ಪ್ರಶಾಂತ್‌ ಕಿಶೋರ್‌

ಮುಖ್ಯಸ್ಥ, ಜನ್‌ ಸುರಾಜ್ ಪಕ್ಷ

ಜನರು ದಿಟ್ಟತನದಿಂದ ಎದ್ದು ನಿಂತಾಗೆಲ್ಲಾ ಸರ್ಕಾರ ಬಗ್ಗಲೇಬೇಕಾಗುತ್ತದೆ. ಇದಕ್ಕೆ ಇತ್ತೀಚಿನ ಸೂಕ್ತ ಉದಾಹರಣೆಯೆಂದರೆ- ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಜೆನ್‌ ಝೀಗಳು ದೆಹಲಿಯಲ್ಲಿ ನಡೆಸಿದ ಹೋರಾಟ. ಈ ಆಂದೋಲನವು ಧರ್ಮೇಂದ್ರ ಪ್ರಧಾನ್‌ರ ರಾಜೀನಾಮೆ ಕೊಡಿಸಿತು. ಆದರೆ ನೆನಪಿಡಿ, ಜೆನ್‌ ಝೀ ಹೋರಾಟವು ಇನ್ನೂ ಆರಂಭಿಕ ಹಂತದಲ್ಲಿದೆ. ಅದರ ಪ್ರಮುಖ ಹಂತ ಅನಾವರಣವಾಗುವುದು ಬಾಕಿ ಇದೆ. ಮುಂದಿನ 1 ಅಥವಾ ಒಂದೂವರೆ ವರ್ಷದಲ್ಲಿ ಇದರ ಪರಿಣಾಮ ಕಾಣಲಿದೆ. ಈ ವಿಷಯದ ಅರಿವು ಸರ್ಕಾರಕ್ಕಿದೆ.

ಭರವಸೆ ಮೂಡಿಸಿದ ಹೋರಾಟ

ಬಿಜೆಪಿಯವರು (ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ) ರಾಜನೀತಿಯ ವಿಷಯದಲ್ಲಿ ಬುದ್ಧಿವಂತರಿದ್ದಾರೆ. ಅತ್ಯಂತ ಬಲಶಾಲಿಗಳಂತೆ, ಯಾರಿಗೂ ಮಣಿಯದವರಂತೆ ಅವರು ಕಾಣಬಹುದು. ಆದರೆ ಕಷ್ಟ ಎದುರಾಗುತ್ತಿದ್ದಂತೆ ಬಹುಬೇಗ ಸಂಧಾನ ಮಾಡಿಕೊಂಡುಬಿಡುತ್ತಾರೆ. ಇಂಥದ್ದರಲ್ಲಿ, ಜೆನ್‌ ಝೀಗಳ ಒಂದು ಜಂತರ್‌ ಮಂತರ್‌ ಆಂದೋಲನವು ಸರ್ಕಾರದ ಮಂಡಿ ಊರಿಸಬಹುದು ಎಂಬುದನ್ನು ತೋರಿಸಿಕೊಟ್ಟಿತು. ಅದರಲ್ಲಿ ರಾಹುಲ್‌ ಗಾಂಧಿಯಂತಹ ಪ್ರಭಾವಿಗಳು ಹೋಗಿರಲಿಲ್ಲ. ಈ ಹಿಂದೆ ನಡೆದ ರೈತರ ಹೋರಾಟದಲ್ಲೂ ಹೀಗೇ ಆಗಿತ್ತು. ಇದರಿಂದ ಲಕ್ಷಾಂತರ ಜನರಲ್ಲಿ ಭರವಸೆ ಮೂಡಿದೆ. ಇನ್ನುಮುಂದೆ ಇದಕ್ಕಿಂತ ದೊಡ್ಡ ಸಮಸ್ಯೆ ಉದ್ಭವಿಸಿದಾಗ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಹೋರಾಟ ನಡೆಸುತ್ತಾರೆ. ಇದು ಕೇಂದ್ರ ಸರ್ಕಾರದ ಪಾಲಿಗೆ ಬಹುದೊಡ್ಡ ಅಪಾಯದ ಎಚ್ಚರಿಕೆ ಗಂಟೆಯಾಗಿದೆ. ಇದು ಸರ್ಕಾರಕ್ಕೂ ತಿಳಿದಿದೆ.


ವಾಟ್ಸಪ್‌ V/S ಇನ್‌ಸ್ಟಾ:

ವಾಟ್ಸಪ್‌ ಪೀಳಿಗೆಯು ಪ್ರಧಾನಿ ಮೋದಿಯವರನ್ನು ಬೆಳೆಸಿತ್ತು. ಆದರೆ ಇಂದಿನ ಇನ್‌ಸ್ಟಾಗ್ರಾಂ ಪೀಳಿಗೆಯು ನೆಲಸಮಗೊಳಿಸುತ್ತಿದೆ. ನಾನಿದನ್ನು 2011-12ರ ಚುನಾವಣಾ ಪ್ರಚಾರದ ವೇಳೆ ನೋಡಿದ್ದೇನೆ. ಆಗ ದೇಶದ ಸುಮಾರು 5ರಿಂದ 6 ಕೋಟಿ ಜನ ವಾಟ್ಸಪ್‌ ಬಳಸುತ್ತಿದ್ದರು. ರಾಜನೀತಿಯ ಬಗ್ಗೆ ಆ ವೇದಿಕೆಯಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಅದರ ಪರಿಣಾಮದ ಅರಿವಿರದ ತಜ್ಞರು, ‘ವಾಟ್ಸಪ್‌ನಲ್ಲಿ ಸಂದೇಶ ಕಳಿಸುವುದರಿಂದ ಏನಾದೀತು’ ಎಂದು ವಾದಿಸುತ್ತಿದ್ದರು. ಆದರೆ ಕೊನೆಗೆ ಅದರಿಂದಲೇ ಮೋದಿಯವರ ವರ್ಚಸ್ಸು ಸೃಷ್ಟಿಯಾಯಿತು.

