;Resize=(412,232))
ಮುಖ್ಯಮಂತ್ರಿಯಾಗಿ ತಿಂಗಳಾಗುತ್ತಿದ್ದಂತೆಯೇ ಜಿಲ್ಲಾ ದರ್ಶನ-ಪ್ರಗತಿ ಪರಿಶೀಲನೆ ಶುರುಮಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೊನ್ನೆ ಕಲಬುರಗಿಗೆ ಬಂದಾಗ ನಡೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಟ್ರಿಕ್ಕಿ ಕ್ವಶ್ಚನ್‌ಗೆ ಕ್ಷಣಕಾಲ ಸೈಲೆಂಟ್ ಆದ ಪ್ರಸಂಗ ನಡೆಯಿತು.
ಮಂತ್ರಿ ಮಂಡಲ ವಿಸ್ತರಣೆ ಯಾವಾಗ್ರಿ? ಯಾರ್‍ಯಾರಿಗೆ ಇದೆ ಮಂತ್ರಿಗಿರಿ ಯೋಗ? ಕಲಬುರಗಿಗೆ ಇನ್ನೊಂದು ಮಂತ್ರಿಸ್ಥಾನ ಕೊಡ್ತೀರಾ ಎಂದು ಕಿಕ್ಕಿರಿದ ಪ್ರೆಸ್‌ಮೀಟ್‌ನಲ್ಲಿ ಪ್ರಶ್ನೆಗಳು ತೂರಿ ಬಂದಾಗ ಮುಖ್ಯಮಂತ್ರಿಗಳು ಕ್ಷಣ ಕಾಲ ಫುಲ್ ಸೈಲೆಂಟ್!
ಆದ್ರೂ ಪಟ್ಟು ಬಿಡದ ಸುದ್ದಿಗಾರರು ಕೃಷ್ಣ ಸರ್ಕಾರದಾಗ ಕಲಬುರಗಿಯ 7 ಶಾಸರಿಗೆ ಒಲಿದಿತ್ತು ಮಂತ್ರಿಭಾಗ್ಯ, ನಿಮ್ಮ ಸರ್ಕಾರದಲ್ಲಿ ಕೊನೆಪಕ್ಷ ಮೂವರಿಗಾದ್ರೂ ಮಂತ್ರಿಗಿರಿ ಕೊಡ್ತೀರಾ ಎಂದು ಕಾಟಕೊಟ್ಟರು.
ತಕ್ಷಣಕ್ಕೆ ಏನೂ ಹೇಳದ ಡಿ.ಕೆ.ಶಿವಕುಮಾರ್ ಅವರು, ನಿಮ್ಮ ಈ ಕ್ವಶ್ಚನ್‌ಗೆ ಏನ್ ಹೇಳಲಿ ನೀವೇ ಹೇಳ್ರಿ... ಎಂದು ಪಾಟೀ ಸವಾಲೆಸೆದ್ರು. ಜತೆಗೆ, ಹಿಂದೆಲ್ಲಾ 100 ಮಂದಿಗೂ ಮಿನಿಸ್ಟರ್ ಮಾಡ್ಲಿಕ್ಕೆ ಅವಕಾಶವಿತ್ತು, ಈಗ ಬರೀ 33 ಮಂದಿಗೆ ಮಿನಿಸ್ಟರ್ ಮಾಡಬಹುದಷ್ಟೆ, ಹೈಕಮಾಂಡ್‌ನವ್ರು ಅಳೆದು ಸುರಿದು ಎಲ್ಲವನ್ನೂ ತೀರ್ಮಾನ ಮಾಡ್ತಾರೆ. ಸಪ್ತ ಸಚಿವಗಿರಿ, ಜಿಲ್ಲಾ ಪ್ರಾತಿನಿಧ್ಯ.. ಅದೆಲ್ಲಾ ಈಗ ಅಪ್ರಸ್ತುತ ಎಂಬರ್ಥ ಬರುವಂತೆ ಹೇಳಿದಾಗ ಮೌನವಾಗುವ ಸರದಿ ಪ್ರಶ್ನೆ ಕೇಳಿದವರದ್ದಾಗಿತ್ತು.
