ನನಗೆ ವಿಮರ್ಶೆಯಲ್ಲಿನ ಉದಾರವಾದ ಇಷ್ಟವಿಲ್ಲ: ಕೇಶವ ಶರ್ಮ

Published : Jul 12, 2026, 11:46 AM IST
Keshav Sharma

ಸಾರಾಂಶ

ನನ್ನ ಸೃಜನಶೀಲ ಬರಹಗಳು ತುಂಬಾ ಕಡಿಮೆ. ವಿಮರ್ಶೆಯನ್ನು ಬರೆಯುವುದು ಅಂದರೆ ಹೆಚ್ಚು ಅಧ್ಯಯನ ಮಾಡಬೇಕಾಗುತ್ತದೆ. ಆಸಕ್ತಿ ಇದ್ದವರು ಓದುತ್ತಾರೆ. ಕಾದಂಬರಿ ಹಾಗಲ್ಲ. ಅದು ಹೆಚ್ಚು ಜನರನ್ನು ತಲುಪುತ್ತದೆ. ಓದಿ ಪ್ರತಿಕ್ರಿಯೆ ನೀಡುತ್ತಾರೆ.

ಜೋಗಿ

1. ವಿಮರ್ಶಕರಾಗಿ ಗೆದ್ದಿದ್ದೀನಿ ಅನ್ನಿಸುತ್ತೋ, ಸೃಜನಶೀಲ ಲೇಖಕನಾಗಿಯೋ?

ನನ್ನ ಸೃಜನಶೀಲ ಬರಹಗಳು ತುಂಬಾ ಕಡಿಮೆ. ವಿಮರ್ಶೆಯನ್ನು ಬರೆಯುವುದು ಅಂದರೆ ಹೆಚ್ಚು ಅಧ್ಯಯನ ಮಾಡಬೇಕಾಗುತ್ತದೆ. ಆಸಕ್ತಿ ಇದ್ದವರು ಓದುತ್ತಾರೆ. ಕಾದಂಬರಿ ಹಾಗಲ್ಲ. ಅದು ಹೆಚ್ಚು ಜನರನ್ನು ತಲುಪುತ್ತದೆ. ಓದಿ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ನನ್ನ ಮಟ್ಟಿಗೆ ಸೃಜನಶೀಲ ಬರಹ ತುಂಬಾ ಕಷ್ಟ. ವಿಮರ್ಶೆಯಲ್ಲಿ ಹೇಳಬೇಕಾದನ್ನು ಕವಿತೆಯಲ್ಲಿ , ಕಾದಂಬರಿಯಲ್ಲಿ ಹೇಳಲು ಆಗುವುದಿಲ್ಲ. ವೈಯಕ್ತಿಕವಾಗಿ ನಾನು ಎರಡರಲ್ಲೂ ಗೆದ್ದಿದ್ದೇನೆ ಎಂದು ಅನಿಸುವುದೇ ಇಲ್ಲ.

2. ಯಶಸ್ವೀ ಲೇಖಕರು ವಿಮರ್ಶಕರಾಗುತ್ತಾರೆ ಅಂತ ನಂಬುತ್ತೀರಾ? ಅಥವಾ ಈ ಕಾಲದಲ್ಲಿ ವಿಮರ್ಶಕರೇ ಅತ್ಯಂತ ಸೃಜನಶೀಲರು ಅನ್ನಿಸುತ್ತಾ?

ಅಯಶಸ್ವಿ ಲೇಖಕರು ವಿಮರ್ಶಕರಾಗುತ್ತಾರೆ ಎನ್ನುವುದು ಒಂದು ಮಿಥ್ಯೆ. ಕುವೆಂಪು, ಬೇಂದ್ರೆ, ಅನಂತಮೂರ್ತಿ, ಲಂಕೇಶ್‌ ಇವೆರೆಲ್ಲಾ ಯಶಸ್ವಿ ಕವಿಗಳೂ, ಕಾದಂಬರಿಕಾರರೂ ಆಗಿದ್ದರು. ಎರಡರಲ್ಲೂ ಅವರು ಮನ್ನಣೆಯನ್ನು ಪಡೆದಿದ್ದರು. ಆದರೂ ಈ ಕಾಲದಲ್ಲಿ ಅಂತಲ್ಲ, ಎಲ್ಲಾ ಕಾಲದಲ್ಲಿಯೂ ವಿಮರ್ಶಕರು ಸೃಜನಶೀಲ ಲೇಖಕರೇ ಆಗಿರುತ್ತಾರೆ. ನಾನಿಲ್ಲಿ ಸೃಜನಶೀಲತೆಯನ್ನು ಸರಳವಾದ ಅರ್ಥದಲ್ಲಿ ಬಳಸುತ್ತಿಲ್ಲ. ಅದು ವಿಮರ್ಶಕನಿಗೂ ಬೇಕಾಗುತ್ತದೆ. ಸೃಜನಶೀಲತೆ ಎನ್ನುವುದನ್ನೇ ನಾವೀಗ ಮರುವ್ಯಾಖ್ಯಾನ ಮಾಡಬೇಕಾಗಿದೆ. ಕೆಲವನ್ನು ಸೃಜನಶೀಲ ಮತ್ತೆ ಕೆಲವನ್ನು ಸೃಜನಶೀಲವಲ್ಲ ಎಂದು ಹೇಳುವುದನ್ನು ಬಿಡಬೇಕೆಂದು ಅನಿಸುತ್ತದೆ. ಸೃಜನಶೀಲ ಮತ್ತು ಸೃಜನೇತರ ಎನ್ನುವ ವ್ಯತ್ಯಾಸವು ಬಂದದ್ದು ಪುನರುಜ್ಜೀವನದ ಬಳಿಕ. ಆಗ ಕವಿಗಳು ಸೃಜನಶೀಲರು ಮತ್ತು ವಿಮರ್ಶಕರು ಸೃಜನಶೀಲರು ಅಲ್ಲ ಎನ್ನುವ ವ್ಯತ್ಯಾಸವು ಬಂದಿತು. ಅದು ಕವಿಗಳು ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳುವ ಒಂದು ವಿಧಾನವೂ ಆಯಿತು. ಅಷ್ಟೆ!

