ದ್ವೇಷ ಭಾಷಣ ಎಂಬುದು ಅಪರಾಧ ಅಂತ ಮಾಡುತ್ತಿದ್ದಾರೆ. ದುಃಖ ಏನು ಅಂದರೆ, ದ್ವೇಷ ಭಾವನೆಯ ಹಿನ್ನೆಲೆಯಲ್ಲಿ ಹುಟ್ಟಿರುವ ಚಿಂತನೆ ಇದು. ಸಮಾಜದಲ್ಲಿ ದ್ವೇಷದ ಭಾವನೆ ಹೆಚ್ಚಾಗುತ್ತಿದೆ. ಸಮಾಜದಲ್ಲಿ ಅಹನೆಯಿಂದ ಕೂಡಿದ ಮಾತುಗಳು ಜಾಸ್ತಿ ಆಗುತ್ತಿವೆ.
ಎಸ್.ಸುರೇಶ್ ಕುಮಾರ್,
ಮಾಜಿ ಕಾನೂನು ಸಚಿವರು ಹಾಗೂ ಹಾಲಿ ಶಾಸಕರು
ದ್ವೇಷ ಭಾಷಣ ಎಂಬುದು ಅಪರಾಧ ಅಂತ ಮಾಡುತ್ತಿದ್ದಾರೆ. ದುಃಖ ಏನು ಅಂದರೆ, ದ್ವೇಷ ಭಾವನೆಯ ಹಿನ್ನೆಲೆಯಲ್ಲಿ ಹುಟ್ಟಿರುವ ಚಿಂತನೆ ಇದು. ಸಮಾಜದಲ್ಲಿ ದ್ವೇಷದ ಭಾವನೆ ಹೆಚ್ಚಾಗುತ್ತಿದೆ. ಸಮಾಜದಲ್ಲಿ ಅಹನೆಯಿಂದ ಕೂಡಿದ ಮಾತುಗಳು ಜಾಸ್ತಿ ಆಗುತ್ತಿವೆ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅದನ್ನು ಯಾವ ರೀತಿ ನಿಗ್ರಹಿಸಬೇಕು ಎಂಬುದಕ್ಕೆ ಎರಡು ರೀತಿ ಇದೆ. ಒಂದು ಕಾನೂನು ರೀತಿ ನಿಗ್ರಹಿಸುವುದು. ಇನ್ನೊಂದು ಉತ್ತಮ ಮೇಲ್ಪಂಕ್ತಿ ಮೂಲಕ ನಿಗ್ರಹಿಸುವುದು.
ಇವತ್ತು ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು, ರಾಜ್ಯದ ಪ್ರಮುಖ ಸಚಿವರವರೆಗೂ ಎಲ್ಲರೂ ದ್ವೇಷ ಭಾಷಣದಲ್ಲಿ ಮುಳುಗಿದ್ದಾರೆ. ನಮ್ಮದು ಅಂತ ಒಂದು ನಂಬಿಕೆ ಇದೆಯಲ್ಲ, ಅದು ಧರ್ಮದ ಬಗ್ಗೆ ಇರಬಹುದು ಅಥವಾ ಸಂಘಟನೆಯ ಬಗ್ಗೆ ಇರಬಹುದು. ಅದನ್ನು ಹೇಳುವ ರೀತಿ ಸಮಾಜದಲ್ಲಿ ಒಂದು ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡುತ್ತಿದೆ. ಇತ್ತೀಚೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಕಲಬುರಗಿಯಲ್ಲಿ ಬಹಳ ಕೆಟ್ಟದಾಗಿ ಭಾಷಣ ಮಾಡಿ ಹೋಗಿದ್ದಾರೆ. ಒಂದು ಸಮುದಾಯದ ವಿರುದ್ಧ ಮಾತನಾಡಿದ್ದಾರೆ. ಈ ರೀತಿ ಮಾತನಾಡುವ ಮಾನಸಿಕತೆಯನ್ನು ನಾವು ಬಿಟ್ಟಾಗ ಮಾತ್ರ ಈ ಕಾನೂನು ಉಪಯೋಗ ಆಗುತ್ತೆ ಅನ್ನೋದು ಒಂದು ಭಾಗ.
