;Resize=(412,232))
ರಾಯಲ್ ಎನ್‌ಫೀಲ್ಡ್‌ನವರು ಇದೇ ಮೊದಲ ಬಾರಿಗೆ ‘ದಿ ಗ್ರೇಟ್ ಇಂಡಿಯನ್ ಕ್ರಾಸ್‌ರೋಡ್ಸ್’ ಎಂಬ ರೈಡ್ ಆಯೋಜಿಸಿದ್ದರು. ಚಂಡೀಗಢದಿಂದ ಕುಲುವಿಗೆ ಹೋಗಿ ಅಲ್ಲಿಂದ ಚಂಡೀಗಢಕ್ಕೆ ವಾಪಸ್ ಬರುವ ರೈಡ್. ಐದು ದಿನಗಳ ಕಾಲ ಬೆಟ್ಟ ಬಯಲು ದಾರಿಯಲ್ಲಿ ಸುಮಾರು 730ಕ್ಕೂ ಹೆಚ್ಚು ಕಿಮೀ ಕ್ರಮಿಸುವ ರೋಚಕ ಪಯಣ. ಈ ಪಯಣದ ಕತೆ ಇಲ್ಲಿದೆ.
ಮಹಾಸು. ಶಿಮ್ಲಾದಲ್ಲಿರುವ ಅತ್ಯಂತ ಎತ್ತರದ ಹಳ್ಳಿ. ಪಾಂಡವರು ಮತ್ತು ಕೌರವರು ಅಲ್ಲಿದ್ದರೆಂಬ ಐತಿಹ್ಯವಿರುವ ಹಳ್ಳಿ. ಈಗಲೂ ಅಲ್ಲಿನ ಕಾಡುಗಳಲ್ಲಿ ಮಣ್ಣನ್ನು ಕೆರೆದರೆ ಹಣತೆ ಸಿಗುತ್ತದೆ ಎಂಬ ಮಾತನ್ನು ಅಲ್ಲಿನ ಹಳ್ಳಿಗರು ಹೇಳುತ್ತಾರೆ. ಬೆಟ್ಟದ ಮೇಲೆ ದುರ್ಗಾಮಾತೆಯ ಗುಡಿ ಇದೆ. ಮಾತೆ ಅವರನ್ನೆಲ್ಲಾ ಕಾಯುತ್ತಾಳೆ ಎಂಬುದು ನಂಬಿಕೆ.
ಅಲ್ಲಿಂದ ಹೊರಡುವಾಗ ಸಂಜೆಯಾಗಿತ್ತು. ಆದರೆ ಹಗಲು ದೀರ್ಘವಿದ್ದಿದ್ದರಿಂದ ಇನ್ನೂ ಬೆಳಕಿತ್ತು. ಅಲ್ಲಿಂದ ಬರುವ ದಾರಿ ತುಂಬಾ ಕಡಿದಾದದ್ದು. ಕಲ್ಲು ಮಣ್ಣು ತುಂಬಿರುವ ದುರ್ಗಮ ಹಾದಿ. ಒಂದು ಕಡೆ ಬೆಟ್ಟ, ಇನ್ನೊಂದು ಕಡೆ ಕಣಿವೆ. ಕೊಂಚ ಯಾಮಾರಿದರೂ ನಿಶ್ಶಬ್ದ.
ಹಾದುಹೋಗುವಾಗ ಬೇರಾವ ಯೋಚನೆಯೂ ಸಾಧ್ಯವಿಲ್ಲ. ದಾರಿ, ಬ್ರೇಕು, ಬೈಕು. ಮೈಯೆಲ್ಲಾ ಕಣ್ಣಾಗಿರಬೇಕು. ಒಂದೊಂದು ಕ್ಷಣ ಕೂಡ ಮುಖ್ಯ. ಒಂದಿಬ್ಬರು ಬಿದ್ದು ಎದ್ದರು. ಸಾಲಾಗಿ ಆ ದಾರಿ ದಾಟುವಾಗ ಅದೇನೋ ಸಂತೋಷ. ಬದುಕುತ್ತಿರುವ ಭಾವ. ಆ ಕ್ಷಣ ನಮ್ಮದು.
ರೈಡಿಂಗ್‌ನ ಸಂತೋಷ, ಸಾರ್ಥಕತೆ ಇರುವುದು ಅಂಥಾ ಕ್ಷಣಗಳಲ್ಲೇ.
