ಒಳ್ಳೆಯವರೆನಿಸಿಕೊಂಡವರ ಮೇಲೆ ಆಸೆ ಮತ್ತು ದುರಾಸೆಯ ಪ್ರಭಾವ ಬೀರಿದಾಗ, ಇಗರ್ಜಿ, ಮಸೀದಿ, ಮಂದಿರಗಳಂತಹ ಅತ್ಯಂತ ಪವಿತ್ರವಾದ ಸ್ಥಳಗಳಲ್ಲೂ ಅಪರಾಧ ಸಂಭವಿಸಬಹುದು. ಹುಂಡಿಯಿಂದ ಕದಿಯುವುದು ತುಂಬಾ ಸುಲಭ. ಯಾವುದೇ ಸಂಸ್ಥೆಯ ಸತ್ಯನಿಷ್ಠೆಯ ನಿಜವಾದ ಮಾನದಂಡವು, ಅಲ್ಲಿ ತಪ್ಪು ಕೆಲಸಗಳು ನಡೆಯದಿರುವುದಲ್ಲ. ಬದಲಿಗೆ, ಅಂತಹ ಘಟನೆಗಳು ನಡೆದಾಗ ಅಧಿಕಾರಿಗಳು ಅದಕ್ಕೆ ಪ್ರತಿಕ್ರಿಯಿಸುವ ವೇಗ ಮತ್ತು ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ. ಉನ್ನತ ಹುದ್ದೆಗಳಲ್ಲಿರುವವರನ್ನು ರಕ್ಷಿಸಲು ಕಳವನ್ನು ಮುಚ್ಚಿಹಾಕಿದರೆ ಅದು ಭ್ರಷ್ಟಾಚಾರ ಅಥವಾ ವಂಚನೆ ಎನಿಸಿಕೊಳ್ಳುತ್ತದೆ.==

ಎಸ್‌. ಗುರುಮೂರ್ತಿ

ಸಂಪಾದಕರು, ತುಘಲಕ್‌ ತಮಿಳು ಮ್ಯಾಗಜೀನ್

ದೇಶ-ವಿದೇಶದ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಅಯೋಧ್ಯೆ ರಾಮಮಂದಿರ ಹುಂಡಿ ಹಣ ಕಳವು ಪ್ರಕರಣವು ರಾಜಕೀಯ ಕುಸ್ತಿಯಾಗಿ ಪರಿವರ್ತಿತವಾಗಿದ್ದು, 1990ರಲ್ಲಿ ಮಂದಿರ ನಿರ್ಮಾಣಕ್ಕಾಗಿ ನಡೆದ ಚಳವಳಿಯ ವೇಳೆಯ ಸೈದ್ಧಾಂತಿಕ ಸಂಘರ್ಷವನ್ನು ನೆನಪಿಸುವಂತಿದೆ. ಮಂದಿರವಿರುವ ಉತ್ತರಪ್ರದೇಶದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇಂಥ ಹೊತ್ತಿನಲ್ಲೇ ಈ ಘಟನೆಯು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದು ಸಹಜ ಕೂಡ.

ಆದರೆ, 1990ರ ಕಾಲಕ್ಕೂ, ಇಂದಿಗೂ ವ್ಯತ್ಯಾಸವಿದೆ.ಆ ಕಾಲದಲ್ಲಿ ರಾಮಮಂದಿರ ಚಳವಳಿಯು ಸ್ಪರ್ಧಾತ್ಮಕ ಮತ್ತು ನಿಮಿಷ-ನಿಮಿಷದ ಬ್ರೇಕಿಂಗ್‌ ನ್ಯೂಸ್‌ ಪ್ರಸಾರ ಮಾಡುವ ಮಾಧ್ಯಮಗಳನ್ನು ಎದುರಿಸಬೇಕಾಗಿರಲಿಲ್ಲ. ಇಂದಿರುವಂತೆ ಮಾಧ್ಯಮಗಳಲ್ಲಿ ಅತಿಯಾದ ಪ್ರಚಾರ ಮತ್ತು ರಾಜಕೀಯ ಹಿತಾಸಕ್ತಿಗಳು ಒಂದಾದಾಗ, ಸತ್ಯವನ್ನು ಅರಿಯುವುದು ಕಷ್ಟವಾಗುತ್ತದೆ. ಆದ್ದರಿಂದ, ಈ ವಿಷಯವನ್ನು ವಸ್ತು ನಿಷ್ಠವಾಗಿ ಮತ್ತು ವಿಶಾಲ ದೃಷ್ಟಿಕೋನದಿಂದ ನೋಡಬೇಕು.