ಇಂದು ಪರಿಸ್ಥಿತಿ ಬಲಾಗಿದೆ. ವಾಟ್ಸಪ್‌ ಕಾಲದವರು ಕುಳಿತುಕೊಂಡು, ‘ಇದು ಮೋದಿಯವರ ಜಗತ್ತು’ ಎಂದುಕೊಳ್ಳುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಇನ್‌ಸ್ಟಾಗ್ರಾಂ ಪೀಳಿಗೆಯವರು ಮೋದಿಯವರ ಬೆವರಿಳಿಸುತ್ತಿದ್ದಾರೆ. ಇದನ್ನು ಬಗ್ಗುಬಡಿಯಲು ಮೋದಿಯವರ ಸಾಮಾಜಿಕ ಮಾಧ್ಯಮದ ಬಗೆಗಿನ ಜ್ಞಾನ ಸಾಲುತ್ತಿಲ್ಲ.

ಇನ್‌ಸ್ಟಾ, ವಾಟ್ಸಪ್‌, ಟೀವಿ, ರೇಡಿಯೋಗಳೆಲ್ಲಾ ಮಾಧ್ಯಮಗಳಷ್ಟೇ. ಮಹತ್ವವಿರುವುದು ಅವುಗಳನ್ನು ಬಳಸಿಕೊಂಡು ಕಳಿಸಲಾಗುವ ಸಂದೇಶಗಳಿಗೆ. ಇಂದು ಪೇಪರ್‌ ಲೀಕ್‌, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಯುವಕರ ಹತಾಶೆ ಪ್ರಮುಖ ವಿಷಯಗಳಾಗಿವೆ. ಅವುಗಳ ಬಗೆಗಿನ ಅಸಮಾಧಾನ ಇನ್‌ಸ್ಟಾದ ಮೂಲಕ ವ್ಯಕ್ತವಾಗುತ್ತಿದೆ.

ಇಲ್ಲಿಗೇ ಮುಗಿದಿಲ್ಲ:

ಜಂತರ್‌ ಮಂತರ್‌ ಪ್ರತಿಭಟನೆ ಅಂತ್ಯದೊಂದಿಗೆ ಹೋರಾಟ ನಿಂತಿತು ಎಂದುಕೊಳ್ಳುವ ತಪ್ಪು ಮಾಡಬೇಡಿ. ಸರ್ಕಾರದ ಮೇಲೆ ಒತ್ತಡ ಇದ್ದೇ ಇದೆ. ಹೋರಾಟವು ಮುಂದುವರಿಯುತ್ತದೆ. ಆದರೆ ಯಾವ ಮಟ್ಟದಲ್ಲಿ ಎಂಬುದು ಯಾರಿಗೂ ಗೊತ್ತಿಲ್ಲ. ಇದನ್ನು ಪಕ್ಷದ ಸಾಂಪ್ರದಾಯಿಕ ವಿಧಾನಗಳೊಂದಿಗೆ ನಿಭಾಯಿಸಲಾಗದು. ಅಣ್ಣಾ ಹಜಾರೆಯವರ ಆಂದೋಲನವನ್ನು ನಿಯಂತ್ರಿಸಲು ಅಂದಿನ ಕಾಂಗ್ರೆಸ್‌ ಸರ್ಕಾರದ ಕೈಲಾಗಲಿಲ್ಲ. ಇಂದು ಸಹ ಸರ್ಕಾರಕ್ಕೆ ನೀಟ್‌ ಹೋರಾಟ ಹತ್ತಿಕ್ಕಲಾಗಲಿಲ್ಲ. ಹೆದರಿಸಿ ಬೆದರಿಸಿ ಒಬ್ಬ ಹುಡುಗಿಯಿಂದ ಕ್ಷಮೆ ಕೇಳಿಸಲಾಯಿತು. ಆದರೆ ಇನ್ನೊಂದು ಕಡೆ ಸಾವಿರಾರು ಜನ ಸರ್ಕಾರವನ್ನು ಟೀಕಿಸುವುದನ್ನು ಮುಂದುವರಿಸಿದ್ದಾರೆ.

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ನೆನಪಿಸಿಕೊಳ್ಳಿ. 2ಜಿ ಸ್ಪೆಕ್ಟ್ರಂ ಹಗರಣವು ಯುಪಿಎ ಸರ್ಕಾರದ ಅವಧಿ ಮುಗಿಯುವ ಹೊತ್ತಿನಲ್ಲಿ (2009) ಬೆಳಕಿಗೆ ಬಂದಿತ್ತು. ಆದರೆ ಹಜಾರೆ ಅವರ ಹೋರಾಟ ಆರಂಭವಾಗಿದ್ದು ಅದಾದ ಕೆಲ ವರ್ಷಗಳ ಬಳಿಕ, 2011ರಲ್ಲಿ. ಇದರರ್ಥ, ಸಮಾಜದಲ್ಲಿ, ಜನರಲ್ಲಿ ಅಸಮಾಧಾನವು ಕ್ರಮೇಣ ಮಡುಗಟ್ಟುತ್ತಾ ಸಾಗಿತ್ತು ಹಾಗೂ ಒಮ್ಮೆಲೆ ಸ್ಫೋಟಗೊಂಡಿತು. ಈಗಲೂ ಅದೇ ಆಗಲಿದೆ.