ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ರಾಹುಲ್‌ ಕುಂಬರಹಳ್ಳಿ ಈಗ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರೂ ‘ಕ್ಯಾತಯ್ಯನ ಕವನಗಳು’ ಹಾಗೂ ‘ವಿಪ್ರಚಂದ್ರ’ ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಜಾತಿ- ಮತ ತಾರತಮ್ಯವಿಲ್ಲದ ಸಮಸಮಾಜ ನಿರ್ಮಾಣ ಕವಿಯ ಕನಸು. ಹೀಗಾಗಿ ಬಹುತೇಕ ಕವಿತೆಗಳು ಸ್ವಾತಂತ್ರ್ಯ,ಸಮಾನತೆ, ಸಾಮಾಜಿಕ ನ್ಯಾಯದ ಆಶಯ ಬಿಂಬಿಸುತ್ತವೆ.

ಈ ಕವನ ಸಂಕಲನಗಳ ಶೀರ್ಷಿಕೆಗಳೇ ವಿಶಿಷ್ಟವಾಗಿವೆ. ಕ್ಯಾತಯ್ಯ ಕವಿಯ ಪೂರ್ವಿಕರು. ಹೀಗಾಗಿ ಕ್ಯಾತಯ್ಯನ ಕವನಗಳು ಎಂಬ ಶೀರ್ಷಿಕೆಯಾದರೆ ವಿಪ್ರಚಂದ- ಗುರುವೃಂದದ ಡಾ.ಬಿ.ಜೆ. ವಿಜಯಕುಮಾರ್‌, ಪ್ರೊ.ಕೆ.ಎಂ. ಪ್ರಸನ್ನಕುಮಾರ್‌ ಹಾಗೂ ಡಾ.ಪಿ. ಚಂದ್ರಶೇಖರ್‌ ಹೆಸರುಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ. ಮೊದಲ ಸಂಕಲನದಲ್ಲಿ 69, ಎರಡನೇ ಸಂಕಲನದಲ್ಲಿ 33 ಕವನಗಳಿವೆ.

ಮೊದಲ ಸಂಕಲನದಲ್ಲಿ ಕನ್ನಡ, ಬುದ್ಧ, ಬಸವ, ಅಂಬೇಡ್ಕರ್‌, ಕನಕ, ಕುವೆಂಪು, ಅಪ್ಪು, ಮೈಸೂರು, ಮರ, ಸೀತೆ, ದ್ರೌಪದಿ ಮೊದಲಾದವರ ಕುರಿತ ಕವನಗಳಿವೆ.


ಇದರ ಜೊತೆಗೆ ಬಯಕೆ, ಹಂಬಲ, ಮನದಲ್ಲಿ ಮಿಂಚು, ಸಕುಲ ಸುಖವು, ಪರಮ ಹರೆಯ, ಪ್ರೀತಿ- ಪ್ರೇಮದ ಕವನಗಳೂ ಇವೆ. ಒಂದು ಸುಳ್ಳು- ಗೆಳೆಯನಿಗೆ ಎಂಬ ವಿಡಂಬನಾತ್ಮಕ ಕವನ ವಾಸ್ತವಕ್ಕೆ ಹತ್ತಿರವಿದ್ದು, ಓದುತ್ತಿದ್ದರೆ ನಕ್ಕು ನಲಿಯುವಂತೆ ಮಾಡುತ್ತದೆ. ಮಾರಿ- ಕುರಿಯು ಮೌಢ್ಯಗಳ ವಿರುದ್ಧ ಅರಿವು ಮೂಡಿಸುತ್ತದೆ.