ನಾವು ದಕ್ಷಿಣ ಭಾರತದ ಸುಮಾರು 16 ಮಂದಿ ರಾಯಲ್ ಎನ್‌ಫೀಲ್ಡ್‌ನವರು ಆಯೋಜಿಸಿದ್ದ ‘ದಿ ಗ್ರೇಟ್ ಇಂಡಿಯನ್ ಕ್ರಾಸ್ ರೋಡ್ಸ್’ ಎಂಬ ರೈಡಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆವು. ಸಾಮಾನ್ಯವಾಗಿ ರಾಯಲ್ ಎನ್‌ಫೀಲ್ಡ್‌ನವರು ಆಗಾಗ್ಗೆ ರೈಡಿಂಗ್ ಪ್ಲಾನ್ ಮಾಡುತ್ತಾರೆ. ರಾಯಲ್ ಎನ್‌ಫೀಲ್ಡ್ ಸಮೂಹಕ್ಕೆ ಹೊಸ ದಾರಿಯನ್ನು, ಹೊಸ ಊರನ್ನು, ಹೊಸ ಬದುಕನ್ನು ಪರಿಚಯಿಸುತ್ತಾರೆ. ಇದು ಅಂಥದ್ದೇ ಒಂದು ರೈಡ್. ಈ ಸಲ ಅವರು ದಕ್ಷಿಣ ಭಾರತದ ಮಂದಿಗೆ ಉತ್ತರ ಭಾರತದ ಊರು, ರಸ್ತೆಗಳನ್ನು ಪರಿಚಯಿಸಲು ಮುಂದಾಗಿದ್ದರು. 5 ದಿನದಲ್ಲಿ 730ಕ್ಕೂ ಹೆಚ್ಚು ಕಿಮೀ ಕ್ರಮಿಸುವ ರೈಡ್.
ಚಂಡಿಗಢದಿಂದ ಆರಂಭ
ರೈಡಿಂಗ್‌ನ ಹಿಂದಿನ ದಿನವೇ ನಾವೆಲ್ಲಾ ಚಂಡಿಗಢ ತಲುಪಿದ್ದೆವು. ಅತ್ಯಂತ ಪ್ಲಾನ್‌ಡ್ ಸಿಟಿ ಎಂದೇ ಕರೆಯಲ್ಪಡುವ ಚಂಡಿಗಢದ ಇತಿಹಾಸ ಅತ್ಯಂತ ರೋಚ. ಇದು ಕೇಂದ್ರಾಡಳಿತ ಪ್ರದೇಶ. ಆದರೆ ಹರಿಯಾಣ ಮತ್ತು ಪಂಜಾಬ್ ಎರಡೂ ರಾಜ್ಯಗಳ ರಾಜಧಾನಿ. ಅಲ್ಲಿ ಕಾಲಿಟ್ಟಾಗಲೇ ನಮಗೆ ಬಿಸಿ ಅನುಭವ. ಬೆಂಗಳೂರು ಎಷ್ಟೋ ತಣ್ಣಗೆ ಇತ್ತು. ರಾಯಲ್ ಎನ್‌ಫೀಲ್ಡ್ ರೈಡಿಂಗ್ ಟೀಮ್‌ನ ಹೆಡ್ ರೋಹನ್ ಪಿಂಪ್ಲೆ ಮತ್ತು ಅವರ ತಂಡ ರೈಡ್‌ನಲ್ಲಿ ನಾವು ಎಲ್ಲೆಲ್ಲಿಗೆ ಹೋಗುತ್ತೇವೆ, ಯಾವ ಥರದ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದೆಲ್ಲಾ ಮಾಹಿತಿ ಕೊಟ್ಟರು. ಆ ರಾತ್ರಿ ಮುಂಬರುವ ಅಚ್ಚರಿಗಳನ್ನು ನೆನೆದುಕೊಂಡು ಹಾಗೇ ಸರಿದುಹೋಯಿತು.
