ಕನ್ನಡಪ್ರಭ ವಾರ್ತೆ, ಬೆಂಗಳೂರು
‘ನನಗೆ 30ರ ಆಸುಪಾಸಿನ ವಯಸ್ಸು. ನಿತ್ಯ ತಪ್ಪದೆ ಕಠಿಣ ವ್ಯಾಯಾಮ ಮಾಡುತ್ತೇನೆ, ಸಮತೋಲಿತ ಪೌಷ್ಟಿಕಾಹಾರವನ್ನೇ ಸೇವಿಸುತ್ತೇನೆ. ಆದರೂ ವಾಡಿಕೆಯ ಸಾಮಾನ್ಯ ಆರೋಗ್ಯ ತಪಾಸಣೆಯಲ್ಲಿ ಅಧಿಕ ಎಲ್‌ಡಿಎಲ್-ಸಿ ಇರುವುದು ಪತ್ತೆಯಾದಾಗ ದಿಗ್ಭ್ರಮೆಗೊಂಡೆ’ ಎನ್ನುತ್ತಾರೆ ಮುಂಬೈ ಮೂಲದ ಉದ್ಯೋಗಿ ರಾಹುಲ್ (ಹೆಸರು ಬದಲಾಯಿಸಲಾಗಿದೆ). ‘ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕೇವಲ ಆಹಾರವಷ್ಟೇ ಅಲ್ಲ, ಅನುವಂಶಿಕ ಸೇರಿದಂತೆ ಹಲವು ವೈದ್ಯಕೀಯ ಕಾರಣಗಳಿರಬಹುದು ಎಂದು ಹೃದ್ರೋಗ ತಜ್ಞರು ಧೈರ್ಯ ತುಂಬಿದರು. ಜೀವನಶೈಲಿಯ ಜತೆಗೆ ನಿಯಮಿತ ಚಿಕಿತ್ಸೆ ಮುಂದುವರಿಸಲು ಸೂಚಿಸಿದರು’ ಎಂದು ಅವರು ಅನುಭವ ಹಂಚಿಕೊಳ್ಳುತ್ತಾರೆ.
ಬೆಂಗಳೂರಿನ ಕಾವೇರಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥರಾದ ಡಾ. ವಿವೇಕ್ ಜಿ. ಈ ಕುರಿತು ಎಚ್ಚರಿಸುತ್ತಾ, ‘ಹೆಚ್ಚಿನ ಎಲ್‌ಡಿಎಲ್ ಮಟ್ಟವು ವೃದ್ಧಾಪ್ಯ ಅಥವಾ ಜಡ ಜೀವನಶೈಲಿಗೆ ಮಾತ್ರ ಸೀಮಿತ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಉತ್ತಮ ಆಹಾರ ಸೇವಿಸಿ, ಜಿಮ್‌ಗೆ ಹೋಗುವ ಯುವಜನರಲ್ಲೂ ಕುಟುಂಬದ ಅನುವಂಶಿಕ ಹಿನ್ನೆಲೆಯಿಂದಾಗಿ ಇದು ಅಧಿಕವಾಗಿರಬಹುದು. ವಯಸ್ಸು ಮತ್ತು ಫಿಟ್‌ನೆಸ್ ಮಾತ್ರವೇ ಹೃದಯ ಸುರಕ್ಷಿತವಾಗಿದೆ ಎಂಬುದಕ್ಕೆ ಮಾನದಂಡವಲ್ಲ. ಹಾಗಾಗಿ ಪ್ರತಿಯೊಬ್ಬರೂ 18 ವರ್ಷ ತುಂಬುತ್ತಿದ್ದಂತೆ ನಿಯಮಿತ ಲಿಪಿಡ್ ಪ್ರೊಫೈಲ್ ಪರೀಕ್ಷೆ ಆರಂಭಿಸಬೇಕು’ ಎಂದು ಸ್ಪಷ್ಟಪಡಿಸುತ್ತಾರೆ.ಮುಂದಿನ ಬಾರಿ ಹೃದಯ ತಪಾಸಣೆಗೆ ಹೋದಾಗ, ಸಾಮಾನ್ಯ ಮಾತುಕತೆಗೆ ಸೀಮಿತವಾಗದೆ ವೈದ್ಯರಿಗೆ ಈ ಮೂರು ಪ್ರಮುಖ ಪ್ರಶ್ನೆಗಳನ್ನು ಕೇಳಿ:
ರಕ್ತನಾಳಗಳಲ್ಲಿ ಜಿಡ್ಡಿನ ಪದರ (ಪ್ಲೇಕ್) ಶೇಖರಣೆಯಾಗಿ ರಕ್ತಪರಿಚಲನೆಗೆ ಅಡ್ಡಿ ಉಂಟುಮಾಡುವ ಪ್ರಮುಖ ಖಳನಾಯಕ ಎಂದರೆ ಅದು ಎಲ್‌ಡಿಎಲ್. ಇದು ಯಾವುದೇ ಬಾಹ್ಯ ರೋಗಲಕ್ಷಣ ತೋರುವುದಿಲ್ಲ. ಆದ್ದರಿಂದ ಇತ್ತೀಚಿನ ರಕ್ತ ಪರೀಕ್ಷೆಯಲ್ಲಿ ಇದರ ನಿಖರ ಪ್ರಮಾಣ ಎಷ್ಟಿದೆ ಎಂದು ತಿಳಿದುಕೊಳ್ಳುವುದೇ ಹೃದಯ ರಕ್ಷಣೆಯ ಮೊದಲ ಹೆಜ್ಜೆ.
ಕೊಲೆಸ್ಟ್ರಾಲ್ ನಿಯಂತ್ರಣದ ಮಾನದಂಡ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾ (ಸಿಎಸ್‌ಐ) ಮಾರ್ಗಸೂಚಿಯಂತೆ ವ್ಯಕ್ತಿಯ ಅಪಾಯದ ತೀವ್ರತೆಯ ಮೇಲೆ ಗುರಿ ನಿರ್ಧರಿಸಲಾಗುತ್ತದೆ:
ಮಧ್ಯಮ ಅಪಾಯ: < 100 mg/dL
ಅತ್ಯಧಿಕ ಅಪಾಯ (ಹಿಂದೆ ಹೃದಯಾಘಾತ, ಸ್ಟೆಂಟ್ ಅಥವಾ ಬೈಪಾಸ್ ಆದವರು): < 55 mg/dL
ಕೇವಲ ಆಹಾರ ಪಥ್ಯ ಅಥವಾ ನಿಗದಿತ ಮಾತ್ರೆ ಸೇವನೆಯಿಂದಲೇ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬಂದಿದೆ ಎಂದು ಭಾವಿಸುವುದು ತಪ್ಪು. ಜೀವನಶೈಲಿ ಬದಲಾವಣೆ ಹಾಗೂ ಆರಂಭಿಕ ಮಾತ್ರೆಗಳಿಂದ ಗುರಿ ಮುಟ್ಟಲು ಸಾಧ್ಯವಾಗದಿದ್ದರೆ, ತಜ್ಞ ವೈದ್ಯರು ಚಿಕಿತ್ಸೆಯನ್ನು ಪರಿಷ್ಕರಿಸುತ್ತಾರೆ. ಹೆಚ್ಚಿನ ಅಪಾಯದಲ್ಲಿರುವವರಿಗೆ ಪಿಸಿಎಸ್‌ಕೆ9 ಇನ್ಹಿಬಿಟರ್‌ಗಳು ಹಾಗೂ ಎಸ್‌ಐಆರ್‌ಎನ್‌ಎ ನಂತಹ ಸುಧಾರಿತ ಚುಚ್ಚುಮದ್ದು ಚಿಕಿತ್ಸೆಗಳು ಇಂದು ಲಭ್ಯವಿವೆ.