3. ನೀವು ಮೊದಲ ಬರೆಯಲು ಶುರುಮಾಡಿದ ದಿನಕ್ಕೂ ಈ ಕಾಲಕ್ಕೂ ನೀವು ಕಾಣುವ ಬಹುದೊಡ್ಡ ವ್ಯತ್ಯಾಸ ಏನು?

ನಾನು ಬರೆಯಲು ಶುರು ಮಾಡಿದಾಗ ಇದ್ದ ಕಾಲವೇ ಬೇರೆ. ಈಗಿನ ಕಾಲವೇ ಬೇರೆ. ಈಗ ಬಹುಮಾಧ್ಯಮಗಳು ಇವೆ. ತಂತ್ರಜ್ಞಾನ ಮುಂದುವರಿದಿದೆ. ತುಂಬಾ ಪತ್ರಿಕೆಗಳು ಇವೆ. ಲೇಖಕರಿಗೆ ಬೇರೆ ಅವಕಾಶಗಳೂ ಇವೆ. ಜನರಿಗೆ ಬೇಗ ತಲುಪುತ್ತಾರೆ. ಫೇಸ್ಬುಕ್‌, ಟ್ವಟರ್‌, ವಾಟ್ಸಪ್‌ ಇರುವ ಕಾಲವಿದು. ನಾವು ಹೇಳಬೇಕಾದ್ದನ್ನು ಇವುಗಳಲ್ಲಿ ಹೇಳುವ ಅವಕಾಶಗಳೂ ಇವೆ.

4. ಯಾವುದೇ ಕವಿ ತನ್ನ ಕಾಲದ ಭಾಷೆ ಬಳಸುತ್ತಾನೆ ಅಂತ ನೀವು ಬರೆದಿದ್ದೀರಿ. ಕವಿ ಭಾಷೆಯನ್ನು ತನ್ನ ಒಳದೃಷ್ಟಿಗೆ ಹೇಗೆ ಬಾಗಿಸಿದ್ದಾನೆ ಅಂತ ನೋಡಬೇಕಾಗುತ್ತದೆ ಎಂದಿದ್ದೀರಿ. ಈ ಮಾತು ವಿಮರ್ಶಕರಿಗೆ ಹೊಂದುವುದಿಲ್ಲವೇ? ಯಾಕೆಂದರೆ ವಿಮರ್ಶೆಯ ಭಾಷೆ ಯಾವುದೋ ಕಾಲಕ್ಕೆ ನಿಂತು ಹೋದಂತಿದೆ.?

ಕೆಲವು ವಿಮರ್ಶಕರು ಹಳೆಯ ಜಾಡಿನಲ್ಲಿಯೇ ಮುಂದುವರಿಯುತ್ತಿರುವುದು ನಿಜ. ನಾವು ವಿಮರ್ಶೆಯಲ್ಲಿ ಮಾಡುತ್ತಿರುವುದು ಏನು ಎನ್ನುವ ಮೂಲಭೂತವಾದ ಪ್ರಶ್ನೆಯನ್ನೆ ಕೆಲವರು ಕೇಳಿಕೊಳ್ಳುತ್ತಿಲ್ಲ ಎಂದು ಅನಿಸುತ್ತದೆ. ದೊಡ್ಡ ವಿಮರ್ಶಕರೇ ಒಂದು ಪುಸ್ತಕವನ್ನು ಓದಿ ಬರೆಯುವಾಗ ಕೃತಿಯು ಏನು ಹೇಳುತ್ತದೆ? ಕೃತಿಯು ಎಲ್ಲಿ ಸೋಲುತ್ತದೆ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ. ರೆಟ್ಹಾರಿಸಿಟಿಯೇ ಸಾಹಿತ್ಯ ವಿಮರ್ಶೆ ಎಂದು ಭಾವಿಸುತ್ತಾರೆ. ರೆಟ್ಹಾರಿಕ್‌ ಆಗಿ ಮಾತಾಡುತ್ತಾರೆ. ಬೆಕೆಟ್‌ ಒಮ್ಮೆ ಹೇಳಿದ್ದ: ಸಾಹಿತ್ಯ ಅಂದರೆ ಏನು? ಯಾವುದು? ಯಾಕೆ? ಸಾಹಿತಿ ಏನು ಹೇಳಲು ಬಯಸುತ್ತಾನೆ? ಹೇಗೆ ಹೇಳುತ್ತಿದ್ದಾನೆ? ಅವನು ನಿಂತ ಜಾಗ ಯಾವುದು ? ಇದನ್ನು ನಾವು ನೋಡಬೇಕು. ಕೃತಿ ಸೋತಿದೆ, ಗೆದ್ದಿದೆ ಎಂದು ಹೇಳುವುದು ನಮ್ಮ ಕೆಲಸವಲ್ಲ. ಕಾಲ ಮತ್ತು ಅವಕಾಶಗಳು ಹೇಗೆ ಒಬ್ಬ ಲೇಖಕನ್ನು ರೂಪಿಸುತ್ತದೆ ಎಂದು ಬೆಂಜಮಿನ್‌ ಹೇಳಿದ್ದ. ನಮ್ಮ ಅನೇಕ ವಿಮರ್ಶಕರು ನವ್ಯ ವಿಮರ್ಶೆಯ ಮಾದರಿಗಳನ್ನು ದಾಟಿಲ್ಲ. ನಾವು ನಿಂತಿರುವ ಕಾಲ ಮತ್ತು ನಮ್ಮ ಸಾಮಾಜಿಕ ದೃಷ್ಟಿಕೋನಗಳೇ ನಮ್ಮನ್ನು ನಿಯಂತ್ರಣ ಮಾಡುತ್ತದೆ. ವಿಮರ್ಶಕನಿಗೂ ಸಾಮಾಜಿಕ ಜವಾಬ್ದಾರಿ ಇದೆ. ನಾವು ಲೇಖಕರ ನಿಜವಾದ ತಾತ್ವಿಕತೆಯನ್ನು ಕುರಿತು ಮಾತಾಡಬೇಕು.

