ಮಂತ್ರ ಮಾಂಗಲ್ಯದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

| Published : Oct 25 2025, 01:00 AM IST

ಮಂತ್ರ ಮಾಂಗಲ್ಯದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕುವೆಂಪು ಅವರ ಮಂತ್ರಮಾಂಗಲ್ಯವನ್ನು ಅಳವಡಿಸಿಕೊಂಡರೆ ಎಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು. ಅದ್ದೂರಿ ಆಡಂಬರ ಅನವಶ್ಯಕ. ಸರಳವಾದ ಸಹಬಾಳ್ವೆಯೇ ಶೇಷ್ಠವಾದದ್ದು.

ಕನ್ನಡಪ್ರಭ ವಾರ್ತೆ ಮಂಡ್ಯ

ಅದ್ಧೂರಿ, ಆಡಂಬರದ ಮದುವೆಗಳ ನಡುವೆಯೂ ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯದ ರೀತಿಯಲಿ ಅತ್ಯಂತ ಸರಳವಾಗಿ ಮದುವೆ ಮಾಡಿಕೊಂಡು ರಕ್ತದಾನ ಮಾಡುವ ಮೂಲಕ ಪರಿಸರ ಸಂರಕ್ಷಣೆಗಾಗಿ ಗಿಡ ನೆಟ್ಟು ಯುವಕ-ಯುವತಿ ದಾಂಪತ್ಯಕ್ಕೆ ಕಾಲಿಟ್ಟು ಮಾದರಿಯಾದರು.

ತಾಲೂಕಿನ ಮಂಗಲದ ಲಕ್ಷ್ಮಮ್ಮ ಮತ್ತು ಎಂ.ಕೆ.ಶಿವಣ್ಣರ ಪುತ್ರಿ ಎಂ.ಎಸ್.ಯಶಸ್ವಿನಿ ಮತ್ತು ಹುಲ್ಕೆರೆಕೊಪ್ಪಲು ಗ್ರಾಮದ ಸುಶೀಲಮ್ಮ ಮತ್ತು ಚಿಂದೇಗೌಡರ ಪುತ್ರ ಸಿ.ಸೋಮಶೇಖರ್ ಅವರು ಬೆಳಗ್ಗೆ ಸಸಿ ನೆಟ್ಟು, ರಕ್ತದಾನ ಮಾಡುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳು.

ಗ್ರಾಮದ ಮಲ್ಲೇಶ್ವರಸ್ವಾಮಿ ಸಮುದಾಯ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪರಿಕಲ್ಪನೆಯಂತೆ ಶ್ರೀನಾದನಂದನಾಥ ಸ್ವಾಮಿ, ನಟ ಚೇತನ್ ಅಹಿಂಸಾ ಹಾಗೂ ನಟಿ ಪೂಜಾ ಗಾಂಧಿ ಸೇರಿದಂತೆ ಇತರೆ ಗಣ್ಯರ ಸಮ್ಮುಖದಲ್ಲಿ ಮಂತ್ರ ಮಾಂಗಲ್ಯ ಮದುವೆ ಆಗುವ ಮೂಲಕ ಅರ್ಥಪೂರ್ಣ ಸಂಸಾರಿಕ ಹಾದಿ ತುಳಿದರು.

ರೈತಸಂಘ ಮುಖಂಡರಾದ ನಂದಿನಿ ಜಯರಾಂ ವಿವಾಹ ಸಂಹಿತೆ ಬೋಧನೆ ಮಾಡಿ ಶುಭಾ ಹಾರೈಸಿದರೆ, ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾಕೇಂದ್ರ ಟ್ರಸ್ಟ್‌ನ ಶ್ರೀನಾದನಂದನಾಥಸ್ವಾಮಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಕುವೆಂಪು ಅವರ ಮಂತ್ರಮಾಂಗಲ್ಯವನ್ನು ಅಳವಡಿಸಿಕೊಂಡರೆ ಎಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು. ಅದ್ದೂರಿ ಆಡಂಬರ ಅನವಶ್ಯಕ. ಸರಳವಾದ ಸಹಬಾಳ್ವೆಯೇ ಶೇಷ್ಠವಾದದ್ದು ಎಂದರು.

ನಟ ಚೇತನ್ ಅಹಿಂಸಾ ಮಾತನಾಡಿ, ಕುವೆಂಪು ಅವರ ಪರಿಕಲ್ಪನೆಯ ಮದುವೆ ಸಮಾಜಕ್ಕೆ ಮಾದರಿ. ಈ ಮೂಲಕ ಯುವ ಜನರು ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ಹಾಗೂ ಕುವೆಂಪು ಅವರ ಆಶಯ ಅರ್ಥ ಮಾಡಿಕೊಂಡು ಜಾರಿಗೆ ತರಬೇಕು, ಇಂತಹ ಬದಲಾವಣೆ ಎಲ್ಲ ಕಡೆಯಲ್ಲಿ ನಡೆಯಬೇಕಿದೆ ಎಂದರು.

ಚಲನಚಿತ್ರ ನಟಿ ಪೂಜಾಗಾಂಧಿ ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಿ, ಮತ್ತೊಂದು ಜೀವ ಉಳಿಸಲು ರಕ್ತದಾನ ಮಾಡುವುದು ಶ್ರೇಷ್ಠ ಕಾರ್ಯ. ನಾನು ಕೂಡ ಮಂತ್ರ ಮಾಂಗಲ್ಯವನ್ನೇ ಆಯ್ದುಕೊಂಡು ಮದುವೆಯಾದೆ. ಅದೇ ನಿಟ್ಟಿನಲ್ಲಿ ಸಾಗುತ್ತಿರುವ ಯಶಸ್ವಿನಿ ಹಾಗೂ ಸೋಮಶೇಖರ್ ಅವರ ದಾಂಪತ್ಯ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ನಾವು ದ್ರಾವಿಡ ಕನ್ನಡಿಗರ ಚಳವಳಿಯ ಅಭಿ ಒಕ್ಕಲಿಗ, ಅಲಯನ್ಸ್ ಸಂಸ್ಥೆ ಸೌತ್ ಉಪಾಧ್ಯಕ್ಷ ಕೆ.ಟಿ.ಹನುಮಂತು, ಕರ್ನಾಟಕ ಜನಶಕ್ತಿ ಎಂ.ಸಿದ್ದರಾಜು ಮಾತನಾಡಿದರು. ನೆಲದನಿ ಬಳಗದ ಆಧ್ಯಕ್ಷ ಎಂ.ಸಿ.ಲಂಕೇಶ್, ಪೋಷಕರಾದ ರುಕ್ಮಿಣಿ ಶಂಕರೇಗೌಡ, ವೈದ್ಯ ಡಾ.ಎಚ್.ಎಸ್.ರವಿಕುಮಾರ್, ಕುಮಾರಗೌಡ, ಗ್ರಾಮಸ್ಥರು ಮತ್ತಿತರರು ಇದ್ದರು.