ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಉಳಿದಿರುವಾಗ, ದೇಗುಲ ಹಣ ಕಳವು ಪ್ರಕರಣವು ಜನರ ಮೇಲೆ ಪರಿಣಾಮ ಬೀರುವಂತೆ ಮಾಡುವ ವಿಪಕ್ಷಗಳ ಯತ್ನವು, ಮತದಾನದ ದಿನದವರೆಗೆ ಅವು ಈ ವಿಷಯವನ್ನು ಹೇಗೆ ಜೀವಂತವಾಗಿ ಇಡಬಲ್ಲವು ಎಂಬುದನ್ನು ಅವಲಂಬಿಸಿದೆ.
ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಉಳಿದಿರುವಾಗ, ದೇಗುಲ ಹಣ ಕಳವು ಪ್ರಕರಣವು ಜನರ ಮೇಲೆ ಪರಿಣಾಮ ಬೀರುವಂತೆ ಮಾಡುವ ವಿಪಕ್ಷಗಳ ಯತ್ನವು, ಮತದಾನದ ದಿನದವರೆಗೆ ಅವು ಈ ವಿಷಯವನ್ನು ಹೇಗೆ ಜೀವಂತವಾಗಿ ಇಡಬಲ್ಲವು ಎಂಬುದನ್ನು ಅವಲಂಬಿಸಿದೆ. ಇಂದಿನ ಸಾಮಾಜಿಕ ಜಾಲತಾಣ ನೇತೃತ್ವದ ಪರಿಸರದಲ್ಲಿ ಎಲ್ಲಾ ವಿಷಯಗಳ ಜೀವಾವಧಿ ಅತ್ಯಲ್ಪ. ಒಂದು ವೇಳೆ ಎಸ್‌ಐಟಿ ತನ್ನ ಅಂತಿಮ ವರದಿಯಲ್ಲಿ ಕಳ್ಳತನ ಸಣ್ಣ ಪ್ರಮಾಣದ್ದು ಮತ್ತು ಯಾವುದೇ ಆಭರಣ ಕಳವಾಗಿಲ್ಲ ಎಂದು ಸ್ಪಷ್ಟಪಡಿಸಿದರೆ ಅದು ವಿಪಕ್ಷಗಳಿಗೆ ತಪರಾಕಿಯಾಗಲಿದೆ ಮತ್ತು ಚುನಾವಣೆಗೆ ಮುನ್ನವೇ ಈ ವಿಷಯ ಇತಿಹಾಸದ ಭಾಗವಾಗಲಿದೆ.
ಎಸ್. ಗುರುಮೂರ್ತಿ,
ತುಘಲಕ್ ಪತ್ರಿಕೆಯ ಸಂಪಾದಕ
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ದೇಗುಲದಲ್ಲಿನ ಹುಂಡಿ ಹಣ ಎಣಿಸುವ ಕೆಲಸವನ್ನು ಸ್ಥಳೀಯ ಎಸ್‌ಬಿಐ ಶಾಖೆಗೆ ಹೊರಗುತ್ತಿಗೆ ನೀಡಿತ್ತು. ಎಸ್‌ಬಿಐ, ಈ ಕೆಲಸಕ್ಕೆ ‘ಸೈನಿಕ್ ಸೆಕ್ಯುರಿಟಿ ಸರ್ವೀಸಸ್’ ಎಂಬ ಬಾಹ್ಯ ಸಂಸ್ಥೆಯನ್ನು ನೇಮಿಸಿತ್ತು. ಈ ರೀತಿ ಹುಂಡಿ ಹಣ ಎಣಿಸುವ ಕೆಲಸಕ್ಕೆ ಎಸ್‌ಬಿಐ 19 ಜನರನ್ನು ನಿಯೋಜಿಸಿತ್ತು, ಈ ಪೈಕಿ ಕೆಲವರು ಟ್ರಸ್ಟ್‌ನಿಂದ ಶಿಫಾರಸು ಮಾಡಲ್ಪಟ್ಟವರಾಗಿದ್ದರು.
