ಇ- ಫಾರ್ಮಸಿ ಎಂಬ ಪೆಡಂಭೂತಕ್ಕೆ ಬೇಕಿದೆ ಕಡಿವಾಣ

Published : Jun 27, 2026, 12:43 PM IST
medicine

ಸಾರಾಂಶ

ವೆಬ್, ಆ್ಯಪ್ನಿಂ ದ ಔಷಧಿಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ಹೊಣೆಯನ್ನು ಇ-ಫಾರ್ಮಸಿ ಹೊತ್ತುಕೊಂಡಿವೆ. ಇದರಿಂದಾಗಿ ಔಷಧಿ ಮಾರಾಟ ಮಳಿಗೆಗಳು ಮತ್ತು ಇ-ಫಾರ್ಮಸಿಗಳು ಪರಸ್ಪರ ಸಾಮರಸ್ಯದ ಅನ್ವೇಷಣೆಯಲ್ಲಿ ತೊಡಗಿವೆ.

ಮನೆಯಲ್ಲೇ ಕುಳಿತು ಔಷಧಿ ಆರ್ಡರ್‌ ಮಾಡುವ ವ್ಯವಸ್ಥೆಗೆ ಬೇಕಿದೆ ಸರ್ಕಾರದ ನಿಯಂತ್ರಣ । ಇಲ್ಲದಿದ್ದರೆ ಮುಂದಿದೆ ಅಪಾಯ

ವೆಬ್, ಆ್ಯಪ್ನಿಂ ದ ಔಷಧಿಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ಹೊಣೆಯನ್ನು ಇ-ಫಾರ್ಮಸಿ ಹೊತ್ತುಕೊಂಡಿವೆ. ಇದರಿಂದಾಗಿ ಔಷಧಿ ಮಾರಾಟ ಮಳಿಗೆಗಳು ಮತ್ತು ಇ-ಫಾರ್ಮಸಿಗಳು ಪರಸ್ಪರ ಸಾಮರಸ್ಯದ ಅನ್ವೇಷಣೆಯಲ್ಲಿ ತೊಡಗಿವೆ. ಕೂಡಲೇ ಸರ್ಕಾರವು ಮಧ್ಯಪ್ರವೇಶಿಸಿ ಸ್ಪಷ್ಟ ನಿಯಾಮವಳಿಗಳನ್ನು ರೂಪಿಸಿ ಮುಂದೆ ಆಗಬಹುದಾದ ಅನಾಹುತ ತಪ್ಪಿಸಬೇಕಿದೆ.

-ಬಂಡು ಕಟ್ಟಿ, ಫಾರ್ಮಾಸಿಸ್ಟ್, ಇಳಕಲ್

ಭಾರತೀಯ ಔಷಧ ಮಾರಾಟ ಕ್ಷೇತ್ರವು ಕಳೆದ 10 ವರ್ಷಗಳಲ್ಲಿ ಹಲವಾರು ನಾಟಕೀಯ ಏರಿಳಿತಗಳನ್ನು ಕಂಡಿದೆ. ರೋಗಿಗಳನ್ನು ‘ಗ್ರಾಹಕರು’ ಎಂದು ಹೇಳುವಷ್ಟು ತಂತ್ರಜ್ಞಾನವು ಮುಂದುವರೆದಿದೆ! ಡಿಜಿಟಲ್ ತಂತ್ರಜ್ಞಾನವು ರಾಕೆಟ್ ವೇಗದಲ್ಲಿ ಓಡುತ್ತಲಿದೆ. ಔಷಧ ಮಾರಾಟದ ವಿಷಯವು ಈಗ ತುಂಬಾ ಗೊಂದಲಕಾರಿಯೂ, ರೋಮಾಂಚಕವೂ ಆಗತೊಡಗಿದೆ. ಡಿಜಿಟಲ್ ಯುಗದಲ್ಲಿ ಪ್ರಿಸ್ಕ್ರಿಪ್ಷನ್ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಎಐ ತನಗೆ ಬೇಕಾದ್ದನ್ನು ಸೃಷ್ಟಿಸಿಕೊಳ್ಳುತ್ತದೆ. ಸರ್ಕಾರವು ಮಧ್ಯಪ್ರವೇಶಿಸಿ ಮಿತಿಗಳನ್ನು ಹೇರುವುದಕ್ಕೆ ಇದು ಸಕಾಲ. ಇಲ್ಲವಾದರೆ ರಾಸಾಯನಿಕ ಔಷಧಗಳ ವಿಷಮ ಪರಿಣಾಮಗಳನ್ನು ಮುಂದಿನ ತಲೆಮಾರು ಕೂಡಾ ಅನುಭವಿಸಬೇಕಾದೀತು! ಸ್ಟೆರಾಯ್ಡ್, ಮುಂತಾದ ಅಪಾಯಕಾರಿ ಔಷಧಗಳು ಸುಲಭವಾಗಿ ಕೈಗೆ ಸಿಕ್ಕರೆ ಯುವಕರ ಬಾಳು ಹಾಳಾಗುತ್ತದೆ. ಅವು ಜೀವಮಾನವಿಡೀ ಮನುಷ್ಯನ ದೇಹದಲ್ಲಿ ಅವಿತು ಕುಳಿತ ಆಟವಾಡಿಸುತ್ತಲೇ ಇರುತ್ತವೆ.