ಎರಡನೆಯದ್ದು, ಇಂಡಿಯನ್ ಪೀನಲ್ ಕೋಡ್ ಅಂತ ಮುಂಚೆ ಇತ್ತು. ಈಗ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಬಂದಿದೆ. ಅದರಲ್ಲೂ ಪರಸ್ಪರ ವೈಷಮ್ಯ ಉಂಟು ಮಾಡುವ ಮಾತುಗಳಿಗೆ ಕಾನೂನು ಇದೆ. ಆ ಕಾನೂನುಗಳನ್ನೇ ಯಶಸ್ವಿಯಾಗಿ ಉಪಯೋಗಿಸಬಹುದು. ಆದರೆ ಇದೆಲ್ಲ ಇದ್ದರೂ ನಾವೇನೋ ಮಾಡುತ್ತೇವೆ, ನಮ್ಮ ಕೈಯಿಂದ ಸಾಧ್ಯ ಎಂದು ಭಾವಿಸಿ ಸರ್ಕಾರ ಹೊರಟಿದೆಯಲ್ಲ, ಅದನ್ನು ನೋಡಿದಾಗ ಗೊತ್ತಾಗುತ್ತದೆ: ಇದು ಸದ್ಭಾವನೆಯಿಂದ, ಸದುದ್ದೇಶದಿಂದ ತರುತ್ತಿರುವಂತಹ ಕಾನೂನು ಅಲ್ಲ. ದುರುದ್ದೇಶದಿಂದ ಮತ್ತು ಯಾರನ್ನೋ ಟಾರ್ಗೆಟ್ ಮಾಡುವ ದೃಷ್ಟಿಯಿಂದ ತರುತ್ತಿರುವಂತಹದ್ದು.
ಸಾಬೀತುಪಡಿಸುವವರು ಯಾರು?
ಸಂವಿಧಾನದ ಬಗ್ಗೆ ನಾವು ತುಂಬಾ ಮಾತನಾಡುತ್ತೇವೆ. ಸಂವಿಧಾನದ ಪೀಠಿಕೆಯನ್ನು ಓದಿಸುತ್ತೇವೆ. ಆದರೆ ಸಂವಿಧಾನ ಕೊಟ್ಟಿರುವ ಆ ಮಾತನಾಡುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರವನ್ನು ಯಶಸ್ವಿಯಾಗಿ ಕಸಿದುಕೊಳ್ಳುವ ಒಂದು ಪ್ರಯತ್ನ ಇದು. ಅಂತಿಮವಾಗಿ ಈ ದ್ವೇಷ ಭಾಷಣ ಅನ್ನುವುದನ್ನು ಸಾಬೀತುಪಡಿಸುವವರು ಯಾರು? ಯಾವುದು ದ್ವೇಷ ಭಾಷಣ ಅಂತ ನೀವು ಹೇಗೆ ಹೇಳುತ್ತೀರಿ? ಈಗ ನಾನು ಹಾಸ್ಯವಾಗಿ ಹೇಳುತ್ತೇನೆ. ಉತ್ತರ ಕರ್ನಾಟಕದಲ್ಲಿ ‘ಹುಚ್ಚು ಸೂಳೆಮಗನೆ’ ಅಂತಾರೆ. ಅದು ಆ ಭಾಗದಲ್ಲಿ ಸಾಮಾನ್ಯ ಪದ. ಆದರೆ ದಕ್ಷಿಣ ಕರ್ನಾಟಕದಲ್ಲಿ ಅದು ದ್ವೇಷ ಆಗುತ್ತದೆ. ಈಗ ಇದಕ್ಕೆ ಯಾರು ವ್ಯಾಖ್ಯಾನ ಮಾಡೋದು? ಈ ರೀತಿ ನಾವು ಅನೇಕ ಸಂಗತಿಯನ್ನು ಹೇಳುತ್ತಾ ಹೋಗಬಹುದು.