ಕಳವು ಪ್ರಕರಣ ಸಂಬಂಧ ಇದುವರೆಗೆ ಬಂಧಿತ 8 ಜನರ ಪೈಕಿ 6 ಜನರು ಹುಂಡಿ ಹಣ ಎಣಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದವರು, ಇಬ್ಬರು ಟ್ರಸ್ಟ್‌ನ ಸಿಬ್ಬಂದಿಗಳು. ಈ ಪೈಕಿ ಒಬ್ಬನಂತೂ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ತನ್ನ ಮೇಲೆ ಇಟ್ಟಿದ್ದ ಅತೀವ ವಿಶ್ವಾಸಕ್ಕೆ ದ್ರೋಹ ಬಗೆದಿದ್ದ. ‘ನಂಬಿಕೆಯೇ ನಂಬಿಕೆಯನ್ನು ಹುಟ್ಟುಹಾಕುತ್ತದೆ’ ಎಂಬ ಆರ್‌ಎಸ್‌ಎಸ್‌ನ ಸರ್ವೋತ್ಕೃಷ್ಟ ನೈತಿಕ ಮೌಲ್ಯಗಳಂತೆ ರಾಯ್ ಅವರು ತನ್ನ ಆಪ್ತನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಆತ ಹುಸಿಗೊಳಿಸಿದ್ದ.
ವ್ಯವಸ್ಥಿತ ಕಠಿಣ ನಿಯಮಗಳ ಮೇಲೆ ಅವಲಂಬನೆಯಾಗುವ ಬದಲು, ವೈಯಕ್ತಿಕ ವಿಶ್ವಾಸಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು ದೇಗುಲದಲ್ಲಿ ಕಳವಿಗೆ ನಾಂದಿ ಹಾಡಿತು. ದೇಗುಲದಲ್ಲಿನ ಹುಂಡಿ ಎಣಿಕೆ ಪ್ರಕ್ರಿಯೆಯ ಶಿಷ್ಟಾಚಾರವನ್ನು ಅತ್ಯಂತ ಸಡಿಲಗೊಳಿಸಿದ್ದು ಆರೋಪಿಗಳೆಲ್ಲಾ ಒಂದಾಗಲು ಅವಕಾಶ ಮಾಡಿಕೊಟ್ಟಿತು. ಇದು ಆಡಳಿತದಲ್ಲಿ ನಿರ್ಲಕ್ಷ್ಯಕ್ಕೆ ಕಾರಣವಾಗಿ, ಕಳ್ಳತನಕ್ಕೆ ಅನುವು ಮಾಡಿಕೊಟ್ಟಿತು. ಅದಕ್ಕಾಗಿಯೇ, ‘ನಾನು ಅತಿಯಾಗಿ ನಂಬಿದ್ದ ವ್ಯಕ್ತಿಯೇ ನನಗೆ ದ್ರೋಹ ಮಾಡಿದ ಎಂದು’ ಚಂಪತ್ ರಾಯ್ ಹೇಳಿದ್ದು.
ಬುಲ್ಡೋಜರ್ ಕಾರ್ಯಾಚರಣೆ
ಇಲ್ಲಿಯವರೆಗೆ ಹುಂಡಿಯಿಂದ ಕಳವು ಮಾಡಿದ್ದ ಹಣದ ಪೈಕಿ 80 ಲಕ್ಷ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದೆಡೆ ಪ್ರಕರಣದ ತನಿಖೆಗೆ ಉತ್ತರಪ್ರದೇಶ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳವು, ಆರೋಪಿಗಳು ಹುಂಡಿ ಹಣದ ಜೊತೆಗೆ ಇನ್ಯಾವುದಾದರೂ ವಸ್ತುಗಳನ್ನು ಕಳವು ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ಮತ್ತು ಅವುಗಳನ್ನು ವಶಪಡಿಸಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸರ್ಕಾರದ ಬದ್ಧತೆಯನ್ನು, 20000 ರು. ವೇತನ ಇದ್ದರೂ ಆರೋಪಿಯೊಬ್ಬ ಕಟ್ಟಿದ್ದ 80 ಲಕ್ಷ ರು. ಮೌಲ್ಯದ ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದ್ದರ ಮೂಲಕವೇ ನಾವು ಕಾಣಬಹುದು.
ಕದ್ದ ಹಣ ಸಣ್ಣ ಪ್ರಮಾಣದ್ದೇ?
ಉದ್ಘಾಟನೆಗೊಂಡ ಬಳಿಕ ರಾಮಮಂದಿರಕ್ಕೆ 3000 ಕೋಟಿ ರು.ಗೂ ಹೆಚ್ಚಿನ ಹಣ ಕಾಣಿಕೆ ರೂಪದಲ್ಲಿ ಸಂದಾಯವಾಗಿದೆ ಎನ್ನಲಾಗಿದೆ. ಈ ಪೈಕಿ ಶೇ.90ಕ್ಕಿಂತಲೂ ಹೆಚ್ಚು ಪಾಲು ಅತ್ಯಂತ ಸುರಕ್ಷಿತವಾದ ಬ್ಯಾಂಕ್ ವರ್ಗಾವಣೆ ಮೂಲಕವೇ ಬಂದಿದೆ. 2005ರ ಏಪ್ರಿಲ್ ಮತ್ತು 2026ರ ಫೆಬ್ರುವರಿ ನಡುವೆ ಹುಂಡಿಯಲ್ಲಿ ನಗದು ರೂಪದಲ್ಲಿ 74 ಕೋಟಿ ರು. ಸಂಗ್ರಹವಾಗಿದೆ. ಕಳವಾಗಿದ್ದು ಈ ಮಾರ್ಗದಲ್ಲಿ ಸಂಗ್ರಹ ಹಣ ಮಾತ್ರ.
