ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಪಶ್ನೆಪತ್ರಿಕೆ ಸೋರಿಕೆ, ವ್ಯವಸ್ಥೆಯಲ್ಲಿನ ಲೋಪದೋಷಗಳು ಮುಂತಾದ ವಿಷಯಗಳ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ‘ಛಾತ್ರೋಂ ಕಿ ಗೂಂಜ್’ ಎಂಬ ಪ್ರಚಾರ ಅಭಿಯಾನ ನಡೆಸಿದರು.

ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಪಶ್ನೆಪತ್ರಿಕೆ ಸೋರಿಕೆ, ವ್ಯವಸ್ಥೆಯಲ್ಲಿನ ಲೋಪದೋಷಗಳು ಮುಂತಾದ ವಿಷಯಗಳ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ‘ಛಾತ್ರೋಂ ಕಿ ಗೂಂಜ್’ ಎಂಬ ಪ್ರಚಾರ ಅಭಿಯಾನ ನಡೆಸಿದರು. ಆದರೆ ಅದು ಸಿಜೆಪಿ ಪ್ರತಿಭಟನೆಯಷ್ಟು ಜನರ ಮನಸ್ಸನ್ನು ತಲುಪಲಿಲ್ಲ. ನಾವು ಎಲ್ಲಿ ವಿಫಲರಾದೆವು? ಜೆನ್ ಝೀ ಯುವ ಪೀಳಿಗೆಯ ಮನಸ್ಸಿನ ಮಿಡಿತವನ್ನು ನಾವು ಗ್ರಹಿಸಲಿಲ್ಲವೇ? ಇನ್ನಾದರೂ ಎಚ್ಚೆತ್ತುಕೊಂಡು ವಾಸ್ತವವನ್ನು ಅರ್ಥೈಸಿಕೊಳ್ಳಬೇಕಾಗಿದೆ.

-ಶಶಿ ತರೂರ್‌, ಕಾಂಗ್ರೆಸ್‌ ಸಂಸದ

ಯುವಜನತೆಯಿಂದ ಬದಲಾವಣೆಯ ಕೂಗು । ಕಿವಿಗೊಡದಿದ್ದರೆ ರಾಜಕೀಯ ಪಕ್ಷಗಳಿಗೆ ಅಪಾಯ

ಕಳೆದ ತಿಂಗಳು ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಯಿತು. ಅಲ್ಲಿ ನೆರೆದಿದ್ದಂತಹ ಯುವಜನರಿಗೆ ನಮ್ಮ ಪಕ್ಷಗಳಲ್ಲಿ ಯಾವುದೇ ಅವಕಾಶ ನೀಡಲಿಲ್ಲ. ಈ ವಿಚಾರವನ್ನು ಎಲ್ಲಾ ವಿರೋಧ ಪಕ್ಷಗಳು ಅರಿತುಕೊಳ್ಳಬೇಕಾಗಿದೆ. ನನ್ನ ಪ್ರಕಾರ, ಇದು ನಾವು ನಿಜವಾಗಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯ. ಸ್ಥಾಪಿತ ರಾಜಕೀಯ ಪಕ್ಷಗಳಿಗೆ ಯುವಕರು ಹೇಗೆ ಸೇರ್ಪಡೆಯಾಗುತ್ತಾರೆ? ಅಲ್ಲಿನ ಹಂತಗಳು, ಪ್ರಭಾವಿ ವಲಯಗಳು, ವಂಶಪಾರಂಪರ್ಯದ ಪರಿಗಣನೆಗಳು, ರಾಜಕೀಯ ಜಾಲಗಳಿರುವಾಗ ಒಬ್ಬ ಯುವಕ ಹೇಗೆ ತಾನೇ ಅದರ ಒಳಪ್ರವೇಶಿಸಬಹುದು? ಆತ ನಿಜವಾಗಿಯೂ ಬದಲಾವಣೆ ತರಲು ಸಾಧ್ಯವೇ?

ರಾಹುಲ್‌ ಕಾರ್ಯಕ್ರಮ ಮಂಕು:

