;Resize=(412,232))
-ಸುಧಾಕರ್ ಹೊಸಳ್ಳಿ, ಮೈಸೂರು
ನಾಳೆ ಅಂಬೇಡ್ಕರ್ ಮಹಾ ಪರಿನಿರ್ವಹಣಾ ದಿನ
ನಾಳೆ ಅಂಬೇಡ್ಕರರ, ಪುಣ್ಯಸ್ಮರಣೆ ದಿವಸ. ಭಾರತವಲ್ಲದೆ ಜಗತ್ತಿನ ಅನೇಕ ಬೌದ್ಧಿಕ ಪರಿಧಿಗಳಲ್ಲಿ ಅಂಬೇಡ್ಕರ್‌ರ ಕುರಿತಾದ ಸೆಮಿನಾರ್‌ಗಳು ಆಯೋಜನೆಗೊಳ್ಳುತ್ತವೆ. ಅಂಬೇಡ್ಕರರು ಸಮಾಜಕ್ಕೆ ಕೊಟ್ಟ ಘನೀಭೂತವಾದ ಸಂದೇಶಗಳನ್ನು ಪ್ರಸಕ್ತ ಸಂದರ್ಭಗಳಿಗೆ ತೌಲನಿಕವಾಗಿ ಅವಲೋಕಿಸುವ, ಅನುಸರಣೆಗಾಗಿ ಕ್ರಮವಹಿಸುವ ಕಾರ್ಯ ನಡೆಯುತ್ತದೆ. ಅಂಬೇಡ್ಕರರು ಕಾಲವಾದ 69 ವರ್ಷಗಳ ನಂತರವೂ ಅವರ ಕೊಡುಗೆಯನ್ನು ನಿರ್ದೇಶನಗಳನ್ನು, ಪಾಲಿಸಿಗಳನ್ನು ಅನುಸರಿಸುವವರ ಅನುಕರಣೆ ಮಾಡುವವರ ಸಂಖ್ಯೆ ಆರೋಹಣ ಪಥದಲ್ಲೇ ಇದೆ.
ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ವ್ಯಕ್ತಿಯಾಗಿ ಉಳಿಯದೆ ಒಂದು ಆಂದೋಲನವಾಗಿ ರೂಪುಗೊಂಡಿದ್ದಾರೆ. ಅವರ ಚಿಂತನೆಗಳು ಭಾರತೀಯರ ಮೇಲೆ ಸಮಗ್ರವಾಗಿ ಪರಿಣಾಮ ಬೀರಿವೆ. ಅವರ ಪ್ರತಿಯೊಂದು ಸಂದೇಶಗಳೂ ವ್ಯಾಪಕವಾಗಿ ಆವರಿಸಿರುವುದರಿಂದ, ಕೆಲವು ವಿಘಟನಾ ಶಕ್ತಿಗಳು ಅಂಬೇಡ್ಕರರ ಚಿಂತನೆಗಳನ್ನು, ಸ್ವತ್ವವನ್ನು ಬೆನ್ನು ತೋರಿಸಿ ಸಮಾಜದ ಭಾಗವಾಗಿಸುತ್ತಿವೆ.
ಬಂದೂಕಿಗಿಂತಲೂ ಹೆಚ್ಚು ಪರಿಣಾಮಕಾರಿಯಾದ ಅವರ ಪ್ರಭಾವವನ್ನು ಈ ನೆಲದ ಬಾಹುಗಳ ಬಿರುಕುಗೊಳಿಸಲು ಪ್ರಯೋಗಿಸುತ್ತಿರುವುದು, ಬಾರೀ ಅಪಾಯ ತಂದೊಡ್ಡಬಲ್ಲ ಯೋಜನೆಯಾಗಿದೆ. ಮೂಲವಾಗಿ ಅಂಬೇಡ್ಕರರು ಪರಮ ದೇಶಭಕ್ತ. ಅವರೊಳಗಿನ ರಾಷ್ಟ್ರೀಯತೆಯ ಪ್ರಕಟೀಕರಣ ಗಮ್ಯವಾದದ್ದು.