ಆಂತರಿಕ ತನಿಖೆ ಮತ್ತು ಎಸ್‌ಐಟಿಯ ಪ್ರಾಥಮಿಕ ವರದಿಗಳ ಅನ್ವಯ, ಕಳವು ಮಾಡಲಾದ ಹಣದ ಮೊತ್ತ 7- 7.5 ಕೋಟಿ ರು.ನಷ್ಟು ಇದೆ. ಇನ್ನು ಟ್ರಸ್ಟ್‌ನ ಮೂಲಗಳ ಪ್ರಕಾರ ಹೇಳುವುದಾದರೆ ಕಳವಿನ ಮೊತ್ತ ಇನ್ನೂ ಕಡಿಮೆ ಇದೆ. ಅದರಲ್ಲೂ, ಕಳವಾದ ಮೊತ್ತದ ಪೈಕಿ ಬಹುತೇಕ ಹಣವನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ ಮತ್ತು ಕಳವಿನ ಹಣದಿಂದ ಖರೀದಿಸಿದ ಇನ್ನಷ್ಟು ಆಸ್ತಿಗಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ.
ಜೊತೆಗೆ ಟ್ರಸ್ಟ್‌ನ ಮೂಲಗಳು ಖಚಿತಪಡಿಸಿರುವ ಇನ್ನೊಂದು ಅಂಶವೆಂದರೆ ದೇಗುಲಕ್ಕೆ ಕಾಣಿಕೆಯಾಗಿ ನೀಡಿದ ಚಿನ್ನ, ಬೆಳ್ಳಿಯ ಪೈಕಿ ಒಂದು ಗ್ರಾಂ ಕೂಡಾ ಕಳವಾಗಿಲ್ಲ. ಹೀಗಾಗಿ ಕಳವಾಗಿರುವ ಹಣದ ಇತ್ತೀಚಿನ ಅಂಕಿ ಅಂಶಗಳು ಮತ್ತು ಯಾವುದೇ ಚಿನ್ನ, ಬೆಳ್ಳಿ ವಸ್ತುಗಳು ಕಳವಾಗಿಲ್ಲ ಎಂಬ ಅಂಶವು ಎಸ್‌ಐಟಿಯ ಅಂತಿಮ ವರದಿಯಲ್ಲೂ ಖಚಿತಪಟ್ಟರೆ, ದೇಗುಲದಲ್ಲಿ 200 ಕೋಟಿ ರು.ಗೂ ಹೆಚ್ಚಿನ ವಂಚನೆ ನಡೆದಿದೆ ಎಂಬ ವಿಪಕ್ಷಗಳ ಗೊತ್ತುಗುರಿ ಇಲ್ಲದ ಆರೋಪಕ್ಕೆ ದೊಡ್ಡ ಪೆಟ್ಟು ನೀಡಲಿದೆ.
ಸರ್ಕಾರಿ ಟ್ರಸ್ಟ್ ಪ್ರಕರಣಗಳಲ್ಲಿ ಸರ್ಕಾರದ ನಿಷ್ಕ್ರಿಯತೆ ಮತ್ತು ಅಂಥ ಸಂದರ್ಭದಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶ ಮಾಡಬೇಕಾಗಿ ಬಂದ ಪ್ರಕರಣಗಳನ್ನು ಮತ್ತು ಪ್ರಸಕ್ತ ರಾಮಮಂದಿರ ಪ್ರಕರಣದಲ್ಲಿ ಮಂದಿರ ಟ್ರಸ್ಟ್ ಕೈಗೊಂಡ ತ್ವರಿತದ ಕ್ರಮಗಳಿಗೆ ಹೋಲಿಸಿದಾಗ ನ್ಯಾಯಾಲಯದ ಕಣ್ಗಾವಲಿನಲ್ಲಿ ತನಿಖೆ ನಡೆಸಬೇಕೆಂಬ ಬೇಡಿಕೆಯು ಎರಡೂ ಪ್ರಕರಣದ ವ್ಯತಿರಿಕ್ತ ಸಂದರ್ಭವನ್ನು ವಿಪಕ್ಷಗಳು ಕಡೆಗಣಿಸಿರುವುದಕ್ಕೆ ಒಂದು ಉದಾಹರಣೆ.
