ನಗರದ ಜೆ.ಸಿ.ರಸ್ತೆಯಲ್ಲಿ ಬೈಲಿ ಬ್ರಿಡ್ಜ್‌ ನಿರ್ಮಾಣಕ್ಕೆ ಚಿಂತನೆ

KannadaprabhaNewsNetwork |  
Published : Sep 05, 2025, 02:00 AM IST
Bailey bridge 2 | Kannada Prabha

ಸಾರಾಂಶ

ನಗರದ ಜೆ.ಸಿ. ರಸ್ತೆಯಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಸ್ಥಳದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರಕ್ಕೆ ಬೈಲಿ ಬ್ರಿಡ್ಜ್‌ (ತಾತ್ಕಾಲಿಕ ಸೇತುವೆ) ನಿರ್ಮಾಣದ ಮೂಲಕ ಟ್ರಾಫಿಕ್‌ ಜಾಮ್‌ಗೆ ಮುಕ್ತಿ ಕಂಡುಕೊಳ್ಳುವುದಕ್ಕೆ ಜಿಬಿಎ ಚಿಂತನೆ ನಡೆಸಿದೆ.

 ಬೆಂಗಳೂರು :  ನಗರದ ಜೆ.ಸಿ. ರಸ್ತೆಯಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಸ್ಥಳದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರಕ್ಕೆ ಬೈಲಿ ಬ್ರಿಡ್ಜ್‌ (ತಾತ್ಕಾಲಿಕ ಸೇತುವೆ) ನಿರ್ಮಾಣದ ಮೂಲಕ ಟ್ರಾಫಿಕ್‌ ಜಾಮ್‌ಗೆ ಮುಕ್ತಿ ಕಂಡುಕೊಳ್ಳುವುದಕ್ಕೆ ಜಿಬಿಎ ಚಿಂತನೆ ನಡೆಸಿದೆ.

ದಕ್ಷಿಣ ಬೆಂಗಳೂರಿನ ಜನರಿಗೆ ಕೇಂದ್ರ ಭಾಗದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ ಜೆ.ಸಿ. ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ಸುಮಾರು 1.3 ಕಿ.ಮೀ ಉದ್ದದ ಜೆ.ಸಿ, ರಸ್ತೆಯನ್ನು ಕ್ರಮಿಸುವುದಕ್ಕೆ ಸುಮಾರು 30 ನಿಮಿಷಕ್ಕೂ ಅಧಿಕ ಸಮಯ ಬೇಕಾಗುತ್ತಿದೆ. ಪರ್ಯಾಯ ರಸ್ತೆಗಳನ್ನು ಸೂಚಿಸಿದರೂ ಜೆ.ಸಿ. ರಸ್ತೆಯಲ್ಲಿ ಸಂಚಾರ ದಟ್ಟಣೆ ಮಾತ್ರ ಕಡಿಮೆ ಆಗುತ್ತಿಲ್ಲ. ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕಾಗಲಿದೆ.

ಕಾಮಗಾರಿ ತ್ವರಿತವಾಗಿ ನಿರ್ವಹಿಸುವುದಕ್ಕೆ ದಿನದ ಎಲ್ಲಾ ಅವಧಿಯಲ್ಲಿಯೂ ಹೆಚ್ಚಿನ ಸಂಚಾರ ದಟ್ಟಣೆ ಇರಲಿದೆ. ಹೀಗಾಗಿ, ಬೈಲಿ ಬ್ರಿಡ್ಜ್‌ (ತಾತ್ಕಾಲಿಕ ಸೇತುವೆ) ನಿರ್ಮಾಣಕ್ಕೆ ಜಿಬಿಎ ಚಿಂತನೆ ನಡೆಸಿದೆ.

ಏನಿದು ಬೈಲಿ ಬಿಡ್ಜ್‌?