ಕವಿ ಭಾಷೆಯನ್ನು ಬಾಗಿಸಿ ತನ್ನ ಕವಿತೆಯಲ್ಲಿ ಹೊಸ ಲೋಕವನ್ನು ಪರಿಚಯಿಸುತ್ತಾನೆ. ಆಗ ಅದು ನಮ್ಮನ್ನು ತಟ್ಟುತ್ತದೆ. ಕಾರಂತರು ಭಾಷೆಯನ್ನು ಚೆನ್ನಾಗಿ ದುಡಿಸಿಕೊಳ್ಳುವುದಿಲ್ಲ ಎಂದು ಅನೇಕರು ಆಕ್ಷೇಪ ವ್ಯಕ್ತ ಮಾಡಿದರು. ಅವರು ಚೋಮನ ದುಡಿಯನ್ನು ಬರೆಯದೇ ಹೋಗಿದ್ದರೆ ನಮಗೆ ಮಾರಿ ಹೊಲೆಯರ ವೃತ್ತಾಂತ ಅರ್ಥವಾಗುತ್ತಿತ್ತೇ? ಯಾವ ಸನ್ನಿವೇಶವು ಅವರನ್ನು ಆ ಕಾದಂಬರಿ ಬರೆಯಲು ಪ್ರೇರಣೆ ನೀಡಿತು? ಅವರು ಯಾವುದನ್ನು ಹೇಳಲು ಹೊರಟಿದ್ದಾರೆ? ಇದನ್ನೂ ನೋಡಬೇಕು. ಆ ಕಾದಂಬರಿಯ ಮೂಲಕ ಒಂದು ಜನಾಂಗಧ ಕಥನವನ್ನು ಹೇಳಿದ್ದಾರೆ. ಕೊರಗ ಜನಾಂಗದ ಕಥನವನ್ನು ಮೊದಲು ಹೇಳಿದ್ದು ಅವರೇ. ಆದರೆ ಅವರು ಬಳಸುವ ಭಾಷೆಯೇ ಅವರ ಶಕ್ತಿಯೂ ಹೌದು. ಬೆಳ್ಳಿಯ ತೊಳಲಾಟವನ್ನು ಅವರು ಚಿತ್ರಿಸುವ ಕ್ರಮ ಅನನ್ಯ. ಈವತ್ತಿಗೂ ದಕ್ಷಿಣ ಕನ್ನಡದಲ್ಲಿ ಮಾರಿಹೊಲೆಯರ ಜೀವನ ಸ್ಥಿತಿ ಸುಧಾರಿಸಿಲ್ಲ ಎನ್ನುವುದು ಕಟು ಸತ್ಯ .

5. ನಿಮ್ಮ ಪ್ರಾತಿನಿಧಿಕತೆ ಮತ್ತು ಸ್ವಯಂಬಲ ಶೀರ್ಷಿಕೆ ಟ್ರೆಡಿಷನ್‌ ಮತ್ತು ಇಂಡಿವಿಜುಯಲ್‌ ಟ್ಯಾಲೆಂಟಿಗೆ ಸಮೀಪದಲ್ಲಿದೆ. ನೀವು ಈ ಪುಸ್ತಕದಲ್ಲಿ ವಸಾಹತು ರಾಜಕಾರಣಗಳು ಮತ್ತು ಅವುಗಳ ಸ್ವರೂಪದಲ್ಲಿ ಅತ್ಯಂತ ನಿರ್ಣಾಯಕವಾದ ಪಲ್ಲಟಗಳನ್ನು ನಾವು ಕಾಣುತ್ತೇವೆ. ಸನ್ನಿವೇಶಗಳು ಬದಲಾದವು. ಯಾವುದು ನಿಜವಾದ ಸನ್ನಿವೇಶ ಆಗಿತ್ತೋ ಅದರಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡವು. ಅಂದರೆ ವಾಸ್ತವ ಮತ್ತು ಅದರ ರಚನೆಗಳಲ್ಲಿ ವ್ಯತ್ಯಾಸವು ಉಂಟಾಯಿತು ಎಂದು ನೀವು ಹೇಳುವಾಗ ನಿಮ್ಮ ಮುಂದಿರುವ ಮಹಿಳಾ ಸಾಹಿತ್ಯ ಯಾವ ಕಾಲದ್ದು, ಯಾವ ದೇಶದ್ದು?

