ಭುವನೇಶ್ವರ: ಒಡಿಶಾವನ್ನು ಪ್ರತಿ ವರ್ಷ ಕಾಡುವ ಭೀಕರ ಚಂಡಮಾರುಗಳಿಂದ ಸಾವಿರಾರು ಜನರ ಜೀವ ಕಾಪಾಡಿದ ಹಿರಿಮೆ ಹೊಂದಿರುವ ಮಾಜಿ ಐಎಎಸ್ ಅಧಿಕಾರಿ ವಿ.ಕೆ.ಪಾಂಡಿಯನ್ ಇದೀಗ ತಮ್ಮ ಸೇವೆಯನ್ನು ದೂರದ ವೆನಿಜುವೆಲಾಗೂ ವಿಸ್ತರಿಸಿದ್ದಾರೆ. ಇತ್ತೀಚೆಗೆ ಸಂಭವಿಸಿದ ಭೀಕರ ಭೂಕಂಪದಲ್ಲಿ 3000ಕ್ಕೂ ಹೆಚ್ಚು ಜನರ ಸಾವು ಮತ್ತು 20000ಕ್ಕೂ ಹೆಚ್ಚು ಗಾಯಾಳುಗಳನ್ನು ಕಂಡಿದ್ದ ವೆನಿಜುವೆಲಾ, ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಾವು ನೋವು ತಡೆಯುವುದು ಹೇಗೆ ಮತ್ತು ವಿಪತ್ತು ನಿರ್ವಹಣೆಗೆ ಹೇಗೆ ಎಂಬುದನ್ನು ತಿಳಿಸಲು ಸ್ವತಃ ಪಾಂಡಿಯನ್ ಅವರನ್ನು ತನ್ನ ದೇಶಕ್ಕೆ ಕರೆಸಿಕೊಂಡಿತ್ತು.
ಸೈಕ್ಲೋನ್ ಮ್ಯಾನ್:
ಒಡಿಶಾ ಪ್ರತಿ ವರ್ಷ ಹಲವು ಚಂಡಮಾರುತಕ್ಕೆ ತುತ್ತಾಗುತ್ತದೆ. ಈ ವೇಳೆ ಭಾರೀ ಪ್ರಮಾಣದ ಆಸ್ತಿ ಹಾನಿ, ಸಾವು-ನೋವು ಸಹಜ ಎಂಬುದು ದಶಕಗಳ ಹಿಂದಿನವರೆಗೂ ಸಾಮಾನ್ಯವಾಗಿತ್ತು. 1999ರಲ್ಲಿ ಸಂಭವಿಸಿದ ಭೀಕರ ಚಂಡಮಾರುತಕ್ಕೆ ರಾಜ್ಯದಲ್ಲಿ 10000ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಪ್ರಮಾಣ ಅಚ್ಚರಿ ಎನ್ನುವ ರೀತಿಯಲ್ಲಿ ಕೇವಲ 1,2,3ಕ್ಕೆ ಇಳಿದಿದೆ.