ರಸ್ತೆ ಇಲ್ಲದ ಪ್ರದೇಶದಲ್ಲಿ ಸರಕು ಸಾಗಾಣಿಕೆ ಸೇರಿದಂತೆ ರಕ್ಷಣಾ ಇಲಾಖೆಯ ಯುದ್ಧ ಟ್ಯಾಂಕರ್‌ ಗಳ ಸಂಚಾರಕ್ಕೆ ನಿರ್ಮಾಣ ಮಾಡುವ ತಾತ್ಕಾಲಿಕ ಸೇತುವೆ ಇದಾಗಿದೆ. ಈ ಮಾದರಿಯ ಸೇತುವೆಯನ್ನು ಮುಂಬೈ, ದೆಹಲಿ, ಕೊಲ್ಕತ್ತ ಸೇರಿದಂತೆ ಮೊದಲಾದ ನಗರದಲ್ಲಿ ಕಾಮಗಾರಿ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನೆಲ ಮಟ್ಟದಿಂದ ಸುಮಾರು 15 ಅಡಿಯಷ್ಟು ಎತ್ತರದಲ್ಲಿ ಸೇತುವೆ ಇರಲಿದೆ. ಕೆಳಭಾಗದಲ್ಲಿ ಯಾವುದೇ ತೊಂದರೆ ಇಲ್ಲದೇ ಕಾಮಗಾರಿ ನಡೆಸಬಹುದಾಗಿದೆ. ಸೈಕಲ್‌, ಬೈಕ್‌, ಆಟೋ, ಕಾರು, ಬಸ್‌ ಸೇರಿದಂತೆ ಎಲ್ಲಾ ಮಾದರಿಯ ವಾಹನಗಳು ಸಂಚಾರ ಮಾಡಬಹುದಾಗಿದೆ.

ಬಿಡ್ಜ್‌ಗೆ 5 ಕೋಟಿ ವೆಚ್ಚ

ಅದೇ ಮಾದರಿಯಲ್ಲಿ ಜೆ.ಸಿ.ರಸ್ತೆಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿಕೊಂಡು ವಾಹನ ಸಂಚಾರಕ್ಕೆ ಅವಕಾಶ ನೀಡುವುದರೊಂದಿಗೆ ಕಾಮಗಾರಿ ನಡೆಸುವುದಕ್ಕೆ ಚಿಂತನೆ ಮಾಡಿದೆ. ಆದರೆ, ಈ ತಾತ್ಕಾಲಿಕ ಸೇತುವೆಯ ಬಾಡಿಗೆ ವೆಚ್ಚವೇ ಸುಮಾರು 4 ರಿಂದ 5 ಕೋಟಿ ರು. ಆಗಲಿದ್ದು, ಸೇತುವೆ ಅಳವಡಿಕೆ ಕಾರ್ಯಕ್ಕೆ ಸುಮಾರು ಒಂದು ವಾರ ಬೇಕಾಗಲಿದೆ. ಹಾಗಾಗಿ, ಬೈಲಿ ಬಿಡ್ಜ್‌ ಬೇಕಾ ಬೇಡವೇ ಎಂಬುದರ ಬಗ್ಗೆ ಅವಲೋಕನ ಮಾಡಲಾಗುತ್ತಿದೆ. ಕೊಲ್ಕತ್ತ ಮೂಲದ ಕಂಪನಿ ಬೈಲಿ ಬ್ರಿಡ್ಜ್‌ ನಿರ್ಮಾಣದಲ್ಲಿ ಪರಿಣತಿ ಹೊಂದಿದ್ದು, ಕಂಪನಿಯ ಪ್ರತಿನಿಧಿಗಳೊಂದಿಗೆ ಒಮ್ಮೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಎದುರಾಗುವ ಸಂಚಾರ ದಟ್ಟಣೆ ಪರಿಹಾರ ಸೂಚಿಸುವುದಕ್ಕೆ ನಗರದ ಹಾಗೂ ಸ್ಥಳೀಯ ನವೋದ್ಯಮಗಳನ್ನು ಆಹ್ವಾನಿಸಲಾಗುತ್ತಿದೆ. ಉತ್ತಮ ಪರಿಹಾರ ನೀಡುವ ನವೋದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುವುದು.

- ಎಂ.ಮಹೇಶ್ವರ್ ರಾವ್‌, ಮುಖ್ಯ ಆಯುಕ್ತ, ಜಿಬಿಎ

PREV
Read more Articles on

Recommended Stories

ಪರಧರ್ಮ ಸಹಿಷ್ಣುತೆ ಮೇರು ಪರ್ವತ: ಪ್ರವಾದಿ ಪೈಗಂಬರರು
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ‘ಕೃಷಿ ಮೇಳ’ದಲ್ಲಿ 7 ನೂತನ ಯಂತ್ರಗಳ ಅನಾವರಣ