ಕುತೂಹಲಕಾರಿ ವಿಷಯವೆಂದರೆ, ಸಿಜೆಪಿ ಹಾಗೂ ಜಂತರ್‌ ಮಂತರ್‌ ಪ್ರತಿಭಟನಾಕಾರರು ಎತ್ತಿದ ವಿಷಯಗಳನ್ನು ನಾವು ಅದಕ್ಕೂ ಮುನ್ನವೇ ಕೈಗೆತ್ತಿಕೊಂಡಿದ್ದೆವು. ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಪಶ್ನೆಪತ್ರಿಕೆ ಸೋರಿಕೆ, ವ್ಯವಸ್ಥೆಯಲ್ಲಿನ ಲೋಪದೋಷಗಳು ಮುಂತಾದ ವಿಷಯಗಳ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ‘ಛಾತ್ರೋಂ ಕಿ ಗೂಂಜ್’ ಎಂಬ ಪ್ರಚಾರ ಅಭಿಯಾನವನ್ನು ನಾವು ನಡೆಸಿದೆವು. ಆದರೆ ಅದು ಸಿಜೆಪಿ ಪ್ರತಿಭಟನೆಯಷ್ಟು ಜನರ ಮನಸ್ಸನ್ನು ತಲುಪಲಿಲ್ಲ. ಹೌದು, ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆಯಿದೆ. ಹೌದು, ಹವಾಮಾನ ಬದಲಾವಣೆಯ ಸಮಸ್ಯೆಯಿದೆ. ಹೌದು, ಭಾರತೀಯ ಪ್ರಜಾಪ್ರಭುತ್ವದಲ್ಲಿ ಎದ್ದು ಕಾಣುವ ಲೋಪದೋಷಗಳಿವೆ. ಆದರೆ ರಾಹುಲ್‌ ನಡೆಸಿದ ಕಾರ್ಯಕ್ರಮ ಹೇಗೋ ಜನರಲ್ಲಿ ಅಷ್ಟಾಗಿ ಅನುರಣಿಸಲಿಲ್ಲ.

ಆತ್ಮಾವಲೋಕನದ ಸಮಯ:

ಅದಕ್ಕಾಗಿಯೇ ನಾವು ನಮ್ಮನ್ನೇ ಕೇಳಿಕೊಳ್ಳಬೇಕಾಗಿದೆ: ನಾವು ಎಲ್ಲಿ ವಿಫಲರಾದೆವು? ನಾವು ಜನರ ಮಾತುಗಳನ್ನು ಕೇಳಿಸಿಕೊಳ್ಳಲು ವಿಫಲರಾದೆವೇ? ಜನರ ಮನಸ್ಸಿನ ಮಿಡಿತವನ್ನು ಅರಿಯುವಲ್ಲಿ ವಿಫಲರಾದೆವೇ? ಜೆನ್ ಝೀ ಯುವ ಪೀಳಿಗೆಯ ಮನಸ್ಸಿನ ಮಿಡಿತವನ್ನು ನಾವು ಗ್ರಹಿಸಲಿಲ್ಲವೇ? ನಾವು ನಿಜವಾಗಿಯೂ ಎಚ್ಚೆತ್ತುಕೊಂಡು ವಾಸ್ತವವನ್ನು ಅರ್ಥೈಸಿಕೊಳ್ಳಬೇಕಾಗಿದೆ. ಹೊಸ ಪೀಳಿಗೆಯ ಮಾತುಗಳನ್ನು ಕೇಳಿಸಿಕೊಳ್ಳಲು ವಿಫಲರಾದ ಕಾರಣಕ್ಕೆ ‘ನಾವು ಮೂಲೆಗುಂಪಾದೆವು ಅಥವಾ ಅಪ್ರಸ್ತುತರಾದೆವು’ ಎಂಬುದು ನಮ್ಮ ಕೊನೆಯ ಮಾತಾಗದಿರಲಿ. ಹೊಸ ಧ್ವನಿಗಳಿಗೆ ಕಿವಿಗೊಡದಿದ್ದರೆ ಸ್ಥಾಪಿತ ರಾಜಕೀಯ ಪಕ್ಷಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ. ನಾವು ಈಗಾಗಲೇ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಪ್ರಾರಂಭಿಸಬೇಕಾಗಿತ್ತು.

ಜಂತರ್ ಮಂತರ್‌ನಲ್ಲಿ ಲಾಠಿ ಚಾರ್ಜ್‌ ನಡೆದ ನಂತರ ನಾನು ಅಲ್ಲಿಗೆ ತೆರಳಿದ್ದೆ. ನಾನು ಅಲ್ಲಿ ವೇದಿಕೆ ಏರಿ ಮಾತನಾಡಲಿಲ್ಲ. ಅಲ್ಲಿ ಯುವಜನರ ಮಾತುಗಳನ್ನು ಕೇಳಿಸಿಕೊಳ್ಳಲು ಹೋಗಿದ್ದೆ. ಜನರು ನನ್ನನ್ನು ನೋಡಿ, ನನ್ನ ಸುತ್ತ ನೆರೆದು, ತಮ್ಮ ಕಥೆಗಳನ್ನು ಮತ್ತು ಅನುಭವಗಳನ್ನು ಹೇಳಿಕೊಳ್ಳಲು ಪ್ರಾರಂಭಿಸಿದರು. ಆ ಪ್ರತಿಭಟನೆಯನ್ನು (ಸರ್ಕಾರ) ನಿರ್ವಹಿಸಿದ ರೀತಿ ಅತ್ಯಂತ ಕೆಟ್ಟದಾಗಿತ್ತು. ನಿಮಗೆ ತಿಳಿದಿರುವಂತೆ, ಸಾರ್ವಜನಿಕ ಆಕ್ರೋಶ ಎಷ್ಟು ತೀವ್ರವಾಗಿತ್ತೆಂದರೆ ಸರ್ಕಾರ ಮಣಿಯುವುದು ಅನಿವಾರ್ಯವಾಯಿತು. ಕೊನೆಗೆ ಫಲಿತಾಂಶ ವಿದ್ಯಾರ್ಥಿಗಳ ಪರವಾಗಿಯೇ ಬಂತು.