ಇಂತಹ ವಿಶೇಷ ಸಂದರ್ಭಗಳಲ್ಲದೆ ಸಹಜವಾಗಿಯೂ, ದೇಶದ ಉದ್ದಗಲಕ್ಕೂ ಅಂಬೇಡ್ಕರರ ಸ್ಮರಣೆ, ಅವರ ಕುರಿತಾದ ಚರ್ಚೆ, ಸಂವಾದ, ಕಾರ್ಯಕ್ರಮ, ಕಾರ್ಯಗಾರ, ಸಮ್ಮೇಳನ ನಡೆಯುತ್ತಲೇ ಇರುತ್ತವೆ. ಸಾಮಾಜಿಕ ಸಮಾನತೆಯ ಮಹಾತ್ಮನ ಕ್ರಾಂತಿಕಾರಕ ವಿಚಾರಗಳ ಕಾರಣಕ್ಕಾಗಿ, ಭಾರತ ಹೀಗೆ ಎಲ್ಲೆಡೆ ಅಂಬೇಡ್ಕರರನ್ನೇ ಆವಾಹನೆ ಮಾಡಿಕೊಳ್ಳುತ್ತದೆ.
ಮುಂದುವರೆದು, ಸಮ-ಸಮಾಜದ ನಿರ್ಮಾಣಕ್ಕೆ ಅಂಬೇಡ್ಕರರ ಹೋರಾಟ ಮತ್ತು ಹಾಕಿಕೊಟ್ಟ ಆದರ್ಶಗಳನ್ನು ಚರ್ಚಿಸುವ, ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ, ಆ ದಿಸೆಡೆಗೆ ಸಮಾಜವನ್ನು ಕೊಂಡೊಯ್ಯುವ ಪ್ರಯತ್ನಗಳು ಹೆಮ್ಮೆಯಿಂದಲೇ ಸಾಗುತ್ತವೆ. ಯುವಕರು, ಮಹಿಳೆಯರು ಸಮಾಜವನ್ನು ಒಟ್ಟುಗೂಡಿಸುವ ಮನೋಭಾವವನ್ನು ಮೂಡಿಸಿಕೊಳ್ಳುತ್ತಾರೆ. ಇಷ್ಟೆಲ್ಲ ಒಳಿತುಗಳ ನಡುವೆ ಭಾರತವನ್ನು ತುಂಡಾಗಿಸುವ, ಸಮಾಜವನ್ನು ವಿಘಟಿಸುವ, ಇತಿಹಾಸದ ಪ್ರಮಾದವನ್ನು ವೈಭವೀಕರಿಸುವುದರ ಮುಖಾಂತರ, ಭಾರತ ಚೂರಾಗುವಂತೆ ಯೋಚಿಸುವ, ಯೋಜಿಸುವ ಒಂದು ವರ್ಗವು ಎಚ್ಚರವಾಗಿಯೇ ಇರುತ್ತದೆ.
ಹಾಗಾಗಿ, ಪ್ರಜ್ಞಾವಂತ ಭಾರತೀಯ ಅಂಬೇಡ್ಕರರ ಸದಾಶಯಗಳನ್ನು ಸಂಶೋಧನಾತ್ಮಕವಾಗಿ ಸಮಾಜಕ್ಕೆ ತಲುಪಿಸುವ ಜವಾಬ್ದಾರಿ ಮೆರೆಯಬೇಕು. ಇಲ್ಲವಾದರೆ ಭಾರತದ ಪ್ರಗತಿ, ದೇಶದ ಸಮಗ್ರತೆ ಹಾಗೂ ನೆಲಮೂಲ ಸಂಸ್ಕೃತಿಯ ಬೇರುಗಳನ್ನು ಶಿಥಿಲಗೊಳಿಸುವ ಅಪಾಯ ಇದ್ದೇ ಇರುತ್ತದೆ. ಭಾರತದ ಬಹುಪಾಲು ಮೂಲಭೂತ ಸಮಸ್ಯೆಗಳಿಗೆ ಅಂಬೇಡ್ಕರರ ಸಂದೇಶವನ್ನು, ಬೋಧನೆಗಳನ್ನು ಮೂಲ ರೂಪದಲ್ಲಿ ತಲುಪಿಸುವುದು ಪರಿಹಾರದ ಕಾರ್ಯವಾಗುತ್ತದೆ.