ರಾಮನ ವಿರೋಧಿಗಳೀಗ ಭಕ್ತರು:

ಕಾಣಿಕೆ ಕಳವು ಪ್ರಕರಣವು ರಾಮಮಂದಿರ ವಿರೋಧಿಗಳನ್ನು ಶ್ರೀರಾಮನ ಭಕ್ತರನ್ನಾಗಿಸಿದೆ. ಇದೀಗ ಅವರ ಬಾಯಿಂದಲೂ ಜೈ ಶ್ರೀ ರಾಮ್‌ ಘೋಷಣೆಗಳು ಮೊಳಗುತ್ತಿವೆ. 2024ರಲ್ಲಿ ಪ್ರಾಣಪ್ರತಿಷ್ಠಾ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದ ಕಾಂಗ್ರೆಸ್‌, ಕಳೆದ ವಾರ ಬಾಲರಾಮನ ದರ್ಶನಕ್ಕೆಂದು 9 ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ಕಳುಹಿಸಿಕೊಟ್ಟಿತ್ತು. ಈ ಕ್ರಮವು ರಾಜಕೀಯ ಅವಕಾಶವಾದದ್ದಾದರೂ, ಸ್ವಾಗತಾರ್ಹ ಬೆಳವಣಿಗೆ. ಮಹಾತ್ಮ ಗಾಂಧಿಯವರೇ ಹೇಳಿಲ್ಲವೇ, ರಾಷ್ಟ್ರ ಹಾಗೂ ವೈಯಕ್ತಿಕ ರೋಗಗಳಿಗೆ ರಾಮನಾಮ ಮದ್ದು ಎಂದು.

ಪ್ರಾಣಪ್ರತಿಷ್ಠೆ ಬಹಿಷ್ಕರಿಸಿದ್ದ ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಕೂಡ ರಾಮ ಭಕ್ತರಾಗಿ ರೂಪಾಂತರಗೊಂಡಿದ್ದು, ‘ಕಳವು ಪ್ರಕರಣದಿಂದ ಸನಾತನಿಗಳಿಗೆ ನೋವಾಗಿದೆ’ ಎನ್ನುತ್ತಿದ್ದಾರೆ. ಜತೆಗೆ ಶುಕ್ರವಾರ ರಾಮನ ದರ್ಶನಕ್ಕೂ ಹೊರಟಿದ್ದಾರೆ.

ವಿಪರ್ಯಾಸವೆಂದರೆ, 1990ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ಯಾದವ್‌, 16 ಕರಸೇವಕರನ್ನು ಗುಂಡಿಟ್ಟು ಕೊಲ್ಲುವಂತೆ ಪೊಲೀಸರಿಗೆ ಆದೇಶಿಸಿದ್ದರು. ಬಳಿಕ ಹೆಮ್ಮೆಯಿಂದ, ‘30 ಜನ ಸಾಯಬಹುದಾಗಿದ್ದರೂ ಇದೇ ಆದೇಶ ಕೊಡುತ್ತಿದ್ದೆ’ ಎಂದಿದ್ದರು. ಇಂದು ಅವರದ್ದೇ ಪಕ್ಷದವರು, ‘ರಾಮನ ಭಕ್ತರಿಗೆ ಮೋಸವಾಗಿದೆ’ ಎಂದು ಕಣ್ಣೀರಿಡುತ್ತಿದ್ದಾರೆ.

