ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ಸ್ಪರ್ಧೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿ ತುಷಾರ್‌ಗೆ ಗೆಲುವು

KannadaprabhaNewsNetwork |  
Published : Nov 13, 2025, 12:05 AM IST
ಸ್ಯಾಮ್‌ಸಂಗ್‌ | Kannada Prabha

ಸಾರಾಂಶ

ಸ್ಯಾಮ್‌ಸಂಗ್‌ನ ಪ್ರತಿಷ್ಠಿತ ಸ್ಯಾಮ್‌ಸಂಗ್‌ ಸಾಲ್ವ್‌ ಫಾರ್‌ ಟುಮಾರೋ ಸ್ಪರ್ಧೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿ ತುಷಾರ್‌ ಗೆದ್ದಿದ್ದಾರೆ. ಈ ಕುರಿತು ಮತ್ತು ಅವರ ಆವಿಷ್ಕಾರದ ಕುರಿತ ವಿವರ ಇಲ್ಲಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು

ದೃಷ್ಟಿದೋಷವುಳ್ಳವರಿಗೆ ನೆರವಾಗುವ ಎಐ ಆಧರಿತ ಸ್ಮಾರ್ಟ್ ಕನ್ನಡಕಗಳನ್ನು ಆವಿಷ್ಕರಿಸುವ ಮೂಲಕ ಮಹತ್ವದ ಸಾಧನೆ ಮಾಡಿರುವ ಬೆಂಗಳೂರಿನ ಸ್ಕೇಲರ್ ಸ್ಕೂಲ್ ಆಫ್ ಟೆಕ್ನಾಲಜಿಯ ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ 19 ವರ್ಷದ ತುಷಾರ್ ಶಾ ಅವರು ಸ್ಯಾಮ್‌ಸಂಗ್‌ ಪ್ರತಿಷ್ಠಿತ ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ಅವರ ಪರ್ಸೀವಿಯಾ ಎಂಬ ಸ್ಮಾರ್ಟ್ ಕನ್ನಡಕ ದೃಷ್ಟಿದೋಷವುಳ್ಳವರಿಗೆ ನೆರವಾಗಲು ರೂಪುಗೊಂಡಿದ್ದು, ಈ ಆವಿಷ್ಕಾರವು ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ 2025 ಯೋಜನೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗೆಲವು ಸಾಧಿಸಿದೆ.ಸ್ಯಾಮ್‌ಸಂಗ್ ಕಂಪನಿಯ ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ಮಹತ್ವದ ಶಿಕ್ಷಣ ಯೋಜನೆಯಾಗಿದ್ದು, ಇದು ಯುವ ಮನಸ್ಸುಗಳನ್ನು ವಾಸ್ತವಿಕ ಜಗತ್ತಿನ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ತಂತ್ರಜ್ಞಾನ ಬಳಸಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸವಾಲು ಹಾಕುತ್ತದೆ. ಈ ವರ್ಷ ಈ ಯೋಜನೆಯಲ್ಲಿ ನಾಲ್ಕು ವಿಷಯಗಳಲ್ಲಿ 4 ಮಂದಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಆ 4 ವಿಜೇತ ತಂಡಗಳು ಐಐಟಿ ದೆಹಲಿಯಲ್ಲಿ ₹1 ಕೋಟಿ ಇನ್‌ಕ್ಯುಬೇಷನ್ ನೆರವು ಪಡೆದಿವೆ.

