ಬೆಂಗಳೂರು ಈಗ ರಸ್ತೆ ಗುಂಡಿಗಳ ಊರು : ರಾಜಧಾನಿ ರಸ್ತೆಗಳಲ್ಲಿ ಗುಂಡಿಗಳದ್ದೇ ದರ್ಬಾರ್‌

KannadaprabhaNewsNetwork |  
Published : Feb 01, 2025, 01:32 AM ISTUpdated : Feb 01, 2025, 05:30 AM IST
ಸಿಟಿ ರಸ್ತೆಗಳು | Kannada Prabha

ಸಾರಾಂಶ

ದೇಶದಲ್ಲಿ ಅತಿ ಹೆಚ್ಚು ರಸ್ತೆ ಗುಂಡಿ ಹಾಗೂ ತೇಪೆ ಹಾಕಿದ ರಸ್ತೆಗಳ ಸ್ಪರ್ಧೆ ನಡೆಸಿದ ಬೆಂಗಳೂರು ಮೊದಲ ಸ್ಥಾನ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬತಿದೆ ರಾಜಧಾನಿಯ ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ಇದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ದೇಶದಲ್ಲಿ ಅತಿ ಹೆಚ್ಚು ರಸ್ತೆ ಗುಂಡಿ ಹಾಗೂ ತೇಪೆ ಹಾಕಿದ ರಸ್ತೆಗಳ ಸ್ಪರ್ಧೆ ನಡೆಸಿದ ಬೆಂಗಳೂರು ಮೊದಲ ಸ್ಥಾನ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬತಿದೆ ರಾಜಧಾನಿಯ ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ಇದೆ.

ಹೌದು, ಸಿಲಿಕಾನ್‌ ಸಿಟಿ, ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ರಸ್ತೆಗಳ ಸ್ಥಿತಿ ದಾರುಣವಾಗಿದ್ದು, ನಗರದ ಒಂದೇ ಒಂದು ತೇಪೆ ಹಾಕದ ರಸ್ತೆ ಇಲ್ಲ. ಎಲ್ಲಾ ರಸ್ತೆಗಳಲ್ಲಿ ಗುಂಡಿ ಮುಚ್ಚಿದ ತೇಪೆಗಳು ಕಾಣಲಿವೆ. ಇನ್ನು ರಸ್ತೆ ಗುಂಡಿ ಬಗ್ಗೆ ಹೇಳುವುದೇ ಬೇಡ. ವಿಧಾನಸೌಧ, ರಾಜಭವನ, ಹೈಕೋರ್ಟ್‌, ಬಿಬಿಎಂಪಿ, ಕೆಆರ್‌ ಮಾರುಕಟ್ಟೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಪುಟ ಸಚಿವರ ಸರ್ಕಾರಿ ನಿವಾಸಗಳು ಇರುವ ರಸ್ತೆಗಳು ಹಾಗೂ ಆ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಗುಂಡಿಗಳು ರಾಜಾಜಿಸುತ್ತಿವೆ. ಇನ್ನುಳಿದಂತೆ ಅತಿ ಹೆಚ್ಚು ವಾಹನ ಸಂಚಾರ ಮಾಡುವ ನಗರದ ಕೇಂದ್ರ ಭಾಗದ ರಸ್ತೆಗಳಲ್ಲಿ ಗುಂಡಿಗಳದೇ ಕಾರ್‌ಬಾರ್‌ ಆಗಿದೆ.

ಓಡಾಟವೇ ಸರ್ಕಸ್‌:  ರಸ್ತೆಗಳ ಹೆಜ್ಜೆ- ಹೆಜ್ಜೆಗೂ ತೇಪೆ ಹಾಗೂ ಗುಂಡಿಗಳು ಇರುವುದರಿಂದ ವಾಹನಗಳ ಸಂಚಾರವೇ ದೊಡ್ಡ ಸರ್ಕಸ್‌ ಆಗಿದೆ. ಅದರಲ್ಲೂ ಬೈಕ್‌ ಹಾಗೂ ಗೂಡ್ಸ್‌ ವಾಹನಗಳ ಸಂಚಾರ ಮಾಡುವ ಚಾಲಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ತೇಪೆ ಹಾಗೂ ರಸ್ತೆ ಗುಂಡಿಗಳ ಸಮಸ್ಯೆಯಿಂದ ಅನೇಕ ದ್ವಿಚಕ್ರ ವಾಹನ ಚಾಲಕರು ಅಪಘಾತಕ್ಕೆ ತುತ್ತಾಗಿ ಹಾಸಿಗೆ ಹಿಡಿಯುವಂತಾಗಿದೆ. ಈ ಹಿಂದೆ ಮಳೆಗಾಲದಲ್ಲಿ ಬಿದ್ದ ಗುಂಡಿಗಳನ್ನು ಅವೈಜ್ಞಾನಿಕವಾಗಿ ಮುಚ್ಚುವ ಕೆಲಸ ಮಾಡಲಾಗಿತ್ತು. ಇದೀಗ ದಿನ ಕಳೆದಂತೆ ತೇಪೆಗಳು ಕಿತ್ತು ಬರುತ್ತಿವೆ. ಜತೆಗೆ, ಕಿತ್ತು ಬಂದ ಡಾಂಬರ್‌ನಲ್ಲಿ ಇರುವ ಜಲ್ಲಿಕಲ್ಲುಗಳು ರಸ್ತೆ ತುಂಬಾ ಹರಡಿಕೊಳ್ಳುತ್ತಿವೆ. ಇದರಿಂದ ಬೈಕ್‌ ಸವಾರರು ಜಾರಿ ಬೀಳುತ್ತಿದ್ದಾರೆ.

