿಯಬೇಕು. ದೇಶದ ಪ್ರಜಾಪ್ರಭುತ್ವಅಮರವಾಗಿರಬೇಕು.)

ಇದು ವಾಜಪೇಯಿಯವರ ಮಾತು. ಈ ಮಾತು ಅವರ ಅಚಲವಾದ ರಾಷ್ಟ್ರಭಕ್ತಿ ಮತ್ತು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಗೆ ಸಾಕ್ಷಿ. ವಾಜಪೇಯಿಯವರು ಸುಶಾಸನಕ್ಕೆ ಮಾತ್ರವಲ್ಲದೆ, ವಿರೋಧ ಪಕ್ಷವಾಗಿ ಹೇಗೆ ಹೊಣೆಗಾರಿಕೆಯಿಂದ ಇರಬೇಕು ಎಂಬುದಕ್ಕೂ ಜೀವಂತ ಮಾದರಿ.

PREV
Read more Articles on

Recommended Stories

ಆಧುನಿಕ ಭಾರತದ ಶಿಲ್ಪಿ, ಯುಗಪುರುಷ - ಅಟಲ್ ಬಿಹಾರಿ ವಾಜಪೇಯಿ
ಶತ್ರುಗಳನ್ನು ಕ್ಷಮಿಸುವುದಕ್ಕೇ ಹುಟ್ಟಿದ ಯೇಸು!