ಬ್ರೇಕಿಂಗ್ ನ್ಯೂಸ್‌ಗಾಗಿ ಪೈಪೋಟಿ ನಡೆಸುತ್ತಿರುವ ಭಾರತೀಯ ಮಾಧ್ಯಮಗಳು ಸಹ ಈ ರಾಜಕೀಯಕ್ಕೆ ಸೇರಿಕೊಂಡವು. ‘ಘಟನೆಯಿಂದ ಬಿಜೆಪಿಗೆ ತೀವ್ರ ಹಾನಿಯಾಗಿದೆ’ ಎಂದು ಒಂದು ಮಾಧ್ಯಮ ಭವಿಷ್ಯ ನುಡಿದಿದೆ. ಇನ್ನೊಂದು, ‘ಕಮಲ ಪಕ್ಷದ ರಾಮರಾಜ್ಯದ ಭರವಸೆಗೆ ಆದ ಹಿನ್ನಡೆಯಿದು’ ಎನ್ನುತ್ತಿದೆ. ಜಾಗತಿಕ ಮಟ್ಟದಲ್ಲಿ ದೇಗುಲದ ಮಹತ್ವವನ್ನರಿತಿರುವ ವಿದೇಶಿ ಮಾಧ್ಯಮಗಳೂ ಕೂಡಾ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಭಾರತ ಹಾಗೂ ಹಿಂದೂ ವಿರೋಧಿ ಇತಿಹಾಸವಿರುವ ರಾಯಿಟರ್ಸ್‌, ಬಿಬಿಸಿ, ಅಲ್‌-ಜಝೀರಾ ಈ ಘಟನೆಯನ್ನು ‘ಬಿಲಿಯನ್‌ ಡಾಲರ್‌ ಹಗರಣ’ ಎಂದು ಬಿಂಬಿಸುತ್ತಿವೆ. ‘ದೇವರ ಮನೆಯಲ್ಲೇ ಕಳ್ಳತನ: ಭಾರತದ ರಾಮಮಂದಿರದಲ್ಲಿ ಭ್ರಷ್ಟಾಚಾರ. ನಿರ್ಣಾಯಕ ರಾಜ್ಯಗಳ ಚುನಾವಣೆಗೂ ಮುನ್ನ ದೇವಾಲಯವು ಇಂಥ ಆರೋಪಗಳಲ್ಲಿ ಸಿಲುಕಿದ್ದು, ಪ್ರಧಾನಿ ಮೋದಿ ಸರ್ಕಾರಕ್ಕೆ ಮುಜುಗರ ತಂದಿದೆ’ ಎಂದು ಅಲ್‌-ಜಝೀರಾ ಕಿರುಚಾಡಿತು.

ಹಗರಣ ಅಲ್ಲ, ಅಪರಾಧ:

ರಾಮಮಂದಿರದಲ್ಲಿ ಏನಾಗಿದೆಯೋ, ಅದು ಕಳ್ಳತನ. ಹಣಕಾಸಿನ ವಿಷಯ ನೋಡಿಕೊಳ್ಳುತ್ತಿದ್ದ ಕೆಳ ಹಂತದ ಸಿಬ್ಬಂದಿಯಿಂದ ಆದ ಲೂಟಿ. ಇದು ಭ್ರಷ್ಟಾಚಾರ ಅಥವಾ ವಂಚನೆ ಪ್ರಕರಣ ಅಲ್ಲ. ಘಟನೆಯನ್ನು ಮುಚ್ಚಿಹಾಕಲು ಉನ್ನತ ಮಟ್ಟದ ಆಡಳಿತವು ಯತ್ನಿಸಿದ್ದರೆ ಇದು ಭ್ರಷ್ಟಾಚಾರ ಎನ್ನಿಸಿಕೊಳ್ಳುತ್ತಿತ್ತು. ಆದರೆ ಇಲ್ಲಿ ಹಾಗಾಗಿಲ್ಲ. ಕಳವು ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಉನ್ನತ ಅಧಿಕಾರಿಗಳು ಕಠಿಣ ಕ್ರಮವನ್ನು ಕೈಗೊಂಡರೇ ಹೊರತು, ಸಾಂಸ್ಥಿಕವಾಗಿ ಅದನ್ನು ಮುಚ್ಚಿಹಾಕುವ ಯತ್ನ ನಡೆಯಲಿಲ್ಲ.