ನಿಯಮ ರೂಪಿಸುವಲ್ಲಿ ಸರ್ಕಾರ ವಿಫಲ:

ಸ್ಮಾರ್ಟ್‌ಫೋನ್‌ ಹಾಗೂ ಇಂಟರ್ನೆಟ್ ಈಗ ಪ್ರತಿಯೊಬ್ಬರ ಕೈಗಳನ್ನೂ ಅಲಂಕರಿಸಿವೆ. ಅವು ಸಾಧನಕ್ಕಿಂತ ವ್ಯಸನಗಳಾಗತೊಡಗಿವೆ. ಇ-ಫಾರ್ಮಸಿಯನ್ನು ಹೊತ್ತು ತರುವ ಡಿಜಿಟಲ್ ವ್ಯಸನವು ಅನುಕೂಲತೆಯೆಂಬ ಭ್ರಮೆಯ ‘ಸೋಲೊಮನ್ನನ ಸಾವಿರದೊಂದು ರಾತ್ರಿ’ಯ ಮಾಂತ್ರಿಕ ಕಾರ್ಪೆಟ್ ತರ ಜನರ ಮನಸ್ಥಿತಿಯನ್ನು ಹೊತ್ತು ತಿರುಗತೊಡಗಿದೆ. ಎತ್ತರದಿಂದ ಕೆಳಗೆ ಬೀಳುವ ಅಪಾಯ ತುಂಬಾ ಹೆಚ್ಚಾಗಿದೆ. ವೆಬ್ ಅಥವಾ ಆ್ಯಪ್‍ನಿಂದ ಔಷಧಿಗಳನ್ನು ನೇರವಾಗಿ ಜನರ ಮನೆಯ ಬಾಗಿಲಿಗೆ ತಲುಪಿಸುವ ಹೊಣೆಯನ್ನು ಇ-ಫಾರ್ಮಸಿ ಹೊತ್ತುಕೊಂಡಿವೆ. ಇ-ಸೇವೆಯು ಮನೆ ಬಾಗಿಲಿಗೆ ತಲುಪಿಸುವ ಅನುಕೂಲತೆ ಹಾಗೂ ಸ್ಪರ್ಧಾತ್ಮಕ ಬೆಲೆಯನ್ನು ನೀಡುತ್ತದೆ ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ. ಸಮಯದ ಅಭಾವವಿರುವ ಬುದ್ಧಿವಂತ ಜನರಿಗೆ ವರದಾನ ಎನಿಸಿರುವ ಇದು ಭಸ್ಮಾಸುರನ ಹಸ್ತವಾಗದಿದ್ದರೆ ಸಾಕು. ಡಿಜಿಟಲ್ ಕ್ರಾಂತಿಯು ತುಂಬಾ ನಾಟಕೀಯತೆಯನ್ನು ಹೊತ್ತು ತಂದಿದೆ. ನೂರಾರು ವರ್ಷಗಳ ಇತಿಹಾಸವಿರುವ ಸಾಂಪ್ರದಾಯಿಕ ಔಷಧ ಮಾರಾಟ ಕ್ಷೇತ್ರವು ಇಷ್ಟು ದೊಡ್ಡ ಮಟ್ಟದಲ್ಲಿ ಗಲಿಬಿಲಿಗೊಳ್ಳುತ್ತಿದ್ದರೂ ಸರ್ಕಾರವೂ ತೆಪ್ಪಗೆ ಕುಳಿತಿದೆ. ಪರಿಸ್ಥಿತಿಯ ಮೇಲೆ ನಿಯಂತ್ರಣವನ್ನು ಸಾಧಿಸಿ ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವಾಗದಂತೆ ಸ್ಪಷ್ಟ ನಿಯಮಾವಳಿಯನ್ನು ರೂಪಿಸಿ ಕೊಡುವಲ್ಲಿ ಸರ್ಕಾರವೂ ಪದೇಪದೇ ವಿಫಲವಾಗುತ್ತಿರುವುದೊಂದು ಸೋಜಿಗ.

