ಕಸದಿಂದ ಬಿಬಿಎಂಪಿ ಹಣ ಗಳಿಸಬೇಕೇ ವಿನಃ ದುಡ್ಡು ವ್ಯಯಿಸಬಾರದು : ಶಾಲಿನಿ ರಜಿನೀಶ್‌

KannadaprabhaNewsNetwork | Updated : Dec 06 2024, 11:19 AM IST

ಸಾರಾಂಶ

ನಗರದಲ್ಲಿ ಉತ್ಪಾದನೆಯಾಗುವ ಕಸದಿಂದ ರಸ ಮಾಡಬೇಕೇ ವಿನಾಃ, ಕಸ ವಿಲೇವಾರಿಗೆ ಹಣ ವೆಚ್ಚ ಮಾಡುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜಿನೀಶ್‌ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

 ಬೆಂಗಳೂರು : ನಗರದಲ್ಲಿ ಉತ್ಪಾದನೆಯಾಗುವ ಕಸದಿಂದ ರಸ ಮಾಡಬೇಕೇ ವಿನಾಃ, ಕಸ ವಿಲೇವಾರಿಗೆ ಹಣ ವೆಚ್ಚ ಮಾಡುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜಿನೀಶ್‌ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ನಗರದ ವಿವಿಧ ಕಸ ವಿಂಗಡಣೆ ಮತ್ತು ವಿಲೇವಾರಿ ಸ್ಥಳಗಳಿಗೆ ಹಾಗೂ ಕೂಡ್ಲುವಿನ ಕೆಸಿಡಿಸಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಗುರುವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿ ಬಿಬಿಎಂಪಿಯ ಕೇಂದ್ರ ಕಚೇರಿಯ ಆವರಣದಲ್ಲಿರುವ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ (ಐಸಿಸಿಸಿ)ನಲ್ಲಿ ಸಭೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಎಷ್ಟು ಕಸ ಉತ್ಪಾದನೆಯಾಗುತ್ತಿದೆ. ಆ ಎಲ್ಲಾ ಕಸವನ್ನು ಕಲ್ಲು ಕ್ವಾರಿಗಳಿಗೆ ತೆಗೆದುಕೊಂಡು ಹೋಗು ಸುರಿಯಬಾರದು. ಸಂಪೂರ್ಣವಾಗಿ ವಿಂಗಡಣೆ ಮಾಡಿ. ಕಸದಿಂದ ರಸ ಮಾಡಬೇಕು. ಕಸದಿಂದ ಬಿಬಿಎಂಪಿಗೆ ಆದಾಯ ಬರಬೇಕು. ಕಸ ವಿಲೇವಾರಿಗೆ ಹಣ ವೆಚ್ಚ ಮಾಡುವುದಲ್ಲ. ಏನೆಲ್ಲಾ ಸುಧಾರಣೆ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.

ಇನ್ನು ರಸ್ತೆ ಗುಂಡಿಗಳ ಕುರಿತು ದೂರುಗಳು ಹೆಚ್ಚಾಗಿ ಬರುತ್ತಿವೆ. ಆ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ. ತ್ವರಿತವಾಗಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದರು.

ನಗರದಲ್ಲಿ ಎಲ್ಲಂದರಲ್ಲಿ ಕಸ: ಅಧಿಕಾರಿಗಳ ವಿರುದ್ಧ ಗರಂ

ಸಭೆಯಲ್ಲಿ ನಗರದಲ್ಲಿ ಕಸ ವಿಲೇವಾರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಲಿನಿ ರಜಿನೀಶ್‌, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೇರಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಸ್ತೆ ಅಕ್ಕ ಪಕ್ಕದಲ್ಲಿ ಬಿದ್ದಿರುವ ಕಸ, ಕಟ್ಟಡ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದ್ದಾರೆ.

ಇನ್ನು ನಗರದಲ್ಲಿ ರಸ್ತೆ ಗುಂಡಿಗಳ ಹೆಚ್ಚಾಗಿವೆ. ಎಂಜಿನಿಯರ್‌ಗಳು ಏನು ಮಾಡುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಬೇಕು. ಎಂಜಿನಿಯರ್‌ಗಳ ವಾಹನಗಳಿಗೆ ಕ್ಯಾಮೆರಾ ಅಳವಡಿಕೆ ಮಾಡಿ ವಿಡಿಯೋ ಮಾಡಲಾಗುತ್ತಿದೆ. ಆ ವಿಡಿಯೋ ಪರಿಶೀಲನೆ ಮಾಡಿ ರಸ್ತೆ ಗುಂಡಿ ಹಾಗೂ ಕಿತ್ತು ಹೋದ ರಸ್ತೆಯ ಭಾಗವನ್ನು ದುರಸ್ತಿ ಮಾಡುವ ಕೆಲಸ ಮಾಡಿ ಎಂದು ಖಡಕ್‌ ನಿರ್ದೇಶನ ನೀಡಿದ್ದಾರೆ.

ಕಸ ವಿಲೇವಾರಿ ಹಾಗೂ ರಸ್ತೆ ಗುಂಡಿ ದೂರು ಕೇಳಿ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಬಿಬಿಎಂಪಿ ಸಹಾಯವಾಣಿಗೆ ಬರುವ ದೂರುಗಳ ಕುರಿತು ಮಾಹಿತಿ ಪಡೆದರು. ಸಾರ್ವಜನಿಕರು ದೂರುಗಳನ್ನು ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು. ಅನಾಗತ್ಯ ವಿಳಂಬ ಮಾಡದಂತೆ ಎಚ್ಚರಿಕೆ ವಹಿಸಿ ಎಂದು ಮುಖ್ಯ ಆಯುಕ್ತರಿಗೆ ಸೂಚಿಸಿದರು.

ವಿವಿಧ ಕಡೆ ದಿಢೀರ್‌ ಪರಿಶೀಲನೆ

ಸಭೆಗೂ ಮುನ್ನ ವಸಂತನಗರದ ವಿವಿಧ ರಸ್ತೆಗಳಿಗೆ ಭೇಟಿ ನೀಡಿ ಮನೆ-ಮನೆಯಿಂದ ಕಸ ಸಂಗ್ರಹಣೆ, ರೇಸ್‌ ಕೋರ್ಸ್‌ ರಸ್ತೆಯಲ್ಲಿ ಆಟೋದಿಂದ ಕಾಂಪ್ಯಾಕ್ಟರ್‌ಗೆ ಕಸ ವರ್ಗಾವಣೆ ಪರಿಶೀಲಿಸಿದರು. ಆ ನಂತರ ಕೂಡ್ಲುವಿನ ಕೆಸಿಡಿಸಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು.

ಈ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಡಾ। ಕೆ.ಹರೀಶ್ ಕುಮಾರ್, ಬಿಎಸ್‌ಡಬ್ಲ್ಯೂಎಂಎಲ್‌ ಪ್ರಧಾನ ಎಂಜಿನಿಯರ್‌ ಬಸವರಾಜ ಕಬಾಡೆ ಉಪಸ್ಥಿತರಿದ್ದರು.

Share this article