ಮಣಿಪಾಲ: ದೆಹಲಿಯ ಜಂತರ್‌ ಮಂತರ್‌ನಲ್ಲಿ, ನೀಟ್ ಪರೀಕ್ಷೆಯ ಪ್ರಶ್ನಾಪತ್ರಿಕೆ ಸೋರಿಕೆ ವಿರುದ್ದ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಮಣಿಪಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶುಕ್ರವಾರ ಬೆಂಬಲಿಸಿ ಮೆರವಣಿಗೆ ನಡೆಸಿದರು.ಮಣಿಪಾಲ ಕಾಯಿನ್ ಸರ್ಕಲ್‌ನಿಂದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ತನಕದ ಮೆರವಣಿಗೆಯಲ್ಲಿ ತೆರಳಿದ ವಿದ್ಯಾರ್ಥಿಗಳು ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ತಮ್ಮ ಆಕ್ರೋಷ ವ್ಯಕ್ತಪಡಿಸಿದರು. ನಂತರ ಜಿಲ್ಲಾಕಾರಿ ಕಚೇರಿಯ ಸತ್ಯಾಗ್ರಹ ಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪ್ರಾಣ ಕಳ‍ೆದುಕೊಂಡ ವಿದ್ಯಾರ್ಥಿಗಳಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೋಹನ್ ಮಚದೋ, ಜೂನ್ ಮೆಹತಿ ಮುಂತಾದವರು ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದರು.

ಸಹಬಾಳ್ವೆಯ ಅಧ್ಯಕ್ಷ ಪ್ರೊ.ಕೆ. ಫಣಿರಾಜ್, ಕಾಂಗ್ರೆಸ್ ಮುಖಂಡ ವಿಶ್ವಾಸ್ ಅಮೀನ್, ದಲಿತ ಸಂಘರ್ಷ ಸಮಿತಿ ಪ್ರಮುಖರಾದ ಶ್ಯಾಮ್‌ರಾಜ್ ಬಿರ್ತಿ, ಎಸ್‌ಐಒ ಜಿಲ್ಲಾಧ್ಯಕ್ಷ ಅಯಾನ್ ಮಲ್ಪೆ ಮುಂತಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.