ಪ್ರಾತಿನಿಧಿಕತೆ ಎನ್ನುವುದನ್ನು ನಾನು ಸಾಹಿತ್ಯ ಯಾವುದನ್ನು ಪ್ರತಿನಿಧಿಸುತ್ತದೆ ಎನ್ನುವ ಅರ್ಥದಲ್ಲಿ ಬಳಸಿದ್ದೇನೆ. ಸಾಹಿತ್ಯದಲ್ಲಿ ನಾವು ಎಲ್ಲವನ್ನು ಹೇಳಲು ಸಾಧ್ಯವಿಲ್ಲ. ಅದು ಕೆಲವನ್ನು ಮಾತ್ರವೇ ಪ್ರತಿನಿಧಿಸುತ್ತದೆ. ಸಾಹಿತ್ಯಕ್ಕೆ ಸ್ವಯಂ ಶಕ್ತಿಯೂ ಇರುತ್ತದೆ. ಅದನ್ನೇ ನಾನು ಸ್ವಯಂಬಲ ಎಂದು ಕರೆದೆ. ಎಲಿಯಟ್‌ನ ವಿಚಾರಧಾರೆ ಬೇರೆ. ಅವನು ಪರಂಪರೆಯಲ್ಲಿ ಕೆಲವನ್ನು ಮಾತ್ರವೇ ಆಯ್ಕೆ ಮಾಡುತ್ತಾನೆ. ಅವನ ವಾದ ನನಗೆ ಅಷ್ಟುಇಷ್ಟವಾಗಿಲ್ಲ. ವಸಾಹತು ಸನ್ನಿವೇಶ ಮತ್ತು ವಸಾಹೋತ್ತರ ಸನ್ನಿವೇಶಗಳು ಮಹಿಳಾ ಸಾಹಿತ್ಯವನ್ನು ಹೇಗೆ ಪ್ರಭಾವಿಸಿತು ಮತ್ತು ಕನ್ನಡದ ಲೇಖಕಿಯರು ಅದಕ್ಕೆ ಯಾವ ರೂಪವನ್ನು ಕೊಟ್ಟರು ಎಂದು ಹೇಳಲು ಪ್ರಯತ್ನ ಪಟ್ಟೆ. ವಸಾಹತು ಕಾಲದಲ್ಲಿ ಬರೆದ ಲೇಖಕಿಯರ ಸಮಸ್ಯೆ ಬೇರೆ ಇತ್ತು .ಈಗ ಬರೆಯುವವರ ಸಮಸ್ಯೆ ಬೇರೆ ಇದೆ. ನಾವು ಅಂದರೆ ಗಂಡಸರು ಅಷ್ಟಾಗಿ ಗಮನಿಸಿದೇ ಹೋದ ಸಂಗತಿಗಳನ್ನು ಅವರು ಹೇಳುತ್ತಿದ್ದಾರೆ. ಅದನ್ನು ನಾವು ಕೇಳಿಸಿಕೊಳ್ಳಬೇಕು ಅಂತ ಅನಿಸುತ್ತದೆ.

6. ನಿಮ್ಮ ಪುಸ್ತಕಗಳ ಪೈಕಿ ಫುಕೋನ ಬಗ್ಗೆ ಬರೆದದ್ದು ನನಗೆ ಇಷ್ಟ. ನೀವು ಅದನ್ನು ಬರೆಯಲು ಪ್ರೇರಣೆ ಏನು. ಆತ ನಿಮಗೆ ಹೇಗೆ ಸಿಕ್ಕಿದ?