‘ನಾನು ಮೊದಲೂ ಭಾರತೀಯ, ಕಡೆಗೂ ಭಾರತೀಯ’ ಎಂಬ ಉದ್ಘೋಷ ಮಾಡಿದ ಹೆಮ್ಮೆಯ ಭಾರತೀಯ ಅದು ಬಾಬಾ ಸಾಹೇಬರು. ನಾಡಿನ ಕುರಿತು, ತಾಯಿ ನೆಲದ ಬಗೆಗೆ ಅಂಬೇಡ್ಕರರ ಅದಮ್ಯ ನಿಲುವನ್ನು ಯುವಕರು, ಮಕ್ಕಳಿಗೆ ದರ್ಶಿಸುವ ನಡೆಯು ಅಂಬೇಡ್ಕರ್ ಅವರಿಗೆ ಸಲ್ಲಿಸಬಹುದಾದ ಬಹುದೊಡ್ಡ ಗೌರವವಾಗಿದೆ.
ಅಂದು 1942ನೇ ಇಸವಿ, ಫೆಬ್ರವರಿ ತಿಂಗಳಲ್ಲಿ ಬಾಂಬೆಯ ವಾಗ್ಯೆ ಸಭಾಭವನದಲ್ಲಿ ಬೇಸಿಗೆ ಭಾಷಣ ಸರಣಿಯ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ‘ಪಾಕಿಸ್ತಾನದ ಮೇಲೆ ಚಿಂತನೆಗಳು’ ವಿಷಯದ ಕುರಿತು ಮಾತನಾಡುವಾಗ,
‘ಚರಿತ್ರೆಯನ್ನು ಮರೆತುಬಿಡಿ ಎಂದು ಜನಗಳಿಗೆ ಹೇಳುವುದು ತಪ್ಪಾಗುತ್ತದೆ. ಯಾರು ಚರಿತ್ರೆಯನ್ನು ಮರೆಯುತ್ತಾರೋ ಅವರು ಚರಿತ್ರೆಯನ್ನು ಸೃಷ್ಟಿ ಮಾಡಲಾರರು. ಭಾರತದ ಸೈನ್ಯದಲ್ಲಿ ಮುಸಲ್ಮಾನರ ಸಂಖ್ಯೆ ಅಥವಾ ಪ್ರಾಮುಖ್ಯತೆಯನ್ನು ಕೆಳಗೆ ತರಬೇಕಾದರೆ ಮತ್ತು ಸೈನ್ಯ ಕ್ಷೇಮವಾಗಿ ಇರಬೇಕಾದರೆ ಪ್ರತಿಕೂಲವಾದ ಧಾತುವನ್ನು ಹೊರಗಡೆ ಬಿಟ್ಟು ಬಿಡುವುದೇ ಬುದ್ಧಿವಂತಿಕೆ’ ಎಂಬ ಸಲಹೆ ನೀಡಿದ್ದರು.
ಇದು ರಾಷ್ಟ್ರೀಯತೆಯನ್ನು ಹೃದಯವಂತರಾಳದಲ್ಲಿ ಪ್ರತಿಷ್ಠಾಪಿಸಿಕೊಂಡ ವ್ಯಕ್ತಿಯೊಬ್ಬರು ಮಾತ್ರ ಪ್ರಕಟ ಮಾಡಬಹುದಾದ ಉತ್ಕೃಷ್ಟ ಭಾವನೆ. ‘ನಾವು ನಮ್ಮ ದೇಶವನ್ನು ರಕ್ಷಣೆ ಮಾಡುತ್ತೇವೆ. ಪಾಕಿಸ್ತಾನ ತನ್ನ ಮುಸ್ಲಿಂ ಚಕ್ರಾಧಿಪಥ್ಯವನ್ನು ಭಾರತದ ಮೇಲೆ ವಿಸ್ತರಿಸುತ್ತದೆ ಎಂಬ ತಪ್ಪು ತಿಳುವಳಿಕೆಯನ್ನು ಇಟ್ಟುಕೊಳ್ಳಬೇಡಿ. ಹಿಂದುಗಳು ಅದನ್ನು ಮಣ್ಣು ನೆಕ್ಕುವ ಹಾಗೆ ಮಾಡುತ್ತಾರೆ’ ಎಂದಿದ್ದರು.
