ಡಿಜಿಟಲ್ ಅರೆಸ್ಟ್! ಜಾಗೃತಿ ಅತ್ಯಗತ್ಯ ಭಯವೇ ಸೈಬರ್‌ ವಂಚಕರ ಆಯುಧ

Published : Mar 17, 2026, 11:46 AM IST
 Digital Arrest

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳು ಬಳಸುತ್ತಿರುವ ಹೊಸ ತಂತ್ರವೆoದರೆ ‘ಡಿಜಿಟಲ್ ಅರೆಸ್ಟ್’. ಪೊಲೀಸ್, ಸಿಬಿಐ, ಇ.ಡಿ., ಕಸ್ಟಮ್ಸ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಂತೆ ನಟಿಸಿ ಜನರನ್ನು ಭಯಪಡಿಸಿ ಹಣ ವಸೂಲಿ ಮಾಡುವ ಪ್ರಕರಣಗಳು ದೇಶದಾದ್ಯಂತ ಹೆಚ್ಚುತ್ತಿವೆ. 

ಉಲ್ಲಾಸ ರಾಮ ಗುನಗಾ

ನಿವೃತ್ತ ಸಹಾಯಕ ಮಹಾ ಪ್ರಬಂಧಕರು

ಕರ್ನಾಟಕ ಗ್ರಾಮೀಣ ಬ್ಯಾಂಕ್.

 ಬ್ಯಾಂಕಿಗೆ ಬಂದಾಗಲೆಲ್ಲ ನನ್ನ ಕೊಠಡಿಗೆ ಬಂದು ಒಂದರ್ಧ ಗಂಟೆ ಮಾತನಾಡಿ ಚಹ ಕುಡಿದು ಹೊರ ಹೋದಾಗಲೇ ಪ್ರೊಫೆಸರ್ ಓರ್ವರಿಗೆ ಆ ದಿನದ ವ್ಯವಹಾರ ಪೂರ್ಣ!, ವಾರದಲ್ಲಿ ಕನಿಷ್ಠ ಮೂರು ಬಾರಿಯಾದರೂ ಬರುತ್ತಿದ್ದ ಪ್ರೊಫೆಸರ್ ಒಂದು ತಿಂಗಳು ಕಾಣಿಸಲೇ ಇಲ್ಲ. ವಿಚಾರಿಸಲಾಗಿ ಬಹುತೇಕರು ಅವರನ್ನು ನೋಡೇ ಇಲ್ಲ ಎಂದರು. ನೋಡೋಣ ಎಂದು ಫೋನ್ ಮಾಡಿದರೆ ಫೋನ್ ರಿಂಗಾಗುತಿತ್ತೇ ಹೊರತು ಸ್ಪಂದನೆ ಇರಲಿಲ್ಲ. ನೋಡೋಣ ಎಂದು ಮನೆಗೆ ಹೋದರೆ ಮನೆಯಲ್ಲಿ ಸ್ಮಶಾನ ಮೌನ. ಪ್ರೊಪೆಸರ್ ಏನೋ ಹೊರಗೆ ಬಂದರು. ಆದರೆ ಅವರು ಗುರುತು ಸಿಗದಷ್ಟು ಬದಲಾಗಿದ್ದರು, ಅವರಿಗೆ ಏನೋ ಜಡ್ಡು ಬಂದಿರಬೇಕು ಎಂದುಕೊಳ್ಳುತ್ತಿರುವಾಗಲೇ ಚಹ ತಂದ ಅವರ ಧರ್ಮ ಪತ್ನಿ ಸಾವಕಾಶವಾಗಿ ಹೇಳಿದರು. ನಿಮ್ಮ ಪ್ರೊಪೆಸರ್ ಅವರಿಗೆ ‘ಡಿಜಿಟಲ್ ಅರೆಸ್ಟ ಆಗಿದೆ’! ತಕ್ಷಣ ಎಚ್ಚೆತ್ತುಕೊಂಡ ನಾನು ಅವರನ್ನು ಆ ಕೂಪದಿಂದ ಮೇಲೆತ್ತಿದ್ದು ಒಂದು ಹರ ಸಾಹಸ. ಆದರೆ ಆ ಪ್ರೊಪೆಸರ್ ಅದಾಗಲೆ ₹೩೦ ಲಕ್ಷ ಕಳೆದುಕೊಂಡಿದ್ದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳು ಬಳಸುತ್ತಿರುವ ಹೊಸ ತಂತ್ರವೆoದರೆ ‘ಡಿಜಿಟಲ್ ಅರೆಸ್ಟ್’. ಪೊಲೀಸ್, ಸಿಬಿಐ, ಇ.ಡಿ., ಕಸ್ಟಮ್ಸ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಂತೆ ನಟಿಸಿ ಜನರನ್ನು ಭಯಪಡಿಸಿ ಹಣ ವಸೂಲಿ ಮಾಡುವ ಪ್ರಕರಣಗಳು ದೇಶದಾದ್ಯಂತ ಹೆಚ್ಚುತ್ತಿವೆ. ಉನ್ನತ ಹುದ್ದೆಯಲ್ಲಿರುವವರು, ಗ್ರಾಮೀಣ ಪ್ರದೇಶದ ಜನರು, ಹಿರಿಯ ನಾಗರಿಕರು ಹಾಗೂ ಆನ್‌ಲೈನ್ ವ್ಯವಹಾರಗಳಿಗೆ ಹೊಸದಾಗಿ ಪರಿಚಿತರಾದವರು ಹೆಚ್ಚು ಮೋಸಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಸಮಗ್ರ ಜಾಗೃತಿ ಅಗತ್ಯವಾಗಿದೆ.