ಕಳ್ಳತನ ಎಲ್ಲೆಲ್ಲೂ ಆಗುತ್ತದೆ. ನಾವು ಬದುಕುತ್ತಿರುವ ಕಾಲವನ್ನು ಅರಿಯಬೇಕಾದರೆ, ಸ್ವಾಮಿ ಚಿನ್ಮಯಾನಂದರ ಅನಿಸಿಕೆಯನ್ನು ಸ್ಮರಿಸಬೇಕು. ‘ಕೃತಯುಗದಲ್ಲಿ ಒಳಿತು ಮತ್ತು ಕೆಡುಕು (ದೇವತೆಗಳು ಮತ್ತು ಅಸುರರು) ಪ್ರತ್ಯೇಕ ಲೋಕಗಳಲ್ಲಿದ್ದವು. ತ್ರೇತಾಯುಗದಲ್ಲಿ ಅವು ರಾಮ-ರಾವಣರಂತೆ ಒಂದೇ ಲೋಕದಲ್ಲಿದ್ದವು. ದ್ವಾಪರ ಯುಗದಲ್ಲಿ ಪಾಂಡವರು ಮತ್ತು ಕೌರವರು ಒಂದೇ ಪರಿವಾರದಲ್ಲಿದ್ದರು. ಆದರೆ ಕಲಿಯುಗದಲ್ಲಿ, ಅವರೆಡೂ ಒಬ್ಬ ವ್ಯಕ್ತಿಯೊಳಗೇ ಇರುತ್ತವೆ. ನಾವೀಗ ಇಂತಹ ಕಲಿಯುಗದಲ್ಲಿದ್ದೇವೆ.

ಒಳ್ಳೆಯವರು ಎನ್ನಿಸಿಕೊಂಡವರ ಮೇಲೆ ಆಸೆ ಮತ್ತು ದುರಾಸೆಯು ಪ್ರಭಾವ ಬೀರಿದಾಗ, ಇಗರ್ಜಿ, ಮಸೀದಿ, ಮಂದಿರಗಳಂತಹ ಅತ್ಯಂತ ಪವಿತ್ರವಾದ ಸ್ಥಳಗಳಲ್ಲೂ ಅಪರಾಧಗಳು ಸಂಭವಿಸಬಹುದು. ಹುಂಡಿಯಿಂದ ಕದಿಯುವುದು ತುಂಬಾ ಸುಲಭ. ದೇಗುಲ ಆಡಳಿತದ ಬಗೆಗಿನ ಸಿ.ಪಿ. ರಾಮಸ್ವಾಮಿ ಅಯ್ಯರ್‌ ಸಮಿತಿಯ ವರದಿಯ ಪ್ರಕಾರ, ಹುಂಡಿಗೆ ಹಾಕಿದ ಹಣ ಪವಿತ್ರವಾದುದು. ಆದರೆ ಅಲ್ಲಿಂದ ಅದನ್ನು ಹೊರಗೆ ತೆಗೆದಾಕ್ಷಣ ಅದು ಮಾಮುಲಿ ನೋಟು ಆಗುತ್ತದೆ. ಇದೇ ತರ್ಕದ ಆಧಾರದಲ್ಲಿ, ದೇವಾಲಯದ ನಿಧಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಜಾತ್ಯತೀತ ಸರ್ಕಾರಗಳಿಗೆ ನ್ಯಾಯಾಂಗವು ಅನುಮತಿ ನೀಡಿತು.

ಯಾವುದೇ ಸಂಸ್ಥೆಯ ಸತ್ಯನಿಷ್ಠೆಯ ನಿಜವಾದ ಮಾನದಂಡವು, ಅಲ್ಲಿ ತಪ್ಪು ಕೆಲಸಗಳು ನಡೆಯದೇ ಇರುವುದಲ್ಲ. ಬದಲಿಗೆ, ಅಂತಹ ಘಟನೆಗಳು ನಡೆದಾಗ ಅಧಿಕಾರಿಗಳು ಅದಕ್ಕೆ ಪ್ರತಿಕ್ರಿಯಿಸುವ ವೇಗ ಮತ್ತು ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ. ಉನ್ನತ ಹುದ್ದೆಗಳಲ್ಲಿರುವವರನ್ನು ರಕ್ಷಿಸಲು ಕಳವನ್ನು ಮುಚ್ಚಿಹಾಕಿದರೆ ಅದು ಭ್ರಷ್ಟಾಚಾರ ಅಥವಾ ವಂಚನೆ ಎನಿಸಿಕೊಳ್ಳುತ್ತದೆ.

