ಬೆಂಗಳೂರು : ಇ-ಖಾತಾ ವಿತರಣೆ ವ್ಯವಸ್ಥೆಗೆ ವೇಗ ನೀಡಲು ಸಹಾಯಕ ಕಂದಾಯಾಧಿಕಾರಿಗಳ ಕಚೇರಿ, ಬೆಂಗಳೂರು ಒನ್ ಕೇಂದ್ರಗಳ ಜತೆಗೆ ಇದೀಗ ಖಾಸಗಿ ಸೈಬರ್ ಕೆಫೆಗಳಲ್ಲೂ ಇ-ಖಾತಾ ವಿತರಿಸಲು ಬಿಬಿಎಂಪಿ ಮುಂದಾಗಿದ್ದು, ಶೀಘ್ರದಲ್ಲಿ ಆದೇಶ ಪ್ರಕಟವಾಗಲಿದೆ.
ಆಸ್ತಿಗಳ ದಾಖಲೆ ನಕಲು ಮಾಡಿ ಮಾರಾಟ ಮಾಡುವುದು ಸೇರಿದಂತೆ ಮತ್ತಿತರ ಅಕ್ರಮ ತಡೆಗೆ ಆಸ್ತಿಗಳಿಗೆ ಇ-ಖಾತಾ ನೀಡಲಾಗುತ್ತಿದೆ. ಅದರಂತೆ ಬೆಂಗಳೂರು ವ್ಯಾಪ್ತಿಯಲ್ಲಿನ 22 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳಿಗೆ ಇ-ಖಾತಾ ವಿತರಿಸಲಾಗುತ್ತಿದ್ದು, ಈವರೆಗೆ ಅಂದಾಜು 1 ಲಕ್ಷ ಆಸ್ತಿಗಳಿಗೆ ಇ-ಖಾತಾ ವಿತರಿಸುವ ಕಾರ್ಯ ಪೂರ್ಣಗೊಂಡಿದೆ. ಸದ್ಯ ಬಿಬಿಎಂಪಿ ಸಹಾಯಕ ಕಂದಾಯಾಧಿಕಾರಿಗಳ ಕಚೇರಿ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ವಿತರಣಾ ಕಾರ್ಯ ನಡೆಸಲಾಗುತ್ತಿದೆ. ಆದರೂ, ಇ-ಖಾತಾ ವಿತರಣಾ ಕಾರ್ಯ ನಿರೀಕ್ಷಿತ ಮಟ್ಟ ಮುಟ್ಟಿಲ್ಲ. ಹೀಗಾಗಿ ಖಾಸಗಿ ಸೈಬರ್ ಕೇಂದ್ರಗಳ ಮೂಲಕವೂ ಇ-ಖಾತಾ ವಿತರಿಸಲು ಬಿಬಿಎಂಪಿ ಮುಂದಾಗಿದೆ.
ಪಹಣಿ ವಿತರಣೆ ಮಾದರಿಯಲ್ಲಿ ಅನುಷ್ಠಾನ:
ರಾಜ್ಯದಲ್ಲಿ ಸದ್ಯ ಕಂದಾಯ ಇಲಾಖೆ ಪಹಣಿ ವಿತರಣೆ ಕಾರ್ಯವನ್ನು ಖಾಸಗಿಯವರಿಗೂ ನೀಡಲಾಗಿದೆ. ಅದರ ಜತೆಗೆ ಪಾಸ್‌ಪೋರ್ಟ್ ವಿತರಣೆಗೂ ಖಾಸಗಿ ಸಂಸ್ಥೆಯನ್ನು ನೇಮಿಸಲಾಗಿದೆ. ಅದೇ ಮಾದರಿಯನ್ನು ಇ-ಖಾತಾ ವಿತರಿಸಲು ಮುಂದಾಗಿದೆ. ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಂಡ ಸೈಬರ್ ಕೇಂದ್ರಗಳಿಗೆ ಅನುಮತಿಸಲಾಗುತ್ತದೆ. ಅನುಮತಿ ಪಡೆದ ಸೈಬರ್ ಕೇಂದ್ರಗಳು ಇ-ಖಾತಾ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಆಸ್ತಿ ಮಾಲೀಕರಿಂದ ಪಡೆದು ನಿಗದಿತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಿವೆ. ನಂತರ ಆ ದಾಖಲೆಗಳನ್ನು ಬಿಬಿಎಂಪಿಯ ಸಂಬಂಧಪಟ್ಟ ಅಧಿಕಾರಿಗಳು ಆನ್‌ಲೈನ್ ಮೂಲಕವೇ ಪರಿಶೀಲಿಸಿ, ಇ-ಖಾತಾವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ನಂತರ ಅದನ್ನು ಸೈಬರ್ ಕೇಂದ್ರಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ.