ಇನ್ನು ಉತ್ತರಪ್ರದೇಶವು ಮುಂದಿನ ವರ್ಷ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಕಳವು ಪ್ರಕರಣವು ರಾಜಕೀಯ ಮತ್ತು ವೈಚಾರಿಕ ಸಂಘರ್ಷವನ್ನು ಸೃಷ್ಟಿಸುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ.
ದೇಗುಲದಿಂದ ಒಂದು ರುಪಾಯಿ ಕಳವು ಮಾಡಿದ್ದರೂ ಅದು ಶ್ರೀರಾಮನಿಗೆ ಮಾಡಿದ ಘೋರ ಅನ್ಯಾಯ. ರಾಮ, ಕೇವಲ ಒಂದು ವಿಗ್ರಹವಲ್ಲ. ಆತ ಪುರಾತನ ದೇಶದ ಆತ್ಮ. ಜೊತೆಗೆ, ಆತ ನಮ್ಮ ನಾಗರಿಕತೆಗೆ ಧಕ್ಕೆ ತಂದ ಹುಸಿ ಜಾತ್ಯತೀತವಾದ ಮುಖವಾಡ ಕಳಚಿದ ಅಯೋಧ್ಯೆ ಮಂದಿರ ಅಭಿಯಾನದ ಪ್ರತೀಕ. ರಾಮಮಂದಿರ ಅಭಿಯಾನವು ನಮ್ಮಲ್ಲಿ ರಾಷ್ಟ್ರೀಯತೆಯ ಜೀವನವನ್ನು ಮರು ನಿರ್ದೇಶಿತ ಮಾಡಿತು ಎಂಬುದಕ್ಕೆ, ಮಾಧ್ಯಮಗಳು ಪದೇ ಪದೇ ಮರೆಯುವ ಸಣ್ಣ ಇತಿಹಾಸವೊಂದಿದೆ.
ಸ್ವಾತಂತ್ರ್ಯಾನಂತರದಲ್ಲಿ, ದೇಶದ ಸ್ವಾತಂತ್ರ್ಯ ಸಂಗ್ರಾಮದ ಸ್ಪೂರ್ತಿದಾಯಕ ಚಿಂತನೆಗಳು ಮತ್ತು ಚಿನ್ಹೆಗಳಾದ - ಸ್ವಾಮಿ ವಿವೇಕಾನಂದರು ಮತ್ತು ಮಹರ್ಷಿ ಅರಬಿಂದೋ ಅವರು ಪ್ರಚುರಪಡಿಸಿದ ಹಿಂದೂ ರಾಷ್ಟ್ರೀಯವಾದ, ಮಹಾತ್ಮಾ ಗಾಂಧೀಜಿ ಕಲ್ಪನೆಯ ರಾಮರಾಜ್ಯ, ಭಾರತ್ ಮಾತಾ ಕೀ ಜೈ ಮತ್ತು ವಂದೇ ಮಾತರಂ ಅನ್ನು ಕಡೆಗಣಿಸಲಾಗಿತ್ತು. ಆದರೆ ರಾಮಮಂದಿರ ಅಭಿಯಾನವು ಆ ಚಿಂತನೆಗಳನ್ನು ಪುನರುಜ್ಜೀವನಗೊಳಿಸಿತು.
ರಾಷ್ಟ್ರೀಯ ಚರ್ಚೆ ಅಥವಾ ಚಿಂತನೆಗಳನ್ನು ಮುನ್ನಡೆಸುತ್ತಿರುವವರ ಪೈಕಿ ಬಹುತೇಕ ಜನರಿಗೆ ಹಿಂದೂ ರಾಷ್ಟ್ರದ (ಹಿಂದೂ ರಾಷ್ಟ್ರೀಯವಾದ) ಪರಿಕಲ್ಪನೆಯನ್ನು ಆರ್‌ಎಸ್‌ಎಸ್ ಹುಟ್ಟಿಹಾಕಿದ್ದಲ್ಲ ಎಂಬುದು ಗೊತ್ತಿಲ್ಲ. ಹೌದು, ಇದು ಆರ್‌ಎಸ್ಎಸ್‌ನ ಪರಿಕಲ್ಪನೆಯಲ್ಲ. ಆರ್‌ಎಸ್‌ಎಸ್ ಸ್ಥಾಪನೆಗೂ ದಶಕಗಳಿಗೆ ಮೊದಲೇ, ಈ ರಾಷ್ಟ್ರೀಯತೆಯನ್ನು ವಿವೇಕಾನಂದ ಮತ್ತು ಅರಬಿಂದೋ ಅವರು ಪ್ರಚುರಪಡಿಸಿದ್ದರು. ಕೊನೆಗೆ ಇದುವೇ ದೇಶದ ಸ್ವಾತಂತ್ರ್ಯ ಸಂಗ್ರಾಮದ ಚಾಲನಾ ಶಕ್ತಿಯಾಗಿ ಹೊರಹೊಮ್ಮಿತು. ನಂಬಿ, ಇದನ್ನು ಗಾಂಧಿ, ನೆಹರೂ ಮತ್ತು ಕಮ್ಯುನಿಸ್ಟ್ ದಿಗ್ಗಜರಾದ ರಜನಿ ಪಾಲ್ಮೆ ದತ್ ಅವರಂಥ ನಾಯಕರೇ ಸಂಪೂರ್ಣವಾಗಿ ಸ್ವೀಕರಿಸಿದರು.