3 ವರ್ಷದಿಂದ ಡಾಂಬರ್‌ ಹಾಕಿಲ್ಲ: ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಬೇಕಾದ ಬಿಬಿಎಂಪಿಯ ಅಧಿಕಾರಿಗಳು, ನಗರದಲ್ಲಿರುವ 1,400 ಕಿ.ಮೀ ಉದ್ದದ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಿಗೆ ಡಾಂಬರ್‌ ಹಾಕುವ ಕೆಲಸ ಮಾಡಿಲ್ಲ. ಹೀಗಾಗಿ, ರಸ್ತೆಗಳು ಗುಣಮಟ್ಟ ಕಳೆದುಕೊಂಡಿದ್ದು, ಗುಂಡಿಗಳು ಸೃಷ್ಟಿಯಾಗುತ್ತಿವೆ ಎನ್ನುವ ಸಬೂಬು ಹೇಳುತ್ತಿದ್ದಾರೆ. ಆದರೆ, ನಗರದಲ್ಲಿ ಇತ್ತೀಚಿಗೆ ಅಭಿವೃದ್ಧಿ ಪಡಿಸಿದ ರಸ್ತೆಗಳ ಗುಂಡಿ ಮುಚ್ಚಿ ನಿರ್ವಾಹಣೆಯನ್ನು ಕಾಮಗಾರಿ ನಡೆಸಿದ ಗುತ್ತಿಗೆ ಸಂಸ್ಥೆ ಅಥವಾ ಗುತ್ತಿಗೆದಾರ ಮಾಡಬೇಕು. ಆದರೆ, ಗುತ್ತಿಗೆದಾರರು ಮಾಡುತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ಗುತ್ತಿಗೆದಾರರಿಂದ ಕೆಲಸ ಮಾಡಿಸುವ ಗೊಜಿಗೆ ಹೋಗುತ್ತಿಲ್ಲ.

ನೆಪದಲ್ಲಿಯೇ ಅಧಿಕಾರಿಗಳ ಕಾಲಹರಣ: ನಗರದ ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ. ಕಳೆದ ನವೆಂಬರ್‌ನಲ್ಲಿಯೇ ನಗರದ 459 ಕಿಮೀ ಉದ್ದದ ಮುಖ್ಯ ರಸ್ತೆಗಳ ಮೇಲ್ಪದರ ತೆಗೆದು ಹೊಸದಾಗಿ ಡಾಂಬರಿಕರಣ ಮಾಡಲಾಗುವುದು, ಅದಕ್ಕಾಗಿ 660 ಕೋಟಿ ರು. ವೆಚ್ಚ ಮಾಡಲಾಗುವುದು ಎಂದು ಕಳೆದ ಐದು ತಿಂಗಳಿನಿಂದ ಹೇಳಿಕೊಂಡು ಬಿಬಿಎಂಪಿ ಅಧಿಕಾರಿಗಳು ಬರುತ್ತಿದ್ದಾರೆ. ಆದರೆ, ಈವರೆಗೆ ಡಾಂಬರಿಕರಣ ಮಾಡುವುದಕ್ಕೆ ಆರಂಭಿಸಿಲ್ಲ. ಇನ್ನೇನು ಒಂದೆರಡು ತಿಂಗಳಲ್ಲಿ ಮತ್ತೆ ಪೂರ್ವ ಮುಂಗಾರು ಆರಂಭಗೊಳ್ಳಲಿದೆ. ಆಗ ಮತ್ತೆ ನಗರದಲ್ಲಿ ಮಳೆ ಆರಂಭಗೊಳ್ಳಲಿದೆ.

ಬೇಕಾಬಿಟ್ಟಿ ರಸ್ತೆ ಅಗೆತ: ನಗರದ ಜಂಕ್ಷನ್‌ಗಳಲ್ಲಿ ಹೊಸದಾಗಿ ಸಿಗ್ನಲ್‌ ಅಳವಡಿಕೆ ಮಾಡುವ ಕಾರ್ಯಕ್ಕೆ ನಗರ ಸಂಚಾರಿ ಪೊಲೀಸ್‌ ಇಲಾಖೆಯಿಂದ ಜಂಕ್ಷನ್‌ಗಳನ್ನು ಅಗೆಯುವ ಕೆಲಸ ಮಾಡಲಾಗುತ್ತಿದೆ. ಜತೆಗೆ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳು ರಸ್ತೆ ಅಗೆಯುತ್ತಿದ್ದಾರೆ. ಅಗೆದ ರಸ್ತೆಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಇದು ವಾಹನ ಸವಾರರಿಗೆ ಮತ್ತಷ್ಟು ಸಮಸ್ಯೆ ಉಂಟು ಮಾಡಿದೆ.

PREV

Recommended Stories

ಬಿಗ್‌ ಬಾಸ್‌ ಸಿಂಹಿಣಿ ಸಂಗೀತಾ ಶೃಂಗೇರಿಯ ಹೊಸ ಸಾಹಸ
ಭಾರತದ ಹುಡ್ಗೀರ್‌ಗೆ ವಿಶ್ವ ಕಿರೀಟ : ಭಾರತಕ್ಕೆ ಚೊಚ್ಚಲ ವಿಶ್ವಕಪ್‌