ಬಿಬಿಎಂಪಿಯಿಂದ ಅನುಮತಿ ಪಡೆದ ಸೈಬರ್ ಕೇಂದ್ರಗಳು ಒಂದು ಇ-ಖಾತಾ ದಾಖಲೆ ಅಪ್‌ಲೋಡ್ ಮತ್ತು ಇ-ಖಾತಾ ಡೌನ್‌ಲೋಡ್ ಮಾಡಲು ಆಸ್ತಿ ಮಾಲೀಕರಿಂದ 45 ರು. ಪಡೆಯಲು ಅನುಮತಿಸಲಾಗುತ್ತದೆ. ಅಲ್ಲದೆ, ಈ ಪ್ರಕ್ರಿಯೆಗೂ ಮುನ್ನ ಸೈಬರ್ ಕೇಂದ್ರದಲ್ಲಿ ಕೆಲಸ ಮಾಡುವವರಿಗೆ ಸೂಕ್ತ ತರಬೇತಿಯನ್ನೂ ನೀಡಲು ಬಿಬಿಎಂಪಿ ನಿರ್ಧರಿಸಿದೆ.
ಕೆಲಸ ಕಡಿಮೆ ಇರುವವರಿಗೆ ಹೊಣೆ:
ಸದ್ಯ ಕೆಲಸದ ಒತ್ತಡ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಎಆರ್‌ಒಗಳು ಇ-ಖಾತಾಗಾಗಿ ಆನ್‌ಲೈನ್ ಮೂಲಕ ಸಲ್ಲಿಕೆಯಾಗಿರುವ ದಾಖಲೆಗಳನ್ನು ಪರಿಶೀಲಿಸುವಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯ ಯಾವುದೇ ಎಆರ್‌ಒ ಅಥವಾ ಉಪವಿಭಾಗಾಧಿಕಾರಿಗಳಿಗೆ ಯಾವುದೇ ವಾರ್ಡ್‌ನ ದಾಖಲೆ ಪರಿಶೀಲಿಸುವ ಅವಕಾಶ ನೀಡಲು ಬಿಬಿಎಂಪಿ ನಿರ್ಧರಿಸಿದೆ. ಅದರಲ್ಲೂ ಕೆಲಸದ ಒತ್ತಡ ಕಡಿಮೆ ಇರುವ ಎಆರ್‌ಒ ಅಥವಾ ಉಪವಿಭಾಗಾಧಿಕಾರಿಗಳಿಗೆ ಈ ಹೊಣೆಯನ್ನು ನೀಡಲಾಗುತ್ತದೆ. ಈ ಎಲ್ಲದರ ಕುರಿತು ಶೀಘ್ರದಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ವಿತರಣೆಯಲ್ಲಾಗುತ್ತಿರುವ ವಿಳಂಬ ತಪ್ಪಿಸಲು ಹಾಗೂ ಇ-ಖಾತಾ ವಿತರಣೆಯನ್ನು ಸುಲಭವಾಗಿಸಲು ಬಿಬಿಎಂಪಿ ಎಆರ್‌ಒ ಕಚೇರಿ, ಬೆಂಗಳೂರು ಒನ್ ಕೇಂದ್ರಗಳ ಜತೆಗೆ ಖಾಸಗಿ ಸೈಬರ್ ಕೇಂದ್ರಗಳಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು.
। ತುಷಾರ್ ಗಿರಿನಾಥ್. ಬಿಬಿಎಂಪಿ ಮುಖ್ಯ ಆಯುಕ್ತಫೋಟೋ (ಬಿಬಿಎಂಪಿ ಮತ್ತು ತುಷಾರ್ ಗಿರಿನಾಥ್ ಚಿತ್ರ ಬಳಸಿ)