;Resize=(412,232))
- ಜಗತ್ತು ಹೊತ್ತಿ ಉರಿಯುತ್ತಿದ್ದರೂ ವಿಶ್ವದ ‘ಯಜಮಾನ’ ಏಕೆ ಮೌನ?
ಸಾಕು, ಯುದ್ಧಗಳೆಲ್ಲಾ ಸಾಕು. ಇನ್ನೇನಿದ್ದರೂ ಶಾಂತಿ ಮಾತ್ರವೇ ಶಾಶ್ವತವಾಗಿರಬೇಕು...
ಮೊದಲನೆಯ ಮಹಾಯುದ್ಧದಲ್ಲಿ ಬಡಿದಾಡಿದ ಬಳಿಕ ಚೇತರಿಸಿಕೊಳ್ಳುತ್ತಿದ್ದ ಘಟಾನುಘಟಿ ದೇಶಗಳಿಗೆ, ನೆತ್ತರ ಕೋಡಿಯೇ ಹರಿದುಹೋದ ನಂತರ ಜ್ಞಾನೋದಯವಾಗಿತ್ತು. ಮರೆಯಲಾಗದ ಪಾಠ ಕಲಿತಿದ್ದೇವೆ, ಇನ್ನೆಂದೂ ಯುದ್ಧ ಬೇಡ, ಎಲ್ಲವನ್ನೂ ಮಾತುಕತೆ ಹಾಗೂ ಸಂಧಾನದ ಮೂಲಕವೇ ಬಗೆಹರಿಸಿಕೊಂಡುಬಿಡೋಣ ಎಂಬ ಬದಲಾವಣೆಯ ಭಾವ ದಿಢೀರ್ ಉಕ್ಕಿ ಹರಿದಿತ್ತು. ಅದರ ಫಲವಾಗಿ ಉದಯಿಸಿದ್ದೇ- ‘ಲೀಗ್ ಆಫ್ ನೇಷನ್ಸ್’. 1920ರಲ್ಲಿ ಅದು ತಲೆ ಎತ್ತಿದಾಗ ಕಲಿಯುಗ ಇನ್ನು ಶಾಂತಿಯುಗವೇ ಆಗಿಬಿಡಬಹುದು ಎಂದು ಜನರು ಎಣಿಸಿದ್ದರು. ಆದರೆ ಅದೊಂದು ಭ್ರಮೆ ಎಂದು ಸಾಬೀತಾಗಲು ಹೆಚ್ಚು ವರ್ಷಗಳು ಬೇಕಾಗಲಿಲ್ಲ.
ಮೊದಲನೇ ಮಹಾಯುದ್ಧದಲ್ಲಿ ಕಾದಾಡಿದ್ದ ಹಲವು ದೇಶಗಳು ತಮ್ಮ ಗಾಯಗಳು ಮಾಯುತ್ತಿದ್ದಂತೆ ಎಲ್ಲವನ್ನೂ ಮರೆತು ಮಿಲಿಟರಿ ತಾಕತ್ತು ಪ್ರದರ್ಶನದ ರೇಸ್‌ಗೆ ಇಳಿದವು. ಇದೆಲ್ಲಾ ಬೇಡ, ಶಾಂತವಾಗಿ ಇರಲು ಹಿಂದೆಯೇ ತೀರ್ಮಾನಿಸಿದ್ದೆವಲ್ಲ ಎಂದು ನೆನಪಿಸಬೇಕಿದ್ದ ಲೀಗ್ ಆಫ್ ನೇಷನ್ಸ್ ಮೂಕ ಪ್ರೇಕ್ಷಕ ಆಯಿತು. ಏಕೆಂದರೆ, ಸೇನಾ ಶಕ್ತಿ ವೃದ್ಧಿಸಿಕೊಳ್ಳುತ್ತಿದ್ದ ಯುದ್ಧದಾಹಿ ದೇಶಗಳಿಗೆ ಗದರಿ, ಯಜಮಾನನ ರೀತಿ ತಾಕೀತು ಮಾಡುವಂತಹ ಧೈರ್ಯ ಲೀಗ್ ಆಫ್ ನೇಷನ್ಸ್‌ಗೆ ಇರಲಿಲ್ಲ. ಹದ್ದು ಮೀರಿದರೆ ಹುಷಾರ್ ಎಂದು ಧಮಕಿ ಹಾಕಲು ಅದರ ಬಳಿ ಸೇನಾಶಕ್ತಿಯೂ ಇರಲಿಲ್ಲ. ಅದನ್ನು ಸೃಷ್ಟಿಸಿದ್ದ ಜರ್ಮನಿ, ಜಪಾನ್, ಇಟಲಿ ಹಾಗೂ ಸ್ಪೇನ್‌ನಂತಹ ದೇಶಗಳೇ ಯುದ್ಧಕ್ಕಾಗಿ ಹಾತೊರೆಯುತ್ತಿದ್ದವು. ಲೀಗ್ ಆಫ್ ನೇಷನ್ಸ್‌ನಿಂದಲೇ ಅವು ಹೊರನಡೆದವು. 2ನೇ ಮಹಾಯುದ್ಧ ಆರಂಭವಾಯಿತು. ಕೋಟ್ಯಂತರ ಜೀವಗಳು ಉಸಿರು ಚೆಲ್ಲಿದವು. ಇದು ಲೀಗ್ ಆಫ್ ನೇಷನ್ಸ್‌ನ ವೈಫಲ್ಯ ಎಂಬ ಕೂಗು ಎದ್ದಿತು. ಆ ಕೂಟ ಹೇಳ ಹೆಸರಿಲ್ಲದಂತೆ ಮಾಯವಾಯಿತು.
ಯುದ್ಧ ಬೂದಿಯಿಂದ ಹುಟ್ಟಿತು ಹೊಸ ಸಂಸ್ಥೆ
ಅಣ್ವಸ್ತ್ರ ಬಳಕೆಯಂಥ ವಿಕೋಪಕ್ಕೆಲ್ಲಾ ಹೋದ 2ನೇ ಮಹಾಯುದ್ಧದ ಕಿಚ್ಚು ಆರಿದ ಬಳಿಕ, ಅದರ ಬೂದಿಯಿಂದ ಹೊಸ ಆಲೋಚನೆ ತೇಲಿ ಬಂತು. ಪರಸ್ಪರ ಕಾದಾಡಿದ್ದ ದೇಶಗಳು ಮೇಜಿನ ಮುಂದೆ ಕುಳಿತವು. ಹೌದು, ಘೋರ ತಪ್ಪಾಗಿಬಿಟ್ಟಿದೆ... ಮತ್ತೆಂದೂ ಈ ರೀತಿ ಆಗಕೂಡದು ಎಂದು ಹಲುಬುತ್ತಾ 1945ರಲ್ಲಿ ‘ವಿಶ್ವಸಂಸ್ಥೆ’ಯನ್ನು ಹುಟ್ಟುಹಾಕಿದವು. ಯುದ್ಧ ಎಂಬ ಪೀಡೆಯಿಂದ ಜಗತ್ತನ್ನು ರಕ್ಷಿಸುವುದು, ಅಂತಾರಾಷ್ಟ್ರೀಯ ಸಹಕಾರ ವೃದ್ಧಿಸುವುದು, ಮಾನವ ಹಕ್ಕುಗಳನ್ನು ರಕ್ಷಿಸುವುದು, ಅಂತಾರಾಷ್ಟ್ರೀಯ ಕಾನೂನುಗಳನ್ನು ಎತ್ತಿ ಹಿಡಿಯುವುದು ಎಂಬ ಹೊಣೆಗಳನ್ನು ಅದಕ್ಕೆ ವಹಿಸಲಾಯಿತು.