‘ಕೆಲವು ವಿಷಯಗಳ ಕುರಿತು ಸವರ್ಣೀಯ ಹಿಂದೂಗಳೊಂದಿಗೆ ನನ್ನ ಭಿನ್ನಾಭಿಪ್ರಾಯವೂ ಇದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಮ್ಮ ತಾಯಿ ನೆಲದ ರಕ್ಷಣೆಗಾಗಿ ಪ್ರಾಣ ಕೊಡಲೂ ಸಿದ್ಧನಿದ್ದೇನೆ ಎಂದು ನಿಮ್ಮ ಮುಂದೆ ಪ್ರತಿಜ್ಞೆ ಮಾಡುತ್ತೇನೆ’ ಎಂದು ಘೋಷಿಸಿ ಬಿಟ್ಟರು. ಇದು ತನ್ನ ನೆಲದ ಬಗ್ಗೆ ಭಾರತಾಂಬೆಯ ಸುಪುತ್ರನೊಬ್ಬನು ತೆಗೆದುಕೊಳ್ಳಬಹುದಾದ ಗರಿಷ್ಠ ಪ್ರತಿಜ್ಞೆಯಾಗಿದೆ.
ದಿನಾಂಕ 24-05-1950 ರಂದು ಹೈದರಾಬಾದ್ ಪ್ರೋಗ್ರೆಸಿವ್ ಗ್ರೂಪ್‌ನ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ, ‘ಭಾರತದ ಸಂವಿಧಾನವು ಪ್ರಜೆಗಳಿಗೆ ಹೆಚ್ಚಿನ ಮೂಲಭೂತ ಹಕ್ಕುಗಳನ್ನು ಕಲ್ಪಿಸಿದೆ. ಆದಾಗಿಯೂ ರಾಷ್ಟ್ರದ ಹಿತಾಸಕ್ತಿಗಳನ್ನು ಕಾಪಾಡುವುದಕ್ಕೋಸ್ಕರ ಮೂಲಭೂತ ಹಕ್ಕುಗಳ ಮೇಲೆ ಕೆಲವೊಂದು ಮಿತಿಗಳನ್ನು ಹೇರಿದ್ದೇನೆ’ ಎನ್ನುವ ಮೂಲಕ ವೈಯಕ್ತಿಕ ಸ್ವಾತಂತ್ರ್ಯವೂ ರಾಷ್ಟ್ರದ ಪರಮಾಧಿಕಾರವನ್ನು ಮೀರಿ ನಿಲ್ಲಬಾರದು ಎನ್ನುವ ಕಟು ಸಂದೇಶ ನೀಡಿದ್ದರು.
ಅಮೆರಿಕದ ಪ್ರಖ್ಯಾತ ವಿಶ್ವವಿದ್ಯಾನಿಲಯವಾದ ಕೊಲಂಬಿಯಾ ವಿವಿಯು 1950ರಲ್ಲಿ ತೆಗೆದುಕೊಂಡ ಒಂದು ಅಸಾಧಾರಣ ತೀರ್ಮಾನದಂತೆ, ಭಾರತದ ಸಂವಿಧಾನ ರಚನೆಯ ಶ್ರೇಷ್ಠ ಕಾರ್ಯಕ್ಕಾಗಿ ಅಂಬೇಡ್ಕರರಿಗೆ ಎಲ್‌ಎಲ್‌ಡಿ ಪದವಿಯನ್ನು ಪ್ರಧಾನ ಮಾಡಿ ಗೌರವಿಸಬೇಕೆಂದು ನಿರ್ಣಯಿಸಿತು. ಅದೇ ವಿವಿಯ ವಿದ್ಯಾರ್ಥಿಯಾಗಿದ್ದ ಅವರಿಗೆ ಅಂತದ್ದೊಂದು ಗೌರವ ಲಭಿಸುವ ಮಾಹಿತಿ ದೊರೆತಾಗ ಅತೀವ ಸಂತಸವಾಯಿತು.
ಆ ಪದವಿಯನ್ನು ಪಡೆದುಕೊಳ್ಳಲು ಅಂಬೇಡ್ಕರರು ಅಮೆರಿಕಕ್ಕೆ ತೆರಳಬೇಕಾದ ಅಗತ್ಯವಿದ್ದ ಸಂದರ್ಭವದು. ಆಗ ತಾನೇ ಸಂವಿಧಾನದ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಭಾರತ ಸರ್ಕಾರದ ಮುಂದೆ ಅನೇಕ ಸಮಸ್ಯೆಗಳು ಉಲ್ಬಣಿಸಿದ್ದವು. ಅವುಗಳಲ್ಲಿ ಬಹು ಮುಖ್ಯವಾಗಿ ಸಾಂವಿಧಾನಿಕ ಸಮಸ್ಯೆಗಳೇ ಹೆಚ್ಚಾಗಿದ್ದವು. ಅವುಗಳನ್ನು ತನ್ನ ನಿಪುಣತೆಯಿಂದಲೇ ಪರಿಹರಿಸಬೇಕಾಗಿದ್ದು, ತಾವು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ಎಂಬ ಮಾಹಿತಿಯನ್ನು ಅತ್ಯಂತ ವಿನೀತವಾಗಿ ತಿಳಿಯಪಡಿಸಿದರು.