ಡಿಜಿಟಲ್ ಅರೆಸ್ಟ್ ಎಂದರೆ ಏನು?

ವಂಚಕರು ಮೊದಲು ನಿಮ್ಮ ಮೊಬೈಲ್‌ಗೆ ಕರೆ ಮಾಡುತ್ತಾರೆ. ‘ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗಿದೆ’, ‘ನಿಮ್ಮ ಹೆಸರಿನ ಪಾರ್ಸೆಲ್‌ನಲ್ಲಿ ಡ್ರಗ್ಸ್ ಸಿಕ್ಕಿದೆ’, ‘ನಿಮ್ಮ ಬ್ಯಾಂಕ್ ಖಾತೆಯನ್ನು ಹಣ ದುರ್ಬಳಕೆಗೆ ಬಳಸಲಾಗಿದೆ’ ಎಂದು ಹೇಳಿ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ ಎಂದೂ ಬೆದರಿಸುತ್ತಾರೆ. ನಂತರ ವಿಡಿಯೋ ಕಾಲ್‌ನಲ್ಲೇ ಇರಲು ಹೇಳಿ ಪೊಲೀಸ್‌ ಅಧಿಕಾರಿಯೋರ್ವರು (ನಕಲಿ) ‘ಹೊರಗೆ ಹೋಗಬಾರದು, ಯಾರಿಗೂ ಹೇಳಬಾರದು’ ಎಂದು ಹೇಳಿ ಗಂಟೆಗಳ ಕಾಲ ಫೋನ್‌ನಲ್ಲಿ ಹಿಡಿದುಕೊಳ್ಳುತ್ತಾರೆ. ‘ನೀವು ಅರೆಸ್ಟ್ ಆಗಿದ್ದೀರಾ’ ಎಂದು ನಕಲಿ ದಾಖಲೆಗಳನ್ನು ತೋರಿಸಿ ಅದರಿಂದ ಪಾರಾಗಲು ಅಥವಾ ‘ವೆರಿಫಿಕೇಶನ್’ ಹೆಸರಿನಲ್ಲಿ ಹಣವನ್ನು ಟ್ರಾನ್ಸ್‌ಫರ್‌ ಮಾಡಲು ಒತ್ತಾಯಿಸುತ್ತಾರೆ. ಕೆಲವೊಮ್ಮೆ ನಿಮ್ಮ ಬ್ಯಾಂಕ್ ವಿವರಗಳು, ಓಟಿಪಿ, ನೆಟ್‌ಬ್ಯಾಂಕಿಂಗ್ ಮಾಹಿತಿ ಕೇಳುತ್ತಾರೆ... ಹಾಗೆಯೇ ಒಂದು ತಿಂಗಳು ಕಾಲ ಮನೆಯಿಂದ ಹೊರಹೋಗದಂತೆ ಕೂಡ ಎಚ್ಚರಿಸುತ್ತಾರೆ. ಇದನ್ನೇ ‘ಡಿಜಿಟಲ್ ಅರೆಸ್ಟ್’ ಎಂದು ಕರೆಯಲಾಗುತ್ತದೆ. ಆದರೆ ಇದು ಸಂಪೂರ್ಣ ಮೋಸದ ಜಾಲವಾಗಿರುತ್ತದೆ.