ಅದೆಲ್ಲಾ ಆಗಿ 80 ವರ್ಷಗಳು ಉರುಳಿವೆ. ಜಗತ್ತಿನಲ್ಲಿ ಆಗುತ್ತಿರುವುದೇನು? ಒಂದೆಡೆ ರಷ್ಯಾ- ಉಕ್ರೇನ್ ಯುದ್ಧ ನಿಲ್ಲುತ್ತಿಲ್ಲ, ಮತ್ತೊಂದೆಡೆ ಇರಾನ್ ಮೇಲಿನ ಅಮೆರಿಕ- ಇಸ್ರೇಲ್ ಸಮರ ಯಾವಾಗ ನಿಲ್ಲುತ್ತೆ, ಯಾವಾಗ ಶುರುವಾಗುತ್ತೆ ಅಂತ ಗೊತ್ತಾಗುತ್ತಲೇ ಇಲ್ಲ. ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಜನರು ಎಲ್ಲ ಕೆಲಸ ಬಿಟ್ಟು ಗ್ಯಾಸ್ ಸಿಲಿಂಡರ್‌ಗಾಗಿ ರಸ್ತೆಯಲ್ಲಿ ಕಾಯುವಂತಾಯಿತು, ಆಟೋ ಚಾಲಕರು ಬಂಕ್‌ಗಳ ಮುಂದೆ ನಿಲ್ಲುವಂತಾಯಿತು. ಹೋಟೆಲ್‌ಗಳು ಆಧುನಿಕ ಯುಗದಲ್ಲೂ ಸೌದೆ ಉರಿಸಿ ಅಡುಗೆ ಮಾಡುವಂತಾಯಿತು. ಕದನ ವಿರಾಮ ಘೋಷಣೆಯಾಗಿ, ಹೆಸರಿಗೊಂದು ಒಪ್ಪಂದವಾಗಿ, ಅಬ್ಬಾ ಎಲ್ಲವೂ ಮುಗಿಯಿತು ಎನ್ನುತ್ತಿರುವಾಗಲೇ ಇರಾನ್ ಮೇಲೆ, ಅಮೆರಿಕದ ಮಿತ್ರದೇಶಗಳ ಮೇಲೆ ಕ್ಷಿಪಣಿಗಳು ಬೀಳುತ್ತಲೇ ಇವೆ. ಮೊನ್ನೆ ದಾಳಿ ನಿಂತಿದೆ ಅಂತ ಅಮೆರಿಕ ಹೇಳಿದೆ. ಮತ್ತೆ ಯಾವಾಗ ಬೇಕಾದರೂ ಆರಂಭವಾಗಬಹುದು.
ಇಷ್ಟೆಲ್ಲಾ ಆಗುತ್ತಿದ್ದರೂ, ಕೂಡು ಕುಟುಂಬದ ಯಜಮಾನನ ರೀತಿ ಪರಿಸ್ಥಿತಿಯನ್ನು ನಿರ್ವಹಿಸಿ, ಯುದ್ಧದಿಂದ ಜಗತ್ತನ್ನು ಪಾರು ಮಾಡಬೇಕಿದ್ದ ವಿಶ್ವಸಂಸ್ಥೆ ಎಲ್ಲಿ ಹೋಗಿದೆ? ಏನು ಮಾಡುತ್ತಿದೆ? ಅದಕ್ಕೆ ಏನಾಗಿದೆ?
ಯಜಮಾನ ಆಗುವುದು ಯಾವಾಗ?