ಇದನ್ನು ಮೆಚ್ಚಿದ ನಿಮಗೆ ಕೃತಜ್ಞತೆಗಳು. ವಾಸ್ತವಾಗಿ ಫುಕೋನನ್ನು ಕುರಿತು ನಾನು ಬರೆದ ಪುಸ್ತಕವನ್ನು ಓದಿ ಇಷ್ಟವಾಗಿದೆ ಎಂದು ಹೇಳಿದವರು ನಾಲ್ಕು ಮಂದಿ ಮಾತ್ರ. ಅದರಲ್ಲಿ ನೀವೂ ಒಬ್ಬರು. ಖುಷಿಯಾಯ್ತು. ಫುಕೋನನ್ನು ನಾನು ಮೊದಲು ಓದಿದ್ದು 1985ರ ಸುಮಾರಿಗೆ. ಅವನ ಲೇಖನವೊಂದನ್ನು ಓದಿದ್ದೆ. ಇಷ್ಟವಾಗಿತ್ತು. ಆಗ ನಾನು ಮಂಗಳೂರಿನಲ್ಲಿ ಪಿ.ಎಚ್‌.ಡಿ ಮಾಡುತ್ತಿದ್ದೆ. ಜೇಕೂಸ್‌ ಹರಾರಿ ಎನ್ನುವವರು ಟೆಕ್ಚುವಲ್‌ ಸ್ಟ್ರಾಟರ್ಜಿ ಎನ್ನುವ ಕೃತಿಯನ್ನು ಸಂಪಾದಿಸಿದ್ದರು. ಅದರಲ್ಲಿ ಫುಕೋ, ಬಾರ್ತ್ ಮೊದಲಾದವರ ಲೇಖನಗಳು ಇವೆ. ಆಗ ಓದಲು ಶುರುಮಾಡಿದೆ. 1989ರ ಹೊತ್ತಿಗೆ ಮತ್ತೆ ಅವನ ಇತರ ಪುಸ್ತಕಗಳನ್ನು ಓದಲು ಶುರು ಮಾಡಿದೆ. ಅದರಲ್ಲಿಯೂ ಅವನ ಆರ್ಡರ್‌ ಆಫ್‌ ಥಿಂಗ್ಸ್ ಮತ್ತು ಆರ್ಕಿಯಾಲಜಿ ಆಫ್‌ ನಾಲೆಜ್‌ , ಮಾಡ್‌ನೆಸ್‌ ಅಂಡ್‌ ಸಿವೈಲೈಜೇಶನ್‌ , ಹಿಸ್ಟ್ರಿ ಆಫ್‌ ಸೆಕ್ಷುವಲಿಟಿ, ಪವರ್‌ ಅಂಡ್‌ ನಾಲೆಜ್‌ ಇಷ್ಟವಾಯಿತು. ಅಧಿಕಾರದ ಕೇಂದ್ರವನ್ನು ಪ್ರಶ್ನೆ ಮಾಡಿದ ಫುಕೋ, ಅದು ಸತ್ಯವೂ ಹೌದು. ಅವನು ಹೇಳಿದ ವಿಚಾರಗಳೇ ನನಗೆ ಪ್ರೇರಣೆ. ಫುಕೋನನ್ನು ಓದಿ ಎಂದು ಎಂಬತ್ತರ ದಶಕದಲ್ಲಿ ಯಾರೂ ಹೇಳಿರಲಿಲ್ಲ. ನಾನು ನನಗೆ ಇಷ್ಟವಾದನ್ನು ಓದುತ್ತಿದ್ದೆ ಅಷ್ಟೆ. ನಾವು ಕನ್ನಡದಲ್ಲಿಯೂ ಫುಕೋನ ಕುರಿತು ಚರ್ಚೆ ಮಾಡಬೇಕು ಎಂದು ಅನಿಸಿದ್ದರಿಂದ ಬರೆದೆ.

7. ಅಗಾಧ ಕರ್ತೃತ್ವ ಶಕ್ತಿಯ ನೀವು ನಿಮ್ಮ ಶಕ್ತಿಯನ್ನೆಲ್ಲ ವಿಮರ್ಶೆಯ ಮೇಲೆ ವ್ಯಯಮಾಡಿದ ಬಗ್ಗೆ ನಿಮಗೆ ಪಶ್ಚಾತ್ತಾಪ ಇದೆಯೇ?

