;Resize=(412,232))
ಬೆಂಗಳೂರು : ಐಟಿ ಕ್ಷೇತ್ರ ಸೇರಿದಂತೆ ಮತ್ತಿತರ ಸಾಧನೆಗಳ ಮೂಲಕ ಈಗಾಗಲೇ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು, ಇದೀಗ ಸಂಚಾರ ದಟ್ಟಣೆಯಲ್ಲಿ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟಾಮ್‌ಟಾಮ್ ಸಂಚಾರ ಸೂಚ್ಯಂಕ ಬಿಡುಗಡೆ ಮಾಡಿರುವ ವರದಿಯಂತೆ ವಿಶ್ವದಲ್ಲಿ ಅತಿಹೆಚ್ಚಿನ ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.
ನೆದರ್‌ಲ್ಯಾಂಡ್ ಮೂಲದ ಟಾಮ್‌ಟಾಮ್ ಸಂಸ್ಥೆಯು ಸಿದ್ಧಪಡಿಸಿರುವ ಸೂಚ್ಯಂಕದಲ್ಲಿ 2025ರಲ್ಲಿ ಅತಿಹೆಚ್ಚಿನ ಸಂಚಾರ ದಟ್ಟಣೆ ಹೊಂದಿರುವ ವಿಶ್ವದ ನಗರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅದರಲ್ಲಿ ಮೆಕ್ಸಿಕೋ ನಗರ ಮೊದಲ ಸ್ಥಾನದಲ್ಲಿದೆ. ಅದಾದ ನಂತರದ ಸ್ಥಾನ ಬೆಂಗಳೂರಿಗೆ ನೀಡಲಾಗಿದೆ. ಸೂಚ್ಯಂಕದಲ್ಲಿ ತಿಳಿಸಿರುವಂತೆ ಬೆಂಗಳೂರಿನಲ್ಲಿ 10 ಕಿಮೀ ಪ್ರಯಾಣಿಸಲು ಸರಾಸರಿ 36 ನಿಮಿಷ 9 ಸೆಕೆಂಡುಗಳು ಬೇಕಾಗಲಿದೆ ಎಂದು ತಿಳಿಸಲಾಗಿದೆ.
2024ರಲ್ಲಿ 10 ಕಿಮೀ ಪ್ರಯಾಣಿಸಲು 34 ನಿಮಿಷ 10 ಸೆಕೆಂಡುಗಳು ಬೇಕಾಗುತ್ತಿತ್ತು. ಒಂದು ವರ್ಷದಲ್ಲಿ 1.59 ನಿಮಿಷ ಹೆಚ್ಚಳವಾಗಿದೆ. ಇನ್ನು, 2025ರಲ್ಲಿ ಬೆಂಗಳೂರಿನ ಒಟ್ಟಾರೆ ಸರಾಸರಿ ವಾಹನ ವೇಗ ಪ್ರತಿ ಗಂಟೆಗೆ 16.6 ಕಿಮೀ ದಾಖಲಾಗಿದೆ. ಅದರಲ್ಲೂ ಪೀಕ್ ಅವರ್‌ಗಳಾದ ಬೆಳಗ್ಗೆ 14.6 ಕಿಮೀ ಮತ್ತು ಸಂಜೆ 13.2 ಕಿಮೀಗಳಾಗಿವೆ ಎಂದು ಹೇಳಲಾಗಿದೆ.
ಇನ್ನು ದೇಶದಲ್ಲಿ ಬೆಂಗಳೂರಿನಲ್ಲಿ ಶೇ. 74ರಷ್ಟು ಸಂಚಾರ ದಟ್ಟಣೆ ಮಟ್ಟವಿದ್ದು, ನಂತರದ ಸ್ಥಾನದಲ್ಲಿ ಪುಣೆ ಶೇ. 71, ಮುಂಬೈ ಶೇ. 63, ನವದೆಹಲಿ ಶೇ. 60 ಮತ್ತು ಕೋಲ್ಕತ್ತಾ ಶೇ. 59ರಷ್ಟು ಸಂಚಾರ ದಟ್ಟಣೆ ಮಟ್ಟವಿದೆ ಎಂದು ಸೂಚ್ಯಂಕದಲ್ಲಿ ಹೇಳಲಾಗಿದೆ.