ತುಷಾರ್ ಸೃಷ್ಟಿಸಿರುವ ಪರ್ಸೀವಿಯಾ ಸ್ಮಾರ್ಟ್ ಕನ್ನಡಕವು ಅಂಧ ವ್ಯಕ್ತಿಗಳಿಗೆ ಧ್ವನಿಯ ಮೂಲಕ ಸುತ್ತಮುತ್ತಲಿನ ವಾತಾವರಣವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವಂತೆ ವಿನ್ಯಾಸಗೊಂಡಿದೆ. ಆಡಿಯೋ ಸೆನ್ಸರ್‌ ಗಳು, ಆಬ್ಜೆಕ್ಟ್-ರೆಕಗ್ನಿಷನ್ ಕ್ಯಾಮೆರಾಗಳು ಮತ್ತು ಎಐ-ಆಧರಿತ ಸ್ಪೇಷಿಯಲ್ ಅನಾಲಿಸಿಸ್ ಮುಂತಾದ ಸೌಕರ್ಯಗಳನ್ನು ಬಳಸಿ ಕನ್ನಡಕಗಳು ವ್ಯಕ್ತಿಯ ಮುಂದಿರುವ ವಸ್ತುಗಳನ್ನು ಪತ್ತೆ ಮಾಡಿ ವಿವರಿಸುತ್ತವೆ. ಈ ಕನ್ನಡಕವು ವಸ್ತುಗಳನ್ನು ಗುರುತಿಸುವುದು, ದೂರ ಅಂದಾಜು ಮಾಡುವುದು, ಮಾನವ ಧ್ವನಿಗಳು ಮತ್ತು ಮುಖಗಳನ್ನು ಗುರುತಿಸುವುದು ಇತ್ಯಾದಿ ಕೆಲಸ ಮಾಡುತ್ತವೆ. ಸಾಧನವು ಸೂಕ್ಷ್ಮ ಕಂಪನಗಳು ಅಥವಾ ತಕ್ಷಣ ಧ್ವನಿ ಸೂಚನೆ ನೀಡುವ ಮೂಲಕ ಬಳಕೆದಾರರಿಗೆ ಎಚ್ಚರಿಕೆ ನೀಡುತ್ತದೆ ಮತ್ತು ಪರಿಸರದ ಕುರಿತು ‘ಸೆನ್ಸರಿ ಮ್ಯಾಪ್’ ರಚಿಸಿ ಒದಗಿಸುತ್ತದೆ.

ತನ್ನ ಆವಿಷ್ಕಾರದ ಕುರಿತು ಮಾತನಾಡುವ ತುಷಾರ್ ಅವರು, “ನನ್ನ ಪಕ್ಕದ ಮನೆಯಲ್ಲಿ ಅಂಧ ವ್ಯಕ್ತಿಯೊಬ್ಬರಿದ್ದರು. ಅವರ ಮೂಲಕ ರಸ್ತೆ ದಾಟುವುದು, ಜನರನ್ನು ಗುರುತಿಸುವುದು ಅಥವಾ ವಸ್ತುಗಳನ್ನು ಹುಡುಕುವುದು ಅವರಿಗೆ ಹೇಗೆ ಕಷ್ಟಕರ ಎಂಬುದನ್ನು ನೇರವಾಗಿ ಅರಿತಿದ್ದೇನೆ. ಅವರ ಜೀವನವನ್ನು ಉತ್ತಮಗೊಳಿಸುವ, ಅವರಿಗೆ ಸ್ವತಂತ್ರ ಬದುಕಲು ನಡೆಸಲು ನೆರವಾಗುವ ಏನನ್ನಾದರೂ ರಚಿಸಬೇಕು ಎಂಬುದು ನನ್ನ ತಲೆಯಲ್ಲಿತ್ತು. ಆದರೆ ಆಗ ನನ್ನ ತಾಂತ್ರಿಕ ಸಾಮರ್ಥ್ಯಕ್ಕಿಂತ ಆಸೆಯೇ ದೊಡ್ಡದಾಗಿತ್ತು. ನನಗೆ ಆಗ ಕಂಪ್ಯೂಟರ್ ವಿಷನ್ ಅಥವಾ ಹಾರ್ಡ್‌ ವೇರ್ ಡಿಸೈನ್‌ ಹಿನ್ನೆಲೆ ಇರಲಿಲ್ಲ. ಆದರೆ ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ಯೋಜನೆಯು ನನಗೆ ಸಂಪನ್ಮೂಲ ಒದಗಿಸಿದ್ದು ಮಾತ್ರವಲ್ಲ, ಆತ್ಮವಿಶ್ವಾಸ ಮತ್ತು ಮಾರ್ಗದರ್ಶನವನ್ನೂ ನೀಡಿತು’ ಎಂದರು.

ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ಯೋಜನೆಯು ದೇಶಾದ್ಯಂತ ಇರುವ ಸಾವಿರಾರು ಯುವ ಆವಿಷ್ಕಾರಕರಿಗೆ ರಾಷ್ಟ್ರದ ಸಮಸ್ಯೆಗಳಿಗೆ ತಂತ್ರಜ್ಞಾನ ಬಳಸಿ ಪರಿಹಾರಗಳನ್ನು ಹುಡುಕಲು ಪ್ರೇರೇಪಣೆ ಒದಗಿಸಿದ್ದು, ತುಷಾರ್‌ ಅವರಿಗೆ ತನ್ನ ಐಡಿಯಾವನ್ನು ವಾಸ್ತವರೂಪಕ್ಕೆ ತರಲು ವೇದಿಕೆ ಮತ್ತು ಬೆಂಬಲ ವ್ಯವಸ್ಥೆ ಒದಗಿಸಿತು.