ವಿಶಿಷ್ಟ ಯೋಜನೆ:
ಭವಿಷ್ಯದಲ್ಲಿ ಇಂಥ ಅನಾಹುತದ ಭೀಕರ ಪರಿಣಾಮ ತಡೆಯಲು ಒಡಿಶಾ ಸರ್ಕಾರ 1999ರಲ್ಲಿ ದೇಶದಲ್ಲೇ ಮೊದಲ ವಿಪತ್ತು ನಿರ್ವಹಣಾ ಪ್ರಾಧಿಕಾರ ರಚಿಸಿತು. ಪ್ರಾಧಿಕಾರವು ಚಂಡಮಾರುತ ದಾಳಿಯ ಬಳಿಕ ಕೆಲಸಕ್ಕೆ ಮುಂದಾಗುವ ಬದಲು ಅದನ್ನು ಎದುರಿಸಲು ಮೊದಲೇ ಸಿದ್ಧತೆ ಆರಂಭಿಸಿತು. ಇದಕ್ಕೆ ಸ್ಥಳೀಯ ಎನ್‌ಜಿಒಗಳ ನೆರವು ಪಡೆದುಕೊಂಡಿತು. ಗ್ರಾಮ ಪಂಚಾಯತ್‌ಗಳ ಮಟ್ಟದಲ್ಲೂ ನೆರವು ಮತ್ತು ಪರಿಹಾರ ಕಾರ್ಯಕ್ರಮಗಳ ಪ್ರಾತ್ಯಕ್ಷಿಕೆ ನಡೆಸಿ ಅವರನ್ನು ಸದಾಕಾಲ ಸನ್ನದಧ ಸ್ಥಿತಿಯಲ್ಲಿ ಇರುವಂತೆ ಮಾಡಿತು. ಪ್ರತಿ ವರ್ಷಕ್ಕೆ 2 ಬಾರಿಯಂತೆ ಸಮುದಾಯ ಮಟ್ಟದಲ್ಲಿ ವಿಪತ್ತು ಎದುರಿಸುವ ಅಣಕು ಕಾರ್ಯಾಚರಣೆ ನಡೆಸುತ್ತದೆ. ವಿಪತ್ತಿನ ವೇಳೆ ರಾಜ್ಯ ಸರ್ಕಾರವೇ ಕ್ರಮಕ್ಕೆ ಮುಂದಾಗುವ ಬದಲು ಗ್ರಾಪಂಗಳೇ ಮುಂದೆ ನಿಂತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ನೀಡಲಾಗಿದೆ. ಪರಿಣಾಮ ರಾಜ್ಯದಲ್ಲಿ ವಿಪತ್ತು ಎದುರಾದರೆ ಪ್ರತಿ ಗ್ರಾಪಂ ಮಟ್ಟದಲ್ಲೂ ಅಗತ್ಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಅಲ್ಲದೆ ವಿಪತ್ತಿನ ವೇಳೆ ಜನರನ್ನು ಸುರಕ್ಷಿತವಾಗಿ ಇಡಲು 800 ಚಂಡಮಾರುತ ನೆರವು ಕೇಂದ್ರಗಳನ್ನು ನಿರ್ಮಿಸಲಾಗಿದೆ. ಜೊತೆಗೆ ರಾಜ್ಯದ ಕರಾವಳಿಯುದ್ದಕ್ಕೂ ಜನರ ತೆರವಿಗೆಂದೇ ವಿಶೇಷ ರಸ್ತೆ ನಿರ್ಮಿಸಲಾಗಿದೆ. ಜೊತೆಗೆ ಚಂಡಮಾರುತದ ಬಗ್ಗೆ ಮೊದಲೇ ಸುಳಿವು ನೀಡುವ ಮಾಹಿತಿಯನ್ನು ಏಕಕಾಲಕ್ಕೆ ರಾಜ್ಯದ 2000 ಹಳ್ಳಿಗಳಿಗೆ ತಲುಪಿಸುವ ವ್ಯವಸ್ಥೆ ರೂಪಿಸಲಾಗಿದೆ.
ಈ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿದ್ದು, ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಚಂಡಮಾರುತದ ವೇಳೆ ಸಾವು ಬಹುತೇಕ ಶೂನ್ಯ ಎನ್ನುವ ಸ್ಥಿತಿಗೆ ತಲುಪಿದೆ. ಇದರ ಹಿಂದಿನ ಶಕ್ತಿ ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರ ಆಪ್ತ ಪಾಂಡಿಯನ್. ಈ ಬಗ್ಗೆ ಮಾಹಿತಿ ಹೊಂದಿದ್ದ ವೆನಿಜುವೆಲಾದ ಹಂಗಾಮಿ ಅಧ್ಯಕ್ಷೆ ರೋಡ್ರಿಗ್ರಜ್ ಪಾಂಡಿಯನ್ ಅವರನ್ನು ತಮ್ಮ ದೇಶಕ್ಕೆ ಕರೆದಿಕೊಂಡು ಅವರಿಂದ ಮಾಹಿತಿ ಪಡೆದಿದ್ದಾರೆ. ಈ ಭೇಟಿ ವೇಳೆ ಪಾಂಡಿಯನ್, ಭೂಕಂಪ ಪೀಡಿತ ಪ್ರದೇಶಗಳಿಗೆ ತೆರಳಿ ಜನರೊಂದಿಗೆ ಸಂವಾದ ನಡೆಸಿದ್ದಾರೆ.