ಸಮಾಜದಲ್ಲಿ ಶಾಂತಿಯುತ ವಾತಾವರಣ ಇರಬೇಕು. ದ್ವೇಷವನ್ನು ಉಗುಳುವ ಪದ್ಧತಿ ನಿಲ್ಲಬೇಕು. ಕಹಿ ಭಾವನೆಗಳನ್ನು ಹರಡುವ ಪ್ರವೃತ್ತಿ ನಿಲ್ಲಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಇದನ್ನು ಮಾಡುವುದು ಹೇಗೆ ಎಂಬುದಕ್ಕೆ ಬೇರೆ ಬೇರೆ ಆಯಾಮಗಳು ಇವೆ ಎಂಬುದನ್ನು ಯೋಚಿಸಬೇಕು. ಈ ಬಗ್ಗೆ ಡಿಬೇಟ್ ಆಗಬೇಕು. ಇದು ಅರ್ಧಗಂಟೆಯ ಚರ್ಚೆಯಲ್ಲಿ ಆಗುವುದಲ್ಲ, ಸದನ ಸಮಿತಿ ಮಾಡಬೇಕು ಎಂಬುದು ನಮ್ಮದು ಆಗ್ರಹ. ಯಾವ ಪಕ್ಷ, ಅಸಹನೆಯನ್ನೇ ತನ್ನ ಉಸಿರು ಮಾಡಿಕೊಂಡು ಒಂದು ಹೈಕೋರ್ಟ್ ತೀರ್ಪು ವಿರುದ್ಧ ಇಡೀ ದೇಶದ ಮೇಲೆ ತುರ್ತು ಪರಿಸ್ಥಿತಿ ತಂದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಿತ್ತುಕೊಂಡು ದೇಶದ ಪಾರ್ಲಿಮೆಂಟ್ ಮೆಂಬರ್‌ಗಳನ್ನು ಹಿಡಿದು ಹಾಕಿ, ಒಂದು ತುರ್ತು ಪರಿಸ್ಥಿತಿಯ ಹೆಸರಿನಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯ ಎಲ್ಲವನ್ನೂ ಯಾವ ರೀತಿ ಕಸಿದುಕೊಂಡಿತೋ, ಅದೇ ಪಕ್ಷ ಇದೀಗ ದ್ವೇಷ ಭಾಷಣ ಎಂಬ ಕಾಯ್ದೆ ಮೂಲಕ ತನಗೆ ಆಗದೆ ಇರುವವರ ದನಿಯನ್ನು ಅಡಗಿಸಲು ಮುಂದಾಗುತ್ತಿದೆ.
ಅವರಿಗೆ ಗೊತ್ತಿಲ್ಲ, ಇದು ಮುಂದೊಂದು ದಿನ ಅವರಿಗೇ ತಿರುಗು ಬಾಣ ಆಗಬಹುದು. ಇದಕ್ಕೋಸ್ಕರ ನಾವು ಪರಿ ಪರಿಯಾಗಿ ಸ್ಪೀಕರ್ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಕೇಳಿಕೊಂಡೆವು, ವೈಯಕ್ತಿಕವಾಗಿ ಕೇಳಿಕೊಂಡೆವು. ದಯವಿಟ್ಟು ಇದನ್ನು ಸದನ ಸಮಿತಿಗೆ ಕಳುಹಿಸಿ, ಈ ಬಗ್ಗೆ ಚರ್ಚೆ ಆಗಬೇಕು, ಇಲ್ಲವಾದರೆ ದೊಡ್ಡ ತಪ್ಪಾಗುತ್ತದೆ ಎಂದು. ಆದರೆ ಯಾರೋ ಹೇಳಿದರು ಅಂತಾ ಇವರು ಮಾಡುತ್ತಿದ್ದಾರೆ. ಉದಾಹರಣೆ ರಾಹುಲ್ ಗಾಂಧಿ, ಸಾವರ್ಕರ್ ಬಗ್ಗೆ ಎಲ್ಲೆಲ್ಲಿ ಏನೇನು ಮಾತನಾಡಿದ್ದಾರೆ ಗೊತ್ತಾ? ನಿಮಗೆ ಸಾವರ್ಕರ್ ಇಷ್ಟ ಇಲ್ಲದೆ ಇರಬಹುದು. ಆದರೆ ಅವರನ್ನು ದೇಶದ್ರೋಹಿ ಅಂತ ಬಿಂಬಿಸುವುದು ಇದೆಯಲ್ಲ ಇದು ನಿಜವಾದ ದ್ವೇಷದ ಭಾಷಣ. ನಿಮಗೆ ಆರ್‌ಎಸ್‌ಎಸ್ ಕಂಡರೆ ಆಗುವುದಿಲ್ಲ ಒಪ್ಪಿಕೊಳ್ಳುತ್ತೇನೆ. ನೀವು ಇಷ್ಟ ಪಡದಿರುವುದಕ್ಕೆ ಸಾವಿರ ಕಾರಣವಿರಬಹುದು. ಆದರೆ ಆರ್‌ಎಸ್‌ಎಸ್ ಒಂದು ದೇಶದ್ರೋಹಿ ಸಂಘಟನೆ ಎಂದು ಮಾತನಾಡುವುದು ಮತ್ತು ತನ್ನ ಹಿಂಬಾಲಕರಿಗೆ ಪ್ರಚೋದನೆ ಕೊಡುವುದು ಇದೆಯಲ್ಲಾ ಅದು ಸರಿಯಲ್ಲ. ಅದು ರಾಹುಲ್ ಗಾಂಧಿ ಇರಬಹುದು, ಪ್ರಿಯಾಂಕ ಖರ್ಗೆ ಇರಬಹುದು ಅಥವಾ ತಮಿಳುನಾಡಿನ ಸ್ಟಾಲಿನ್ ಮಗ ಉದಯನಿಧಿ ಇರಬಹುದು. ಧರ್ಮ ಎಂಬುದು ಹುಳುಗಳು ಇದ್ದಂತೆ, ಅದನ್ನು ನಿರ್ಮೂಲನೆ ಮಾಡುತ್ತೇವೆ ಎಂಬ ಮಾತುಗಳ ಮೂಲಕ ದ್ವೇಷ ಮಾನಸಿಕ ಸ್ಥಿತಿಯನ್ನು ಬಯಲು ಮಾಡಿದ್ದಾರೆ. ಇನ್ನೇನಾದರೂ ಕಾನೂನು ಬಂದರೆ ಇಂಥವರಿಗೇ ಮೊದಲು ಎಫೆಕ್ಟ್ ಆಗುವುದು.