1909ರಲ್ಲಿ ಗಾಂಧೀಜಿಯವರು ತಾವು ಬರೆದ ಹಿಂದ್ ಸ್ವರಾಜ್‌ನಲ್ಲಿ, ‘ಹಿಂದೂ ತೀರ್ಥಯಾತ್ರೆ, ಚಾರ್‌ಧಾಮ್‌ಗಳಿಗೆ ಯಾತ್ರೆ ಗಂಗಾಜಲದ ಕುರಿತ ಪೂಜ್ಯಭಾವನೆಯು ನಮ್ಮ ರಾಷ್ಟ್ರೀಯ ಸಮಗ್ರತೆ ಮತ್ತು ರಾಷ್ಟ್ರೀಯತೆಯ ಪ್ರತೀಕವಾಗಿವೆ’ ಎಂದು ಉಲ್ಲೇಖಿಸಿದ್ದರು. ಜೊತೆಗೆ, ‘ಈ ಅಂಶಗಳು ನಮ್ಮ ನಡುವೆ ಆಂಗ್ಲರು ಪ್ರವೇಶಿಸಲು ಸಾಧ್ಯವಿಲ್ಲದಂಥ ಒಂದು ಗಾಢವಾದ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಏಕತೆಯನ್ನು ನಮ್ಮಲ್ಲಿ ಮೂಡಿಸುತ್ತದೆ’ ಎಂದೂ ಗಾಂಧೀಜಿ ಬರೆದಿದ್ದರು. ಈ ವೇಳೆ ಮುಸ್ಲಿಮರ ಬಗ್ಗೆ ಕೇಳಿದಾಗ, ‘ಅವರು ಕೂಡಾ ದೂರಗಾಮಿ ಪರಿಣಾಮ ಹೊಂದಿರುವ ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಒಂದಾಗಬೇಕು’ ಎಂದು ಹೇಳಿದ್ದರು. ಇದು ಮಾಧ್ಯಮದಲ್ಲಿನ ಎಷ್ಟು ಜನರಿಗೆ ಗೊತ್ತು?
ಜವಾಹರ್‌ಲಾಲ್ ನೆಹರೂ ಅವರು ವಿವೇಕಾನಂದ ಅವರನ್ನು ದೇಶದ ಸ್ವಾತಂತ್ರ್ಯ ಸಂಗ್ರಾಮದ ಪ್ರವರ್ತಕ ಎಂದು ಬಣ್ಣಿಸಿದ್ದರು. ಜೊತೆಗೆ ತಮ್ಮ ‘ಗ್ಲಿಂಪ್ಸಸ್ ಆಫ್ ವಲ್ಡ್ ಹಿಸ್ಟರಿ’ (1935)ಯಲ್ಲಿ ‘ಸ್ವಾಮಿ ಪ್ರಚುರಪಡಿಸಿದ ಹಿಂದೂ ರಾಷ್ಟ್ರೀಯತೆಯು ಹಿಂದೂ ಧರ್ಮದಲ್ಲಿ ಆಳವಾಗಿ ಬೇರೂರಿದೆ, ಆದರೂ ಅದು ಯಾವುದೇ ರೀತಿಯಲ್ಲೂ ಮುಸ್ಲಿಂ ವಿರೋಧಿಯಲ್ಲ’ (ಪು.437) ಎಂದು ಬಣ್ಣಿಸಿದ್ದರು.