ಹೈಬ್ರಿಡ್ ಮಾದರಿ ಅಳವಡಿಕೆ:

ಇ-ಫಾರ್ಮಸಿ ಎಂಬ ಡಿಜಿಟಲ್ ಕ್ರಾಂತಿಯು ಸಾಂಪ್ರದಾಯಕ ಔಷಧ ಮಾರಾಟಗಾರರನ್ನು ಈಗ ಬಡಿದೆಬ್ಬಿಸಿದೆ. ಕೊರೋನಾ ವೇಳೆ ಔಷಧ ಮಳಿಗೆಗಳು ಸಲ್ಲಿಸಿದ ಸೇವೆಯನ್ನು ದೇಶವು ಮರೆಯಬಾರದು. ಕೆಲವು ಔಷಧ ವಹಿವಾಟುಗಾರರು ತಮ್ಮನ್ನು ತಾವು ಸ್ಪರ್ಧಾತ್ಮಕಗೊಳಿಸಿಕೊಳ್ಳುತ್ತಿದ್ದರೆ, ಮಿಕ್ಕವರು ಸ್ತಂಭೀಭೂತರಾಗಿದ್ದಾರೆ. ಕೆಲವು ಔಷಧ ಮಾರಾಟಗಾರರು ಹೈಬ್ರಿಡ್ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ತಮ್ಮ ನಿಷ್ಠಾವಂತ ಗ್ರಾಹಕರನ್ನು ಹಾಗೂ ಹೊಸ ಡಿಜಿಟಲ್ ಮನಸ್ಸಿನವರ ಇಷ್ಟಗಳನ್ನು ಪೂರೈಸಲು ತಮ್ಮ ಅಂಗಡಿಗಳನ್ನು ಆನ್‌ಲೈನ್‌ ಪ್ರಭಾವಕ್ಕೊಳಪಡಿಸುತ್ತಿದ್ದಾರೆ. ಈ ಕ್ರಿಯಾತ್ಮಕ ಬದಲಾವಣೆಯು ಔಷಧಿಗಳನ್ನು ಹೇಗೆ ವಿತರಿಸಲಾಗುತ್ತದೆ ಎಂಬುದನ್ನು ಮರುರೂಪಿಸುವುದಲ್ಲದೆ, ಆರೋಗ್ಯ ರಕ್ಷಣಾ ರಂಗದ ಮಿತಿಗಳನ್ನು ವಿಸ್ತಾರಗೊಳಿಸುತ್ತದೆ. ಆದರೆ ಗ್ರಾಮೀಣ ಭಾರತವು ಕೂಡಾ ಇ-ಫಾರ್ಮಸಿ ಎಂಬ ಮೋಹದ ಸೆರಗಿನ ತೆಕ್ಕೆಗೆ ಜಾರುತ್ತಿರುವುದು ಸೋಜಿಗವಾಗಿದೆ.

