ಮುಂಬೈ: ನೀಟ್‌ ಪರೀಕ್ಷೆ ವಿಚಾರವಾಗಿ ಜೆನ್‌ ಝೀಗಳು ದೇಶಾದ್ಯಂತ ಮತ್ತು ಕನಿಷ್ಠ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ವಿವಿಧ ರಾಜ್ಯಗಳಲ್ಲಿ ಜೆನ್‌ ಆಲ್ಫಾಗಳು ಬೀದಿಗಿಳಿದು ಹೋರಾಟ ನಡೆಸಿದ ಬೆನ್ನಲ್ಲೇ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಆ.6ರಂದು ಜೆನ್‌-ಝೀ ಮತ್ತು ಜೆನ್‌-ಆಲ್ಫಾ ತಲೆಮಾರಿನ ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಲಿದ್ದಾರೆ.

15ನೇ ವಾರ್ಷಿಕ ಚಾಂಪಿಯನ್‌ಶಿಪ್‌ ಸಮಾವೇಶ

ಮುಂಬೈನ ನೀತಾ ಮುಖೇಶ್‌ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ ನಡೆಯಲಿರುವ ಜಾಗತಿಕ ಏಕತೆಗಾಗಿ ಭಾರತದ ಅಂತಾರಾಷ್ಟ್ರೀಯ ಚಳವಳಿ(ಐಐಎಂಯುಎನ್‌)ಯ 15ನೇ ವಾರ್ಷಿಕ ಚಾಂಪಿಯನ್‌ಶಿಪ್‌ ಸಮಾವೇಶದಲ್ಲಿ ಭಾಗವತ್‌ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ.

15 ರಿಂದ 19 ವರ್ಷ ನಡುವಿನ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು

ಈ ಸಮಾವೇಶದಲ್ಲಿ ದೇಶದ 100ಕ್ಕೂ ಹೆಚ್ಚು ನಗರಗಳಿಂದ 15 ರಿಂದ 19 ವರ್ಷ ನಡುವಿನ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇವರೆಲ್ಲ ಜೆನ್‌-ಝಡ್‌ ಹಾಗೂ ಜೆನ್‌-ಆಲ್ಫಾ ತಲೆಮಾರಿಗೆ ಸೇರಿದವರಾಗಿದ್ದಾರೆ. 2010-2014ರ ನಡುವೆ ಜನಿಸಿದ 16 ವರ್ಷದೊಳಗಿನ ತಲೆಮಾರಿಗೆ ಜೆನ್‌-ಆಲ್ಫಾ ಎಂದು ಕರೆದರೆ, 1997-2012ರ ನಡುವೆ ಜನಿಸಿದ 14ರಿಂದ 29 ವರ್ಷ ನಡುವಿನ ಯುವಕರನ್ನು ಜೆನ್‌-ಝೆಡ್‌ ತಲೆಮಾರು ಎಂದು ಕರೆಯಲಾಗುತ್ತದೆ.


ಈ ಸಮಾವೇಶದಲ್ಲಿ ವಿದ್ಯಾರ್ಥಿಗಳು ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ‘ಭಾರತೀಯ ಮಾರ್ಗದಲ್ಲಿ ವಿಶ್ವವನ್ನು ಒಗ್ಗೂಡಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ’ದ ವಿಚಾರ ಉದ್ಘಾಟನಾ ಸಮಾರಂಭದ ಪ್ರಮುಖ ವಿಚಾರವಾಗಿರಲಿದೆ.

ನೀಟ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಸಿಜೆಪಿ ಪಕ್ಷದ ನೇತೃತ್ವದಲ್ಲಿ ಜೆನ್-ಝೀ ಗಳು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕಾಯಿತು. ಈ ವೇಳೆ ವಿದ್ಯಾರ್ಥಿಗಳಿಂದ ವ್ಯಕ್ತವಾದ ಆಕ್ರೋಶ ಹಾಗೂ ಅವರು ಪ್ರತಿಭಟನೆ ನಡೆಸಿದ ರೀತಿ ದೇಶಾದ್ಯಂತ ಚರ್ಚೆ ಹುಟ್ಟುಹಾಕಿದೆ.