ಬೆಳಿಗ್ಗೆ ಸುರಕ್ಷತೆಗಾಗಿ ರೈಡಿಂಗ್ ಗೇರ್ ಧರಿಸಿ ಬಂದರೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450, ಗೆರಿಲ್ಲಾ 450, ಗೋವನ್ ಕ್ಲಾಸಿಕ್ 350, ಸ್ಕ್ರ್ಯಾಮ್, ಕ್ಲಾಸಿಕ್ 350, ಹಂಟರ್ 350 ಹೀಗೆ ವಿವಿಧ ಬೈಕುಗಳು ನಮ್ಮನ್ನು ಕಾಯುತ್ತಿತ್ತು. ಅವರಿಗಿಷ್ಟದ ಬೈಕ್ ಅನ್ನು ಅವರವರು ಆರಿಸಿಕೊಂಡರು. ನನಗೆ ಕೆಂಪು ಬಣ್ಣದ ಗೆರಿಲ್ಲಾ 450.
ಚಂಡಿಗಢದಿಂದ ನಾವು ಹಿಮಚಲ ಪ್ರದೇಶದ ಮಶೋರ್ಬಾ ಎಂಬ ಜಾಗಕ್ಕೆ ಹೊರಟಿದ್ದೆವು. ಚಳಿಯನ್ನು ಅರಸುತ್ತಾ, ಹಿಮವನ್ನು ಬಯಸುತ್ತಾ ಚಂಡಿಗಢ ನಗರ ಬಿಟ್ಟು ಹೈವೆಗೆ ಬಿದ್ದೆವು. ಅಲ್ಲಿಂದ ಬೆಟ್ಟ ಏರಬೇಕು. ತಿರುವು ಮುರುವು ಹಾದಿ. ಬೆಟ್ಟ ಬಯಲು, ಕಣಿವೆ ಮಾರ್ಗ. ದ್ವಿಪಥ ಇದ್ದಿದ್ದು ಒಂದೊಮ್ಮೆ ಸಿಂಗಲ್ ರೋಡ್ ಆಗುತ್ತಿತ್ತು. ಮೈಯೆಲ್ಲಾ ಕಣ್ಣಾಗಬೇಕಿತ್ತು.
ಎತ್ತರಕ್ಕೆ ಹೋಗುತ್ತಿದ್ದಂತೆ ಕೊಂಚ ಕೊಂಚವೇ ತಂಗಾಳಿ ಬೀಸಿ ಹಾಯೆನ್ನಿಸುತ್ತಿತ್ತು. ಮಶೋರ್ಬಾದ ಆಳ ಕಣಿವೆಯಲ್ಲಿದ್ದ ಹೋಟೆಲ್ ತಲುಪಿದಾಗ ಸಂಜೆಯಾಗಿತ್ತು. ಅವತ್ತು ಅಂಥಾ ದುರ್ಘಟನೆಯೇನೂ ನಡೆಯಲಿಲ್ಲ.
ಎರಡನೇ ದಿನ ಆತಂಕ
ಹಿಮಾಚಲ ಪ್ರದೇಶದ ರಸ್ತೆಗಳ ವಿಶೇಷತೆ ಎಂದರೆ ಒಂದು ಕಡೆ ಬೆಟ್ಟವಿದ್ದರೆ, ಇನ್ನೊಂದು ಕಡೆ ಪ್ರಪಾತ. ಅದೊಂದು ಬೆಟ್ಟಗಳಲ್ಲೇ ಅಡಗಿ ಕುಳಿತಿರುವ ಊರು. ಅಲ್ಲಿನ ಸಂಪೂರ್ಣ ಬದುಕು ಬೆಟ್ಟಗಳಲ್ಲೇ. ಬೆಟ್ಟದ ಮೇಲೆ ಬೆಳೆಯುವ ಸೇಬು ಅವರ ಜೀವಾಧಾರ. ಅದರಿಂದಲೇ ಅವರು ವರ್ಷಕ್ಕೆ ಸಾಕಷ್ಟು ಲಕ್ಷಗಳನ್ನು ದುಡಿಯುತ್ತಾರೆ.