ಮುಂದುವರಿದಂತೆ, ‘ಹಿಂದೂ ರಾಷ್ಟ್ರೀಯತೆ ಮತ್ತು ನಿಜವಾದ ರಾಷ್ಟ್ರಿಯತೆ ನಡುವೆ ಗೆರೆ ಎಳೆಯುವುದು ಅಷ್ಟು ಸುಲಭವಲ್ಲ, ಅವೆರೆಡು ಪರಸ್ಪರ ಸಮ್ಮಿಳಿತವಾಗಿದೆ. ಏಕೆಂದರೆ ಹಿಂದೂಗಳಿಗೆ ಭಾರತ ಮಾತ್ರವೇ ಏಕೈಕ ತಾಣ ಮತ್ತು ಇಲ್ಲಿ ಹಿಂದೂಗಳ ಬಹುಸಂಖ್ಯಾತರು’ (ಪು.720). ಎಂದು ಹೇಳಿದ್ದರು. ಇಂದು ರಾಷ್ಟ್ರೀಯ ಚರ್ಚೆಗಳಲ್ಲಿ ಭಾಗವಹಿಸುವವರ ಪೈಕಿ ಎಷ್ಟು ಜನರು ನೆಹರು ಅವರ ‘ಗ್ಲಿಂಪ್ಸಸ್ ಆಫ್ ವಲ್ಡ್ ಹಿಸ್ಟರಿ ಓದಿದ್ದಾರೆ?.
ಕಮ್ಯುನಿಸ್ಟ್ ಪಾರ್ಟಿ ಆಫ್ ಗ್ರೇಟ್ ಬ್ರಿಟನ್‌ನ ಸಂಸ್ಥಾಪಕರಾದ ರಜನಿ ಪಾಲ್ಮೆ ದತ್ ತಮ್ಮ ಪುಸ್ತಕ ‘ಇಂಡಿಯಾ ಟುಡೇ’ಯಲ್ಲಿ ‘ಭಾರತೀಯರು ಸನ್ಯಾಸಿಗಳಿಂತೆ ಸಂಸ್ಕೃತ ವೇದಗಳನ್ನು ಮಾತ್ರವೇ ಓದಿದ್ದರೂ ಅವರು ಅನುಮಾನವಿಲ್ಲದೇ ಅದರಿಂದ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೇಕಾದಂಥ ಸ್ಫೂರ್ತಿಯನ್ನು ಪಡೆದುಕೊಳ್ಳುತ್ತಿದ್ದರು. ಈ ಪುಸ್ತಕವನ್ನು ರಜನಿ ಅವರು 1939ರಲ್ಲಿ ಬರೆದರು ಮತ್ತು 1973ರಲ್ಲಿ ಪರಿಷ್ಕರಿಸಿದರು. ಆದರೂ ಅವರು 1939ರಲ್ಲಿ ತಾವು ಹೇಳಿದ್ದನ್ನು ಬದಲಾಯಿಸಲಿಲ್ಲ ಎಂಬುದು ಮಾದ್ಯಮದಲ್ಲಿನ ಎಷ್ಟು ಜನರಿಗೆ ಗೊತ್ತು?
ಈ ರೀತಿಯ ಸ್ವಾತಂತ್ರ್ಯ ಹೋರಾಟ 1940ರ ಮಾ.22ರಂದು ನಿರ್ದಿಷ್ಟ ದಿನ ತನ್ನ ಪಥ ಬದಲಾಯಿಸುವವರೆಗೂ ಹಿಂದೂ ರಾಷ್ಟ್ರೀಯವಾದದಲ್ಲಿ ಬಲವಾಗಿ ಬೇರೂರಿಕೊಂಡಿತ್ತು. ಅದು ಎಂ.ಎ. ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ದೇಶ ವಿಭಜನೆಯ ನಿರ್ಣಯವನ್ನು ಅಂಗೀಕರಿಸಿದ ದಿನವಾಗಿತ್ತು. ಆ ದಿನದಿಂದ ಹಿಂದೂ ರಾಷ್ಟ್ರೀಯವಾದದ ಪರಿಕಲ್ಪನೆಯ ಸ್ವಾತಂತ್ರ್ಯದ ನಿರೂಪಣೆಯಿಂದ ವ್ಯವಸ್ಥಿತವಾಗಿ ಅಳಿಸಿಹಾಕಲ್ಪಟ್ಟಿತು.