ಈ ಕುರಿತು ತುಷಾರ್, ‘ಮಾರುಕಟ್ಟೆಗಳನ್ನು ಅರ್ಥಮಾಡಿಕೊಳ್ಳುವುದು, ಸಂಶೋಧನೆ ನಡೆಸುವುದು ಮತ್ತು ಸಂಭಾವ್ಯ ಪಾಲುದಾರರೊಂದಿಗೆ ತೊಡಗಿಸಿಕೊಳ್ಳುವುದು ಹೇಗೆ ಎಂಬುದನ್ನು ನಮಗೆ ಕಲಿಸಲಾಯಿತು. ಇದು ಐಡಿಯಾವನ್ನು ಉದ್ಯಮವಾಗಿ ಪರಿವರ್ತಿಸುವ ಕ್ರ್ಯಾಶ್ ಕೋರ್ಸ್ ಇದ್ದಂತೆ ಇತ್ತು’ ಎನ್ನುತ್ತಾರೆ.

ತುಷಾರ್‌ ಅವರ ಯೋಜನೆಯನ್ನು ಸ್ಯಾಮ್‌ಸಂಗ್‌ನ ಹಿರಿಯ ನಾಯಕತ್ವ ಮತ್ತು ಪರಿಣತ ತೀರ್ಪುಗಾರರ ತಂಡವು ಆಯ್ಕೆ ಮಾಡಿತು. ಅವರ ಆವಿಷ್ಕಾರವು ಸುರಕ್ಷಿತ, ಬುದ್ಧಿವಂತ, ಒಳಗೊಳ್ಳುವಿಕೆಯ ಭಾರತ ನಿರ್ಮಾಣಕ್ಕೆ ಎಐ ವಿಷಯದ ಅಡಿಯಲ್ಲಿ ಗೆಲುವು ಪಡೆಯಿತು.

ಮುಂದಿನ ವರ್ಷ ಅವರು ಪರ್ಸೀವಿಯಾವನ್ನು ಹೆಚ್ಚು ಬಳಕೆದಾರರೊಂದಿಗೆ ಪರೀಕ್ಷಿಸುವ, ಮೊಬಿಲಿಟಿ ತರಬೇತುದಾರರಿಂದ ಅಭಿಪ್ರಾಯ ಸಂಗ್ರಹಿಸುವ ಮತ್ತು ಒಳಾಂಗಣ ನ್ಯಾವಿಗೇಷನ್ ಫೀಚರ್‌ ಗಳನ್ನು ಸಂಯೋಜಿಸುವ ಐಡಿಯಾ ಹೊಂದಿದ್ದಾರೆ. ಈ ಸಾಧನವನ್ನು ಎಲ್ಲಾ ಕನ್ನಡಕಗಳಂತೆ ಸರ್ವವ್ಯಾಪಿಯಾಗಿಸುವುದು ಮತ್ತು ಅನಿವಾರ್ಯವಾಗಿಸುವುದು ಅವರ ಉದ್ದೇಶವಾಗಿದೆ. ಕೆಲವರಿಗೆ ಮಾತ್ರವೇ ಒದಗುವ ಐಷಾರಾಮಿ ಉತ್ಪನ್ನವಾಗಿಸುವುದರ ಬದಲಿಗೆ, ಇದನ್ನು ಎಲ್ಲರ ಹಕ್ಕಾಗಿಸಲು ಅವರು ಕಾರ್ಯ ನಿರ್ವಹಿಸಲಿದ್ದಾರೆ.

PREV

Recommended Stories

ವಿಶ್ವ ನ್ಯೂಮೋನಿಯ ದಿನ : ಕಾರಣ, ಲಕ್ಷಣ, ನಿಯಂತ್ರಣ ಹೇಗೆ ?
ಬೆಂಗಳೂರಿನಲ್ಲಿ ರೂ.125 ಕೋಟಿ ಹೂಡಿಕೆ ಮಾಡಲು ಮುಂದಾದ ಸೌಖ್ಯ