ಕ್ಷಿಪಣಿ, ಯುದ್ಧ ಅಂದರೆ ಏನೆಂದೇ ಗೊತ್ತಿಲ್ಲದ 150 ಅಮಾಯಕ ಶಾಲಾ ಮಕ್ಕಳು ಕೊಲ್ಲಿ ಸಮರದಲ್ಲಿ ತಮ್ಮದಲ್ಲದ ತಪ್ಪಿಗೆ ಕ್ಷಿಪಣಿ ದಾಳಿಗೆ ಬಲಿಯಾದವು. ಅಮೆರಿಕ ನೆಲೆಗಳು ಇವೆ ಎಂಬ ಕಾರಣಕ್ಕೆ ಮಧ್ಯಪ್ರಾಚ್ಯದ ಹಲವು ದೇಶಗಳು ಬಾಂಬ್ ದಾಳಿಗೆ ಒಳಗಾದವು. ವಿಶ್ವದ ಸುರಕ್ಷಿತ ಸ್ಥಳಗಳು ಎನಿಸಿಕೊಂಡಿದ್ದ ನಗರಗಳೂ ಭಯಗ್ರಸ್ತ ಪ್ರದೇಶಗಳಾಗಿ ಬದಲಾದವು. ಒಂದು ಲೋಡ್ ತೈಲ, ಅನಿಲ ತಂದರೆ ಮುಗಿಯಿತು, ಆಮೇಲೆ ರಜೆ ಸಿಗುತ್ತೆ ಎಂದು ಹೋರ್ಮುಜ್ ಜಲಸಂಧಿಗೆ ಹೋದ ಹಡಗು ನೌಕರರು ತಿಂಗಳಾದರೂ ಅಲ್ಲೇ ಸಿಲುಕಿ ಪರದಾಡುವಂತಾಯಿತು. ದುಡಿಮೆಗಾಗಿ ಗಲ್ಫ್ ದೇಶಗಳಲ್ಲಿ ನೆಲೆ ನಿಂತವರು ಹೆದರುವಂತಾಯಿತು. ಇತ್ತ ಅವರ ಪೋಷಕರು ಪರಿತಪಿಸುವಂತಾಯಿತು. ತೈಲ- ಅನಿಲ ಬೆಲೆ ಗಗನಕ್ಕೇರಿತು. ರುಪಾಯಿ, ಷೇರುಪೇಟೆ ಚಿನ್ನ ಕುಸಿಯಿತು. ಇಷ್ಟೆಲ್ಲಾ ಆಗುತ್ತಿದ್ದಾಗಲೂ ವಿಶ್ವಸಂಸ್ಥೆ ಏನೂ ಮಾಡಲಿಲ್ಲ! ಪಾಕಿಸ್ತಾನದಂತಹ ದರಿದ್ರ ದೇಶ ಪರಿಸ್ಥಿತಿಯ ಲಾಭ ಪಡೆದು ಮಧ್ಯಸ್ಥಿಕೆಯ ನಾಟಕವಾಡಿ ತಾನೊಂದು ಪ್ರಭಾವಿ ದೇಶ ಎಂದು ಬಿಂಬಿಸಿಕೊಳ್ಳಲು ಯತ್ನಿಸಿತು. ಕನಿಷ್ಠ ಅಂತಹ ಪ್ರಯತ್ನವೂ ವಿಶ್ವಸಂಸ್ಥೆಯಿಂದ ಆಗದೇ ಹೋಯಿತು. ಪಾಕಿಸ್ತಾನ ಬದಲು ವಿಶ್ವಸಂಸ್ಥೆಯೇ ಸಂಧಾನ ಸಭೆ ಕರೆಯಲಿ ಎಂದು ಇರಾನ್ ಹೇಳಲಿಲ್ಲ, ಅಮೆರಿಕ ಕೂಡ ಕೇಳಲಿಲ್ಲ. ಆ ಸಂಸ್ಥೆಯನ್ನು ಹುಟ್ಟುಹಾಕಿದ ದೇಶಗಳು ಕೂಡ ಅಂಥದ್ದೊಂದು ಸಂಸ್ಥೆ ಇದೆ ಎಂಬುದನ್ನೇ ಬಹುಶಃ ಮರೆತುಬಿಟ್ಟಿವೆ! ವಿಶ್ವಸಂಸ್ಥೆಯ ಹಾಲಿ ಮುಖ್ಯಸ್ಥರು ಪೋರ್ಚುಗಲ್ ಮೂಲದ ಆ್ಯಂಟೋನಿಯೋ ಗುಟೆರಸ್. ಬಿಕ್ಕಟ್ಟು ಎದುರಾದಾಗ ಹೇಳಿಕೆ ನೀಡುವ ಶಾಸ್ತ್ರ ಮಾಡಿ ಸುಮ್ಮನಾಗಿಬಿಡುತ್ತಾರೆ.
