ಕನ್ನಡದ ಪ್ರೇಮ ಕವಿ ಕೆಎಸ್ ನರಸಿಂಹಸ್ವಾಮಿಯವರ ನಂತರ ಆ ಪಟ್ಟ ಯಾರಿಗೆ ಎಂದು ನೋಡುತ್ತಾ ಹೋದರೆ ಈಗ ನಮಗೆ ಸಿಗುವವರು ಬಿ.ಆರ್. ಲಕ್ಷ್ಮಣರಾವ್. ಪ್ರೇಮ, ವಿಷಾದ, ವಿರಹ, ಭಗ್ನಪ್ರೇಮ ಮತ್ತು ದಾಂಪತ್ಯ ಅವರ ಕವಿತೆಗಳಲ್ಲಿ ಅರಳಿವೆ ಪರಿಯೇ ಸೊಗಸು.

ಕನ್ನಡದ ಪ್ರೇಮ ಕವಿ ಕೆಎಸ್ ನರಸಿಂಹಸ್ವಾಮಿಯವರ ನಂತರ ಆ ಪಟ್ಟ ಯಾರಿಗೆ ಎಂದು ನೋಡುತ್ತಾ ಹೋದರೆ ಈಗ ನಮಗೆ ಸಿಗುವವರು ಬಿ.ಆರ್. ಲಕ್ಷ್ಮಣರಾವ್. ಪ್ರೇಮ, ವಿಷಾದ, ವಿರಹ, ಭಗ್ನಪ್ರೇಮ ಮತ್ತು ದಾಂಪತ್ಯ ಅವರ ಕವಿತೆಗಳಲ್ಲಿ ಅರಳಿವೆ ಪರಿಯೇ ಸೊಗಸು. 

ಸುಬ್ಬಾಭಟ್ಟರ ಮಗಳೇ ಇದೆಲ್ಲಾ ನಿಂದೇ ತಗೊಳ್ಳೆ

ಸುಬ್ಬಾಭಟ್ಟರ ಮಗಳೇ ಇದೆಲ್ಲಾ ನಿಂದೇ ತಗೊಳ್ಳೆ ಎಂದು ಅವರು ಹೇಳಲು ಆರಂಭಿಸಿ ಸುಬ್ಬಾಭಟ್ಟರ ಮಗಳು ಗಿರಿಜಾ ಜೊತೆ ಬಾಳಲು ಆರಂಭಿಸಿ 50 ವರ್ಷಗಳು ಕಳೆದಿವೆ.

 ಈ ಸುವರ್ಣ ದಾಂಪತ್ಯದ ಸುವರ್ಣ ಹೊಸಿಲಲ್ಲಿ ನಿಂತು ಅವರು ತಮ್ಮ ದಾಂಪತ್ಯದ ಕುರಿತು ಕವಿತೆಯೊಂದನ್ನು ಬರೆದಿದ್ದಾರೆ. ಈ ಕವಿತೆಯಲ್ಲಿ ಮಾಗಿದ ದಾಂಪತ್ಯದ ಚಿತ್ರ, ಕವಿಯ ಹುಡುಗಾಟ, ಕವಿಪತ್ನಿಯ ಮೌನ ಮತ್ತು ಮುಗ್ಧತೆ ಎಲ್ಲವೂ ದಾಖಲಾಗಿದೆ. ದಾಂಪತ್ಯದ ಘಳಿಗೆಗಳ ಐವತ್ತು ವಸಂತಗಳ ಚಿತ್ರಗಳು ಹೀಗೆ ದಾಖಲಾಗುವುದು ಇದೇ ಮೊದಲು.

ಬಾಳ ಸಂಗಾತಿಗೆ

- ಬಿ.ಆರ್. ಲಕ್ಷ್ಮಣರಾವ್

ಬಾಳ ಸಂಗಾತಿಯೇ, ನಮ್ಮ ದಾಂಪತ್ಯಕ್ಕೆ

ಇನ್ನೇನು ಭರ್ತಿ ಐವತ್ತು.

ನನಗಂತೂ ಆಗಿಲ್ಲ ಕಿಂಚಿತ್ತೂ ಸುಸ್ತು;

ನಿನಗೆ? ಅದು ನಿನಗೇ ಗೊತ್ತು.