ವಂದೇ ಮಾತರಂ ಮತ್ತು ಭಾರತ್ ಮಾತಾ ಕೀ ಜೈ ಘೋಷಣೆಗಳು ಜನರ ಜೀವನದಿಂದ ನಿಧಾನವಾಗಿ ದೂರವಾಗತೊಡಗಿತು. ಸ್ವಾತಂತ್ರ್ಯಾನಂತರದಲ್ಲಿ ನೆಹರೂ ನೇತೃತ್ವದ ಕಾಂಗ್ರೆಸ್, ಒಂದೊಮ್ಮೆ ಸ್ವತಃ ನೆಹರೂ ಅವರೇ ಆಚರಿಸಿದ್ದ ಚಿಂತನೆ ಮತ್ತು ಚಿಹ್ನೆಗಳನ್ನು ಸಕ್ರಿಯವಾಗಿ ತಿರಸ್ಕರಿಸಿತು. ನಮ್ಮ ಸ್ವಾತಂತ್ರ್ಯದ ಮೂಲಭೂತ ಸ್ತಂಭಗಳಾದ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಮತ್ತು ರಾಮ ರಾಜ್ಯವನ್ನು ಹುಸಿ ಜಾತ್ಯತೀತ ರಾಜಕೀಯ ಪ್ರಭುತ್ವಗಳು ಅನಾಥ ಮಾಡಿದವು. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಹುಸಿ ಜಾತ್ಯತೀತ ಶಕ್ತಿಗಳ ಸುನಾಮಿಯ ನಡುವೆಯೂ ಇಂಥ ಉದಾತ್ತ ಚಿಹ್ನೆ ಮತ್ತು ಚಿಂತನೆಗಳ ಜ್ವಾಲೆಯನ್ನು ಕಾಪಾಡಿಕೊಂಡು ಬಂದಿದ್ದು ಆರ್‌ಎಸ್‌ಎಸ್.
ಅಂತಿಮವಾಗಿ, ಆರ್‌ಎಸ್‌ಎಸ್ ನೇತೃತ್ವದ ರಾಮ ಮಂದಿರ ಅಭಿಯಾನವು ಸ್ವಾತಂತ್ರ್ಯಪೂರ್ವದಲ್ಲಿನ ಹಿಂದೂ ರಾಷ್ಟ್ರೀಯತೆಯ ಮೌಲ್ಯಗಳನ್ನು ಪುನಸ್ಥಾಪಿಸುವ ಜೊತೆಗೆ ರಾಷ್ಟ್ರೀಯ ರಾಜಕಾರಣವನ್ನು ಮರಳಿ ಹಳಿಗೆ ತರುವಲ್ಲಿ ಯಶಸ್ವಿಯಾಯಿತು. ಹಿಂದುತ್ವವು ಭಾರತದ ಜಾತ್ಯತೀತ ಸಂವಿಧಾನಕ್ಕೆ ಹೊಂದಿಕೊಳ್ಳದು ಎಂದು ಹುಸಿ ಜಾತ್ಯತೀತ ಶಕ್ತಿಗಳು ಸವಾಲು ಹಾಕಿದಾಗಲೇ, 1996ರಲ್ಲಿ ಸುಪ್ರೀಂಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ, ‘ನಿಸ್ಸಂದಿಗ್ಧವಾಗಿ ಹಿಂದುತ್ವವೆಂಬುದು ಭಾರತೀಯರ ಜನರ ರಾಷ್ಟ್ರೀಯ ಆತ್ಮ, ಸಂಸ್ಕೃತಿ ಮತ್ತು ಜೀವನ ವಿಧಾನವಾಗಿದೆ’ ಎಂದು ಸ್ಪಷ್ಟಪಡಿಸಿತು. ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಸಲ್ಲಿಕೆಯಾದ ಹಲವು ಮೇಲ್ಮನವಿಗಳನ್ನು ನ್ಯಾಯಾಲಯ ತಿರಸ್ಕರಿಸಿತು. ಈ ಮೂಲಕ ನಮ್ಮ ದೇಶ ಮತ್ತು ರಾಷ್ಟ್ರೀಯತೆಯು ಹಿಂದೂ ಅಡಿಪಾಯ ಹೊಂದಿದೆ ಎಂಬುದನ್ನು ದೃಢಪಡಿಸಿತು.
ರಾಷ್ಟ್ರೀಯತೆ ನಾಶಕ್ಕೆ ಕಳವಿನ ಅಸ್ತ್ರ:
ರಾಮಮಂದಿರ ಅಭಿಯಾನವು, ಮತಗಳ ಆಧಾರದ ಮೇಲೆ ರೂಪುಗೊಂಡ ಹುಸಿ ಜಾತ್ಯತೀತ ರಾಜಕೀಯವನ್ನು ಧ್ವಂಸಗೊಳಿಸುವ ಜೊತೆಗೆ, ಸಂವಿಧಾನದಲ್ಲಿ ಹಿಂದೂ ರಾಷ್ಟ್ರೀಯತೆಯ ನಿರೂಪಣೆಯನ್ನು ಸೂಕ್ತ ಸ್ಥಾನ ದೊರಕುವಂತೆ ಮಾಡಿತು. ಯಾರು ರಾಮಮಂದಿರ ನಿರ್ಮಾಣವನ್ನು ವಿರೋಧಿಸಿದ್ದರೋ ಅದೇ ಶಕ್ತಿಗಳು ಇದೀಗ ಮಂದಿರ ಕಳವು ಪ್ರಕರಣವನ್ನು ಅಸ್ತ್ರ ಮಾಡಿಕೊಳ್ಳುವ ಮೂಲಕ, ಯಾವ ರಾಮಮಂದಿರ ಅಭಿಯಾನದ ಮೂಲಕ ದೇಶವನ್ನು ಪರಿಷ್ಕರಣೆ ಹಾದಿಗೆ ತರಲಾಗಿತ್ತೋ ಅದನ್ನು ಮರಳಿ ಹುಸಿ ಜಾತ್ಯತೀತದ ಪ್ರಪಾತಕ್ಕೆ ಕೊಂಡೊಯ್ಯುವ ಹತಾಶ ಯತ್ನಕ್ಕೆ ಮುಂದಾಗಿದ್ದಾರೆ.
