ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಗೆ ನಗರದ ರಸ್ತೆಗಳು ಅಕ್ಷರಶಃ ಹೊಳೆಗಳಾಗಿ ಉಕ್ಕಿ ಹರಿದ ಪರಿಣಾಮ ಬಹುತೇಕ ಕಡೆ ಸಂಚಾರ ದಟ್ಟಣೆ ಉಂಟಾಗಿ ಜನರು ಪರದಾಡಿದರು.
ಶನಿವಾರವೂ ನಗರದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಸಂಜೆ 6 ಗಂಟೆಯ ನಂತರ ನಗರದಾದ್ಯಂತ ಸುಮಾರು ಒಂದು ಗಂಟೆಗಿಂತ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಸ್ವಲ್ಪ ಬಿಡುವಿನ ನಂತರ ಮತ್ತೆ ವಿವಿಧ ಕಡೆ ಮಳೆ ಸುರಿದಿದೆ.
ಅದರಲ್ಲೂ ಮೆಜೆಸ್ಟಿಕ್, ವಿಧಾನಸೌಧ, ಎಂ.ಜಿ.ರಸ್ತೆ, ಶಿವಾಜಿನಗರ, ಮಲ್ಲೇಶ್ವರ, ಯಶವಂತಪುರ, ನಾಗರಬಾವಿ, ವಿಜಯನಗರ, ಶಾಂತಿನಗರ, ಚಾಮರಾಜಪೇಟೆ, ಆರ್ ಆರ್‌ನಗರ, ಬಸವೇಶ್ವರ ನಗರ, ಸದಾಶಿವನಗರ, ಗಾಂಧಿನಗರ, ವಿಜಯನಗರ,ಕೆ.ಆರ್ ಮಾರುಕಟ್ಟೆ, ಚಿಕ್ಕಪೇಟೆ, ಕಾಟನ್ ಪೇಟೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದೆ.
ಎಲ್ಲೆಲ್ಲಿ ಸಂಚಾರ ದಟ್ಟಣೆ:
ರಸ್ತೆಯಲ್ಲಿ ಭಾರೀ ಪ್ರಮಾಣ ನೀರು ನಿಂತುಕೊಂಡ ಪರಿಣಾಮ ನಗರ ಬಹುತೇಕ ಕಡೆ ನಿಧಾನಗತಿ ವಾಹನ ಸಂಚಾರ ಕಂಡು ಬಂತು. ಕೆ.ಆರ್ ವೃತ್ತದ ಬಳಿ ನೀರು ನಿಂತಿರುವುದರಿಂದ ಪೊಲೀಸ್ ಕಾರ್ನರ್ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ಕಂಡು ಬಂತು. ಸಾರಕ್ಕಿಮೆಟ್ರೋ ನಿಲ್ದಾಣದಿಂದ (ಪುನೀತ್ ರಾಜ್‌ಕುಮಾರ್ ರಸ್ತೆ) ಬನ್ನೇರುಘಟ್ಟ ರಸ್ತೆ ಕಡೆಗೆ, ರಾಮಮೂರ್ತಿ ನಗರದಿಂದ ಟಿನ್ ಫ್ಯಾಕ್ಟರಿ, ಮಧುರೈ ಇಡ್ಲಿ ಹೋಟೆಲ್, ಕೋರಮಂಗಲ, ದೊಮ್ಮಲೂರು ಫ್ಲೈಓವರ್, ಜಯದೇವದಿಂದ ಜೆಪಿ ನಗರ ಕಡೆ, ಬಿನ್ನಿಮಿಲ್ ಜಂಕ್ಷನ್. ಕಸುವನಹಳ್ಳಿ ರಸ್ತೆ, ಜಿ.ಡಿ.ಮರ ಜಂಕ್ಷನ್ ನಿಂದ ಎಚ್‌ಎಸ್‌ಬಿಸಿ ಜಂಕ್ಷನ್ ಕಡೆ, ಮಾನ್ಯತಾ ಟೆಕ್‌ಪಾರ್ಕ್ ನಿಂದ ಕೆಆರ್ ಪುರ ಕಡೆ ಹೋಗುವ ಮಾರ್ಗದಲ್ಲಿ ನೀರು ನಿಂತುಕೊಂಡಿತ್ತು.