1987ರಲ್ಲಿ ಬೊಫೋರ್ಸ್‌ ಹಗರಣ ಬೆಳಕಿಗೆ ಬಂತು. ಅದರಲ್ಲಿ ಆಗಿನ ಪ್ರಧಾನಿ ರಾಜೀವ್‌ ಗಾಂಧಿಯವರ ಪಾತ್ರವಿದ್ದ ಕಾರಣ, ಅವರು ಅಧಿಕಾರದಲ್ಲಿರುವ ತನಕ ಯಾವುದೇ ಎಫ್‌ಐಆರ್‌ ದಾಖಲಾಗಲಿಲ್ಲ. 3 ವರ್ಷಗಳ ಬಳಿಕ ಸೋಲಿನ ಕಾರಣ ಅವರು ಪ್ರಧಾನಿ ಕುರ್ಚಿಯನ್ನು ಬಿಟ್ಟಾಗ, 1990ರಲ್ಲಿ ಪ್ರಕರಣ ದಾಖಲಾಯಿತು. ಇದನ್ನೀಗ, ಟ್ರಸ್ಟಿಯ ಹೆಸರೂ ಕೇಳಿಬಂದಿರುವ ರಾಮಮಂದಿರ ಕಳವು ಪ್ರಕರಣಕ್ಕೆ ಹೋಲಿಸಿ ನೋಡುವ.

ಜಾಗತಿಕ ಮಟ್ಟದಲ್ಲಿ ಮಂದಿರಕ್ಕಿರುವ ಮನ್ನಣೆಯ ಆಧಾರದಲ್ಲಿ ದೇಶದ ವರ್ಚಸ್ಸಿನ ಬಗ್ಗೆ ಕಾಳಜಿಯಿರುವವರ ಪಾಲಿಗೆ ಕಾಣಿಕೆ ಕಳವು, ಆಘಾತಕಾರಿ ಮತ್ತು ದುಃಖಕರ ಘಟನೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೂ ಇದಕ್ಕೆ ಸಂಬಂಧಿಸಿದ ಸುದ್ದಿಗಳ ಸುನಾಮಿ ಮತ್ತು ನಿರ್ಣಾಯಕ ಸಂಗತಿಗಳನ್ನು ಮರೆಮಾಚುವ ಆರೋಪಗಳು ರಾಷ್ಟ್ರದ ಬ್ರಾಂಡ್‌ನ ಮೇಲೆ ತಪ್ಪಿಸಬಹುದಾದ ಕರಿನೆರಳು ಅನ್ಯಾಯವಾಗಿ ಬೀಳುವಂತಾಗಿದೆ. ಅನ್ಯ ದೇಗುಲಗಳ ಕಳವು ಪ್ರಕರಣಗಳಿಗೆ ಹೋಲಿಸಿದರೆ, ಟ್ರಸ್ಟ್‌ ಮತ್ತು ಯುಪಿ ಸರ್ಕಾರವು ಕಾರ್ಯನಿರ್ವಹಿಸಿದ ವೇಗವನ್ನು ಗಮನಿಸುವಲ್ಲಿ ತಟಸ್ಥ ವಿಮರ್ಶಕರು ಸಹ ವಿಫಲರಾಗಿರುವುದು ವಿಷಾದಕರ.

