ಚಾಮರಾಜನಗರದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನ ಆಚರಣೆ । ನ್ಯಾ. ಬಿ.ಎಸ್.ಭಾರತಿ ಕರೆ
ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವ ಮೂಲಕ ಅಧಿಕಾರಿಗಳು ಬಾಲ್ಯವಿವಾಹ ತಡೆಗಟ್ಟಲು ಮುಂದಾಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆಯ ಕೆ.ಡಿ.ಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಕಾನೂನು ಸೇವಾದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಅಧಿಕಾರಿಗಳು ಜನರಿಗೆ ಬಾಲ್ಯವಿವಾಹದಿಂದ ಆಗಬಹುದಾದ ದುಷ್ಪರಿಣಾಮ ಹಾಗೂ ಕಾಯ್ದೆಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಜಿಲ್ಲೆಯಲ್ಲಿ ಬಾಲ್ಯವಿವಾಹವು ಹೆಚ್ಚಾಗದಂತೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಮಾಜದಲ್ಲಿ ನಡೆಯುವ ದೌರ್ಜನ್ಯಗಳ ಬಗ್ಗೆ ಯಾರು ಕೂಡ ಮೌನ ವಹಿಸಬಾರದು. ಮುಕ್ತವಾಗಿ ಸಂಬಂಧಿಸಿದ ಇಲಾಖೆಗಳಿಗೆ ಜೊತೆ ಮಾತನಾಡಿ ಕಾನೂನಿನ ಸೌಲಭ್ಯ ಪಡೆಯಬಹುದು. ಪೋಷಕರು ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ಜಾಗೃತರಾಗಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಮಕ್ಕಳಿಗೆ ಮದುವೆ ಮಾಡಿದ ಮಾತ್ರಕ್ಕೆ ಪೋಷಕರ ಜವಾಬ್ದಾರಿ ಮುಗಿಯುವುದಿಲ್ಲ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಮೊದಲು ಉತ್ತೇಜನ ನೀಡಬೇಕು. ಬಾಲ್ಯ ವಿವಾಹದಿಂದ ಅಪ್ರಾಪ್ತರ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಕಾನೂನಿನ ಅರಿವು ಅವಶ್ಯಕವಾಗಿದೆ. ಬಾಲ್ಯವಿವಾಹಕ್ಕೆ ಹಲವಾರು ಕಾರಣಗಳಿವೆ, ಅತೀ ಮುಖ್ಯವಾಗಿ ಬಡತನ, ಶಿಕ್ಷಣದ ಕೊರತೆಯಿಂದ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತದೆ ಎಂದರು.
ಇದೇ ವೇಳೆ ಗಣ್ಯರು ಬಾಲ್ಯವಿವಾಹ ನಿಷೇಧದ ಕಾನೂನಿನ ಕುರಿತ ಪೋಸ್ಟರ್ ಬಿಡುಗಡೆಗೊಳಿಸಿದರು.
-------------------
ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆಯ ಕೆ.ಡಿ.ಪಿ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಕಾರ್ಯಗಾರವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಉದ್ಘಾಟಿಸಿದರು.