ಬೆಂಗಳೂರು : ಪ್ರಾಯೋಗಿಕವಾಗಿ ನೀಡಲಾದ ಆಸ್ತಿ ಹರಾಜು ನೋಟಿಸ್ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿಯ ಕಂದಾಯ ಉಪ ವಿಭಾಗವಾರು ಒಟ್ಟು 640 ಆಸ್ತಿ ತೆರಿಗೆ ಸುಸ್ತಿದಾರರಿಗೆ ಒಂದೆರಡು ದಿನದಲ್ಲಿ ಹರಾಜು ನೋಟಿಸ್ ನೀಡಲು ಸಿದ್ಧತೆ ಮಾಡಿಕೊಂಡಿದೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಂದ ತೆರಿಗೆ ವಸೂಲಿ ಮಾಡುವುದಕ್ಕೆ ಹಲವು ಕಸರತ್ತು ನಡೆಸುತ್ತಿರುವ ಬಿಬಿಎಂಪಿಯ ಕಂದಾಯ ಅಧಿಕಾರಿಗಳು, ಕಳೆದ ವಾರವಷ್ಟೇ ವಲಯವಾರು ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ತಲಾ ಒಂದರಂತೆ ಒಟ್ಟು 8 ಆಸ್ತಿ ಮಾಲೀಕರ ಸ್ಥಿರಾಸ್ತಿ ಹರಾಜು ಹಾಕುವುದಾಗಿ ನೋಟಿಸ್ ಜಾರಿ ಮಾಡಲಾಗಿತ್ತು. ಈ ಪೈಕಿ ಏಳು ಆಸ್ತಿ ಮಾಲೀಕರು ಬಾಕಿ ಇರುವ ಆಸ್ತಿ ತೆರಿಗೆ ಪಾವತಿ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಹೀಗಾಗಿ, ಬಿಬಿಎಂಪಿಯು ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗುವುದಕ್ಕೆ ತೀರ್ಮಾನಿಸಿದ್ದು, ಒಂದೆರಡು ದಿನದಲ್ಲಿ ಒಟ್ಟು 640 ಆಸ್ತಿ ಮಾಲೀಕರಿಗೆ ನೋಟಿಸ್ ನೀಡುವುದಕ್ಕೆ ತೀರ್ಮಾನಿಸಿದೆ.
ಬಿಬಿಎಂಪಿಯ ವ್ಯಾಪ್ತಿಯಲ್ಲಿ 64 ಕಂದಾಯ ಉಪ ವಿಭಾಗಗಳಿವೆ. ಒಂದೊಂದು ಉಪ ವಿಭಾಗಕ್ಕೆ 3 ರಿಂದ 4 ವಾರ್ಡ್ ಬರಲಿವೆ. ಇದೀಗ ಉಪ ವಿಭಾಗವಾರು ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳ ಹರಾಜು ಹಾಕುವ ಬಗ್ಗೆ ಆಯಾ ಆಸ್ತಿ ಮಾಲೀಕರಿಗೆ ನೋಟಿಸ್ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಒಂದು ಉಪ ವಿಭಾಗದಿಂದ 10 ಆಸ್ತಿಗಳ ಮಾಲೀಕರಿಗೆ ಆಸ್ತಿ ಹರಾಜು ಹಾಕುವ ನೋಟಿಸ್ ನೀಡಲಾಗುತ್ತದೆ.
ವಸತಿ ಕಟ್ಟಡಗಳೂ ಹರಾಜು: ಸುಮಾರು 2 ಲಕ್ಷ ಆಸ್ತಿ ಮಾಲೀಕರು 400 ಕೋಟಿ ರು. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಈವರೆಗೆ ಕೇವಲ ವಾಣಿಜ್ಯ ಕಟ್ಟಡಗಳನ್ನು ಮಾತ್ರ ಸೀಜ್ ಮಾಡಿ ಆಸ್ತಿ ತೆರಿಗೆ ವಸೂಲಿಗೆ ಕ್ರಮ ವಹಿಸಲಾಗುತ್ತಿತ್ತು. ಬಿಬಿಎಂಪಿಯ ಕಾಯ್ದೆಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಎಲ್ಲ ಸ್ಥಿರಾಸ್ತಿ ಹರಾಜು ಹಾಕಿ ಬಾಕಿ ಇರುವ ಆಸ್ತಿ ತೆರಿಗೆ ವಸೂಲಿಗೆ ಅವಕಾಶ ಇರುವುದರಿಂದ ಬಿಬಿಎಂಜ್ಯು ವಾಣಿಜ್ಯ ಕಟ್ಟಡದ ಜತೆಗೆ, ವಸತಿ ಕಟ್ಟಡಗಳನ್ನು ಹರಾಜು ಹಾಕುವುದಕ್ಕೆ ನೋಟಿಸ್ ನೀಡಲಾಗುತ್ತಿದೆ.
ಆಸ್ತಿ ಹರಾಜು ಕುರಿತು ಮೊಬೈಲ್‌ಗೆ ಮೆಸೇಜ್: ಆಸ್ತಿ ಹರಾಜು ಹಾಕುವುದಕ್ಕೆಆಸ್ತಿ ಮಾಲೀಕರಿಗೆ ನೋಟಿಸ್ ನೀಡುವ ಜತೆಗೆ, ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೂ ಆಸ್ತಿ ಹರಾಜು ಹಾಕುವ ಸಂದೇಶ ಕಳುಹಿಸುವುದಕ್ಕೆ ಬಿಬಿಎಂಪಿ ನಿರ್ಧರಿಸಿದೆ.