ಎರಡನೇ ದಿನ ನಾವು ಹೊರಟಿದ್ದು ಥಿಯೋಗ್ ಎಂಬಲ್ಲಿಗೆ. ಅಲ್ಲಿ ರಾಯಲ್ ಎನ್‌ಫೀಲ್ಡ್‌ನವರು ಹಿಮಾಲಯನ್ ಹಬ್ ಎಂಬ ಒಂದು ಸಂಸ್ಥೆ ರೂಪಿಸಿದ್ದಾರೆ. ಮೂಲತಃ ಹಿಮಾಚಲ ಪ್ರದೇಶದ ಮಂದಿಗೆ ಒಳ್ಳೆಯದು ಮಾಡಲು ಸೃಷ್ಟಿಸಿದ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್) ಕಾರ್ಯ. ಅದು ಇದ್ದಿದ್ದು ಬೆಟ್ಟದಿಂದ, ಹೈವೇ ರಸ್ತೆಯಿಂದ ಸುಮಾರು ಎಂಟು ಕಿಮೀ ದೂರ ಆಳ ಪ್ರಪಾತದಲ್ಲಿ. ಸಿಂಗಲ್ ರೋಡ್. ಆದರೆ ಎರಡು ಬದಿಯಿಂದ, ಟ್ರಕ್- ಕಾರುಗಳು ಚಲಿಸುತ್ತಿರುವಂತಹ ಮಣ್ಣು ರಸ್ತೆ. ಅಲ್ಲಿ ಕೆಲವು ಕಡೆ ನೀರು ನಿಂತು ರಸ್ತೆ ಕೆಸರುಮಯ. ಅಂಥಾ ರಸ್ತೆಯಲ್ಲಿ ಎದುರಿಗೆ ಟ್ರಕ್ ಬಂದಿತ್ತು. ಒಬ್ಬೊಬ್ಬರೇ ದಾಟಿ ಮುಂದೆ ಹೋಗಬೇಕಾದರೆ ಹರಸಾಹಸ. ಅಂಥಾ ರಸ್ತೆಯಲ್ಲಿ ಅವರು ದಿನಾ ಬದುಕುತ್ತಾರೆ. ಬದುಕು ಎಲ್ಲರಿಗೂ ಒಂದೇ ಅಲ್ಲ.ಹಿಮಾಲಯನ್ ಹಬ್‌ನಲ್ಲಿ ಅವರು ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ನೋಡಿಕೊಂಡು, ಅಲ್ಲಿ ಆ ಪ್ರದೇಶದ ಮಹಿಳೆಯರು ಮಾಡಿದ ಪ್ರಾದೇಶಿಕ ಆಹಾರ ಸೇವಿಸಿ ನಾವು ಹೊರಟಿದ್ದು ಮಹಾಸು ಎಂಬ ಹಳ್ಳಿಗೆ. ಅದೊಂದು ನಿಜಕ್ಕೂ ಅಚ್ಚರಿಯನ್ನೇ ಧರಿಸಿದ್ದ ಹಳ್ಳಿ.
ಅಲ್ಲಿನ ಜನ ನಮ್ಮನ್ನು ಕೊಡಲಿ ಹಿಡಿದು ನೃತ್ಯ ಮಾಡುತ್ತಾ ಸಂಭ್ರಮಿಸುತ್ತಾ ಸ್ವಾಗತಿಸಿದರು. ನಾಟಿ ಎಂಬ ಹೆಸರಿನ ಆ ನೃತ್ಯವನ್ನು ರಜಪೂತರು ಮಾತ್ರ ಮಾಡಬಹುದು ಅನ್ನುವುದು ಅಲ್ಲಿನ ಪದ್ಧತಿ. ಅಲ್ಲದೇ ಅಲ್ಲಿನ ಜನ ಅಲ್ಲಿನ ಪಾರಂಪರಿಕ ಆಟವಾದ ಅನ್ನು ಆಡಿ ತೋರಿಸಿದರು.