ಆಡುಗೋಡಿ, ಹುಳಿಮಾವು ಗೇಟ್, ಕಮಾಂಡೋ ಆಸ್ಪತ್ರೆ ಕಡೆಯಿಂದ ಎಎಸ್‌ಸಿ ಜಂಕ್ಷನ್ ಅಯೋಧ್ಯ ಜಂಕ್ಷನ್‌ನಿಂದ ಟ್ಯಾನರಿ ರಸ್ತೆ, ವೀರಣ್ಣಪಾಳ್ಯ ಜಂಕ್ಷನ್‌ನಿಂದ ಹೆಬ್ಬಾಳ ವೃತ್ತದ ಕಡೆ, ವಿಂಡ್ಸನ್ ಮ್ಯಾನರ್ ರೈಲ್ವೆ ಸೇತುವೆ, ದೇವರ ಬಿಸನಹಳ್ಳಿಯಿಂದ ಸಕ್ರ ಆಸ್ಪತ್ರೆ, ಜೆ.ಬಿ.ನಗರ ರೈಲ್ವೆ ಸೇತುವೆಯಿಂದ ಭದ್ರಪ್ಪ ಲೇಔಟ್, ಕಂಟೋನ್ಮೆಂಟ್ ಮತ್ತು ಮೇಖ್ರಿ ವೃತ್ತ ನಡುವಿನ ಎರಡೂ ರಸ್ತೆಯಲ್ಲಿ, ಜಿಕೆವಿಕೆ ಹಿಂಭಾಗದ ದ್ವಾರದಿಂದ ಎಂ.ಎಸ್ ಪಾಳ್ಯ, ಕಲ್ಯಾಣ ನಗರದಿಂದ 80 ಅಡಿ ರಸ್ತೆ, ವರ್ತೂರಿನಿಂದ ವೈಟ್ ಫಿಲ್ಡ್,.ಕಸ್ತೂರಿನಗರದಿಂದ ಹೆಬ್ಬಾಳ ಮುಖ್ಯ ರಸ್ತೆ, ಬಾಗಲೂರಿನಿಂದ ಬೆಂಗಳೂರು ನಗರದ ಕಡೆ ಹಾಗೂ ವಿಮಾನ ನಿಲ್ದಾಣದ ಕಡೆಗೆ, ನ್ಯಾಷನಲ್ ಗೇಮ್ಸ್ ವಿಲೇಜ್ ನಿಂದ ಸೋನಿ ವರ್ಲ್ಡ್ ಜಂಕ್ಷನ್ ಕಡೆಗಳಲ್ಲಿ ಸಹ ನೀರು ನಿಂತುಕೊಂಡು ವಾಹನಗಳ ಸಂಚಾರ ನಿಧಾನಗತಿಯಲ್ಲಿ ಇತ್ತು.