ತಡವಾಗದ ಕ್ರಮ:

ಶಬರಿಮಲೆ, ತಿರುವನಂತಪುರಂ, ಪುರಿ, ತಮಿಳುನಾಡಿನ ಸರ್ಕಾರದಿಂದ ನಿರ್ವಹಿಸಲ್ಪಡುವ ದೇವಸ್ಥಾನಗಳಲ್ಲಿ ನಡೆದ ಆಸ್ತಿ ದುರುಪಯೋಗ ಮತ್ತು ವಿಗ್ರಹ ಕಳ್ಳತನ ಪ್ರಕರಣಗಳನ್ನು ನೆನಪು ಮಾಡಿಕೊಳ್ಳಿ. ಅಂದು ಸರ್ಕಾರಗಳು ಮತ್ತು ಇಂದು ರಾಮಮಂದಿರ ಟ್ರಸ್ಟ್‌ ಪ್ರತಿಕ್ರಿಯಿಸಿದ ರೀತಿಯನ್ನು ಹೋಲಿಸಿ ನೋಡಿ. ಇದೇ ಕೆಲಸ ಮಾಡಲು ಎಐ ಟೂಲ್‌ ಆದ ಜೆಮಿನೈಗೆ ಹೇಳಿದಾಗ, ‘ಶಬರಿಮಲೆ, ಪುರಿ, ತಮಿಳುನಾಡು ವಿಗ್ರಹ ಕಳವು ಪ್ರಕರಣಗಳಲ್ಲಿ ಸರ್ಕಾರಿ ಮಂಡಳಿಗಳ ಸಂಪೂರ್ಣ ನಿಷ್ಕ್ರಿಯತೆಯು ಕೋರ್ಟ್‌ಗಳು ಮಧ್ಯಪ್ರವೇಶಿಸಿ ತನಿಖೆಗೆ ಆದೇಶಿಸುವುದನ್ನು ಅನಿವಾರ್ಯಗೊಳಿಸಿತು. ಪರಿಣಾಮ, ನ್ಯಾಯವು ವರ್ಷಗಳ ಕಾಲ, ಕೆಲ ಪ್ರಕರಣಗಳಲ್ಲಿ ದಶಕಗಳ ಕಾಲ ಮುಂದೂಡಲ್ಪಟ್ಟವು.

ಆದರೆ ಇಲ್ಲಿ. ಹುಂಡಿ ಹಣ ಕಳವು ಬಯಲಾಗುತ್ತಿದ್ದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಉತ್ತರಪ್ರದೇಶ ಸರ್ಕಾರದ ಬಳಿ ಸ್ವತಃ ಟ್ರಸ್ಟ್‌ ಕೋರಿತು. ‘ತನ್ನ ಸಿದ್ಧಾಂತ ಮತ್ತು ಸ್ವಾಭಿಮಾನದಿಂದ ಪ್ರೇರಿತವಾಗಿ ರಾಮ ಮಂದಿರ ಟ್ರಸ್ಟ್ ತಕ್ಷಣ ಕ್ರಮ ಕೈಗೊಂಡಿತು. ಟ್ರಸ್ಟ್ ಸ್ವಯಂಪ್ರೇರಿತವಾಗಿ ಹಣಕಾಸು ಮಾಹಿತಿಯನ್ನು 5 ವರ್ಷಗಳ ಸಮಗ್ರ ಮರು-ಆಡಿಟ್‌ಗೆ ಸಲ್ಲಿಸಿತು. ಇದಕ್ಕೆ ವ್ಯತಿರಿಕ್ತವಾಗಿ, ಸರ್ಕಾರಿ ಟ್ರಸ್ಟ್‌ಗಳು ತಮ್ಮ ವ್ಯವಸ್ಥೆಗಳು ಮತ್ತು ಅಧಿಕಾರಶಾಹಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ನಿಧಾನವಾಗಿ ವರ್ತಿಸಿದವು’ ಎಂದು ಎಐ ಸರಿಯಾಗಿ ಹೇಳಿತು. ಮುಂದುವರಿದು, ‘ಮಂದಿರದ ಉನ್ನತ ಹುದ್ದೆಯಲ್ಲಿದ್ದ ಕೆಲವರು ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಆದರೆ ಸರ್ಕಾರಿ ದೇವಸ್ಥಾನಗಳ ವಿಚಾರದಲ್ಲಿ, ಅಧಿಕಾರಿಗಳು ತಮ್ಮ ಸ್ಥಾನದಲ್ಲಿ ಅಂಟಿಕೊಂಡು ಕೂತದ್ದಲ್ಲದೆ, ಅದನ್ನುಳಿಸಿಕೊಳ್ಳುವ ಸಲುವಾಗಿ ತೆರಿಗೆದಾರರ ಹಣ ಬಳಸಿಕೊಂಡು ಕಾನೂನು ಹೋರಾಟಕ್ಕಿಳಿದರು’ ಎಂದಿತು.