‘I love you’ ಅಂದಿಲ್ಲ ನಾವು ಪರಸ್ಪರ

ಆಧುನಿಕರಂತೆ ಯಾವತ್ತೂ;

ಪ್ರೀತಿ ಅಂತರ್ಗಾಮಿ ನದಿ ಸರಸ್ವತಿ,

ನಮ್ಮ ದಾಂಪತ್ಯದ ಗುಟ್ಟು.

ದುಡಿದಿರುವೆ ನೀನು ಕುಟುಂಬಕ್ಕಾಗಿ ಹಗಲಿರುಳು,

ಇರದೆ ರವಷ್ಟೂ ಪುರುಸೊತ್ತು;

ಏನು ಕೊಡಬಲ್ಲೆ, ಬೇಂದ್ರೆಯವರಂತೆ ನಾನೂನು,

ತೋಳಬಂದಿ, ಕೆನ್ನೆ ಮುತ್ತು.

ಅಮರಗೊಳಿಸಿಲ್ಲವೆ ಮಾವನವರನು ನಾನು?

ಹೇಳೆ ‘ಸುಬ್ಬಾಭಟ್ಟರ ಮಗಳೇ’.

ನೀನೇನು ಕಮ್ಮಿಯೆ? ತುಟಿ ಕಚ್ಚಿ ಸಹಿಸಿರುವೆ

ಈ ಕವಿಯ ಏನೆಲ್ಲ ‘ರಗಳೆ’.

ಮರದಲ್ಲಿ ಮರ ಹುಟ್ಟಿ, ಭೂಚಕ್ರ ಕಾಯಾಗಿ,

ತಿನ್ನ ಬಾರದ ಹಣ್ಣು ಬಲು ರುಚಿ;

‘ಹರ್ಷ’ಕ್ಕೆ ಒಬ್ಬ, ‘ಸಂತೋಷ’ಕ್ಕೆ ಇನ್ನೊಬ್ಬ;

ನಾವು ನೆಮ್ಮದಿಯ ತಂದೆತಾಯಿ.

*

ಹಲವು ಸ್ವರ, ಹಲವು ಸ್ತರ, ಹಲವು ವಿನ್ಯಾಸಗಳಲ್ಲಿ

ಸಂಚರಿಸಿ ಸಂಜೆ ಹಾಡುಹಕ್ಕಿ

ಬಂದಂತೆ ತನ್ನ ಸ್ಥಾಯಿ ಷಡ್ಜಕ್ಕೆ, ಹಕ್ಕೆಗೆ,

ಬಂದಿರುವೆ ನಾ ನಿನ್ನ ತೆಕ್ಕೆಗೆ.

ಏಳು ಬಣ್ಣದ ತಟ್ಟೆ ಗಿರ್ರೆಂದು ನೀ ತಿರುವಿ,

ತೇಲಿಸಿರುವೆ ಬಿಳಿಯ ಬಣ್ಣವನ್ನು;

ಬಿಸಿಲನ್ನು ಹೀರಿ, ಪ್ರತಿಫಲಿಸಿರುವೆ, ಚಂದ್ರಮುಖಿ,

ನನಗಾಗಿ ಬೆಳದಿಂಗಳನ್ನು.

ಕೆರಳಿದ್ದೂ ಉಂಟು ಸುಪ್ತ ಜ್ವಾಲಾಮುಖಿ ಒಮ್ಮೊಮ್ಮೆ;

ಹೊಗೆಯಾಡಿತು, ಸಿಡಿಯಲಿಲ್ಲ ಸದ್ಯ!

ಉಳಿಯಿತು ನಳನಳಿಸುವ ಕಣಿವೆಯ ಮನೆಮಾರು;

ಹಾಗೆಯೇ ನಮ್ಮ ದಾಂಪತ್ಯ.

ಹೀಗೇ ಸಂಯಮ, ಸಾಮರಸ್ಯದಲಿ ಸಾಗಲಿ,

ಸಖಿಯೇ, ನಮ್ಮ ಒಡನಾಟ;

ಅದ್ವೈತವಾಗಿರಲಿ ಅರ್ಧನಾರೀಶ್ವರನಂತೆ:

ಕಣ್ಣೆರಡು, ಒಂದೇ ನೋಟ.