ಜನರ ಮಾತನ್ನು ಆಲಿಸಿ:

ರಾಜಕೀಯದಲ್ಲಿ ಇದ್ದೇವೆಂದರೆ, ಜನರ ಮಾತನ್ನು ಕೇಳಿಸಿಕೊಳ್ಳಬೇಕು ಮತ್ತು ಅವರೊಂದಿಗೆ ಬೆರೆಯಬೇಕು ಎಂಬುದು ನನ್ನ ನಂಬಿಕೆ. ಅಂತಿಮವಾಗಿ, ರಾಜಕೀಯವೆಂದರೆ ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುವುದೇ ಆಗಿದೆ. ದೇಶದಲ್ಲಿ ಯುವಜನರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಅವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಮತದಾರರಲ್ಲಿ ಅವರೇ ಗಮನಾರ್ಹ ವರ್ಗವಾಗಿದ್ದಾರೆ. 2029ರ ಚುನಾವಣೆಯಲ್ಲಿ ಅವರೇ ಅತಿದೊಡ್ಡ ಏಕೈಕ ಮತದಾರರ ಗುಂಪಾಗಿರುತ್ತಾರೆ. ಯುವಜನರು ಏನು ಹೇಳುತ್ತಾರೆ ಎಂಬುದನ್ನು ಕೇಳುವುದು ಮತ್ತು ಅವರ ಬೇಡಿಕೆಗಳನ್ನು ಅರಿತುಕೊಳ್ಳುವುದು ನಮ್ಮ ರಾಜಕೀಯ ಆಸಕ್ತಿಯೂ ಆಗಿದೆ. ಯುವಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂಬ ವಾಸ್ತವವನ್ನು ದೇಶ ಅರಿತುಕೊಂಡು, ಅದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇನ್ನು ಮುಂದೆ ಎಂದಿನಂತೆಯೇ ಎಲ್ಲವೂ ನಡೆಯಲು ಸಾಧ್ಯವಿಲ್ಲ. ನಾನು ನನ್ನ ಪಕ್ಷದಲ್ಲಿ ಇದನ್ನು ಪ್ರತಿಪಾದಿಸುತ್ತಿದ್ದೇನೆ.

ನಾನು ನನ್ನ ಪಕ್ಷಕ್ಕೆ ಅಪ್ರಾಮಾಣಿಕನಾಗಿಲ್ಲ, ಆದರೆ ನಾನು ನನ್ನ ಸ್ವತಂತ್ರ ವಿಚಾರಗಳನ್ನು ವ್ಯಕ್ತಪಡಿಸುತ್ತೇನೆ. ಕೆಲವೊಮ್ಮೆ ನನ್ನ ವಿಚಾರಗಳನ್ನು ನನ್ನ ವಿರೋಧಿಗಳು ಬಳಸಿಕೊಳ್ಳಬಹುದು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕನಿಷ್ಠ ಮಟ್ಟದಲ್ಲಾದರೂ ಉಳಿಸಿಕೊಂಡಿರುವ ಪಕ್ಷವೆಂದರೆ ಅದು ಕಾಂಗ್ರೆಸ್. ಬಿಜೆಪಿಯಲ್ಲಿ ಯಾರಾದರೂ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಪಕ್ಷದಲ್ಲಿ ಉಳಿದುಕೊಂಡಿದ್ದನ್ನು ನೀವು ಎಂದಾದರೂ ಕೇಳಿದ್ದೀರಾ? ನನ್ನ ಆಲೋಚನೆಗಳಿಗೆ ಅತ್ಯಂತ ಹತ್ತಿರವಾಗಿರುವ ಪಕ್ಷದಲ್ಲೇ ನಾನಿದ್ದೇನೆ. ಮೋಹನ್ ಭಾಗವತ್ ಅವರು ಭಾಗವಹಿಸಿದ್ದ ವೇದಿಕೆಗೆ ನಾನು ಬಂದಿದ್ದಕ್ಕಾಗಿ ನನ್ನನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಕೆಲವರು ಬಯಸುತ್ತಿದ್ದಾರೆ. ಅವರಿಗೆ, ಎದುರಾಳಿ ಅಥವಾ ಭಿನ್ನ ವಿಚಾರಗಳಿರುವವರ ಜೊತೆ ಸಂವಾದ ನಡೆಸಲು ಸಾಧ್ಯವಿಲ್ಲ ಎಂಬ ಕನಿಷ್ಠ ತಿಳಿವಳಿಕೆಯೂ ಇಲ್ಲದಿರುವುದನ್ನು ಇದು ತೋರಿಸುತ್ತದೆ.