ಈ ಹೋಲಿಕೆಯನ್ನು 10ನೇ ತರಗತಿಯ ವಿದ್ಯಾರ್ಥಿ ಮಾಡಬಹುದಿತ್ತು. ಆದರೆ ಉತ್ಸಾಹಭರಿತವಾಗಿರುವ ದೇಶ-ವಿದೇಶ ಸಂಸ್ಥೆಗಳು ಇದರಲ್ಲಿ ಸೋತವು.

ಇದು ಉನ್ನತ ಮಟ್ಟದ ಹಗರಣವಲ್ಲ, ಬದಲಾಗಿ ಸಣ್ಣಮಟ್ಟದ ಕಳ್ಳತನವಾಗಿತ್ತು ಎಂಬುದನ್ನು ರಾಮ ಮಂದಿರ ಟ್ರಸ್ಟ್ ಕೈಗೊಂಡ ಅಭೂತಪೂರ್ವ ಕ್ರಮಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಆದರೆ ಮಾಧ್ಯಮಗಳ ನೆರವಿನೊಂದಿಗೆ ರಾಜಕೀಯ ನಾಯಕರು ಇದನ್ನು ಉನ್ನತ ಮಟ್ಟದ ಪ್ರಕರಣವೆಂದು ಶಂಕಿಸುವುದು ದುರದೃಷ್ಟಕರ.

ಕಳವು ಹಂತಹಂತವಾಗಿ ಬೆಳಕಿಗೆ ಬಂದದ್ದು ಹೇಗೆ?

ಜೂ.4: ಮಂದಿರದ ಶೌಚಾಲಯದಲ್ಲಿ 2 ಲಕ್ಷ ರು. ನಗದಿದ್ದ ಚೀಲ ಪತ್ತೆ. ಕೂಡಲೇ ಟ್ರಸ್ಟ್‌ನ ಅಧಿಕಾರಿಗಳು ಸಿಸಿಟೀವಿ ದೃಶ್ಯಾವಳಿಗಳ ಪರಿಶೀಲನೆ ಪ್ರಾರಂಭಿಸಿದರು.

ಜೂ.5: ಪ್ರಮುಖ ಶಂಕಿತ ಅವಿನಾಶ್ ಶುಕ್ಲಾನನ್ನು ಗುರಿಯಾಗಿಸಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ತನಿಖೆಗೆ ಆದೇಶಿಸಿದರು. ಆತನ ಮನೆ ಮೇಲಾದ ದಾಳಿ ವೇಳೆ 58 ಲಕ್ಷ ರು. ವಶಪಡಿಸಿಕೊಳ್ಳಲಾಯಿತು. ಗಮನಿಸಿ, ಇದು ನಡೆದದ್ದು ಪೊಲೀಸರು ಬರುವ ಮುನ್ನವೇ. ತಮ್ಮ ಆಪ್ತವಲಯದಲ್ಲಿದ್ದವನ ವಿರುದ್ಧವೇ ರಾಯ್‌ ತೆಗೆದುಕೊಂಡ ಈ ಕ್ರಮವು ಅನ್ಯ ಆರೋಪಿಗಳಲ್ಲಿ ನಡುಕ ಹುಟ್ಟಿಸಿತು. ಪರಿಣಾಮ ಅವರೆಲ್ಲಾ ಕೂಡಲೇ ಕದ್ದ ಮಾಲನ್ನು ಬ್ಯಾಂಕ್‌ಗೆ ಜಮೆ ಮಾಡಿದರು. ಪರಿಣಾಮ, ಅದು ಗಮನಕ್ಕೆ ಬರದೆ, ಆಂತರಿಕವಾಗಿಯೇ ಪ್ರಕರಣವನ್ನು ಬಗೆಹರಿಸಿಕೊಳ್ಳಬಹುದು ಎಂದುಕೊಳ್ಳಲಾಯಿತು.