ಅವರ ಅನುಪಸ್ಥಿತಿಯಲ್ಲೇ ಪದವಿ ಪ್ರಧಾನಕ್ಕೆ ವಿವಿ ಸಿದ್ದವಾಗಿದ್ದರೂ, ಒಂದೆರಡು ವರ್ಷಗಳಲ್ಲಿ ತಾನೇ ಖುದ್ದಾಗಿ ಬಂದು ಪದವಿ ಸ್ವೀಕರಿಸುತ್ತೇನೆ ಎಂದು ಕೊಲಂಬಿಯಾ ವಿವಿಗೆ ತಿಳಿಸಿದರು. ಅಂಬೇಡ್ಕರರ ಅಭಿಮತದಂತೆ ಪದವಿ ಪ್ರಧಾನ ಸಮಾರಂಭವನ್ನು ಮುಂದೂಡಲಾಯಿತು. ಈ ನಡೆ ಸದಾಕಾಲ ಅಂಬೇಡ್ಕರರ ಹೃದಯದಲ್ಲಿ ದೇಶದ ಹಿತಾಸಕ್ತಿಯೇ ಆದ್ಯವಾಗಿರುತ್ತದೆ ಎಂಬುದನ್ನು ಮತ್ತೊಮ್ಮೆ ಧೃಡಪಡಿಸಿತು.
ಸ್ವರಾಜ್ಯದಲ್ಲಿ ನನ್ನ ಪಾಲೆಷ್ಟು?:
ಸ್ವಾತಂತ್ರ್ಯ ಹೋರಾಟದಲ್ಲಿ ಭಾರತಾಂಬೆಯ ಬಂಧನ ಮುಕ್ತಕ್ಕೆ ಅಂಬೇಡ್ಕರ್ ಅವರ ಮನಸ್ಸು ಅದೆಷ್ಟು ಹಪಹಪಿಸಿತ್ತು ಎನ್ನುವುದಕ್ಕೆ ಒಂದು ಸ್ಪಷ್ಟ ಉದಾಹರಣೆ: 20 ವರ್ಷಗಳ ಕಾಲ ಕಾಂಗ್ರೆಸ್ ವಿರುದ್ಧ ಹೋರಾಡಿದ್ದ ಅಂಬೇಡ್ಕರರು ‘ನೀವು ಸ್ವರಾಜ್ಯಕ್ಕಾಗಿ ಹೋರಾಡುತ್ತಿದ್ದೀರಿ, ನಿಮ್ಮ ಜೊತೆ ಸೇರಲು ನಾನು ಸಿದ್ಧ. ನಿಮಗಿಂತ ಚೆನ್ನಾಗಿ ನಾನು ಹೋರಾಡಬಲ್ಲೆ ಎಂದು ನಿಮಗೆ ಭರವಸೆ ಕೊಡುತ್ತೇನೆ. ಆದರೆ ನನ್ನದು ಒಂದು ಶರತ್ತು ಇದೆ. ಸ್ವರಾಜ್ಯದಲ್ಲಿ ನನ್ನ ಪಾಲು ಎಷ್ಟೆಂದು ಹೇಳಿ. ನಿಮಗೆ ಅದನ್ನು ತಿಳಿಸಲು ಇಷ್ಟವಿಲ್ಲದಿದ್ದರೆ, ನನ್ನ ಬೆನ್ನ ಹಿಂದೆ ಬ್ರಿಟಿಷರೊಡನೆ ರಾಜಿ ಮಾಡಿಕೊಳ್ಳಬೇಕೆಂದಿದ್ದರೆ ನೀವಿಬ್ಬರೂ ನರಕಕ್ಕೆ ಹೋಗಿ’ ಎಂದು ಬ್ರಿಟಿಷರು ಮತ್ತು ಕಾಂಗ್ರೆಸ್ ನ ವಿರುದ್ಧ ಆರ್ಭಟಿಸಿದ್ದರು.