ಅವರ ಆತಿಥ್ಯಕ್ಕೆ ಹೊತ್ತು ಸರಿದಿದ್ದು ಗೊತ್ತಾಗಲಿಲ್ಲ. ಬೆಟ್ಟ ಇಳಿದಾಗ ಕತ್ತಲಾಗಿತ್ತು. ಮಳೆ ಬೇರೆ ಸುರಿಯತೊಡಗಿತ್ತು. ಈ ಹಂತದಲ್ಲಿ ಮತ್ತೊಬ್ಬ ರೈಡರ್ ಅವನ ಮೊಬೈಲ್ ನನ್ನ ಕೈಗೆ ಕೊಟ್ಟು, ಜೇಬಿನಿಂದ ಬೀಳುತ್ತಿದೆ ಹಿಡಿದುಕೋ ಎಂದ. ನಾನು ಮತ್ತೇನೂ ಯೋಚಿಸದೆ, ಮೊಬೈಲ್ ತಗೊಂಡೆ. ಆಮೇಲೆ ನಾನು ಮುಂದೆ ಹೋದೆ. ಹೋಟೆಲ್ ತಲುಪಿ ಅರ್ಧಗಂಟೆಯಾದರೂ ಅವನ ಸುದ್ದಿ ಇಲ್ಲ. ಕಣಿವೆ ದಾರಿ, ಕತ್ತಲು, ಮಳೆ ಎಲ್ಲವೂ ಸೇರಿ ಪ್ರಯಾಣವನ್ನು ಸ್ವಲ್ಪ ತ್ರಾಸದಾಯಕವಾಗಿಸಿತ್ತು. ಈ ಮಧ್ಯೆ ಬೇರೆಲ್ಲರು ಬಂದರೂ ಅವನು ಮಾತ್ರ ಬರಲಿಲ್ಲ. ಆತಂಕದಿಂದ ನಾವೊಂದಿಬ್ಬರು ಹುಡುಕಿಕೊಂಡು ಹೊರಟೆವು. ತಲೆಯಲ್ಲಿ ನಾನಾ ಆಲೋಚನೆಗಳು ಓಡುತ್ತಿತ್ತು. ಎಲ್ಲರೂ ಸಾಲಾಗಿ ಬರುವಾಗಿ ಅವನೊಬ್ಬ ಹೇಗೆ ದಾರಿ ತಪ್ಪಿದ ಅನ್ನುವುದೇ ಆಶ್ಚರ್ಯವಾಗಿತ್ತು. ಫೋನ್ ಬೇರೆ ನನ್ನಲ್ಲಿತ್ತು. ಆಮೇಲೆ ಅರ್ಧದಾರಿ ಹೋಗುವಷ್ಟರಲ್ಲಿ ವಾಪಸ್ ಬಂದ. ಅವನು ದಾರಿ ತಪ್ಪಿದ್ದ. ಅಲ್ಲಿ ಸರಿ ದಾರಿ ತಿಳಿಸುವವರೇ ಇರಲಿಲ್ಲ. ನಿನ್ನ ದಾರಿ ತಪ್ಪಿದರೆ ನೀನೇ ಹುಡುಕ್ಕೋ ಎಂದರಂತೆ ದಾರಿಯಲ್ಲಿ ಸಿಕ್ಕಿದವರು. ಅದೂ ಸರಿಯೇ. ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು. ಕೊನೆಗೊಬ್ಬರು ಟೂರಿಸ್ಟ್ ಸಿಕ್ಕಿ ಮ್ಯಾಪ್ ಹಾಕಿ ದಾರಿ ತೋರಿಸಿದ್ದಾರೆ. ಅವನು ಸಿಕ್ಕಾಗ ಕತ್ತಲಲ್ಲೂ ಬೆಳಕು ಮೂಡಿತ್ತು.
ಕುಲುವಿನ ದಾರಿಈ ದಿನದ ದಾರಿ ಬಹಳ ಸೊಗಸಾಗಿತ್ತು. ಬಿಯಾಸ್ ನದಿಯ ದಡದಲ್ಲಿರುವ ರಸ್ತೆಯಲ್ಲಿ ಪಯಣ. ಒಂದು ಪಕ್ಕದಲ್ಲಿ ಕಣಿವೆಯ ಕೆಳಗೆ ಬೇಸಿಗೆಯ ಬಿಯಾಸ್ ನದಿ ಹರಿಯುತ್ತಿತ್ತು. ಇನ್ನೊಂದು ಪಕ್ಕದಲ್ಲಿ ದೊಡ್ಡ ಬೆಟ್ಟ ತಣ್ಣಗೆ ನಿಂತಿತ್ತು. ಆ ಕಡಿದಾದ ರಸ್ತೆಯಲ್ಲಿ ಸಾಗುವುದೇ ಸಾಹಸ.
ಉದ್ದೋಉದ್ದಕ್ಕೆ ನೀಲಿ ಬಾನು, ಜುಳುಜುಳು ಹರಿಯುವ ನದಿ ನೀರು, ದೂರದಲ್ಲೆಲ್ಲೋ ಹಿಮ ರಾಶಿ- ಒಟ್ಟಾರೆ ಮಂತ್ರಮುಗ್ಧಗೊಳಿಸುವ ವಾತಾವರಣ. ಹಲವು ಟನೆಲ್‌ಗಳನ್ನು ಹಾದು ಕುಲು ತಲುಪಿದೆವು. ಬಿಯಾಸ್ ನದಿ ಪಕ್ಕವೇ ನಮ್ಮ ವಾಸ್ತವ್ಯ.
