ಬೆಂಗಳೂರು : ರಾಜ್ಯ ಸರ್ಕಾರಿ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರಿಗೆ ಸಂಧ್ಯಾ ಕಿರಣ ನಗದು ರಹಿತ ಆರೋಗ್ಯ ಸೇವೆ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜತೆಗೆ ಮಾತುಕತೆ ನಡೆಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಶುಕ್ರವಾರ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಈ ಸರ್ಕಾರ ಅಧಿಕಾರಕ್ಕೆ ಬರಲು ಸರ್ಕಾರಿ ನೌಕರರ ಸಹಕಾರವೂ ಇದೆ. ಅಧಿಕಾರಕ್ಕೂ ಮುಂಚೆ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಂಥ ಭರವಸೆಗಳನ್ನು ಈಡೇರಿಸಲು ಜನಪ್ರತಿನಿಧಿಗಳಾಗಿ ನಾವು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಹಳೆ ಪಿಂಚಣಿ ಯೋಜನೆ ಮರು ಜಾರಿಗಾಗಿ ಸರ್ಕಾರಿ ನೌಕರರು ಮಾತ್ರವಲ್ಲ, ನಿವೃತ್ತ ನೌಕರರೂ ನಿರೀಕ್ಷೆಯಲ್ಲಿದ್ದಾರೆ. ನಿವೃತ್ತ ನೌಕರರ ಎಲ್ಲ ಬೇಡಿಕೆಗಳ ಕುರಿತು ಮುಖ್ಯಮಂತ್ರಿಯವರ ಗಮನಕ್ಕೆ ತಂದು ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ಎಲ್.ಬೈರಪ್ಪ ಮಾತನಾಡಿ, ರಾಜ್ಯ 7ನೇ ವೇತನ ಆಯೋಗವು ಸರ್ಕಾರಿ ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ನಗದು ರಹಿತ ಆರೋಗ್ಯ ಸೇವೆ ನೀಡುವ ‘ಸಂಧ್ಯಾ ಕಿರಣ’ಯೋಜನೆಯನ್ನು ಶಿಫಾರಸು ಮಾಡಿದೆ. ಈ ಯೋಜನೆಯನ್ನು ಶೀಘ್ರ ಅನುಷ್ಠಾನಕ್ಕೆ ತರಬೇಕು. 70 ವರ್ಷ ಮೇಲ್ಪಟ್ಟು 80 ವರ್ಷದೊಳಗಿನ ನಿವೃತ್ತ ಸರ್ಕಾರಿ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಮೂಲ ಪಿಂಚಣಿಯಲ್ಲಿ ಶೇ.10ರಷ್ಟು ಹೆಚ್ಚಳ ಮಾಡಬೇಕು. ಶವ ಸಂಸ್ಕಾರ ಭತ್ಯೆ 10 ಸಾವಿರ ರು.ಮಂಜೂರು ಮಾಡಲು ಶಿಫಾರಸು ಮಾಡಿದ್ದು ಅದನ್ನು ಆ ಬೇಡಿಕೆಯನ್ನು ಈಡೇರಿಸಬೇಕು ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಟಿ.ಎಚ್.ಅಂಜನಪ್ಪ ಮಾತನಾಡಿ, ರಾಜ್ಯ ಸರ್ಕಾರಿ ನಿವೃತ್ತ ನೌಕಕರಿಗೆ ಆರೋಗ್ಯವೇ ಭಾಗ್ಯ. ಈ ನಿಟ್ಟಿನಲ್ಲಿ ನಿಮ್ಮ ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಲು ಮುಂದಾಗಿ. ನಿವೃತ್ತಿ ನಂತರ ಆರೋಗ್ಯ ಕಾಪಾಡಿಕೊಳ್ಳುವುದು ಪ್ರಮುಖ ಜವಾಬ್ದಾರಿ. ಉದ್ವೇಗ, ಆತಂಕ, ಒತ್ತಡಗಳಿಗೆ ಒಳಗಾಗದ ಜೀವನ ನಿರ್ವಹಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಶಾಸಕ ರಂಗನಾಥ, ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸಾ ತಜ್ಞೆ ಡಾ। ಪುಣ್ಯವತಿ ಸಿ.ನಾಗರಾಜ್ ಇದ್ದರು.