ಏನಾಗಿದೆ ವಿಶ್ವಸಂಸ್ಥೆಗೆ?
ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿ ಎಂಬುದು ‘ಸೂಪರ್ ಪವರ್’ ಸಮಿತಿ. ಆದರೆ ಆ ‘ಸೂಪರ್ ಪವರ್’ ಎಲ್ಲ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ ಹಾಗೂ ರಷ್ಯಾ ಎಂಬ 5 ಕಾಯಂ ಸದಸ್ಯ ರಾಷ್ಟ್ರಗಳ ಕೈಯಲ್ಲಿದೆ. ಲೀಗ್ ಆಫ್ ನೇಷನ್ಸ್ ರೀತಿ ವಿಶ್ವಸಂಸ್ಥೆ ಬಳಿಯೂ ಸ್ವಂತ ಸೇನೆ ಇಲ್ಲ. ಆದಾಗ್ಯೂ ತನ್ನ ಮಾತು ಮೀರಿ ಯಾವುದಾದರೂ ದೇಶ ಇನ್ನೊಂದು ದೇಶಕ್ಕೆ ತೊಂದರೆ ಕೊಟ್ಟರೆ ಸದಸ್ಯ ರಾಷ್ಟ್ರಗಳ ಸೇನೆಯನ್ನು ಬಳಸುವ ಅಧಿಕಾರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೈಯಲ್ಲಿದೆ. ಆದರೆ ಅದಕ್ಕೆ ಎಲ್ಲ ಪಂಚ ದೇಶಗಳ ಸಮ್ಮತಿ ಇರಬೇಕು. ಒಂದೇ ಒಂದು ದೇಶ ನಿರಾಕರಣೆಯ ಅಧಿಕಾರ (ವೀಟೋ) ಬಳಸಿ ಬೇಡ ಎಂದರೆ ಎಲ್ಲದಕ್ಕೂ ಫುಲ್‌ಸ್ಟಾಪ್. ಈಗ ಆಗುತ್ತಿರುವುದು ಅದೇ. ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾಕ್ಕೆ ಪಾಠ ಕಲಿಸಲು ಭದ್ರತಾ ಮಂಡಳಿ ನಿರ್ಣಯ ಮಾಡಬೇಕು ಎಂದರೆ ಐದು ರಾಷ್ಟ್ರಗಳ ಒಪ್ಪಿಗೆ ಬೇಕು. ಆದರೆ ಭದ್ರತಾ ಮಂಡಳಿಯಲ್ಲೇ ಸದಸ್ಯ ರಾಷ್ಟ್ರವಾಗಿರುವ ರಷ್ಯಾ, ಅದರ ಮಿತ್ರ ಚೀನಾ ಒಪ್ಪುವುದಿಲ್ಲ. ಹೀಗಾಗಿ ಯುದ್ಧ ನಿಲ್ಲುವುದಿಲ್ಲ. ಅದೇ ರೀತಿ ಇರಾನ್ ಮೇಲಿನ ಯುದ್ಧ ನಿಲ್ಲಬೇಕೋ, ಬೇಡವೋ ಎನ್ನುವುದನ್ನು ವಿಶ್ವಸಂಸ್ಥೆಗಿಂತ ಮೊದಲು ನಿರ್ಧಾರ ಮಾಡುವುದು ಅಮೆರಿಕ!
ವಿಶ್ವಸಂಸ್ಥೆ ಅಮೆರಿಕದ ಕೈಗೊಂಬೆಯೇ?