ಕುಲುವಿನಿಂದ ಮಂಡಿ
ಕುಲುವಿನಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿ, ಮೋಟಾರ್ ಸೈಕಲ್ ಡೇ ಆಚರಿಸಿ ಮಂಡಿಗೆ ಹೊರಟೆವು. ತಿರುವು ಮುರುವು ಹಾದಿ. ಸೊಗಸಾದ ರೈಡಿಂಗ್. ಮಂಡಿಯಲ್ಲಿ ರಾತ್ರಿ ಅಲ್ಲಿನ ಪ್ರಾದೇಶಿಕ ಆಹಾರ ಮಂಡಿ ದಾಮ್ ಅನ್ನು ಸವಿದೆವು. ಸಿಹಿ, ಖಾರ, ಕಹಿ, ಉಪ್ಪಿ ಸೇರಿ ಒಟ್ಟು ಆರು ಬಗೆಯ ಸಾರುಗಳನ್ನು ಮಾಡಿ ಅನ್ನ ಬಡಿಸುತ್ತಾರೆ. ನೆಲದ ಮೇಲೆ ಕುಳಿತು ತಿನ್ನುವ ಸಾಂಪ್ರಾದಾಯಿಕ ಆಚರಣೆ. ಸಮಾರೋಪ ಸಂಭ್ರಮ
ಬೆಟ್ಟದಿಂದ ಮತ್ತೆ ವಾಪಸ್ ಕೆಳಗೆ ಹೋಗುವ ದಿನ. ತಂಪಾದ ವಾತಾವರಣದಿಂದ ಮತ್ತೆ ಸೆಕೆಯ ಬೇಗೆಗೆ ಸಾಗುವ ದಿನ. ಈ ದಾರಿ ಕೊಂಚ ದೂರವಿತ್ತು. ರಸ್ತೆಯಲ್ಲಿ ಒಂದಿಬ್ಬರು ಮತ್ತೆ ಬಿದ್ದು ಎದ್ದರು. ಪೆಟ್ಟೇನೂ ಆಗಲಿಲ್ಲ. ಒಂದು ಭರ್ಜರಿ ಪಂಜಾಬಿ ಶೈಲಿಯ ಊಟ ಮಾಡಿ ಚಂಡೀಗಢ ಪ್ರದೇಶಿಸಿದೆವು. ಅಲ್ಲಿಗೆ ಐದು ದಿನ ಕಳೆದಿತ್ತು.
ಆಯಾಸವಾಗಿತ್ತು. ಆದರೆ ಬೇಸರವಿರಲಿಲ್ಲ. ಮೈಕೈ ನೋವಾಗಿತ್ತು. ಆದರೆ ಸಂತೋಷವಿತ್ತು. ದಾರಿಯಲ್ಲಿ ಹೋಗುತ್ತಿದ್ದರೆ ಬಹಳಷ್ಟು ಮಂದಿ ಫೋಟೋ ಕೇಳಿ ಹೀರೋ ಫೀಲಿಂಗ್ ಬರಿಸಿದರು. ರೈಡಿಂಗ್ ಹೋಗುವವರಿಗೆ ಅದೊಂದು ಮ್ಯಾಜಿಕ್ ಮೊಮೆಂಟ್. ರೈಡಿಂಗ್ ಗೇರ್ ಧರಿಸಿದ್ದರೆ ಹೀರೋ, ಇರದಿದ್ದರೆ ಸಾಮಾನ್ಯ ವ್ಯಕ್ತಿ. ರೈಡ್ ಮುಗಿಸಿದಾಗ ಎಲ್ಲರಲ್ಲೂ ಸಂಭ್ರಮವಿತ್ತು. ಉತ್ತರ ಭಾರತದ ರಸ್ತೆಗಳನ್ನು, ಜನಜೀವನವನ್ನು ಅರಿತ ಸಂತಸವಿತ್ತು. ಉತ್ತರಕ್ಕೆ ಹೋದರೂ ದಕ್ಷಿಣಕ್ಕೆ ಬಂದರೂ ಜನರ ಭಾವ ಒಂದೇ. ಆಹಾರ, ಜನಜೀವನ ಸ್ವಲ್ಪ ವ್ಯತ್ಯಾಸ ಇರಬಹುದು. ಆದರೆ ಸುಖ ದುಃಖ ಅದದೇ.
