ರಾಜ್ಯದಲ್ಲಿ ಮಿತಿ ಮೀರಿರುವ ಮೈಕ್ರೋ ಪೈನಾನ್ಸ್‌ ಕಿರುಕುಳ ವಿರುದ್ಧ ರೈತ ಸಂಘ ಆಕ್ರೋಶ

KannadaprabhaNewsNetwork | Updated : Jan 30 2025, 05:51 AM IST

ಸಾರಾಂಶ

ರಾಜ್ಯದಲ್ಲಿ ಮಿತಿ ಮೀರಿರುವ ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬುಧವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

 ಬೆಂಗಳೂರು : ರಾಜ್ಯದಲ್ಲಿ ಮಿತಿ ಮೀರಿರುವ ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬುಧವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಬಡಗಲಪುರ ನಾಗೇಂದ್ರ, ಮೈಕ್ರೋ ಫೈನಾನ್ಸ್‌ಗಳ ಕಿರುಕುಳದಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ದುಡಿಯುವ ವರ್ಗ ಸಂಕಷ್ಟಕ್ಕೀಡಾಗಿದೆ. ಮಹಿಳೆಯರು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಬಹಳಷ್ಟು ಜನರು ಊರನ್ನೇ ತೊರೆಯುತ್ತಿದ್ದಾರೆ. ಇದಕ್ಕೆ ಕಾರಣವಾದ ಮೈಕ್ರೋ ಫೈನಾನ್ಸ್‌ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ನಬಾರ್ಡ್‌ ಮೂಲಕ ಕೃಷಿ ಕ್ಷೇತ್ರಕ್ಕೆ ನೀಡುತ್ತಿದ್ದ ಸಾಲವನ್ನು ಕಡಿಮೆ ಮಾಡಿದೆ. ಇದರಿಂದಾಗಿ ಕೃಷಿ ವ್ಯವಸ್ಥೆ ನಾಶವಾಗುವ ಆತಂಕ ಉಂಟಾಗಿದೆ. ಕಳೆದ ವರ್ಷ ರಾಜ್ಯಕ್ಕೆ ನಬಾರ್ಡ್‌ನಿಂದ 5600 ಕೋಟಿ ರು. ನೀಡಲಾಗಿತ್ತು. ಆದರೆ ಈ ವರ್ಷ 2340 ಕೋಟಿ ರುಪಾಯಿಗೆ ಇಳಿಸಲಾಗಿದೆ ಎಂದು ಟೀಕಿಸಿದರು.

ಶಾಸಕರಾದ ಬಿ.ಆರ್‌.ಪಾಟೀಲ್‌, ದರ್ಶನ್‌ ಪುಟ್ಟಣ್ಣಯ್ಯ, ಮುಖಂಡರಾದ ಚಾಮರಸ ಮಾಲಿ ಪಾಟೀಲ್‌, ಇಂಧೂದರ ಹೊನ್ನಾಪುರ, ಮಾವಳ್ಳಿ ಶಂಕರ್‌, ನೂರ್‌ ಶ್ರೀಧರ್‌, ವೀರಸಂಗಯ್ಯ, ಮಹೇಶ್‌ ಪ್ರಭು, ಗೋವಿಂದರಾಜು, ಗೋಪಾಲ್‌, ವಸಂತ್‌ಕುಮಾರ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜಾಗೃತಿ ಮೂಡಿಸಲು ನಿರ್ಧಾರ: ಪ್ರತಿಭಟನೆಯ ಬಳಿಕ ನೃಪತುಂಗ ರಸ್ತೆಯ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(ಆರ್‌ಬಿಐ) ಕಚೇರಿಗೆ ತೆರಳಿದ ಹಲವು ರೈತ ಮುಖಂಡರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಬಳಿಕ ನಬಾರ್ಡ್‌ ಕಚೇರಿಗೆ ತೆರಳಿ ಅಲ್ಲಿನ ಅಧಿಕಾರಿಗಳಿಗೂ ಅನುದಾನಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಲಾಯಿತು. ‘ಫೈನಾನ್ಸ್‌ನವರು ಕಿರುಕುಳ ನೀಡಿದರೆ ಯಾರೂ ಅಂಜಬಾರದು, ಆತ್ಮಹತ್ಯೆಗೆ ಮುಂದಾಗಬಾರದು’ ಎಂದು ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ ಎಂದು ಮುಖಂಡ ಚಾಮರಸಮಾಲಿ ಪಾಟೀಲ್‌ ತಿಳಿಸಿದ್ದಾರೆ.

Share this article