ಖಂಡಿತಾ ಇಲ್ಲ. ಆದರೆ ಬರಹ ನನಗಿರುವ ಮಾಧ್ಯಮ. ಏನೋ ಹೇಳಬೇಕೆಂದು ಅನಿಸುತ್ತದೆ. ಬರೆಯದೆ ಏನು ಮಾಡಲು ಸಾಧ್ಯ? ನಾನು ಶ್ರಮವಹಿಸಿ ಕೆಲಸ ಮಾಡಬಲ್ಲೆ. ಪ್ರತಿಭಾವಂತನಲ್ಲ. ಖಾಲಿಯಾಗಿ ಕೂರಲು ಆಗುವುದಿಲ್ಲ. ತುಂಬಾ ಜನರು ಹಿಂದಿನಿಂದ ಕಮೆಂಟ್‌ ಮಾಡುತ್ತಾರೆ. ಕೆಟ್ಟದಾಗಿಯೂ ನನ್ನ ಬಗ್ಗೆ ಬರೆಯುತ್ತಾರೆ. ಈಗ ಅದಕ್ಕೆಲ್ಲಾ ಉತ್ತರಿಸುವುದು ಬೇಡ ಎಂದು ಅನಿಸಿದೆ. ಬರೆದ ಮೇಲೆ ನನ್ನ ಕೆಲಸ ಮುಗಿಯುತ್ತದೆ. ಅವರಿಗೆಲ್ಲಾ ಯಾಕೆ ಉತ್ತರಿಸಬೇಕು ಎಂದು ಅನಿಸುತ್ತದೆ. ನನ್ನ ಕೆಲಸ ನನಗೆ. ಸದಾ ನಾನು ಒಂದು ಪುಸ್ತಕ ಬರೆದು ಮುಗಿಸಿದ ಮೇಲೆ ಬೇರೆ ಪುಸ್ತಕ ಬರೆಯಲು ತಯಾರಿ ಮಾಡಿಕೊಳ್ಳುತ್ತೇನೆ. ಅದಕ್ಕಾಗಿ ಪೂರಕ ಕೃತಿಗಳನ್ನು ಗ್ರಹಿಸಲು ಯತ್ನ ಮಾಡುತ್ತೇನೆ. ವಾಸ್ತವವಾಗಿ ಫುಕೋನ ಕುರಿತು ಬರೆಯಲು ತುಂಬಾ ದಿನಗಳನ್ನು ತೆಗೆದುಕೊಂಡೆ. ಕೆಲವರು ಅದರ ಮುಖಪುಟವನ್ನು ಮಾತ್ರ ನೋಡಿ ಕನ್ನಡಕ್ಕೆ ಇದು ಯಾಕೆ ಎಂದು ಕೇಳಿದರು. ಮತ್ತೆ ಕೆಲವರು ಇದು ವ್ಯರ್ಥ ಪ್ರಯತ್ನ ಎಂದರು. ಶ್ರಮವಹಿಸಿ ಕೆಲಸ ಮಾಡಿದವನಿಗೆ ಗೊತ್ತಿರುತ್ತದೆ ಶ್ರಮದ ಬೆಲೆ ಏನೂಂತ. ಆದರೂ ಒಮ್ಮೊಮ್ಮೆ ಕೆಲವು ಕಟು ಪ್ರತಿಕ್ರಿಯೆಗಳು ನಮ್ಮನ್ನು ಬರೆಯದ ಹಾಗೆ ಮಾಡುತ್ತವೆ. ಯಾಕಾದರೂ ಬರೆದೆನಪ್ಪಾ ಎಂದು ಅನಿಸಿಬಿಡುತ್ತದೆ.

8. ನಿಮ್ಮ ಉಪನ್ಯಾಸಕ ವೃತ್ತಿ ನಿಮಗೆ ಕೊಟ್ಟಸಂತೋಷದ ಕ್ಷಣಗಳು ಯಾವುವು?

ಅನೇಕ ಜನ ಹೆಣ್ಣು ಮಕ್ಕಳು ನಾನು ನನ್ನ ಚೇಂಬರ್‌ನಲ್ಲಿ ಒಬ್ಬನೇ ಇರುವಾಗ ಬಂದು ಅವರ ಅಪ್ಪ, ಅಮ್ಮ, ಅಣ್ಣಂದಿರಲ್ಲಿ ಹೇಳದ ಸಂಗತಿಯನ್ನು ನನ್ನತ್ರ ಹೇಳಿ ಅತ್ತಾಗ ನಾನು ಅವರನ್ನು ಸಮಾಧಾನ ಮಾಡಿದ್ದೇನೆ. ಖಿನ್ನತೆಗೆ ಒಳಗಾದವರನ್ನು ಪತ್ರ ಬರೆದು ಮನೋವೈದ್ಯರ ಬಳಿ ಕಳಿಸಿಕೊಟ್ಟಿದ್ದೇನೆ. ಅವರು ಚೇತರಿಸಿದಾಗ ನಿಜವಾಗಿಯೂ ಸಂತೋಷ ಪಟ್ಟಿದ್ದೇನೆ.

9. ಈ ಕಾಲದ ಓದುಗರಿಗೆ ಐವರು ಲೇಖಕರನ್ನು ಸೂಚಿಸಬೇಕಾಗಿ ಬಂದರೆ ಯಾರ ಹೆಸರು ಹೇಳುತ್ತೀರಿ?

ವಿಮರ್ಶಕರನ್ನು ಮತ್ತು ಹಳೆಗನ್ನಡದ ಕವಿಗಳನ್ನು ಬಿಟ್ಟು ಹೇಳುತ್ತಿದ್ದೇನೆ. ಕುವೆಂಪು, ಕಾರಂತ, ಬೇಂದ್ರೆ , ತೇಜಸ್ವಿ, ದೇವನೂರು ಮಹಾದೇವ ಅವರನ್ನು ಮತ್ತೆ ಮತ್ತೆ ಓದಬೇಕು. ಇನ್ನೂ ತುಂಬಾ ಜನ ಲೇಖಕರು ಇದ್ದಾರೆ. ನೀವು ಐದು ಜನ ಎಂದದ್ದಕ್ಕೆ ಹೇಳಿದೆ.

10. ನೀವು ಕಲಿಸಿದ ವಿದ್ಯಾರ್ಥಿಗಳಲ್ಲಿ ಭರವಸೆ ಹುಟ್ಟಿಸುವ ಲೇಖಕರಾದವರು, ಆಗಬಲ್ಲವರು ಯಾರಾದರೂ ಇದ್ದಾರೆಯೇ? ಯಾರಾದರೂ ವಿಮರ್ಶಕರಾಗಿದ್ದಾರೆಯೇ? ಇಲ್ಲದೇ ಹೋದರೆ ಎಲ್ಲ ವ್ಯರ್ಥ ಅನ್ನಿಸುವುದಿಲ್ಲವೇ?