ಪೊಲೀಸರು ಫೋನಲ್ಲಿ ಆರೆಸ್ಟ್‌ ಮಾಡುವುದಿಲ್ಲ

ಸಾರ್ವಜನಿಕರು ಗಮನಿಸ ಬೇಕಾದ ಮುಖ್ಯವಾದ ವಿಷಯವೆಂದರೆ ಕಾನೂನಿನ ಪ್ರಕಾರ ಅರೆಸ್ಟ್ ಪ್ರಕ್ರಿಯೆ ನೇರವಾಗಿ ನಡೆಯುತ್ತದೆ. ಯಾವುದೇ ಪೊಲೀಸ್ ಅಥವಾ ಸರ್ಕಾರಿ ಸಂಸ್ಥೆ ಫೋನ್‌ನಲ್ಲಿ ಎಂದೂ ಅರೆಸ್ಟ್ ಮಾಡುವುದಿಲ್ಲ. ವಿಡಿಯೋ ಕಾಲ್‌ನಲ್ಲಿ ಕಾವಲು ಇಡುವುದಿಲ್ಲ. ಖಾಸಗಿ ಖಾತೆಗೆ ಹಣ ಕಳುಹಿಸಲು ಹೇಳುವುದಿಲ್ಲ.

ವಂಚಕರು ಬಳಸುವ ಸಾಮಾನ್ಯ ತಂತ್ರಗಳ ಬಗ್ಗೆ ಸಾರ್ವಜನಿಕರಿಗೆ ಅರಿವಿರಲಿ.

ನಕಲಿ ಪೊಲೀಸ್ ಯೂನಿಫಾರ್ಮ್ ಧರಿಸಿ ವಿಡಿಯೋದಲ್ಲಿ ಅನಧಿಕೃತ ಲೋಗೋ ಇರುವ ನಕಲಿ ನೋಟಿಸ್ ತೋರಿಸಲಾಗುತ್ತದೆ. ಕುಟುಂಬದವರನ್ನು ಸಂಪರ್ಕಿಸಬೇಡಿ ಎಂದು ಹೇಳುವುದು, ತಕ್ಷಣ ಹಣ ಕಳುಹಿಸದಿದ್ದರೆ ಅರೆಸ್ಟ್ ಮಾಡಲಾಗುವುದು ಎಂಬ ಬೆದರಿಕೆ, ಇವೆಲ್ಲವೂ ಮಾನಸಿಕ ಒತ್ತಡ ಸೃಷ್ಟಿಸಲು ಬಳಸುವ ವಿಧಾನಗಳು.

ಇಂತಹ ಸಂದರ್ಭದಲ್ಲಿ ಏನು ಮಾಡಬೇಕು?