ಸದ್ಯ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಅಂಗವಾಗಿ ಎನ್ಯುಮರೇಷನ್ ಫಾರ್ಮ್ ಸಿಗದೆ ಆತಂಕಗೊಂಡು ಬೂತ್ ಕಚೇರಿಗೆ ಹೋಗಿ ಬಿಎಲ್‌ಒ ಅವರ ಫೋನ್ ನಂಬರ್ ಪಡೆದು ನಮ್ಮ ಮನೆಗಳ ಮ್ಯಾಪಿಂಗ್ ಆಗಿಲ್ಲ, ಫಾರ್ಮ್ ಯಾವಾಗ ಕೊಡುತ್ತೀರಿ ಎಂದು ಫೋನಾಯಿಸಿದಾಗ ಮಹಿಳಾ ಬಿಎಲ್‌ಒ ಅವರಿಂದ ಇಂಥ ಉತ್ತರ ಬಂದಾಗ ನಿವಾಸಿಯೊಬ್ಬರಿಗೆ ಸಿಟ್ಟಾಗಬೇಕೋ, ನಗಬೇಕೋ ಎಂಬಂತಹ ಸ್ಥಿತಿ.
ಇಷ್ಟಕ್ಕೂ ಇಂತಹ ಪ್ರಸಂಗ ನಡೆದಿದ್ದು ರಾಜಧಾನಿ ಬೆಂಗಳೂರಿನಲ್ಲಿ. ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುವ ವ್ಯಕ್ತಿಯೊಬ್ಬರಿಗೆ ತಮ್ಮ ಮನೆಯ ಮ್ಯಾಪಿಂಗ್ ಮಾಡಿರುವ ಸ್ಟಿಕ್ಕರ್ ಅಂಟಿಸಿಲ್ಲ, ಈವರೆಗೆ ಫಾರ್ಮ್ ಕೊಡದಿರುವ ಕುರಿತು ಕೊಂಚ ಆತಂಕವಾಯಿತು. ಮತದಾರ ಪಟ್ಟಿಯಲ್ಲಿ ಇಲ್ಲ ಎಂದು ಪಾಕಿಸ್ತಾನ, ಬಾಂಗ್ಲಾ ದೇಶದವನು ಎಂದು ಹೇಳಿಬಿಟ್ಟರೆ ಕಷ್ಟ ಅಂತ ಎಲೆಕ್ಷನ್ ಕಮಿಷನ್ ವೆಬ್‌ಸೈಟ್‌ನಲ್ಲಿ ಬಿಎಲ್‌ಒ ಮೊಬೈಲ್ ಹುಡುಕಿ ಫೋನಾಯಿಸಿ ವಿಚಾರಿಸಿದರು.
ಸಾರ್ ತಪ್ಪು ತಿಳ್ಕೋಬೇಡಿ, ಬೆಳಗ್ಗೆಯಿಂದ ನಡೆದು ನಡೆದು ಸುಸ್ತಾಗಿ ಶಾಲೆ ಬಳಿ ಕುಳಿತಿದ್ದೇನೆ. ನೀವೇ ಬಂದು ಫಾರ್ಮ್ ತಗೊಂಡು ಹೋದರೆ ಪುಣ್ಯ ಬರುತ್ತೆ ಎಂದು ಮಹಿಳಾ ಬಿಎಲ್ಒ ಅಲವತ್ತುಕೊಂಡರು.
ಅವರ ಗೋಳಾಟ ಕೇಳಿದ ವ್ಯಕ್ತಿ, ಆಯ್ತು ಎಂದು ಹೇಳಿ ಅವರಿದ್ದ ಸ್ಥಳಕ್ಕೆ ಹೋಗಿ ಫಾರ್ಮ್ ತೆಗೆದುಕೊಂಡ ನಂತರ ಮನೆಗೆ ಯಾವಾಗ ಬಂದು ಫಾರ್ಮ್ ಕಲೆಕ್ಟ್ ಮಾಡುತ್ತೀರಿ ಎಂದರು.
ಅದಕ್ಕೆ ಬಿಎಲ್‌ಒ ಅವರು ಸಾರ್... ನಾನು ಇದೇ ಏರಿಯಾದಲ್ಲಿ ಇರ್ತೆನೆ, ನನಗೆ ಮಂಡಿ ನೋವು ಇದೆ, ನನ್ನ ನಂಬರ್ ತೊಗೊಳ್ಳಿ, ಫೋನ್ ಮಾಡಿದರೆ ಎಲ್ಲಿದ್ದೇನೆ ಎಂದು ಹೇಳ್ತೇನೆ. ನೀವೇ ಬಂದು ಫಾರ್ಮ ಕೊಟ್ಟು ಬಿಡಿ. ಪುಣ್ಯ ಬರುತ್ತೆ ಎಂದಾಗ ಆ ವ್ಯಕ್ತಿ, ಆಯ್ತು ಮೇಡಂ ಎಂದು ನಗುತ್ತಾ ಫೋನ್ ಕಟ್ ಮಾಡಿದರು.