ನಂಬಿಕೆಗಳಲ್ಲಿ ವಿರೋಧ, ವಿರೋಧಿಗಳು ಇರುವುದು ಸಹಜ
ರಾಜಕೀಯದಲ್ಲಿ ಅಥವಾ ಬೇರೆ ಬೇರೆ ವಿಚಾರಗಳ ನಂಬಿಕೆಗಳಲ್ಲಿ ವಿರೋಧ, ವಿರೋಧಿಗಳು ಇರುವುದು ಸಹಜ. ವಿರೋಧಿಗಳನ್ನು ಶತ್ರುಗಳ ರೀತಿ ನೋಡಿಕೊಳ್ಳುವುದು ಬಹಳ ತಪ್ಪು. ಬಹಳ ಹಿಂದೆ ವಾಜಪೇಯಿ ಹೇಳುತ್ತಿದ್ದರು. ನಾವು ರಾಜಕೀಯ ವಿರೋಧಿಗಳೇ ಹೊರತು, ರಾಜಕೀಯ ಶತ್ರುಗಳಲ್ಲ ಅಂತ. ಇವತ್ತು ಶತೃತ್ವದ ಮನಸ್ಥಿತಿ ತುಂಬಾ ಬೆಳೆಯುತ್ತಿದೆ. ರಾಜಕೀಯ ಧುರೀಣರೇ ಗಾಂಧಿ ಜಯಂತಿ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದಂತಹ ದಿನಗಳಲ್ಲೂ ದ್ವೇಷ ಭಾಷಣ ಮಾಡಿದರೆ ಅವರ ಅನುಯಾಯಿಗಳು ಬಡ್ಡಿ ಸಮೇತ ಅದನ್ನು ಉಪಯೋಗಿಸಿಕೊಳ್ಳುತ್ತಾರೆ. ಕಾಯ್ದೆ ಎಂಬ ಹಾರ್ಡ್‌ವೇರ್ ಎಷ್ಟು ಅವಶ್ಯಕತೆ ಇದ್ದೆಯೋ ಮಾನಸಿಕತೆಯ ಸಾಫ್ಟ್‌ವೇರ್ ಕೂಡ ಅಷ್ಟೇ ಅವಶ್ಯಕತೆ ಇದೆ. ಅದರಲ್ಲಿ ಬದಲಾವಣೆ ತರಲು ಎಲ್ಲರೂ ಕೂಡ ಇಂದು ಯೋಚನೆ ಮಾಡಬೇಕು. ಬರೀ ಕಾಯ್ದೆ ತಂದು ನಮಗೆ ಆಗದೆ ಇರುವವರನ್ನು ನಾವು ಬಲಿ ಹಾಕುತ್ತೇವೆ ಎಂದರೆ ಹೇಗೆ? ಒಂದು ವ್ರಣ ಇದೆ. ಆ ವ್ರಣಕ್ಕೆ ನಾವು ಮೇಲ್ಗಡೆ ಮಾತ್ರ ತೇಪೆ ಹಾಕುತ್ತೇವೆ. ಮೂಲಕ್ಕೆ ಹೋಗುವುದಕ್ಕೆ ನಮಗೆ ಆಗುವುದಿಲ್ಲ.