ಅಪಾಯಗಳ ಬಗ್ಗೆ ಅರಿವೇ ಇಲ್ಲ:

ಪಣ ತೊಟ್ಟಂತೆ ಜಿದ್ದಿಗೆ ಬಿದ್ದಿರುವ ಇ-ಫಾರ್ಮಸಿಯು ಪಾಲುದಾರಿಕೆ ಮತ್ತು ಹಲವಾರು ಸಹಯೋಗಗಳ ನೆರವಿನೊಂದಿಗೆ ಗೆಲ್ಲುವ ತವಕ ತೋರುತ್ತದೆ. ಆದರೆ ಕಾನೂನು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಮೌನವಾಗಿರುವುದು ಶೋಚನೀಯ. ಸರ್ಕಾರವು ಈಗ ಮಧ್ಯಪ್ರವೇಶಿಸುವ ಅಗತ್ಯವಿದೆ. ಸಾಂಪ್ರದಾಯಿಕ ಔಷಧ ಮಾರಾಟ ಮಳಿಗೆಗಳು ಮತ್ತು ಇ-ಫಾರ್ಮಸಿಗಳು ಪರಸ್ಪರ ಸಾಮರಸ್ಯದ ಅನ್ವೇಷಣೆಯಲ್ಲಿ ತೊಡಗಿವೆ. ಆದರೆ ಜನಸಾಮಾನ್ಯರ ಪಾಲಿಗೆ ಇದು ಇನ್ನೂ ಅಪಾಯಕಾರಿ ಆಗಬಹುದಾಗಿದೆ. ಎರಡೂ ಕ್ಷೇತ್ರಗಳು ತಮ್ಮ ಸಂಪನ್ಮೂಲಗಳನ್ನು ಹೆಚ್ಚಿಸಿಕೊಂಡು ಪರಿಣಾಮಕಾರಿ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯನ್ನು ರಚಿಸಲು ಪರಸ್ಪರರ ಸಾಮರ್ಥ್ಯಗಳನ್ನು ಬಳಸಿಕೊಳ್ಳುತ್ತಿವೆ. ಕಾಲ ಕಳೆದಂತೆ ಭೌತಿಕ ಮತ್ತು ಡಿಜಿಟಲ್ ನಡುವಿನ ಗೆರೆಗಳು ಮಸುಕಾಗುತ್ತಲೇ ಇರುವುದರಿಂದ, ಗ್ರಾಹಕನು ಮತ್ತಷ್ಟು ಇ-ಫಾರ್ಮಸಿ ತೆಕ್ಕೆಗೆ ಜಾರುತ್ತಿದ್ದಾನೆ. ಮನೆಯವರೆಗೆ ತಲುಪಿಸುವ ಅನುಕೂಲತೆ ಮತ್ತು ಸ್ಪರ್ಧಾತ್ಮಕ ಬೆಲೆಯ ಬಗ್ಗೆ ಮಾತ್ರ ಗ್ರಾಹಕನು ತಲೆ ಕೆಡಿಸಿಕೊಂಡಿದ್ದಾನೆ. ರಾಸಾಯನಿಕಗಳಿಂದಾದ ಔಷಧಿಗಳು ತರಬಹುದಾದ ಅನಿರೀಕ್ಷಿತ ಅಪಾಯಗಳ ಬಗ್ಗೆ ಗ್ರಾಹಕನಿಗೆ ಮಾಹಿತಿ ಇಲ್ಲ.

PREV
Read more Articles on

Recommended Stories

ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಸಣ್ಣ ನಗರಗಳ ಉದ್ಯಮಿಗಳು : ವಿಶ್ವ ಎಂಎಸ್ಎಂಇ ದಿನ
ರೆಡ್‌ಮಿ ಟರ್ಬೊ 5 ಪವರ್‌ ಫುಲ್‌ ಮೊಬೈಲ್‌ ಬಿಡುಗಡೆ