ಕೆ.ಆರ್ ಪುರದಿಂದ ಟಿನ್‌ಫ್ಯಾಕ್ಟರಿ, ನಾಗಾವಾರ ಸರ್ವೀಸ್ ರಸ್ತೆಯಿಂದ ಹೆಬ್ಬಾಳ ಕಡೆಗೆ, ಗುಂಜೂರಿನಿಂದ ವರ್ತೂರು ಕಡೆ, .ಹುಣಸಮಾರನಹಳ್ಳಿ ಸರ್ವೀಸ್ ರಸ್ತೆಯಿಂದ ಏರ್‌ಪೋರ್ಟ್ ಕಡೆ ಸೇರಿದಂತೆ ಮೊದಲಾದ ರಸ್ತೆಯಲ್ಲಿ ಭಾರೀ ನೀರು ನಿಂತುಕೊಂಡು ಸಮಸ್ಯೆ ಉಂಟು ಮಾಡಿತ್ತು. ಈ ರಸ್ತೆಯಲ್ಲಿ ವಾಹನಗಳು ಆಮೆ ನಡಿಗೆಗಿಂತಲೂ ನಿಧಾನಗತಿಯಲ್ಲಿ ಸಾಗುವಂತಾಯಿತು. ಈ ರಸ್ತೆಯಲ್ಲಿ ಒಂದು ಕಿ.ಮೀ. ಸಾಗಲು ಒಂದೂವರೆ ಗಂಟೆ ಬೇಕಾಯಿತು.15ಕ್ಕೂ ಹೆಚ್ಚು ಮರ ಧರೆಗೆ
ಶನಿವಾರದ ಮಳೆಗೆ ನಗರದ ವಿವಿಧ ಭಾಗದಲ್ಲಿ ಮರ ಹಾಗೂ ಮರದ ರೆಂಬೆ-ಕೊಂಬೆಗಳು ಧರೆಗುರುಳಿದ ವರದಿಯಾಗಿದೆ. ಸುಮಾರು 30ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆ ಧರೆಗುರುಳಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಎಷ್ಟು ಮಳೆ?:
ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ನಗರದಲ್ಲಿ ಸರಾಸರಿ 2.2 ಸೆಂ.ಮೀ ಮಳೆಯಾಗಿದೆ. ಅತಿ ಹೆಚ್ಚು ಬಿಳೇಕಹಳ್ಳಿಯಲ್ಲಿ 5.1 ಸೆ.ಮೀ ಮಳೆ ದಾಖಲಾಗಿದೆ. ಉಳಿದಂತೆ ಪುಲಕೇಶಿನಗರ, ವನ್ನಾರ್ ಪೇಟೆಯಲ್ಲಿ ತಲಾ 4.9, ಹೊರಮಾವು 4.7, ಸಂಪಂಗಿರಾಮನಗರ 4.3, ದೊರೆಸಾನಿಪಾಳ್ಯ 4.2, ಅರಕೆರೆ 4.1, ಬಾಣಸವಾಡಿ 3.9, ಕೋರಮಂಗಲ 3.6, ಚೌಡೇಶ್ವರಿ, ಪಟ್ಟಾಭಿರಾಮನಗರ ಹಾಗೂ ಜಕ್ಕೂರಿನಲ್ಲಿ 3.3, ಮಾರತ್ ಹಳ್ಳಿ ಕುಶಾಲ್ ನಗರ ಹಾಗೂ ಹಗದೂರಿನಲ್ಲಿ ತಲಾ 2.9, ಎಚ್‌ಎಎಲ್ 2.8, ಕಾಡುಗೂಡಿ ಹಾಗೂ ವಿದ್ಯಾಪೀಠದಲ್ಲಿ 2.6, ರಾಮಮೂರ್ತಿ ನಗರ, ಕೊಡಿಗೇಹಳ್ಳಿ 2.2, ಬಸವನಪುರ 2.1, ವಿಶ್ವೇಶ್ವರಪುರದಲ್ಲಿ 2 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮನೆಗೆ ನುಗ್ಗಿದ ನೀರು:
ನಿರಂತರವಾಗಿ ಮಳೆ ಬಂದ ಕಾರಣ ಜಯನಗರ ಭಾಗದಲ್ಲಿನ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದ ಆ ಪ್ರದೇಶದ ಜನರು ಮನೆಗೆ ನುಗ್ಗಿದ ನೀರನ್ನು ಹೊರಹಾಕಲು ಸಾಹಸ ಪಡಬೇಕಾಯಿತು. ಮಳೆ ನೀರಿನ ಜೊತೆಗೆ ಕೊಳಚೆ ನೀರು ಕೂಡಾ ನುಗ್ಗಿದ್ದರಿಂದ ಮನೆಯಲ್ಲಿದ್ದ ವಸ್ತುಗಳು ಹಾಳಾದವು.