ಅಂಬೇಡ್ಕರರು ಹೇಗೆ ತನ್ನ ನೆಲದ ಬಗೆಗೆ ಅತಿಮಾನುಷ ಅಕ್ಕರೆ, ಅಭಿಮಾನ, ಹೆಮ್ಮೆ, ಆದರಗಳನ್ನು ಹೊಂದಿದ್ದರೋ, ಹಾಗೆಯೇ ಯುವಕರು ಭಾರತವನ್ನು ತಮ್ಮೊಳಗೂ ಪ್ರತಿಷ್ಠಾಪಿಸಿಕೊಂಡರೆ ಭಾರತ ಅಭಿವೃದ್ಧಿ ಪಥ ಎಲ್ಲ ಸಂಕೋಲೆಗಳನ್ನು ಮೀರಿ ಮುಂದುವರಿಯಲು ಅವಕಾಶವಾಗುತ್ತದೆ.
ಭಾರತದ ರಾಷ್ಟ್ರೀಯತೆಗೆ ಸವಾಲಾಗಿರುವ ಅನೇಕ ಪ್ರಕರಣಗಳು, ಯೋಜನೆಗಳು, ಹೋರಾಟಗಳಲ್ಲಿ ಅಂಬೇಡ್ಕರರ ಭಾವಚಿತ್ರವನ್ನು ಬಳಸಲಾಗುತ್ತದೆ. ಅಂಬೇಡ್ಕರರ ಸ್ಲೋಗನ್‌ಗಳನ್ನು ಮೊಳಗಿಸಲಾಗುತ್ತದೆ. ರಾಷ್ಟ್ರದ ವಿರುದ್ಧದ, ಆಳುವ ಸರ್ಕಾರದ ವಿರುದ್ಧದ ಹೋರಾಟಕ್ಕೆ ಅಂಬೇಡ್ಕರರೇ ಪ್ರೇರಣೆ ಎಂಬಂತೆ ಬಿಂಬಿಸಲಾಗುತ್ತದೆ. ಅಂಬೇಡ್ಕರರು ಬದುಕಿನ ಉದ್ದಕ್ಕೂ ಒಂದೇ ಒಂದು ಬಾರಿಯೂ ರಾಷ್ಟ್ರೀಯತೆಯ ವಿರುದ್ಧ ತಮ್ಮ ಹೇಳಿಕೆಯನ್ನು ಕೊಟ್ಟಿಲ್ಲ ಎಂಬುದು ಗಮನಾರ್ಹ. ಅವರ ಯಾವ ಲೇಖನ, ಪ್ರಬಂಧ ಅಥವಾ ಸಂಕಲನಗಳೂ ರಾಷ್ಟ್ರೀಯತೆಯನ್ನು ಬಲಗೊಳಿಸುವ ಸಂದೇಶ ನೀಡದೆ ಮುಕ್ತಾಯವಾಗುವುದಿಲ್ಲ. ಪಶ್ಚಿಮದ ಹಲವಾರು ವಿಘಟನಾ ಯೋಜನೆಗಳನ್ನು ಅಂಬೇಡ್ಕರರು ಪ್ರಾದೇಶಿಕವಾದ ಸ್ವತ್ವವನ್ನೇ ಬಳಸಿಕೊಂಡು ಎದುರಿಸುತ್ತಿದ್ದರು, ಮತ್ತು ಎದುರಿಸಲು ಕರೆ ನೀಡುತ್ತಿದ್ದರು. ಅಂಬೇಡ್ಕರ್ ಅವರ ಪ್ರತಿ ಸಾಹಿತ್ಯ ಅಥವಾ ಸಂದೇಶಗಳೂ ರಾಷ್ಟ್ರ ಕಟ್ಟುವ, ಸಮಾಜ ಕಟ್ಟುವ ಕೆಲಸಕ್ಕೆ ಪೂರಕವಾಗಿಯೇ ಇದ್ದವು ಎಂಬುದನ್ನು ಅರ್ಥೈಸಿಕೊಂಡು ಮುನ್ನಡೆಯಬೇಕಾದದ್ದು ಪ್ರತಿ ನಾಗರಿಕನ, ಪ್ರತಿಯೊಬ್ಬ ರಾಷ್ಟ್ರೀಯನ ಕರ್ತವ್ಯವಾಗಿದೆ.
ಆಧಾರ: ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ- 18, ಪುಟ- 91, 456, 458, 659.