ಭಾಗವತ್‌ ಮಾತು ಸತ್ಯ:

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಒಂದು ಹೇಳಿಕೆ ನನ್ನ ಗಮನ ಸೆಳೆಯಿತು. ಜೆನ್ ಝೀ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಅಭಿವ್ಯಕ್ತಿಯಾಗಿದ್ದವು, ಅವು ಸಮರ್ಥನೀಯವಾಗಿದ್ದವು ಮತ್ತು ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದರಲ್ಲಿ ಯಾವುದೇ ದೇಶವಿರೋಧಿ ಅಂಶವಿಲ್ಲ ಎಂದು ಅವರು ಹೇಳಿದ್ದರು. ಇದು ಇಡೀ ರಾಜಕೀಯ ವ್ಯವಸ್ಥೆಯು ಕಲಿಯಬೇಕಾದ ಅತ್ಯಂತ ಅಗತ್ಯ ಪಾಠವಾಗಿದೆ.

ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಆಡಳಿತಾರೂಢ ಬಿಜೆಪಿಗೆ ಖಂಡಿತವಾಗಿಯೂ ಒಂದು ಪ್ರಬಲ ಎಚ್ಚರಿಕೆಯ ಕರೆ ಲಭಿಸಿದೆ. ನಾವು ಜಿರಳೆ ಪ್ರತಿಭಟನೆ, ಸಚಿವರೊಬ್ಬರ ರಾಜೀನಾಮೆ ಹಾಗೂ ಇವೆಲ್ಲವುಗಳ ಪರಿಣಾಮವಾಗಿ ಅತ್ಯಂತ ಅವಸರದಲ್ಲಿ ಮಸೂದೆಯೊಂದನ್ನು ಅಂಗೀಕರಿಸಿದ್ದನ್ನು ನೋಡಿದ್ದೇವೆ. ಅಷ್ಟೇ ಅಲ್ಲದೆ, ಈಗ 2 ಉಪಚುನಾವಣೆಗಳ ಫಲಿತಾಂಶಗಳನ್ನೂ ನೋಡುತ್ತಿದ್ದೇವೆ.

ಪ್ರಶಾಂತ್ ಕಿಶೋರ್ ಅವರು ಕಳೆದ 3 ದಶಕಗಳಿಗಿಂತಲೂ ಹೆಚ್ಚು ಕಾಲ —ಅಂದರೆ 9 ಬಾರಿ ಬಿಜೆಪಿ ಸುಲಭವಾಗಿ ಗೆದ್ದುಕೊಳ್ಳುತ್ತಿದ್ದ ಅತ್ಯಂತ ಸುರಕ್ಷಿತ ಕ್ಷೇತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮತ್ತೊಂದೆಡೆ ಮಧ್ಯಪ್ರದೇಶದ ದತಿಯಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಇವೆರಡೂ ಹಿಂದಿ ಭಾಷಿಕ ಪ್ರಮುಖ ರಾಜ್ಯಗಳಾಗಿವೆ. ನಮಗೆ ಲಾಭವೆನ್ನುವಂತೆ, ನಮ್ಮ ವ್ಯವಸ್ಥೆಯಲ್ಲಿ ಬೇರೆ ಬೇರೆ ಸಮಯದಲ್ಲಿ ವಿವಿಧ ಚುನಾವಣೆಗಳು ನಡೆಯುತ್ತವೆ. ಮುಂಬರುವ ಮಾರ್ಚ್ ತಿಂಗಳಿನಲ್ಲೇ ಕೆಲವು ರಾಜ್ಯಗಳ ಚುನಾವಣೆಗಳು ಬರಲಿದ್ದು, ಅಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಉತ್ತಮ ಸಾಧ್ಯತೆಯಿದೆ.