ವಿಶ್ವಸಂಸ್ಥೆಯ ಕಚೇರಿ ಇರುವುದು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ. ಸಂಸ್ಥೆಯ ಕಾರ್ಯಾಚರಣೆಗೆ ಅತಿ ಹೆಚ್ಚು ದೇಣಿಗೆ ಕೊಡುವುದೇ ಅಮೆರಿಕ. ಆ ಸಂಸ್ಥೆಯ ಖರ್ಚಿನಲ್ಲಿ ಅಮೆರಿಕದ ಪಾಲು ಶೇ.22ಕ್ಕಿಂತ ಅಧಿಕವಿದೆ. ಅಮೆರಿಕವನ್ನು ಎದುರು ಹಾಕಿಕೊಂಡರೆ ದೇಣಿಗೆ ನಿಲ್ಲುತ್ತದೆ. ಹೀಗಾಗಿ ಅಮೆರಿಕದ ಮರ್ಜಿಯಲ್ಲಿ ವಿಶ್ವಸಂಸ್ಥೆ ಇದೆ ಎಂಬ ವಾದಗಳು ಸಾಕಷ್ಟಿವೆ
ದಾರಿ ಯಾವುದಯ್ಯಾ?
ಒಂದು ಕಿತ್ತಾಟ ಯುದ್ಧವಾಗಿ ಪರಿವರ್ತನೆ ಆಗುವುದನ್ನು ಸಂಧಾನ ಮಾತುಕತೆ, ರಾಜತಾಂತ್ರಿಕ ಮಾರ್ಗಗಳ ಮೂಲಕ ತಪ್ಪಿಸುವ ಶಕ್ತಿ ವಿಶ್ವಸಂಸ್ಥೆಗೆ ಬೇಕು. ಈಗ ಇರುವ ವಿಶ್ವಸಂಸ್ಥೆಗೆ ಆ ಶಕ್ತಿಯೂ ಇಲ್ಲ, ಭದ್ರತಾ ಮಂಡಳಿಯ ಸದಸ್ಯ ದೇಶಗಳಿಗೆ ಆಸಕ್ತಿಯೂ ಇಲ್ಲ. ಹೀಗಾಗಿ ಬದಲಾದ ಜಾಗತಿಕ ಸ್ಥಿತಿಗೆ ತಕ್ಕಂತೆ ವಿಶ್ವಸಂಸ್ಥೆಯೂ ಬದಲಾಗಬೇಕು, ಭದ್ರತಾ ಮಂಡಳಿಯೂ ಪುನಾರಚನೆಯಾಗಬೇಕು. ವೀಟೋ ಅಧಿಕಾರವನ್ನು ಮೊದಲು ತೆಗೆಯಬೇಕು. ಭಾರತ ಸೇರಿದಂತೆ ಹಲವು ದೇಶಗಳಿಗೆ ಭದ್ರತಾ ಮಂಡಳಿಯ ಸದಸ್ಯತ್ವ ನೀಡಬೇಕು. ವಿಶ್ವಸಂಸ್ಥೆ ವಿಸ್ತಾರವಾದಷ್ಟೂ ಅದರ ಶಕ್ತಿಯೂ ವಿಸ್ತಾರವಾಗುತ್ತದೆ. ಐದು ದೇಶಗಳ ಕೈಗೊಂಬೆಯಾಗಿ ಉಳಿಯುವುದು ತಪ್ಪುತ್ತದೆ ಎನ್ನುತ್ತಾರೆ ತಜ್ಞರು. ಈಗಾಗಲೇ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಗೆ ತುಕ್ಕು ಹಿಡಿದಿದೆ. ಹಾಗೆಯೇ ಬಿಟ್ಟರೆ, ವಿಶ್ವಸಂಸ್ಥೆ ಹೆಸರಿಗಷ್ಟೆ ಇರುತ್ತದೆ. ಯುದ್ಧವೂ ಎಲ್ಲೆ ಮೀರುತ್ತದೆ.
ವಿಶ್ವಸಂಸ್ಥೆಯ ಮಾಜಿ ಮುಖ್ಯಸ್ಥರೊಬ್ಬರೇ ಈ ಹಿಂದೆ ಹೇಳಿದಂತೆ: ವಿಶ್ವಸಂಸ್ಥೆ ಸ್ವರ್ಗವನ್ನು ಸೃಷ್ಟಿಸದಿದ್ದರೂ ಪರವಾಗಿಲ್ಲ, ಜಗತ್ತಿಗೆ ನರಕವನ್ನು ತಪ್ಪಿಸಿದರೆ ಸಾಕು!