ಮುರಾಕಮಿ ಹೇಳಿದಂತೆ, ಪ್ರತಿಯೊಬ್ಬರೂ ಒಂದಲ್ಲ ಒಂದು ಚಂಡಮಾರುತ ದಾಟಿಯೇ ಬರಬೇಕು. ಆ ಚಂಡಮಾರುತ ದಾಟಿ ಬಂದವರು ಮೊದಲಿನ ಮನುಷ್ಯರು ಆಗಿರುವುದಿಲ್ಲ. ರೈಡಿಂಗ್ ಕೂಡ ಹಾಗೆಯೇ. ದಾಟಿ ಬಂದ ಮೇಲೆ ಒಳಗೆಲ್ಲೋ ಸಣ್ಣ ಬದಲಾವಣೆ ಆಗಿರಲೇಬೇಕು.
ಹಿಮಾಲಯನ್ ಹಬ್ ಎಂಬ ಜ್ಞಾನಗೂಡು
ಐಷರ್ ಗ್ರೂಪ್ ಫೌಂಡೇಶನ್ ರೂಪಿಸಿರುವ ವಿಶಿಷ್ಟ ಜ್ಞಾನ ಕೇಂದ್ರ ಈ ಹಿಮಾಲಯನ್ ಹಬ್. ಹಿಮಾಲಯವನ್ನೇ ತನ್ನ ಆಧ್ಯಾತ್ಮಿಕ ಮನೆ ಎಂದು ನಂಬಿರುವ ರಾಯಲ್ ಎನ್‌ಫೀಲ್ಡ್‌ನ ಸಾಮಾಜಿಕ ಅಭಿಯಾನದ ಭಾಗವಾಗಿ ಈ ಹಬ್ ರೂಪುಗೊಂಡಿದೆ. ಈ ಹಬ್ ಸಿಎಸ್ಆರ್ ಕಾರ್ಯಕ್ರಮದ ಭಾಗವಾಗಿದ್ದು, ಹಿಮಾಚಲ ಪ್ರದೇಶದ ಮಕ್ಕಳಿಗೆ ಫಿಲ್ಮ್ ಮೇಕಿಂಗ್ ಫೆಲೋಶಿಪ್ ನೀಡಲಾಗುತ್ತದೆ. ಅಲ್ಲಿನ ಮಹಿಳೆಯರಿಗೆ ಕೆಫೆ ನಿರ್ವಹಣೆಯನ್ನು ಹೇಳಿಕೊಡಲಾಗುತ್ತದೆ. ಒಟ್ಟಾರೆ ಅಲ್ಲಿನ ಜನಜೀವನಕ್ಕೆ ನೆರವಾಗುವ ಮಹತ್ತರ ಕಾರ್ಯವನ್ನು ರಾಯಲ್ ಎನ್‌ಫೀಲ್ಡ್ ನಡೆಸುತ್ತಿದೆ.
ಸುರಕ್ಷತೆಗಾಗಿ ರೈಡಿಂಗ್ ಗೇರ್
ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ರೈಡಿಂಗ್ ಉತ್ಸಾಹಿಗಳಿಗೆಂದೇ ಉತ್ಕೃಷ್ಟವಾದ ರೈಡಿಂಗ್ ಗೇರ್‌ಗಳನ್ನು ಒದಗಿಸುತ್ತದೆ. ವಿವಿಧ ರೀತಿಯ ಜಾಕೆಟ್‌ಗಳು, ಶೂಗಳು, ಹೆಲ್ಮೆಟ್, ಗ್ಲೌಸ್, ನೀಗಾರ್ಡ್‌ಗಳು ಲಭ್ಯವಿವೆ. ರೈಡಿಂಗ್ ಹೋಗುವವರು ತಮ್ಮ ಸುರಕ್ಷತೆಗೆ ಮತ್ತು ಕುಟುಂಬದ ನೆಮ್ಮದಿಗೆ ರೈಡಿಂಗ್ ಗೇರ್ ಧರಿಸಲೇಬೇಕು ಅನ್ನುತ್ತಾರೆ ರಾಯಲ್ ಎನ್‌ಫೀಲ್ಡ್ ರೈಡಿಂಗ್ ಟೀಮ್‌ನವರು.