ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸಿ : ಶಿಕ್ಷಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಲಹೆ

KannadaprabhaNewsNetwork | Updated : Jan 28 2025, 05:07 AM IST

ಸಾರಾಂಶ

ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು, ಅಧ್ಯಾಪಕರು ಕೇವಲ ಪುಸ್ತಕದ ಪಾಠ ಮಾಡಬೇಡಿ. ವಿದ್ಯಾರ್ಥಿಗಳಲ್ಲಿ ಉತ್ತಮ ನಡೆ, ನುಡಿ, ವಿಚಾರಧಾರೆ, ಚಿಂತನೆಗಳನ್ನು ಬೆಳೆಸಿ ದೇಶ ಕಟ್ಟುವ ರೀತಿಯಲ್ಲಿ ತಯಾರು ಮಾಡಬೇಕು. ಅವರನ್ನು ಸಮಾಜದ ಆಸ್ತಿಯನ್ನಾಗಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು.

 ಬೆಂಗಳೂರು : ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು, ಅಧ್ಯಾಪಕರು ಕೇವಲ ಪುಸ್ತಕದ ಪಾಠ ಮಾಡಬೇಡಿ. ವಿದ್ಯಾರ್ಥಿಗಳಲ್ಲಿ ಉತ್ತಮ ನಡೆ, ನುಡಿ, ವಿಚಾರಧಾರೆ, ಚಿಂತನೆಗಳನ್ನು ಬೆಳೆಸಿ ದೇಶ ಕಟ್ಟುವ ರೀತಿಯಲ್ಲಿ ತಯಾರು ಮಾಡಬೇಕು. ಅವರನ್ನು ಸಮಾಜದ ಆಸ್ತಿಯನ್ನಾಗಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆಯು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನೂತನವಾಗಿ ನೇಮಕಗೊಂಡಿರುವ ಸಹಾಯಕ ಪ್ರಾಧ್ಯಾಪಕರಿಗೆ ವೃತ್ತಿ ಮಾರ್ಗದರ್ಶನ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತಮವಾದ ಮಟ್ಟಕ್ಕೆ ತಯಾರು ಮಾಡಲು ಆಗದೇ ಇರಬಹುದು. ಆದರೆ, ಕನಿಷ್ಠ ಒಂದು ತರಗತಿಯಲ್ಲಿ 10 ಮಕ್ಕಳನ್ನಾದರೂ ಅವರಲ್ಲಿನ ಪ್ರತಿಭೆಗಳನ್ನು ಗುರುತಿಸಿ ಉನ್ನತ ಮಟ್ಟಕ್ಕೆ ತಯಾರು ಮಾಡಬೇಕು. ಅವರೇ ಮುಂದೆ ದೇಶ ಕಟ್ಟುವ ನಾಯಕರಾಗಬಲ್ಲರು. ಉತ್ತಮ ಸಾಧನೆ, ಸಂಶೋಧನೆಗಳ ಮೂಲಕ ದೇಶದ ಆಸ್ತಿಯಾಗುತ್ತಾರೆ. ಕುದರೆಯನ್ನು ರೇಸ್‌ ಕುದುರೆ ಮಾಡುವುದು ದೊಡ್ಡ ಕೆಲಸವಲ್ಲ, ಕತ್ತೆಯನ್ನು ಕುದುರೆ ಮಾಡುವುದು ಕಠಿಣ ಕೆಲಸ. ಅಂದರೆ ಕಲಿಕೆಯಲ್ಲಿ ಹಿಂದುಳಿದಿರುವವರನ್ನು ಇತರೆ ಮಕ್ಕಳ ಮಟ್ಟಕ್ಕೆ ಬೆಳೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಇನ್ನು, ಹದಿಹರೆಯದ ವಿದ್ಯಾರ್ಥಿಗಳನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಅವರ ಮನಸ್ಸು ಹತ್ತಾರು ರೀತಿ ಯೋಚಿಸುತ್ತಿರುತ್ತದೆ. ಗುರುಗಳಿಗೇ ಪಾಠ ಮಾಡುವ ಮಟ್ಟಕ್ಕೆ ಕೆಲವರು ಇರುತ್ತಾರೆ. ಹಾಗಾಗಿ ಅಂತಹ ಮಕ್ಕಳನ್ನು ನಿಭಾಯಿಸುವ, ಉತ್ತಮ ರೀತಿಯಲ್ಲಿ ತಯಾರಿಸಲು ಶಿಕ್ಷಕರು ಮೊದಲು ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು. ನಿರಂತರ ಕಲಿಕೆ, ಅಧ್ಯಯನದಲ್ಲಿ ನೀವೂ ತೊಡಗಿರಬೇಕು. ಅಲ್ಲದೆ, ನಿಮ್ಮ ಇಡೀ ಜೀವನವನ್ನು ಬೋಧಕ ವೃತ್ತಿಗೇ ಸೀಮಿತಗೊಳಿಸಬೇಕಿಲ್ಲ. ಐಎಎಸ್, ಕೆಎಎಸ್‌ನಂತಹ ಪರೀಕ್ಷೆ ಬರೆದು ಸರ್ಕಾರದ ಅಧಿಕಾರಿಗಳ ಹುದ್ದೆ ಅಲಂಕರಿಸಬಹುದು. ಅಂತಹ ಪ್ರಯತ್ನವನ್ನು ನೀವೂ ಮಾಡಿ, ವಿದ್ಯಾರ್ಥಿಗಳಿಗೂ ಮಾರ್ಗದರ್ಶನ, ಶಿಕ್ಷಣ ನೀಡಿ ಎಂದು ಸಲಹೆ ನೀಡಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಮಾತನಾಡಿ, ಚುನಾವಣೆ ಸಮಯದಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿರುವಂತೆ ನಮ್ಮ ಸರ್ಕಾರ ಮುಂದಿನ 5 ವರ್ಷಗಳ ಅಧಿಕಾರಾವಧಿಯಲ್ಲಿ 2.5 ಲಕ್ಷ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಬದ್ಧವಾಗಿದೆ. ಈ ಸಂಬಂಧ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲಾಗಿದ್ದು, ಮುಂದಿನ ತಿಂಗಳ ಅಂತ್ಯದ ವೇಳೆಗೆ 20 ವರ್ಷಗಳ ನಂತರ 310 ಮಂದಿ ಪದವಿ ಕಾಲೇಜುಗಳ ಪ್ರಾಂಶುಪಾಲರನ್ನು ನೇಮಕ ಪ್ರಕ್ರಿಯೆ ಮುಗಿಯಲಿದೆ. ಸರ್ಕಾರಿ ಕಾಲೇಜುಗಳಲ್ಲಿ ಸಾಕಷ್ಟು ಸವಾಲುಗಳಿವೆ. ಖಾಸಗಿ ಕಾಲೇಜುಗಳೊಂದಿಗೆ ಪೈಪೋಟಿ ನಡೆಸಬೇಕಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಶ್ರಮಿಸಬೇಕಾದ ಜವಾಬ್ದಾರಿ ಬೋಧಕ ವರ್ಗದ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಕರ್‌, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ ಹಾಗೂ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸುಧಾಕರ್‌ ಕಾರ್ಯದ ಬಗ್ಗೆ ಡಿಸಿಎಂ ಪ್ರಶಂಸೆ:

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಮ್ಮ ಇಲಾಖೆಯಲ್ಲಿ ಮಾಡುತ್ತಿರುವ ಕೆಲಸಗಳು ಸಮಾಧಾನ ತಂದಿದೆ, ಸಂತಸ ಆಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಖಾತೆ ಹಂಚಿಕೆ ವೇಳೆ ಸುಧಾಕರ್‌ ಅವರಿಗೆ ಬೇರೆ ಖಾತೆ ನೀಡಲಾಗಿತ್ತು. ಅದನ್ನು ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿ ಅರ್ಹ ವ್ಯಕ್ತಿಗೆ ಅರ್ಹ ಹುದ್ದೆ ಸಿಗಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಜವಾಬ್ದಾರಿ ನೀಡಲಾಯಿತು. ಬದ್ಧತೆ, ಶ್ರದ್ದೆಯಿಂದ ಜವಾಬ್ದಾರಿಯುತ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದರು.

Share this article