ಜೂ.7: ಆರೋಪಿಯಿಂದ ಕಳ್ಳತನದ ಹಣ ವಶವಾದ ಸುದ್ದಿ ಹರಡುತ್ತಿದ್ದಂತೆ ಚಿನ್ನ ಮತ್ತು ಬೆಳ್ಳಿಯೂ ಕಳುವಾಗಿದೆ ಎಂಬ ವದಂತಿ ಹಬ್ಬಿತು. ಹಣವನ್ನು ಆಂತರಿಕ ತನಿಖೆಯಿಂದಲೇ ಹಿಂಪಡೆಯಬಹುದು ಎಂಬ ಪ್ರಾಥಮಿಕ ಅಂದಾಜುಗಳನ್ನು ಆಧರಿಸಿ, ಲೆಕ್ಕಪರಿಶೋಧನೆಯಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸಗಳು ಕಂಡುಬಂದಿಲ್ಲ ಎಂದು ರಾಯ್‌ ತಿಳಿಸಿದರು.

ಜೂ.13: ಆ ಅಂದಾಜು ತಪ್ಪು ಎಂದು ಮನವರಿಕೆಯಾಗುತ್ತಿದ್ದಂತೆ ಉನ್ನತ ಮಟ್ಟದ ಎಸ್‌ಐಟಿ ರಚಿಸುವಂತೆ ಟ್ರಸ್ಟ್‌ ರಾಜ್ಯಸರ್ಕಾರದ ಬಳಿ ವಿನಂತಿಸಿತು. ಈ ಕ್ರಮದಲ್ಲಿ ಕೇವಲ 6 ದಿನ ತಡವಾಗಿತ್ತು.

ಜೂ.25: ಸಿಸಿಟೀವಿ ಕ್ಯಾಮೆರಾದ ಕಣ್ಣನ್ನು ತಪ್ಪಿಸಿ, ಕ್ಯಾಶ್‌ ಕೌಂಟರ್‌ ಸಿಬ್ಬಂದಿ ಮನೀಶ್‌ ಯಾದವ್‌ ಹಣವನ್ನು ಎಗರಿಸುತ್ತಿದ್ದುದನ್ನು ಎಸ್‌ಐಟಿ ತನಿಖೆ ಪತ್ತೆ ಮಾಡಿತು. ಎಫ್‌ಐಆರ್‌ ದಾಖಲಾಯಿತು. ಜೂ.26ರ ಮಧ್ಯರಾತ್ರಿ ಶರವೇಗದ ಕಾರ್ಯಾಚರಣೆ ಮತ್ತು ದಾಳಿಗಳನ್ನು ನಡೆಸಿ 8 ಜನರನ್ನು ಬಂಧಿಸಲಾಯಿತು.

ಜೂ.26: ಆಡಳಿತಾತ್ಮಕ ಲೋಪದ ನೈತಿಕ ಹೊಣೆ ಹೊತ್ತು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮತ್ತು ಟ್ರಸ್ಟಿ ಅನಿಲ್‌ ಮಿಶ್ರಾ ರಾಜೀನಾಮೆ ನೀಡಿದರು. ಆರ್‌ಎಸ್‌ಎಸ್‌ ಪ್ರಚಾರಕನಾಗಿದ್ದುಕೊಂಡು ತಮ್ಮಿಡೀ ಜೀವನವನ್ನು ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟ ರಾಯ್‌, ಪ್ರಾಮಾಣಿಕತೆ ಮತ್ತು ಸಮಗ್ರತೆಯ ಸಂಕೇತ. ಈ ಪ್ರಕರಣದಲ್ಲಿ ಪೊಲೀಸರಿಗಿಂತ ಮೊದಲು ಕ್ರಮ ಕೈಗೊಂಡವರು ಅವರೇ ಎಂಬುದನ್ನು ಮರೆತ ಮಾಧ್ಯಮಗಳು ಅವರನ್ನು ವಿವಾದಕ್ಕೆಳೆಯುತ್ತಿರುವುದು ದುರದೃಷ್ಟಕರ.