ಎರಡನೇ ಸಂಕಲನದಲ್ಲಿ ಜಾತಿ, ಪ್ರೀತಿ, ನೀತಿ ತಿಳಿಸುವ, ಸಮಾನತೆ, ವೈಚಾರಿಕತೆ ಮೂಡಿಸುವ ಕವನಗಳೇ ಹೆಚ್ಚಿವೆ. ಇಲ್ಲಿ ಕೂಡ ಟಿಫನ್‌ ಬಾಕ್ಸ್‌ ಕವನ ಕಾಲೇಜು ದಿನಗಳನ್ನು ನೆನಪಿಸುವುದರ ಜೊತೆಗೆ ನಕ್ಕು ನಲಿಸುತ್ತದೆ. ಒಟ್ಟಾರೆ ಗ್ರಾಮ್ಯ ಭಾಷೆ, ಹಳಗನ್ನಡ ಬಳಸಿ, ವಿಭಿನ್ನ ವಸ್ತುಗಳನ್ನಿಟ್ಟು ಕವನಗಳನ್ನು ರಚಿಸಿರುವ ರಾಹುಲ್‌ ಭರವಸೆ ಮೂಡಿಸಿದ್ದಾರೆ.

‘ಕ್ಯಾತಯ್ಯನ ಕವನಗಳು’ ಸಂಕಲನವನ್ನು ಗುಂಡ್ಲುಪೇಟೆ ತಾಲೂಕು ಶಿವಪುರದ ಎಸ್‌ಎಂಪಿ ಪ್ರಕಾಶನ ಪ್ರಕಟಿಸಿದೆ. ಶೈಲಜಾ ನಾಗರಘಟ್ಟ ಮುನ್ನುಡಿ,. ಪ್ರೊ.ಕೆ. ಸೌಭಾಗ್ಯವತಿ ಬೆನ್ನುಡಿ ಬರೆದಿದ್ದಾರೆ. ‘ವಿಪ್ರಚಂದ್ರ’ ಸಂಕಲನವನ್ನು ಟಿ. ನರಸೀಪುರದ ದೇವರತ್ನ ಫೌಂಡೇಷನ್‌ ಪ್ರಕಟಿಸಿದ್ದು, ಡಾ.ಎಂ.ಎನ್‌. ಕವಿತಾ ಮುನ್ನುಡಿ, ಡಾ.ಎಚ್‌.ಎಲ್‌. ಶೈಲಾ ಬೆನ್ನುಡಿ ಬರೆದಿದ್ದಾರೆ. ಆಸಕ್ತರು ರಾಹುಲ್‌ ಕುಂಬರಹಳ್ಳಿ. ಮೊ. 90085 59330 ಸಂಪರ್ಕಿಸಬಹುದು.

ದಮ್ಮದಾತ

ಬುದ್ಧನೊಬ್ಬನಿದ್ದರೆ ಸಾಕು...

ನನ್ನಾಸೆ ಮನವ ಕಿತ್ತೊಗೆಯಬಲ್ಲ

ನನ್ನರಿವ ದೀವಿಗೆಯ ಬೆಳಗಬಲ್ಲ

ಒಲವ ಚಿಲುಮೆಯ ತಾ- ತುಂಬಬಲ್ಲ

ಬದುಕು ಬಸವನಂತೆ

ಮಾಡಿದ್ದುದು ತನಗಲ್ಲ

ಇಕ್ಕಿದ್ದುದು ತನ್ನವರಿಗಲ್ಲ

ತನ್ನ ಬಾಳನ್ನೇ ಬೇಯಿಸಿ

ಕೂಡಲಸಂಗಮನಿಗುಣಬಡಿಸಿ

ಬದುಕಿನ ಬಸವನಿಗೆ ಶರಣು ಶರಣಯ್ಯ,,,

ಓ ಜೈ ಭೀಮ..

ಹೆದರುತಿಹರ್‌ ನಿಮ್ಮ ನುಡಿಗಳಿಪ್ಪ ಕೇಳಿ

ಅಡಿಗಡಿಗೆ ಒರಳಿ ಕರುಳು ಕೊರಳು ಬಾಗಿ

ಉರುಳಿ ಸಾಷ್ಟಾಂಗದಿ ಕರವೆತ್ತಿ ನಮಿಪತಿಹರು

ಮುಟ್ಟಲಿರಲಿ ನೋಡಲ್‌ ಒಲ್ಲನೆಂದ ಜನರು...