ಕುಡಿಯುವ ನೀರಿನ ದರ ಏರಿಕೆ ನಾಳೆ ಘೋಷಣೆ? : ಪ್ರತಿ ಲೀಟರ್‌ ಕಾವೇರಿ ನೀರಿಗೆ 1 ಪೈಸೆ ಹೆಚ್ಚಳ ನಿಶ್ಚಿತ

KannadaprabhaNewsNetwork | Updated : Apr 09 2025, 05:03 AM IST

ಸಾರಾಂಶ

ಕಳೆದೊಂದು ವರ್ಷದಿಂದ ತೀವ್ರ ಚರ್ಚೆ ನಡೆಯುತ್ತಿದ್ದ ಕಾವೇರಿ ಕುಡಿಯುವ ನೀರಿನ ದರ ಏರಿಕೆಯ ಕುರಿತು ಏ.10 ರಂದು ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದ್ದು, ವಸತಿ ಬಳಕೆಯ ಪ್ರತಿ ಲೀಟರ್‌ ನೀರಿನ ದರ 1 ಪೈಸೆ ಏರಿಕೆ ಬಹುತೇಕ ನಿಶ್ಚಿತವಾಗಿದೆ.

 ಬೆಂಗಳೂರು : ಕಳೆದೊಂದು ವರ್ಷದಿಂದ ತೀವ್ರ ಚರ್ಚೆ ನಡೆಯುತ್ತಿದ್ದ ಕಾವೇರಿ ಕುಡಿಯುವ ನೀರಿನ ದರ ಏರಿಕೆಯ ಕುರಿತು ಏ.10 ರಂದು ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದ್ದು, ವಸತಿ ಬಳಕೆಯ ಪ್ರತಿ ಲೀಟರ್‌ ನೀರಿನ ದರ 1 ಪೈಸೆ ಏರಿಕೆ ಬಹುತೇಕ ನಿಶ್ಚಿತವಾಗಿದೆ.

2014 ರಿಂದ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಿಸಲಾಗಿಲ್ಲ. ಹೀಗಾಗಿ ಬೆಂಗಳೂರು ಜಲ ಮಂಡಳಿಯು 7 ರಿಂದ 8 ಪೈಸೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಕುರಿತು ಕಳೆದ ಒಂದು ವರ್ಷದಿಂದ ದರ ಏರಿಕೆಯ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಈಗಾಗಲೇ ಹಲವು ಬಾರಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಲೀಟರ್‌ಗೆ ಒಂದು ಪೈಸೆಯಾದರೂ ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ. ಏ.10ರ ಗುರುವಾರ ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್‌ನಿಂದಲೇ ಜಾರಿ?:

ಆರ್ಥಿಕ ವರ್ಷ ಆರಂಭದ ಹಿನ್ನೆಲೆಯಲ್ಲಿ ಪರಿಷ್ಕೃತ ನೀರಿನ ದರವನ್ನು ಏಪ್ರಿಲ್‌ನಿಂದಲೇ ಜಾರಿಗೊಳಿಸುವುದಕ್ಕೆ ಬೆಂಗಳೂರು ಜಲಮಂಡಳಿ ತಾಂತ್ರಿಕ ಸೇರಿ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಏಪ್ರಿಲ್‌ನಲ್ಲಿ ಬಳಕೆ ಮಾಡಿದ ನೀರಿನ ಬಿಲ್‌ ಮೇ ಮೊದಲ ವಾರದಲ್ಲಿ ಬಳಕೆದಾರರಿಗೆ ನೀಡಿ ಪರಿಷ್ಕೃತ ದರದಂತೆ ಹಣ ಸಂಗ್ರಹಿಸುವುದಕ್ಕೆ ನಿರ್ಧಿಸಲಾಗಿದೆ.

1 ಪೈಸೆ ಮೂಲಕ ಭಾರೀ ಹೊರೆ:

ಸದ್ಯ ವಸತಿ ಕಟ್ಟಡಗಳಿಗೆ ಪೂರೈಕೆ ಮಾಡುವ ನೀರಿಗೆ ಒಟ್ಟು ನಾಲ್ಕು ಸ್ಲ್ಯಾಬ್‌ ನಲ್ಲಿ ದರ ನಿಗದಿ ಪಡಿಸಲಾಗಿದೆ. ಅದೇ ನಾಲ್ಕು ಸ್ಲ್ಯಾಬ್‌ ಅನ್ನು ಮುಂದುವರೆಸುವುದಕ್ಕೆ ನಿರ್ಧಿಸಿ ಪ್ರತಿ ಲೀಟರ್‌ ದರನ್ನು 1 ಪೈಸೆ ಹೆಚ್ಚಳ ಮಾಡುವುದಕ್ಕೆ ಈಗಾಗಲೇ ರಾಜ್ಯ ಸರ್ಕಾರ ಅನುಮೋದನೆ ನೀಡಲಾಗಿದೆ. ಇನ್ನೂ ಅಪಾರ್ಟ್‌ಮೆಂಟ್‌, ವಸತಿಯೇತರ ಬಳಕೆಯ ನೀರಿನ ದರ ಸಹ ವಿವಿಧ ಸ್ಲ್ಯಾಬ್‌ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಅದೂ ಸಹ ಗುರುವಾರವೇ ಪ್ರಕಟಗೊಳ್ಳಲಿದೆ. ಇದೇ ವೇಳೆ ಸ್ಯಾನಿಟರಿ (ಒಳಚರಂಡಿ) ನೀರಿನ ದರ ಸಹ ಹೆಚ್ಚಳವಾಗಲಿದೆ.

ಸಂಭವನೀಯ ಸ್ಲ್ಯಾಬ್‌ ದರ ಮೊದಲ ಸ್ಯಾಬ್‌:

ತಿಂಗಳಿಗೆ 8 ಸಾವಿರ ಲೀಟರ್‌ ಬಳಕೆ ಮಾಡುವವರಿಗೆ ಪ್ರತಿ ಸಾವಿರ ಲೀಟರ್‌ಗೆ ಸದ್ಯ ₹7 ದರ ನಿಗದಿಪಡಿಸಲಾಗಿದೆ. ಪ್ರತಿ ಲೀಟರ್‌ಗೆ 1 ಪೈಸೆ ಹೆಚ್ಚಳ ಮಾಡಿದರೆ ಸಾವಿರ ಲೀಟರ್‌ಗೆ ₹17 ಪಾವತಿಸಬೇಕಾಗಲಿದೆ. ಮಾಸಿಕ ಪಾವತಿ ದರವು ₹56 ರಿಂದ ₹136ಕ್ಕೆ ಹೆಚ್ಚಾಗಲಿದೆ.

2ನೇ ಸ್ಲ್ಯಾಬ್‌:

8001 ಲೀಟರ್‌ನಿಂದ 25 ಸಾವಿರ ಲೀಟರ್‌ಗೆ ಸದ್ಯ ಪ್ರತಿ ಸಾವಿರ ಲೀಟರ್‌ಗೆ ₹11ಇದ್ದು, ಪರಿಷ್ಕೃತ ದರ ಜಾರಿಗೊಂಡರೆ ₹21 ಪಾವತಿಸಬೇಕಾಗಲಿದೆ. ಕನಿಷ್ಠ ₹168 ರಿಂದ ಗರಿಷ್ಠ ₹525 ಕ್ಕೆ ಹೆಚ್ಚಾಗಲಿದೆ.

3ನೇ ಸ್ಲ್ಯಾಬ್‌:

25001 ಲೀಟರ್‌ನಿಂದ 50 ಸಾವಿರ ಲೀಟರ್‌ಗೆ ಸದ್ಯ ಪ್ರತಿ ಸಾವಿರ ಲೀಟರ್‌ಗೆ ₹25 ಇದ್ದು, ಪರಿಷ್ಕೃತ ದರ ಜಾರಿಗೊಂಡರೆ ₹35 ಆಗಲಿದೆ. ಕನಿಷ್ಠ ₹875 ರಿಂದ 1750ರವರೆಗೆ ಪಾವತಿಸಬೇಕಾಗಲಿದೆ.

4ನೇ ಸ್ಲ್ಯಾಬ್‌:

50,001 ಲೀಟರ್‌ಗಿಂತ ಹೆಚ್ಚಿನ ನೀರು ಬಳಕೆದಾರರಿಗೆ ಸದ್ಯ ಪ್ರತಿ ಸಾವಿರ ಲೀಟರ್‌ಗೆ ₹45 ಇದ್ದು, ಪರಿಷ್ಕೃತ ದರ ಜಾರಿಗೆ ಬಂದರೆ ₹55 ರು. ಪಾವತಿಸಬೇಕಾಗಲಿದೆ. ₹2250 ರಿಂದ ನೀರಿನ ಬಳಕೆಯಂತೆ ಹಣ ಪಾವತಿಸಬೇಕಾಗಲಿದೆ.

Share this article