ನೀವು, (ವಾಸ್ತವಾಗಿ ನಿಮಗೆ ಪಾಠ ಮಾಡಿದ್ದು ಎರಡು ತಿಂಗಳು ಮಾತ್ರ. ಆದ್ದರಿಂದ ನಿಮ್ಮನ್ನು ಸ್ನೇಹಿತ ಎಂಧು ಕರೆಯಲು ಇಷ್ಟಪಡುತ್ತೇನೆ) ವೈ.ಗ ಜಗದೀಶ್‌, ರಾಘವೇಂದ್ರ. ರಾಜೇಂದ್ರ, ಕುಂಸಿ ಉಮೇಶ, ಚಂದ್ರಿಕಾ, ವಾಸುದೇವ ನಾಡಿಗ, ರಾಜೇಂದ್ರ, ಹರೀಶ.ಟಿ.ಜಿ, ರವಿ, ಸಂಪತ್‌ ಬೆಟ್ಟಗೆರೆ, ಸಂಪತ್‌ ( ಇವರು ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ) - ಹೀಗೆ ತುಂಬಾ ಜನ ನನಗೆ ಭರವಸೆಯನ್ನು ಹುಟ್ಟಿಸಿದ್ದಾರೆ. ಆದ್ದರಿಂದ ನಿರಾಸೆಯಾಗಿಲ್ಲ.

11. ಈಗ ಸಾಹಿತ್ಯ ವಿಮರ್ಶೆಯ ಸ್ಥಾನ ಹೇಗಿದೆ. ಅದು ಯಾರಿಗೆ ಬೇಕಾಗಿದೆ. ಅದನ್ನು ಎಲ್ಲರ ಬಯಸುವಂತೆ ಮಾಡುವುದು ಹೇಗೆ?

ಎಲ್ಲರೂ ಬಯಸುವಂತೆ ಬರೆಯಲು ನನಗೆ ಸಾಧ್ಯವಾಗಿಲ್ಲ. ಆದರೆ ಯಾವುದು ಈಗ ಜನಪ್ರಿಯವಾಗಿದೆಯೋ ಅದೇ ದಾರಿಯಲ್ಲಿ ಬರೆದರೆ ಎಲ್ಲರಿಗೆ ಮೆಚ್ಚಿಗೆಯಾಗಬಹುದು ಎಂದು ಕಾಣುತ್ತದೆ. ಕೆಲವು ವಿಮರ್ಶಕರು ಆ ದಾರಿಯಲ್ಲಿ ಇದ್ದಾರೆ. ಸ್ವಯಂಪ್ರಚಾರ ಮಾಡುವ ಗುಟ್ಟು ಅವರಿಗೆ ಗೊತ್ತಿರುತ್ತದೆ. ನನಗೆ ವಿಮರ್ಶೆಯಲ್ಲಿನ ಉದಾರವಾದ ಇಷ್ಟವಿಲ್ಲ. ನಿಜ ಹೇಳಬೇಕೆಂದರೆ ನನಗೆ ಸಂದರ್ಭಕ್ಕೆ ತಕ್ಕ ಹಾಗೆ ಮಾತಾಡುವುದು ನನಗೆ ಕಷ್ಟ. ಒಂದು ಸೆಮಿನಾರಿಗೆ ಹೋಗುವಾಗಲೂ ತಯಾರು ಮಾಡುತ್ತೇನೆ. 1979ರಿಂದ ನಿರ್ದಿಷ್ಟವಾದ ಅಲೋಚನಾ ಪಂಥದಲ್ಲಿ ಬೆಳೆದು ಬಂದವನು. ನನಗೆ ನನ್ನ ನಿಲುವನ್ನು ಬದಲಿಸಲು ಇಷ್ಟವಿಲ್ಲ. ನಾನು ಅದಕ್ಕೆ ಬದ್ಧ. ಗಳಿಗೆ ಗಳಿಗೆಗೆ ವಿಮರ್ಶೆಯ ನಿಲುವಲ್ಲಿ ಬದಲಾವಣೆ ಮಾಡಿಕೊಳ್ಳುವವರು ಎಲ್ಲರೂ ಬಯಸುವಂತೆ ಬರೆಯಬಲ್ಲರು. ಅವರಿಗೆ ಅಭಿಮಾನಿ ಬಳಗವೂ ಇರುತ್ತದೆ. ಯಾವುದು ಚಾಲ್ತಿಯಲ್ಲಿದೆ, ಯಾವುದನ್ನು ಬರೆದರೆ ಹೆಚ್ಚು ಜನಪ್ರಿಯವಾಗಬಹುದು ಎಂದು ಯೋಚಿಸಿ ಬರೆಯುವವರೂ ಇದ್ದಾರೆ. ಆದರೆ ಪ್ರಶ್ನೆ ಇರುವುದು ಅದರಲ್ಲಿ ಅಲ್ಲ. ಎಲ್ಲರೂ ಇಷ್ಟಪಡುವ ಹಾಗೆ ಬರೆಯುವುದು ಮುಖ್ಯವಲ್ಲ. ನಾವು ಏನು ಹೇಳುತ್ತಿದ್ದೇವೆ? ಯಾವ ವೈಚಾರಿಕತೆಯನ್ನು ಇಟ್ಟುಕೊಂಡಿದ್ದೇವೆ ಎನ್ನುವುದು ಮುಖ್ಯ. ಬೆಳಿಗ್ಗೆ ಎಡ, ಮಧ್ಯಾಹ್ನ ಬಲ, ಸಂಜೆ ಅಂಬೇಡ್ಕರ್‌ವಾದ ಎಂದು ಮಾತಾಡುವವರ ಬಗ್ಗೆ ನನಗೆ ನಂಬಿಕೆಯೂ ಇಲ್ಲ. ಇಲ್ಲದೇ ಇರುವುದನ್ನು ಇದೆ ಎಂದು ಬರೆಯುವುದು, ಪ್ರಚಾರ ಗಿಟ್ಟಿಸಿಕೊಳ್ಳುವುದು ನನಗಿಷ್ಟವಿಲ್ಲ. ನನಗಿರುವ ಜ್ಞಾನವೂ ಅತ್ಯಂತ ಪರಿಮಿತವಾದ್ದು. ಅದನ್ನು ಅನೇಕರು ಅನೇಕ ಸರ್ತಿ ಹೇಳಿದ್ದಾರೆ. ತೋರಿಸಿದ್ದಾರೆ. ಬರೆದೂ ಇದ್ದಾರೆ. ಬುದ್ಧಿಜೀವಿಗಳ ಒಡನಾಟವೂ ತುಂಬಾ ಕಡಿಮೆ. ಹಿರಿಯರಾದ ಕೆ.ವಿ.ನ್‌, ಕಲ್ಗುಡಿ, ಆರ್‌.ಜಿ.ಹಳ್ಳಿ ನಾಗರಾಜ್‌, ಪ್ರತಿಭಾ, ಮಲ್ಲೇಪುರಂ ಇವರತ್ರ ನನಗೆ ತಿಳಿಯದೇ ಇರುವುದನ್ನು ಕೇಳುತ್ತೇನೆ. ಅವರು ಮಾರ್ಗದರ್ಶನ ಮಾಡುತ್ತಾರೆ. ನನಗೆ ತುಂಬಾ ಓದಿಕೊಂಡವರ ಬಗ್ಗೆ ಭಯವಿದೆ. ನನಗೆ ರೈತರು, ಕಾರ್ಮಿಕರು. ಕೂಲಿಯವರು ಸ್ನೇಹಿತರು. ಅವರ ಜೊತೆಗೆ ಮಾತಾಡುತ್ತೇನೆ. ಅವರ ಅನುಭವದಿಂದ ಪಡೆಯುತ್ತೇನೆ. ನನಗೆ ಅವರತ್ರ ಮಾತಾಡುವುದೇ ಇಷ್ಟ. ಅವರಿಗೆ ಅಪಾರ ಜೀವನಾನುಭವ ಇರುತ್ತದೆ. ಅದು ಪುಸ್ತಕದಿಂದ ಬಂದದ್ದು ಅಲ್ಲ. ರೈತನೊಬ್ಬ ಒಂದು ಮರವನ್ನು ಅನೇಕ ವರ್ಷ ಸಾಕಿ ಬೆಳೆಸುತ್ತಾನೆ. ಅವ ಸಾಕಿದ ಮರ ಕಾಡಾನೆ ಬಂದು ಮುರಿದು ಹಾಕಿದರೆ ಅಳುತ್ತಾನೆ. ಇದು ನಮಗೂ ಅರ್ಥವಾಗಬೇಕು.