ಹೀಗೆ ರಾಮಮಂದಿರ ಅಭಿಯಾನದ ಗೌರವವನ್ನು ಹಾಳು ಮಾಡಲು ವಿಪಕ್ಷಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ನಡೆಸುತ್ತಿರುವ ಸಮನ್ವಯದ ಪ್ರಯತ್ನವು ಬಿಜೆಪಿ ಮತ್ತು ಆರ್‌ಎಸ್ಎಸ್ ಬಿಜೆಪಿಗೆ ಪಾಲಿಗೆ ಪ್ರಸಕ್ತ ರಾಜಕೀಯ ಮತ್ತು ಚುನಾವಣಾ ಸವಾಲಾಗಿದೆ. ಇಡೀ ದೇಶದ ಪುನರುಜ್ಜೀವನದ ಪ್ರತೀಕವಾಗಿರುವ ಉತ್ತರಪ್ರದೇಶದಲ್ಲಿ ಚುನಾವಣೆಗಳು ಸಮೀಪಿಸುತ್ತಿರುವಾಗ ವಿರೋಧಿಗಳ ಗುರಿ ಅತ್ಯಂತ ಸ್ಪಷ್ಟವಾಗಿ ಕಂಡಬರುತ್ತಿದೆ. ಸ್ವಾತಂತ್ರ್ಯಪೂರ್ವ ರಾಜಕೀಯ ಸಿದ್ಧಾಂತವಾದ ಹಿಂದೂ ರಾಷ್ಟ್ರೀಯತೆಯನ್ನು ಪುನಃಸ್ಥಾಪಿಸಿದ ರಾಮಮಂದಿರ ಅಭಿಯಾನಕ್ಕೆ ಧಕ್ಕೆ ತರಲು ಮಂದಿರ ಹಣ ಕಳವು ಪ್ರಕರಣವನ್ನು ಅಸ್ತ್ರವಾಗಿ ಬಳಸಲು ಅವರು ಮುಂದಾಗಿದ್ದಾರೆ.
ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಉಳಿದಿರುವಾಗ, ದೇಗುಲ ಹಣ ಕಳವು ಪ್ರಕರಣವು ಜನರ ಮೇಲೆ ಪರಿಣಾಮ ಬೀರುವಂತೆ ಮಾಡುವ ವಿಪಕ್ಷಗಳ ಯತ್ನವು, ಮತದಾನದ ದಿನದವರೆಗೆ ಅವು ಈ ವಿಷಯವನ್ನು ಹೇಗೆ ಜೀವಂತವಾಗಿ ಇಡಬಲ್ಲವು ಎಂಬುದನ್ನು ಅವಲಂಬಿಸಿದೆ. ಇಂದಿನ ಸಾಮಾಜಿಕ ಜಾಲತಾಣ ನೇತೃತ್ವದ ಪರಿಸರದಲ್ಲಿ ಎಲ್ಲಾ ವಿಷಯಗಳ ಜೀವಾವಧಿ ಅತ್ಯಲ್ಪ. ಒಂದು ವೇಳೆ ಎಸ್‌ಐಟಿ ತನ್ನ ಅಂತಿಮ ವರದಿಯಲ್ಲಿ ಕಳ್ಳತನ ಸಣ್ಣ ಪ್ರಮಾಣದ್ದು ಮತ್ತು ಯಾವುದೇ ಆಭರಣ ಕಳವಾಗಿಲ್ಲ ಎಂದು ಸ್ಪಷ್ಟಪಡಿಸಿದರೆ ಅದು ವಿಪಕ್ಷಗಳಿಗೆ ತಪರಾಕಿಯಾಗಲಿದೆ ಮತ್ತು ಚುನಾವಣೆಗೆ ಮುನ್ನವೇ ಈ ವಿಷಯ ಇತಿಹಾಸದ ಭಾಗವಾಗಲಿದೆ.