1.ತಕ್ಷಣ ಕಾಲ್ ಕಡಿತಗೊಳಿಸಿ

2.ಯಾವುದೇ ಮಾಹಿತಿ ಹಂಚಿಕೊಳ್ಳಬೇಡಿ

3.ಓಟಿಪಿ, ಪಿನ್, ಪಾಸ್ವರ್ಡ್ ನೀಡಬೇಡಿ

4.ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ

5.1930 ಸೈಬರ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ

6.www.cybercrime.gov.in ನಲ್ಲಿ ಆನ್‌ಲೈನ್ ದೂರು ನೀಡಿ

ಬ್ಯಾಂಕ್ ಗ್ರಾಹಕರಿಗೆ ವಿಶೇಷ ಎಚ್ಚರಿಕೆ

ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ ಅಪರಿಚಿತರಿಗೆ ಮಾಹಿತಿ ನೀಡಬೇಡಿ. ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಲೇಬೇಡಿ.

ಸ್ಕ್ರೀನ್ ಶೇರ್ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಡಿ, ಅನುಮಾನಾಸ್ಪದ ವ್ಯವಹಾರ ಕಂಡುಬಂದರೆ ತಕ್ಷಣ ಬ್ಯಾಂಕಿಗೆ ಮಾಹಿತಿ ನೀಡಿ.

ಬ್ಯಾಂಕ್ ಸಿಬ್ಬಂದಿ ಅಥವಾ ಯಾವುದೇ ಅಧಿಕಾರಿ ಫೋನ್‌ನಲ್ಲಿ ಓಟಿಪಿ ಕೇಳುವುದಿಲ್ಲ ಎಂಬುದು ಯಾವತ್ತೂ ನಿಮಗೆ ನನಪಿರಲಿ.

ಸಮಾಜದ ಜವಾಬ್ದಾರಿ

ಈ ಮಾಹಿತಿಯನ್ನು ಪ್ರತಿಯೊಬ್ಬರೂ ತಮ್ಮ ಮನೆಯ ಹಿರಿಯರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ (ಮಕ್ಕಳಿಗೆ) ತಿಳಿಸಬೇಕು. ಏನೋ ಅಚಾನಕ್ಕಾಗಿ ಇಂತಹ ಬಲೆಗೆ ಬಿದ್ದಾಗ ತಕ್ಷಣ ಸಂಬಂಧಿತ ಬ್ಯಾಂಕ್ ಶಾಖೆ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಲು ಹಿಂಜರಿಯಬಾರದು.

ನೆನಪಿರಲಿ

ಡಿಜಿಟಲ್ ವ್ಯವಹಾರಗಳನ್ನು ಸುರಕ್ಷಿತವಾಗಿ ಬಳಸಿದರೆ ಮಾತ್ರ ಸೈಬರ್ ಅಪರಾಧಗಳನ್ನು ತಡೆಯಬಹುದು. ಯಾವುದೇ ವಿಷಯದಲ್ಲಿ ಭಯಪಟ್ಟು ಅವಸರದ ನಿರ್ಣಯ ತೆಗೆದುಕೊಳ್ಳಬೇಡಿ. ನಮ್ಮಲ್ಲಿನ ಭಯವೇ ವಂಚಕರ ದೊಡ್ಡ ಆಯುಧ. ನಮ್ಮಲ್ಲಿನ ಜಾಗೃತಿಯೇ ನಮ್ಮ ದೊಡ್ಡ ರಕ್ಷಣೆ. ಜಾಗೃತ ನಾಗರಿಕರು ಮಾತ್ರ ಸುರಕ್ಷಿತ ಸಮಾಜವನ್ನು ನಿರ್ಮಿಸಬಲ್ಲರು.

PREV
Read more Articles on

Recommended Stories

ಕನ್ನಡಿಗ ಅಮರೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ
ಕೃಷಿ ವಲಯದಲ್ಲಿ ಮಹೀಂದ್ರ ಕ್ರಾಂತಿ : ಓಜಾ 2130 ಸರಣಿ ಟ್ರ್ಯಾಕ್ಟರ್‌ಗಳ ಉತ್ಪಾದನೆ ಹೆಚ್ಚಳ