12. ಈಗೇನು ಬರೆಯುತ್ತಿದ್ದೀರಿ. ಮತ್ತು ಮತ್ತಷ್ಟುಕಾದಂಬರಿಗಳನ್ನು ಬರೆಯುವ ಉಮೇದು ಉಂಟಾ?

ಆರು ತಿಂಗಳಿಂದ ಏನೂ ಬರೆದಿಲ್ಲ. ಸುಮ್ಮನೆ ಕುಳಿತಿದ್ದೇನೆ. ಕಳೆದ ವರ್ಷ ಒಂದು ಕಾದಂಬರಿ ಬರೆದೆ. ಅದನ್ನು ಇನ್ನೂ ತಿದ್ದಬೇಕು. ಕಾಯುತ್ತಿದ್ದೇನೆ. ಎಲ್ಲಾ ಸನ್ನಿವೇಶದಲ್ಲಿ ಮತ್ತೆ ತಿದ್ದುಪಡಿ ಮಾಡಲು ಆಗುವುದಿಲ್ಲ. ಒಂದರೆಡು ವಿಮರ್ಶೆಯ ಸಿದ್ಧಾಂತದ ಕೃತಿಗಳು ಬರಲಿವೆ. ಫುಕೋನ ಬಗ್ಗೆ ಮತ್ತೆರಡು ಪುಸ್ತಕವನ್ನು ಬರೆದು ಕೊಟ್ಟಿದ್ದೇನೆ. ಯಾವಾಗ ಪ್ರಕಟವಾಗುತ್ತದೆ ಎಂದು ತಿಳಿಯದು. 

PREV
Read more Articles on

Recommended Stories

ವಿಶ್ವಸಂಸ್ಥೆಗೆ ಏನಾಗಿದೆ?
20 ಭಾಷೆಗಳಲ್ಲಿ ಭರ್ಜರಿ 48000 ಹಾಡು ಹಾಡಿದ ಸಾಧಕಿ